ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಲೆಕ್ಕಾಚಾರದಲ್ಲಿ ಪ್ರಚಾರ ತಂತ್ರ

ಕಾಂಗ್ರೆಸ್‌, ಬಿಜೆಪಿಯಿಂದ ಜಾತಿವಾರು ಮುಖಂಡರ ನಿಯೋಜನೆ
Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಮೈಸೂರು: ಒಂದು ವರ್ಷದ ಚುಕ್ಕಾಣಿಗಾಗಿ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆಯಾಗಿರುವ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಜಾತಿ ಲೆಕ್ಕಾಚಾರದಲ್ಲಿ ಪ್ರಚಾರ ತಂತ್ರ ರೂಪಿಸಿವೆ.
 
ಉಭಯ ಪಕ್ಷಗಳು ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಜಾತಿವಾರು ಮುಖಂಡರನ್ನು ನಿಯೋಜಿಸಿವೆ. ಅವರು ತಮ್ಮ ಜಾತಿಯ ಪ್ರಾಬಲ್ಯ ಇರುವ ಗ್ರಾಮಗಳಿಗೆ ತೆರಳಿ ಪ್ರಚಾರದಲ್ಲಿ ತೊಡಗಿದ್ದಾರೆ. 
 
ಎರಡು ಲಕ್ಷ ಮತದಾರರು ಇರುವ ಈ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ದಲಿತ ಮತದಾರರದ್ದೇ ಪ್ರಾಬಲ್ಯ. ನಾಯಕ, ಮುಸ್ಲಿಂ, ಉಪ್ಪಾರ, ಕುರುಬ, ಒಕ್ಕಲಿಗರು ನಂತರದ ಸ್ಥಾನದಲ್ಲಿ ಇದ್ದಾರೆ. ಹೀಗಾಗಿ, ಇಲ್ಲಿ ಅಭಿವೃದ್ಧಿ ಕೆಲಸಗಳು ಬದಿಗೆ ಸರಿದು ಜಾತಿಯ ಲೆಕ್ಕಾಚಾರದ ಅಬ್ಬರವೇ ಜೋರಾಗಿದೆ.
 
ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪರ ಅವರ ಸಂಬಂಧಿ ಹಾಗೂ ಸಂಸದ ಆರ್‌.ಧ್ರುವನಾರಾಯಣ, ಕ್ಷೇತ್ರದ ಹದಿನಾರು ಗ್ರಾಮದ ಡಾ.ಎಚ್‌.ಸಿ.ಮಹದೇವಪ್ಪ (ಜಿಲ್ಲಾ ಉಸ್ತುವಾರಿ ಸಚಿವ), ವಿಧಾನ ಪರಿಷತ್‌ ಸದಸ್ಯ ಆರ್‌.ಧರ್ಮಸೇನ, ಶಾಸಕ ಸತೀಶ್‌ ಜಾರಕಿಹೊಳಿ ಪ್ರಚಾರ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವರಾದ ಬಸವರಾಜ ರಾಯರಡ್ಡಿ, ತನ್ವೀರ್‌ ಸೇಠ್‌ ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ. 
 
ಬೆಳಗಾವಿಯಿಂದ ಬಂದು ಕ್ಷೇತ್ರದಲ್ಲಿಯೇ ಬೀಡುಬಿಟ್ಟಿರುವ ಜಾರಕಿಹೊಳಿ, ನಾಯಕ ಮತದಾರರು ಹೆಚ್ಚಿರುವ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ನಡೆಸಿ ಪಕ್ಷಕ್ಕೆ ಮತ ಹಾಕುವಂತೆ ಕೋರುತ್ತಿದ್ದಾರೆ. ಸಮುದಾಯದ ಮುಖಂಡರ ಸಭೆ ಕೂಡ ನಡೆಸಿದ್ದಾರೆ. ಇಲ್ಲಿ ಸುಮಾರು 22 ಸಾವಿರ ನಾಯಕ ಮತದಾರರು ಇದ್ದಾರೆ.
 
ದಲಿತ ಸಮುದಾಯ ಹೆಚ್ಚಿರುವ ಕಡೆ ಮಹದೇವಪ್ಪ, ಧ್ರುವನಾರಾಯಣ, ಧರ್ಮಸೇನ ಅವರು ಪ್ರತಿದಿನ ಪ್ರಚಾರ ಸಭೆ ನಡೆಸುತ್ತಿದ್ದಾರೆ. ಉಪ್ಪಾರ ಸಮುದಾಯದ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸಮುದಾಯದವರು ಹೆಚ್ಚಿರುವ ಗ್ರಾಮಗಳಲ್ಲಿ ಮತಯಾಚನೆಯಲ್ಲಿ ತೊಡಗಿದ್ದಾರೆ. 
 
ಕಾಂಗ್ರೆಸ್‌ನ ಹಲವು ಸಚಿವರು ಮಾಜಿ ಸಚಿವ ಎಂ.ಮಹದೇವು (ಬೆಂಕಿ ಮಹದೇವು) ಅವರ ನಿವಾಸಕ್ಕೆ ತೆರಳಿ ಕುಟುಂಬದವರನ್ನು ಭೇಟಿಯಾಗಿದ್ದರು. ಈ ಮೂಲಕ ಲಿಂಗಾಯತ ಮತದಾರರನ್ನು ಸೆಳೆಯಲು ತಂತ್ರ ರೂಪಿಸಿದ್ದಾರೆ.  
 
ಮಹದೇವು ಅವರು 1983ರಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಐದು ಬಾರಿ ಸ್ಪರ್ಧಿಸಿ, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
‘ಜಿಲ್ಲೆಯ ರಾಜಕಾರಣದಲ್ಲಿ ಮಹದೇವು ಹಾಗೂ ವಿ.ಶ್ರೀನಿವಾಸಪ್ರಸಾದ್‌ ಬದ್ಧವೈರಿಗಳು.

ಮಹದೇವು ನಿಧನರಾದಾಗಲೂ  ಪ್ರಸಾದ್ ಪಾಲ್ಗೊಂಡಿರಲಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಕುಟುಂಬದವರನ್ನು ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಜೊತೆಗೆ, ಈ ಕ್ಷೇತ್ರದ ಲಿಂಗಾಯತ ಮತವನ್ನು ಸೆಳೆಯುವ ರಣತಂತ್ರವೂ ಅಡಗಿದೆ’ ಎಂದು ಕ್ಷೇತ್ರದ ಹಿರಿಯರಾದ ಸಣ್ಣ ತಿಮ್ಮೇಗೌಡರು ವಿಶ್ಲೇಷಿಸುತ್ತಾರೆ. 
 
ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್‌ ಪರ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು, ಪ್ರತಾಪಸಿಂಹ, ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ, ಮುಖಂಡರಾದ ಎಸ್‌.ಎ.ರಾಮದಾಸ್‌, ಹರತಾಳು ಹಾಲಪ್ಪ ಪ್ರಚಾರದಲ್ಲಿ ತೊಡಗಿದ್ದಾರೆ.
 
ವಾರದಿಂದ ಇಲ್ಲಿಯೇ ಬೀಡುಬಿಟ್ಟಿರುವ ಯಡಿಯೂರಪ್ಪ, ಸೋಮಣ್ಣ ಅವರು ಲಿಂಗಾಯತರ ಪ್ರಾಬಲ್ಯವಿರುವ ಕಡೆ ತೆರಳಿ ಮತ ಯಾಚಿಸುತ್ತಿದ್ದಾರೆ. ಕಳಲೆ, ಮುದ್ದಳ್ಳಿ, ನವಿಲೂರು, ಹೊಸಪುರ, ಸೂರಳ್ಳಿ, ಸಿದ್ದಯ್ಯನಹುಂಡಿ, ಕೂಗಲೂರು, ಕಸುವಿನಹಳ್ಳಿ, ಮಾಕನಪುರ ಗ್ರಾಮಗಳಿಗೆ ತೆರಳಿ ಸಭೆ ನಡೆಸಿದ್ದಾರೆ.
 
ಸಂಸದ ಶ್ರೀರಾಮುಲು ಅವರು ನಾಯಕ ಸಮುದಾಯ ಹೆಚ್ಚಿರುವ ದೇಬೂರು, ಬೆಳಲೆ, ಕಣೇನೂರು, ಇಬ್ಜಾಲ, ಹುಲ್ಲಹಳ್ಳಿ ಕಾರ್ಯ, ತರಗನಹಳ್ಳಿ, ಕಪ್ಪುಸೋಗೆ, ಮಾದಪುರ, ಹಗಿನವಾಳು, ಹರತಲೆ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ.
 
ಯುಗಾದಿ ಬಳಿಕ ಪ್ರಚಾರ ಮತ್ತಷ್ಟು ರಂಗೇರಲಿದ್ದು, ಉಭಯ ಪಕ್ಷಗಳ ಹೆಚ್ಚಿನ ಮುಖಂಡರು ಈ ಕ್ಷೇತ್ರದಲ್ಲಿ ಠಿಕಾಣಿ ಹೂಡಲಿದ್ದಾರೆ. 
***
ಇಬ್ಬರ ನಾಮಪತ್ರ ತಿರಸ್ಕೃತ
ನಂಜನಗೂಡು ಕ್ಷೇತ್ರದ ಉಪಚುನಾವಣೆಯ ನಾಮಪತ್ರಗಳ ಪರಿಶೀಲನೆ ಬುಧವಾರ ನಡೆದಿದ್ದು, ಇಬ್ಬರ ನಾಮಪತ್ರಗಳು ತಿರಸ್ಕೃತಗೊಂಡಿವೆ.

ಪಕ್ಷೇತರ ಅಭ್ಯರ್ಥಿಗಳಾದ ಆರ್‌.ರೇಣುಕಾ, ಶಿವಪ್ಪ ಅವರ ನಾಮಪತ್ರಗಳು ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕರಿಸಲಾಗಿದೆ ಎಂದು  ಚುನಾವಣಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

ಕಳಲೆ ಕೇಶವಮೂರ್ತಿ (ಕಾಂಗ್ರೆಸ್‌), ವಿ.ಶ್ರೀನಿವಾಸಪ್ರಸಾದ್‌ (ಬಿಜೆಪಿ) ಸೇರಿದಂತೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಗುರುವಾರ (ಮಾರ್ಚ್‌ 24) ಕಡೆಯ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT