ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟ ರಕ್ಷಣೆಗೆ ವಿದ್ಯಾರ್ಥಿಗಳ ಜಲ ಕೈಂಕರ್ಯ

Last Updated 22 ಮಾರ್ಚ್ 2017, 10:12 IST
ಅಕ್ಷರ ಗಾತ್ರ

ಮೈಸೂರು:  ಪಾತ್ರೆ ತೊಳೆದ ಹಾಗೂ ಸ್ನಾನದ ನೀರನ್ನು ಗಿಡಗಳಿಗೆ ಹರಿಸುವುದು, ಸಂಗ್ರಹಿಸಿದ ಮೂತ್ರವನ್ನು ನೀರಿನಲ್ಲಿ ಬೆರೆಸಿ ಗಿಡದ ಬುಡಕ್ಕೆ ಹಾಕುವುದು, ಮಳೆ ನೀರು ಸಂಗ್ರಹ ವಿಧಾನಗಳನ್ನು ಅಳವಡಿಸಿ ವಿದ್ಯಾರ್ಥಿಗಳು ತೋಟವೊಂದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯು (ಆರ್ಎಲ್‌ಎಚ್‌ಪಿ) ವರುಣಾ ಹೋಬಳಿಯ ಇನಾಂ ಉತ್ತನಹಳ್ಳಿಯಲ್ಲಿ ತೆರೆದಿರುವ ‘ಆಶಾಕಿರಣ ಮಕ್ಕಳ ತಂಗು ದಾಣ’ದ ವಿದ್ಯಾರ್ಥಿಗಳು ತೋಟ ರಕ್ಷಣೆ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ನೀರು ಮಿತ ಬಳಕೆ, ಸಾವಯವ ಕೃಷಿ, ಗಿಡಿದ ಬುಡಕ್ಕೆ ಎಲೆ ಹಾಸು ಹಾಕಿ ತೇವಾಂಶ ಕಾಪಾಡುವ ಮೂಲಕ ಎರಡೂ ಮುಕ್ಕಾಲು ಎಕರೆ ಜಮೀನಿನಲ್ಲಿ ತೆಂಗು, ಸಪೋಟಾ, ಮಾವು, ದಾಳಿಂಬೆ, ಪಪ್ಪಾಯ, ಸೀಬೆ, ನುಗ್ಗೆ ಗಿಡಗಳನ್ನು ಕಾಪಾಡುತ್ತಿದ್ದಾರೆ.

‘ಆಶಾಕಿರಣ ತಂಗುದಾಣ’ವು ತೋಟದಲ್ಲೇ ಇದೆ. ಬೀದಿಗಳಲ್ಲಿ ರಕ್ಷಿಸಿದ 20 ಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಮೂರನೇ  ತರಗತಿಯಿಂದ ಪದವಿವರೆಗಿನ ವಿದ್ಯಾರ್ಥಿಗಳು ಇಲ್ಲಿದ್ದಾರೆ.

ವಿದ್ಯಾಭ್ಯಾಸದ ಜತೆಗೆ ಸಂಪನ್ಮೂಲ ವ್ಯಕ್ತಿಗಳಿಂದ ‘ಮೇಟಿ ವಿದ್ಯೆ’ಯ ತರಬೇತಿ ಕಲ್ಪಿಸಿ, ಕೃಷಿ ಚಟುವಟಿಕೆಗಳಲ್ಲೂ ಅವರನ್ನು ತೊಡಗಿಸ ಲಾಗಿದೆ. ಬರಗಾಲ, ಬಿಸಿಲ ಝಳದಿಂದ ಒಣಗುವ ಹಂತಕ್ಕೆ ತಲುಪಿದ್ದ ತೋಟದ ರಕ್ಷಣೆಗೆ ಹಲವಾರು ಮಾರ್ಗೋಪಾಯ ಗಳನ್ನು ಅನುಸರಿಸುತ್ತಿದ್ದಾರೆ.

ಗಿಡಗಳ ಬಳಿ ತೆಂಗಿನ ಗರಿಗಳಲ್ಲಿ ನೆರಿಕೆ ಕಟ್ಟಿಕೊಂಡು ಸ್ನಾನ ಮಾಡಿ ಆ ನೀರನ್ನು ಗಿಡದ ಬುಡಕ್ಕೆ ಹರಿಸುವ ವಿಧಾನ ಅಳವಡಿ ಸಿಕೊಳ್ಳಲಾಗಿದೆ. ಪ್ರತಿದಿನವೂ ಒಂದೊಂದು ಗಿಡದ ಬಳಿ ಒಬ್ಬರು ಅಥವಾ ಇಬ್ಬರು ವಿದ್ಯಾರ್ಥಿಗಳು ಸ್ನಾನ ಮಾಡ ಬೇಕು. ಈ ವಿಧಾನದಲ್ಲಿ ಗಿಡವೊಂದಕ್ಕೆ ಎರಡು ವಾರಕ್ಕೊಮ್ಮೆ ನೀರು ಹರಿಯು ವಂತೆ ನೋಡಿಕೊಳ್ಳಲಾಗುವುದು.

‘ಸ್ನಾನಗೃಹದಲ್ಲಿನ ನೀರು ಗಿಡಗಳ ಬುಡದವರೆಗೆ ತಲುಪುವುದೇ ಇಲ್ಲ. ಹಾಯಿ ಮಾರ್ಗದಲ್ಲೇ ಹೀರಿಕೊಂಡು ಬಿಡುತ್ತದೆ. ಹೀಗಾಗಿ, ಗಿಡಗಳ ಸುತ್ತ ಗುಣಿ ಮಾಡಿ, ಪಕ್ಕದಲ್ಲಿ ನೆರಿಕೆ ಕಟ್ಟಿಕೊಂಡು ಸ್ನಾನ ಮಾಡಿ ಬುಡಕ್ಕೆ ಹರಿಯುವಂತೆ ನೋಡಿಕೊಳ್ಳುತ್ತೇವೆ’ ಎಂದು ವಿದ್ಯಾರ್ಥಿ ಶಂಕರ್‌ ತಿಳಿಸಿದರು.

ಪಾತ್ರೆಗಳನ್ನು ತೊಳೆದ ನೀರನ್ನು ಪೈಪಿನ ಮೂಲಕ ಗಿಡದ ಬುಡಕ್ಕೆ ಹರಿಸಲಾಗುತ್ತಿದೆ. ಗುಣಿಯಿಂದ ಗುಣಿಗೆ ಪೈಪು ಜೋಡಿಸಿ ಗಿಡಗಳಿಗೆ ನೀರು ಹರಿಸಲಾಗುತ್ತದೆ. ಖಾಲಿ ಜಾಗದಲ್ಲಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳಲಾಗುತ್ತದೆ. ಗಿಡಗಳ ಬುಡ ದಲ್ಲಿ ತೇವಾಂಶ ಕಾಪಾಡಿಕೊಳ್ಳಲು ಬುಡಕ್ಕೆ ತೆಂಗಿನ ಗರಿ, ಎಲೆ ಹಾಸು ಹಾಕಲಾಗಿದೆ. ಸೂರ್ಯನ ಶಾಖ ನೇರ ವಾಗಿ ಬುಡದ ಮೇಲೆ ಬೀಳದಂತೆ ಮಾಡಲಾಗಿದೆ.

ಮೂತ್ರ ಸಂಗ್ರಹಣೆಗೆ ಶೌಚಾಲಯದ ಬಳಿ ಎರಡು ಕ್ಯಾನ್‌ಗಳನ್ನು ಇಡಲಾಗಿದೆ. ವಿದ್ಯಾರ್ಥಿಗಳು ಈ ಕ್ಯಾನ್‌ನಲ್ಲಿಯೇ ಮೂತ್ರ ಮಾಡಬೇಕು. ನಾಲ್ಕು ಲೀಟರ್‌ ನೀರಿಗೆ ಒಂದು ಲೀಟರ್‌ ಮೂತ್ರ ಬೆರೆಸಿ ಅದನ್ನು ಗಿಡಗಳಿಗೆ ಹಾಕಲಾಗುತ್ತದೆ.

‘ಮೂತ್ರವನ್ನು ನೀರಿನಲ್ಲಿ ಬೆರೆಸಿ ಗಿಡ ಗಳಿಗೆ ಹಾಕುವ ವಿಧಾನದ ಕುರಿತು ಪರಿಸರ ವಾದಿ ಯು.ಎನ್.ರವಿಕುಮಾರ್‌ ತರಬೇತಿ ನೀಡಿದ್ದಾರೆ. ಈ ವಿಧಾನ ಅಳವಡಿಕೆ ಯಿಂದ ಇಳುವರಿ ಹೆಚ್ಚಾಗಿದೆ ಮತ್ತು ಗಿಡ ಗಳು ಹುಲುಸಾಗಿ ಬೆಳೆಯುತ್ತವೆ’ ಎಂದು ವಿದ್ಯಾರ್ಥಿ ನಾರಾಯಣ ತಿಳಿಸಿದರು.

 ತೋಟದಲ್ಲಿ ನಾಲ್ಕು ಕಟ್ಟಡಗಳಿದ್ದು, ಮಳೆ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾ ಗಿದೆ. 20 ಸಾವಿರ ಲೀಟರ್‌ ಸಾಮರ್ಥ್ಯದ ತೊಟ್ಟಿ ಇದ್ದು, ಕಟ್ಟಡಗಳ ಚಾವಣಿ ನೀರು ತೊಟ್ಟಿಗೆ ಹರಿಯುವಂತೆ ವ್ಯವಸ್ಥೆ ಮಾಡಲಾ ಗಿದೆ. ಈ ನೀರನ್ನು ತೋಟಕ್ಕೆ ಹರಿಸಲು ಪೈಪು ಮಾರ್ಗ ಅಳವಡಿಸಲಾಗಿದೆ. 

‘ಅಂತರ್ಜಲ ಮಟ್ಟ ಕುಸಿದಿದ್ದು, ಇರುವ ಎರಡು ಕೊಳವೆಬಾವಿಯಲ್ಲಿ ಸ್ವಲ್ಪವೇ ನೀರು ಬರುತ್ತಿದೆ. ಹೊಸ ಮಾರ್ಗೋಪಾಯಗಳನ್ನು ಅಳವಡಿಸಿ ಕೊಂಡಿರುವುದರಿಂದ ತೋಟ ಉಳಿಸಿ ಕೊಳ್ಳಲು ಸಾಧ್ಯವಾಗಿದೆ’ ಎಂದು ಆರ್‌ ಎಲ್‌ಎಚ್‌ಪಿಯ ಬಾಬು ಹೇಳುತ್ತಾರೆ.

ಸಾವಯವ ಗೊಬ್ಬರ ತಯಾರಿಕೆಗೆ ವ್ಯವಸ್ಥೆ ಮಾಡಲಾಗಿದೆ. ಸಗಣಿ, ಗಂಜಲ, ತರಗೆಲೆ, ರಾಗಿಹಿಟ್ಟು, ಕಡಲೆಹಿಟ್ಟು ಬೆರೆಸಿ ‘ಜೀವಾಮೃತ’ ತಯಾರಿಸಿ ಗಿಡಗಳಿಗೆ ಹಾಕ ಲಾಗುತ್ತಿದೆ. ಎರೆಹುಳ ಘಟಕವೂ ಇದೆ.

‘ನೀರಿನ ಮಿತ ಬಳಕೆ ಮಕ್ಕಳಲ್ಲಿ ಅರಿವು ಮೂಡಿಸುವುದು ಆರ್‌ಎಲ್‌ ಎಚ್‌ ಪಿ ಸಂಸ್ಥಾಪಕರಾದ ಜಾಯ್‌ ಮಾಲಿಕಲ್‌ ಧ್ಯೇಯವಾಗಿತ್ತು. ಅದರಂತೆ 3 ವರ್ಷಗಳ ಹಿಂದೆ ನೀರು ಮಿತ ಬಳಕೆ, ಸದ್ಬಳಕೆ ವಿಧಾನಗಳನ್ನು ಆಶಾಕಿರಣದಲ್ಲಿ ಅಳವ ಡಿಸಲಾಗಿದೆ’ ಎಂದು ಆರ್‌ಎಲ್‌ಎಚ್‌ಪಿ ನಿರ್ದೇಶಕಿ ಸರಸ್ವತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT