ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500 ಕುಟುಂಬಗಳಿಗೆ ಉಚಿತ ನೀರು

ಜಿಲ್ಲಾ ಕೇಂದ್ರದ ದಾಸಬಣಜಿಗರ ಸಂಘದ ಮಾದರಿ ಸೇವೆ
Last Updated 22 ಮಾರ್ಚ್ 2017, 9:57 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಜನ, ಜಾನುವಾರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಹರಸಾಹಸಪಡುತ್ತಿದೆ. ಆದರೆ, ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿರುವ ದಾಸಬಣಜಿಗರ ಬೀದಿಯಲ್ಲಿ 4 ವರ್ಷದಿಂದ ನೀರಿಗೆ ಸಮಸ್ಯೆಯೇ ಇಲ್ಲ.

ಏಕೆಂದರೆ ಇಲ್ಲಿ ವಾಸ ಮಾಡುವ 500ಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರತಿದಿನ ಸಮರ್ಪಕವಾಗಿ 2 ಬಾರಿ ಕುಡಿಯುವ ನೀರು ಸರಬರಾಜಾಗುತ್ತಿದೆ.
ಕಾವೇರಿ ಕುಡಿಯುವ ನೀರು ಪೈಪ್‌ಲೈನ್‌ ಒಡೆದು ಹೋಗಿದೆ. ಮೋಟಾರ್ ಕೆಟ್ಟಿದೆ ಎಂಬ ನಗರಸಭೆ ಹೇಳುವ ಕುಂಟುನೆಪಗಳು ಈ ದಾಸಬಣಜಿಗರ ಬೀದಿಗೆ ಯಾವುದೇ ಪರಿಣಾಮ ಬೀರುತ್ತಿಲ್ಲ. ಇಲ್ಲಿನ ನಿವಾಸಿಗಳು ಪ್ರತಿದಿನ ಮನೆ ಬಾಗಿಲಿನಲ್ಲಿಯೇ ನೀರು ಪಡೆದು ನೆಮ್ಮದಿಯಿಂದ ಇದ್ದಾರೆ.

ಸಂಘದ ಮಾದರಿ ಸೇವೆ: ನಗರದ ಎಲ್ಲ ವಾರ್ಡ್‌ಗಳಂತೆ ನಗರಸಭೆಯ ಅಸಮರ್ಪಕ ಕುಡಿಯುವ ನೀರು ಪೂರೈಕೆಯಿಂದ ಈ ಬೀದಿಯ ಜನರು ಬೇಸತ್ತಿದ್ದರು. ಇದನ್ನು ಅರಿತ ದಾಸಬಣಜಿಗರ ಸಂಘವು 4 ವರ್ಷದ ಹಿಂದೆ ಸ್ವಂತ ಖರ್ಚಿನಲ್ಲಿ ಕೊಳವೆಬಾವಿ ಕೊರೆಯಿಸಿ ಸಮುದಾಯದ ಜನರಿಗೆ ಪ್ರತಿದಿನ ಉಚಿತವಾಗಿ ನೀರು ಪೂರೈಸುವ ಮೂಲಕ ಮಾದರಿಯಾಗಿದೆ.

ಜನರು ನೀರಿಗಾಗಿ ಅನುಭವಿಸುತ್ತಿದ್ದ ಸಂಕಷ್ಟ ಅರಿತ ಸಂಘದ ಪದಾಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸಲು ಮುಂದಾದರು. ಆಗ ಲೇ.ರಾಜಶೆಟ್ಟಿ ಅವರ ಧರ್ಮಪತ್ನಿ ಪುಟ್ಟಮಣಮ್ಮ ಮತ್ತು ಮಕ್ಕಳು ಕೊಳವೆಬಾವಿ ಕೊರೆಯಿಸಲು ಉಚಿತವಾಗಿ ಸ್ಥಳವನ್ನು ದಾನ ನೀಡಿದರು.

ಸಂಘದ ಗೌರವಾಧ್ಯಕ್ಷ ಸಿ.ಪಿ. ರಾಜಣ್ಣ ಕೊಳವೆಬಾವಿ ಕೊರೆಯಿಸಿದರು. 2 ಇಂಚಿನಷ್ಟು ನೀರು ಲಭಿಸಿದೆ. ವಾರ್ಡ್‌ನಲ್ಲಿ ವಾಸ ಮಾಡುವ ಇತರೆ ಜನಾಂಗದವರಿಗೂ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಸಂಘದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಪಿ. ಗೋವಿಂದಶೆಟ್ಟಿಮೂರ್ತಿ ಎಂಟರ್‌ಪ್ರೈಸಸ್‌ನಿಂದ ಸಿಂಥೆಟಿಕ್ ಟ್ಯಾಂಕ್‌ ಅನ್ನು ಕೊಡುಗೆಯಾಗಿ ನೀಡಲಾಗಿದೆ. ನಿತ್ಯವೂ 5 ಸಾವಿರ ಲೀಟರ್‌ನಷ್ಟು ನೀರು ಪೂರೈಸಲಾಗುತ್ತಿದೆ.

ಬೀದಿಯಲ್ಲಿ 2 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್ ಇಡಲಾಗಿದೆ. ಟ್ಯಾಂಕ್‌ಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಇದ್ದಾಗ ಟ್ಯಾಂಕ್ ಭರ್ತಿಯಾಗುತ್ತದೆ. ನಿವಾಸಿಗಳು ತಮಗೆ ಅಗತ್ಯವಿರುವಷ್ಟು ನೀರು ಕೊಂಡೊಯ್ಯುತ್ತಾರೆ. ನೀರು ವ್ಯರ್ಥವಾಗದಂತೆ ಸಂಘದ ಪದಾಧಿಕಾರಿಗಳು ಎಚ್ಚರವಹಿಸುತ್ತಾರೆ.

ನಗರಸಭೆಯಿಂದ ಕುಡಿಯುವ ನೀರು ಪೂರೈಕೆಯಾಗದಿದ್ದರೂ ನಿವಾಸಿಗಳು ಈಗ ಆತಂಕ ಪಡುವುದಿಲ್ಲ. ಸಂಘ-ಸಂಸ್ಥೆಗಳು ಸಮುದಾಯದ ಅಭಿವೃದ್ಧಿಗೆ ಹೇಗೆ ಶ್ರಮಿಸಬೇಕು ಎಂಬುದಕ್ಕೆ ದಾಸಬಣಜಿಗರ ಸಂಘ ಮಾದರಿಯಾಗಿದೆ.

‘ವಾರ್ಡ್‌ನಲ್ಲಿ ನೀರಿನ ಟ್ಯಾಂಕ್‌ ಅಳವಡಿಸಿದ ದಿನದಿಂದ ನಮಗೆ ನೀರಿನ ಸಮಸ್ಯೆ ಉಂಟಾಗಿಲ್ಲ. ಪ್ರತಿದಿನ 2 ಬಾರಿ ನೀರು ಪೂರೈಸಲಾಗುತ್ತಿದೆ’ ಎಂದು ನಿವಾಸಿ ಸುಕನ್ಯಾ ‘ಪ್ರಜಾವಾಣಿ’ಗೆ ತಿಳಿಸಿದರು.
-ಎಸ್. ಪ್ರತಾಪ್

*
ನೀರಿಗಾಗಿ ವಾರ್ಡ್‌ನ ನಿವಾಸಿಗಳು ಎದುರಿಸುತ್ತಿದ್ದ ಸಮಸ್ಯೆ ಅರಿತು ಸಂಘದಿಂದ ಕೊಳವೆಬಾವಿ ಕೊರೆಯಿಸಿ 500ಕ್ಕೂ ಹೆಚ್ಚು ಕುಟುಂಬಗಳಿಗೆ ನೀರು ಪೂರೈಸಲಾಗುತ್ತಿದೆ.
-ಜಿ. ವಿಜಯಕೃಷ್ಣ,
ಅಧ್ಯಕ್ಷ, ದಾಸಬಣಜಿಗರ ಸಂಘ, ನಗರ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT