ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಯಡಿಯೂರಪ್ಪ

ಅಧಿಕಾರದ ದುರುಪಯೋಗ– ಲಾಠಿ ಚಾರ್ಜ್; ಆರೋಪ*l ಎಚ್‌ಎಸ್‌ಎಂ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಿನ್ನೆಡೆ
Last Updated 22 ಮಾರ್ಚ್ 2017, 10:06 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:  ಕಾಂಗ್ರೆಸ್ ಪಕ್ಷದ ಏಜೆಂಟ್‌ರಂತೆ ವರ್ತಿಸುತ್ತಿರುವ ಅಧಿಕಾರಿಗಳಿಗೆ ಮುಂದೆ ಸರಿಯಾದ ಬುದ್ಧಿ ಕಲಿಸುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ತೆರಕಣಾಂಬಿ ಹಾಗೂ ಸೋಮಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಗೃಹಸಚಿವ ಪರಮೇಶ್ವರ್ ಅವರು ಪ್ರಚಾರಕ್ಕೆ ಬಂದಂತೆ ಕಾಣುತ್ತಿಲ್ಲ. ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಟ್ಲರ್‌ ಸಂಸ್ಕೃತಿ ಅನುಸರಿಸುತ್ತಿದ್ದು, ಉಪಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಪತನವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

ಕಾಂಗ್ರೆಸ್ಸಿಗೆ ಸೋಲುತ್ತೇವೆ ಎಂಬ ಭಯ ಶುರುವಾಗಿದೆ. ಬಿಜೆಪಿ ಹೆಚ್ಚಿನ ಜನರು ಕಾಂಗ್ರೆಸ್ ತೊರೆದು ಸೇರುತ್ತಿರುವುದು ಮುಖ್ಯಮಂತ್ರಿಗಳಿಗೆ ಸಹಿಸಲು ಆಗುತ್ತಿಲ್ಲ. ಆದ್ದರಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿಸಲಾಗಿದೆ. ಅಧಿಕಾರದ ಮದದಿಂದ ಮೆರೆಯುತ್ತಿರುವ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಜಾತಿಗಳ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ವಿರುದ್ಧದ ಪ್ರಕರಣಗಳನ್ನು ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟ ಹೋದಲ್ಲೆಲ್ಲಾ ಸುಳ್ಳು ಹೇಳಿಕೆ ನೀಡುತ್ತಾ ಮದದಿಂದ ವರ್ತಿಸುತ್ತಿದ್ದಾರೆ. ಇವರ ಎಲ್ಲ ಹಗರಣಗಳ ಬಗ್ಗೆ ನನ್ನಲ್ಲಿ ದಾಖಲೆಗಳಿದ್ದು ಸದ್ಯವೇ ಬಿಡುಗಡೆ ಮಾಡಿ ಮನೆಗೆ ಕಳುಹಿಸುತ್ತೇನೆ ಎಂದು ಗುಡುಗಿದರು.

‘ಜಿಲ್ಲೆಯಲ್ಲಿ ಒಬ್ಬರೂ ಬಿಜೆಪಿ ಶಾಸಕರಿಲ್ಲದಿದ್ದರೂ ನಾನು ₹ 212 ಕೋಟಿ ವೆಚ್ಚದಲ್ಲಿ 20 ಕೆರೆಗಳಿಗೆ ನದಿ ನೀರು ತುಂಬಿಸಿದ ಪರಿಣಾಮವಾಗಿ ತಾಲ್ಲೂಕಿನ ತೆರಕಣಾಂಬಿ ಪ್ರದೇಶದ ಜನರು ಕುಡಿಯುವ ನೀರಿನ ತೊಂದರೆಗೆ ಒಳಗಾಗಿಲ್ಲ. ಮುಂದಿನ ಬಿಜೆಪಿ ಸರ್ಕಾರದಲ್ಲಿ ತಾಲ್ಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಜವಾಬ್ದಾರಿ ನನ್ನದು. ಆದರೆ ನಿರಂಜನಕುಮಾರನ್ನು ಗೆಲ್ಲಿಸುವ ಜವಾಬ್ದಾರಿ ಮಾತ್ರ ನಿಮ್ಮದು’ ಎಂದರು.

ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಸುಮಾರು 25 ವರ್ಷಗಳಿಂದ ಎಚ್‌ಎಸ್‌ಎಂ ಅಧಿಕಾರ ನಡೆಸಿದರು  ಗುಂಡ್ಲುಪೇಟೆ ಭಾಗದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಬದಲಾಗಿ ಅವರ ಹಿತೈಷಿಗಳು ಹಿಂಬಾಲ ಕರು ಮಾತ್ರ ಅಭಿವೃದ್ಧಿಯಾಗಿದ್ದಾರೆ ಎಂದರು.

ತಾಲ್ಲೂಕಿನ ಕಗ್ಗಳದಹುಂಡಿ ಸಮೀಪ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ ಸ್ಥಾಪನೆ ವಿರುದ್ಧ ಗ್ರಾಮಸ್ಥರು ಹಾಗೂ ರೈತಸಂಘದ ಕಾರ್ಯಕರ್ತರು 10 ದಿನಗಳ ಕಾಲ ಉಪವಾಸ ನಡೆಸಿದರೂ ಸ್ಥಳಕ್ಕೆ ಹೋಗದೆ ನಿರ್ಲಕ್ಷಿಸಿದ್ದರು. ಪ್ರತಿಭಟನೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ಜನರ ಭಾವನೆಗಳಿಗೆ ಮತ್ತು ರೈತರಿಗೆ ನೋವುಂಟು ಮಾಡಿದ್ದರು ಎಂದರು.

ಈ ಸಂದರ್ಭದಲ್ಲಿ ಸಂಸದ ಶ್ರೀರಾಮುಲು, ಬಿಜೆಪಿ ರಾಜ್ಯ ವಕ್ತಾರ ಅಶ್ವಥ್‌ನಾರಾಯಣ, ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ, ನಗರಸಭಾ ಸದಸ್ಯ ಸುಂದರ್, ತಾ.ಪಂ ಸದಸ್ಯರಾದ ರೇವಣ್ಣ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಕೆ.ಎಂ.ನಾಗಮಲ್ಲಪ್ಪ, ಬಸಪ್ಪದೇವರು, ಟಿ.ಆರ್.ರಮೇಶ್ ಮೊದಲಾದವರು ಇದ್ದರು.

ಮತಯಾಚನೆ:  ಕಾರ್ಯಕ್ರಮದ ನಂತರ  ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಪರವಾಗಿ  ಯಡಿಯೂರಪ್ಪ ಪ್ರಚಾರ ನಡೆಸಿದರು.
ಇದೇ ವೇಳೆ ಮಾಜಿ ಸಚಿವ ಶ್ರೀರಾಮುಲು ಅಶ್ವಥನಾರಾಯಣ್, ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಜೊತೆಗೂಡಿ  ತೆರಕಣಾಂಬಿ, ಗುರುವಿನಪುರ, ಲಕ್ಕೂರು,ಶ್ಯಾನಡ್ರಳ್ಳಿ, ಹೂರ್ದಳ್ಳಿ, ಪಡಗೂರು, ಸೋಮಳ್ಳಿ, ಕೊಡಗಾಪುರ ಸಂಪಿಗೆಪುರ, ಕಲ್ಲಳ್ಳಿ, ಬನ್ನಿತಾಳಪುರ, ಅಗತಗೌಡನಹಳ್ಳಿ, ಬೆಂಡಗಳ್ಳಿ, ಬೆರಟಳ್ಳಿ, ಶೀಂಡನಪುರ , ಕಂದೇಗಾಲ, ಅಣ್ಣೂರುಕೇರಿ, ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.

ಘರ್ಷಣೆಗೆ ಬಿಜೆಪಿಯೇ ನೇರ ಹೊಣೆ
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಂಟಾದ ಘರ್ಷಣೆಗೆ ಬಿಜೆಪಿಯೇ ನೇರ ಹೊಣೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕ ದೂರಿದೆ.

‘ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದನ್ನು ನೋಡಿ ಹತಾಶೆಗೊಂಡು ಬಿಜೆಪಿ ಕಾರ್ಯಕರ್ತರು ಘರ್ಷಣೆಗೆ ಮುಂದಾಗಿದ್ದಾರೆ. ಇದರಿಂದ ನಮ್ಮ ಪಕ್ಷದ 6 ಕಾರ್ಯಕರ್ತರು ಗಾಯಗೊಂಡಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಪಿ. ಮರಿಸ್ವಾಮಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಘರ್ಷಣೆ ಸಂಬಂಧ ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ ಆಡಳಿತ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಹೇಳಿರುವುದು ಖಂಡನೀಯ. ಬಿಜೆಪಿಗೆ ಈಗಾಗಲೇ ಸೋಲಿನ ಭಯದ ಅನುಭವವಾಗಿದೆ. ಕಾಂಗ್ರೆಸ್‌ನ ಬಿರುಸಿನ ಪ್ರಚಾರ ಕಂಡು ಹತಾಶೆಯಿಂದ ಕಲ್ಲು ತೂರಾಟ ಹಾಗೂ ಕೆಟ್ಟ ಶಬ್ದಗಳ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ, ಬಿಜೆಪಿಯ ಮಾಜಿ ಸಂಸದೆ ತೇಜಸ್ವಿನಿ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಕರ್ತರನ್ನು ಪ್ರಚೋದಿಸುವ ಭಾಷಣ ಮಾಡಿದರು. ಇದರಿಂದ ಕಾರ್ಯಕರ್ತರು ಈ ರೀತಿ ನಡೆದುಕೊಂಡಿದ್ದಾರೆ ಎಂದು ದೂರಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾಷಣ ಮಾಡಿದ್ದರಿಂದ 5ರಿಂದ 6ಗಂಟೆ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ನಾನು ಸಹ ಪಕ್ಷದ ಕಚೇರಿಗೆ ಬಳಸಿಕೊಂಡೆ ಹೋದೆ. ಅಲ್ಲಿ ಬಿಜೆಪಿ ಕಾರ್ಯಕರ್ತರು ನಮ್ಮ ಪಕ್ಷದ ಕಚೇರಿಯ ಮುಂದೆ ನಿಂತು ನಮ್ಮ ಮೆರವಣಿಗೆಗೆ ಅಡ್ಡಿಪಡಿಸಿದರು ಎಂದು ಟೀಕಿಸಿದರು.

ಬೇಗೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಎಂ. ಮುನಿರಾಜು ಮಾತನಾಡಿ, ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಅವಕಾಶ ನೀಡಲಾಗಿತ್ತು. ಸಮಯ ಮುಗಿದರೂ ಬಿಜೆಪಿ ಕಾರ್ಯಕರ್ತರು ನಮಗೆ ಜಾಗ ನೀಡದೆ ಅಲ್ಲಿ ಜಮಾಯಿಸಿದ್ದ ಪರಿಣಾಮ ಘರ್ಷಣೆ ನಡೆದಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ರೀತಿಯಾಗಿ ಬಿಜೆಪಿ ಮಾಡಿದೆ. ಆದರೆ, ಮತದಾರರಿಗೆ ಎಚ್.ಎಸ್‌.ಮಹದೇವಪ್ರಸಾದ್‌ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಅರಿವಿದೆ. ಹಾಗಾಗಿ, ಬಿಜೆಪಿಯ ಯಾವುದೇ ತಂತ್ರಗಾರಿಕೆಯು ಕಾಂಗ್ರೆಸ್‌ಗೆ ಏನು ಮಾಡಲಾರದು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ಮುಖಂಡ ರಾಜೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT