ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸುಕಿ ವೈಭವ!

Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಫಳಫಳ ಹೊಳೆಯುತ್ತಿರುವ ಗದ್ದ, ಚಿಗುರು ಮೀಸೆ, ಕಪ್ಪು ಫ್ರೇಮಿನ ಕನ್ನಡಕದಡಿಯಲ್ಲಿ ತುಂಟತನ ಸೂಸುವ ಕಣ್ಣುಗಳು, ಮುದ್ದಾದ ಮುಖ...
ಈಗಷ್ಟೇ ಸೈನ್ಸ್‌ ಲ್ಯಾಬ್‌ನಿಂದ ಪ್ರೊಫೆಸರ್‌ ಕಣ್ತಪ್ಪಿಸಿ ಗರ್ಲ್‌ಫ್ರೆಂಡ್‌ ಭೇಟಿಯಾಗಲು ಓಡಿ ಬಂದ ಚಾಕೊಲೇಟ್‌ ಬಾಯ್‌ ಥರ ಕಾಣುವ ವಾಸುಕಿ ವೈಭವ್‌ ಅವರ ಪ್ರತಿಭೆ ಬೆರಗು ಹುಟ್ಟಿಸುವಂಥದ್ದು.

ಕಳೆದ ವರ್ಷ ಬಿಡುಗಡೆಯಾಗಿ ಅಪಾರ ಜನಮೆಚ್ಚುಗೆ ಪಡೆದ ‘ರಾಮಾ ರಾಮಾ ರೇ...’ ಸಿನಿಮಾದ ಹಾಡುಗಳನ್ನು ಒಮ್ಮೆಯಾದರೂ ಗುನುಗಿಕೊಳ್ಳದವರು ಕಮ್ಮಿ.

ಸಿನಿಮಾದಷ್ಟೇ ಯಶಸ್ಸು ಗಳಿಸಿದ, ಸಿನಿಮಾದ ಯಶಸ್ಸಿನಲ್ಲಿ ಮುಖ್ಯಪಾತ್ರವಹಿಸಿದ ಈ ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದು ಇದೇ ತುಂಟಕಣ್ಣಿನ ಹುಡುಗ ವಾಸುಕಿ ವೈಭವ್‌.

ಸಂಗೀತ ಸಂಯೋಜನೆಯಷ್ಟೇ ಅಲ್ಲ, ಗಾಯನ, ನಟನೆ, ಗೀತರಚನೆ ಹೀಗೆ ಅವರ ಪ್ರತಿಭೆ ಹಲವು ಸೃಜನಶೀಲ ಕವಲುಗಳಲ್ಲಿ ಚಿಗಿತುಕೊಂಡಿದೆ.
ಕಳೆದ ವರ್ಷವಷ್ಟೇ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ಇಪ್ಪತ್ನಾಲ್ಕರ ಈ ಪೋರ ‘ಹ್ಯಾಪಿ ನ್ಯೂ ಇಯರ್‌’ ಸಿನಿಮಾಕ್ಕೆ–

‘ಹೊಸದಾದ ನೋವಿಗೊಂದು
ಹೊಸೆದಂತೆ ಬಾಳನಿಂದು
ನೆನಪೆಲ್ಲ ಸೇರಿ ಸ್ಮಾರಕ’

ಇಂಥ ಉಜ್ವಲ ಸಾಲುಗಳನ್ನು ಬರೆಯುತ್ತಾನೆಂದರೆ ನಂಬುವುದು ಕಷ್ಟವಾಗಬಹುದು.

ಇಷ್ಟು ಚಿಕ್ಕ ತಲೆಯಲ್ಲಿ ಅಷ್ಟೆಲ್ಲ ಪ್ರತಿಭೆ ಅಡಗಿಸಿಟ್ಟುಕೊಂಡಿದ್ದು ಹೇಗೆ ಎಂದು ತಮಾಷೆಯಾಗಿಯೇ ಕೇಳಿದರೆ, ಜೋಕು ಕೇಳಿದವರಂತೇ ದೊಡ್ಡದಾಗಿ ನಕ್ಕು ‘ರಂಗಭೂಮಿ... ರಂಗಭೂಮಿ...’ ಎಂದು ಮಂತ್ರದಂತೆ ಉಚ್ಚರಿಸುತ್ತಾರೆ ವಾಸುಕಿ.

ವಾಸುಕಿ ತಂದೆ ಶಿವಮೊಗ್ಗದವರು. ಆದರೆ ಇವರು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ತಂದೆ ಕೂಡ ರಂಗಭೂಮಿ ಕಲಾವಿದರಾದ್ದರಿಂದ ಆರೇಳು ವರ್ಷದ ಬಾಲಕನಾಗಿದ್ದಾಗಲೇ ರಂಗಭೂಮಿ ಸಾಂಗತ್ಯ ದೊರೆಯಿತು. ಅವರಲ್ಲಿ ಬಹುಮುಖಿ ಆಸಕ್ತಿಯನ್ನು ಚಿಗುರಿಸಿದ್ದು, ಪೋಷಿಸಿ ಬೆಳೆಸಿದ್ದು ಎಲ್ಲವೂ ರಂಗಭೂಮಿಯೇ.

ಅವರ ರಂಗಜೀವನ ಆರಂಭವಾಗಿದ್ದು ಬಿ.ವಿ. ಕಾರಂತರು ಸ್ಥಾಪಿಸಿದ ‘ಬೆನಕ’ ತಂಡದ ಮೂಲಕ. ಇಂದಿಗೂ ವಾಸುಕಿ, ‘ಬೆನಕ’ ತಂಡದ ಸಕ್ರಿಯ ಸದಸ್ಯ. ನೇರವಾಗಿ ಕಾರಂತರ ಜೊತೆ ಕೆಲಸ ಮಾಡಲು ಅವಕಾಶ ಸಿಗದಿದ್ದರೂ ವಾಸುಕಿಗೆ ಅವರೇ ಮಾನಸಗುರುಗಳು.

‘‘ಕಾರಂತರ ಜತೆ ಕೆಲಸ ಮಾಡಿಲ್ಲ. ಆದರೆ ಅವರು ನಿರ್ದೇಶಿಸಿದ ನಾಟಕಗಳು, ಸಂಗೀತ ಸಂಯೋಜನೆ ಇವೆಲ್ಲವೂ ಇಂದೂ ನಮಗೆ ದೊಡ್ಡ ಪಾಠ. ಅದರಲ್ಲಿಯೂ ಅವರ ‘ಗೋಕುಲ ನಿರ್ಗಮನ’ ನಾಟಕವಂತೂ ಕಲಿಕೆಯ ವಿಶ್ವವಿದ್ಯಾಲಯ’’ ಎಂದು ಹೇಳಿಕೊಳ್ಳುತ್ತಾರೆ ವಾಸುಕಿ.

‘ಬೆನಕ’ ತಂಡದ ಜತೆಜತೆಗೆ ‘ಸಮುದಾಯ’, ‘ಬೆಂಗಳೂರು ಥಿಯೇಟರ್‌ ಆನ್ಸಂಬಲ್‌’,  ರಂಗಶಂಕರ ಥಿಯೇಟರ್ ಫೆಸ್ಟಿವಲ್‌ಗಳು, ಮುಂಬೈ, ಕಲ್ಕತ್ತ ಸೇರಿದಂತೆ ಹಲವು ನಗರಗಳಲ್ಲಿ ನಡೆದ ನಾಟಕೋತ್ಸವಗಳೆಲ್ಲ ಅವರನ್ನು ಬೆಳೆಸಿವೆ.

ರಂಗಭೂಮಿಯ ಚಟುವಟಿಕೆಗಳ ಕಾರಣದಿಂದಲೇ ಸಾಹಿತ್ಯದ ಸಹವಾಸವೂ ದೊರೆಯಿತು. ಅಲ್ಲದೆ ಬರವಣಿಗೆಯಲ್ಲಿ ತೊಡಗಿಕೊಳ್ಳಲು ಅವರ ಕುಟುಂಬದ ವಾತಾವರಣವೂ ಪ್ರೇರಣೆ ನೀಡುವ ಹಾಗೆಯೇ ಇತ್ತು.

‘ನನ್ನ ಅಜ್ಜಿ ಗಾಯಕಿ. ದೇವರ ನಾಮಗಳನ್ನು ಅವರೇ ರಚಿಸಿ, ಸಂಗೀತ ಸಂಯೋಜಿಸಿ ಹಾಡುತ್ತಿದ್ದರು. ನಾನು ಹಾಡು ಬರೆಯುವುದಕ್ಕೂ ಅವರ ಆಶೀರ್ವಾದವೇ ಕಾರಣ. ಅವರು ಭಕ್ತಿಗೀತೆ ಬರೆಯುತ್ತಿದ್ದರು. ನಾನು ಇಲ್ಲಿ ನಾಯಕ ನಾಯಕಿಗೆ ಪ್ರೇಮ–ವಿರಹ ಗೀತೆಗಳನ್ನು ಬರೆಯುತ್ತೇನಷ್ಟೆ’ ಎಂದು ನಗುತ್ತಾರೆ ವಾಸುಕಿ.

ಸಾಹಿತ್ಯದ ಓದು ಅವರಿಗೆ ಹೊಸ ನೋಟಗಳನ್ನು ನೀಡಿತು. ‘ಓದಿನಿಂದ ಅವವೇ ಸಂಗತಿಗಳನ್ನು ಬೇರೆ ರೀತಿ ನೋಡಲು ಸಾಧ್ಯವಾಯಿತು. ಅದರ ಜೊತೆಗೇ ಸಂಗೀತ, ನಟನೆಯ ಅಭಿರುಚಿಗಳೂ ಬೆಳೆಯುತ್ತ ಬಂದವು. ಯಾವುದೋ ಒಂದು ಮೊದಲು, ಉಳಿದವು ನಂತರ ಎಂದಲ್ಲ. ಎಲ್ಲವೂ ಒಟ್ಟೊಟ್ಟಿಗೇ ಬೆಳೆದುಕೊಂಡು ಬಂದವು’ ಎಂದು ತಮ್ಮೊಳಗಿನ ಬಹುಮುಖಿ ಪ್ರತಿಭೆ ವಿಕಾಸಗೊಂಡ ಪರಿಯನ್ನು ಅವರು ವಿವರಿಸುತ್ತಾರೆ.

ರಂಗಭೂಮಿಯಿಂದ ಸಿನಿಮಾರಂಗದ ಕಡೆ ಅವರು ಹೊರಳಿಕೊಂಡಿದ್ದು ಟಿ.ಎಸ್‌. ನಾಗಾಭರಣ ಅವರಿಂದ. ನಾಗಾಭರಣ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಡಿ. ಸತ್ಯಪ್ರಕಾಶ್‌ ಮತ್ತು ವಾಸುಕಿ ಹತ್ತು ವರ್ಷಗಳಿಂದ ಸ್ನೇಹಿತರು. ಒಟ್ಟೊಟ್ಟಿಗೇ ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳನ್ನು ಮಾಡುತ್ತಿದ್ದವರು. ವಾಸುಕಿಗೆ ಮೊದಲು ಪೂರ್ಣ ಪ್ರಮಾಣದ ಸಂಗೀತ ಸಂಯೋಜಕನ ಜವಾಬ್ದಾರಿ ದೊರೆತದ್ದೂ ಸತ್ಯಪ್ರಕಾಶ್‌ ನಿರ್ದೇಶನದ ‘ರಾಮಾ ರಾಮಾ ರೇ..’ ಸಿನಿಮಾದಲ್ಲಿಯೇ.

ಚಿತ್ರಕಥೆ ಸಿದ್ಧಪಡಿಸುವ ಸಮಯದಿಂದಲೂ ಒಟ್ಟಿಗೇ ಇದ್ದ ಕಾರಣಕ್ಕೆ ಅವರಿಗೆ ಸಂಗೀತ ಸಂಯೋಜನೆ ಮಹಾ ಸವಾಲಿನ ಕೆಲಸ ಎಂದೇನೂ ಅನಿಸಿಲ್ಲ. ಆದರೆ ಈ ಸಿನಿಮಾದ ಹಾಡುಗಳು ಇಷ್ಟೊಂದು ಜನಪ್ರಿಯತೆ ತಂದುಕೊಡುತ್ತವೆ ಎಂದು ಅವರು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

(ಚಿತ್ರ: ಶರತ್ ಪದರು)

‘ಹೇಗಾದರೂ ಮಾಡಿ ಸಿನಿಮಾವನ್ನು ಜನರಿಗೆ ತಲುಪಿಸಬೇಕು. ಮೂರು ದಿನ ಚಿತ್ರಮಂದಿರದಲ್ಲಿ ಇರುವಂತೆ ನೋಡಿಕೊಂಡರೆ ಸಾಕು ಎಂದು ಒದ್ದಾಡುತ್ತಿದ್ದೆವು. ಆದರೆ ಆಮೇಲೆ ಅದು ನೂರು ದಿನ ಪ್ರದರ್ಶನ ಕಂಡಿತು. ಜನರು ಈ ಸಿನಿಮಾದ ಹಾಡುಗಳನ್ನು ಮೆಚ್ಚಿಕೊಂಡು ಹಾರೈಸಿದರು’ ಎಂದು ಖುಷಿಯಿಂದ ಹೇಳಿಕೊಳ್ಳುವ ಅವರಿಗೆ ಈಗ ಅವಕಾಶದ ಬಾಗಿಲುಗಳು ಒಂದೊಂದಾಗಿ ತೆರೆದುಕೊಳ್ಳತೊಡಗಿವೆ.

‘ಕಿರಿಕ್‌ ಪಾರ್ಟಿ’ ಸಿನಿಮಾದಲ್ಲಿ ಅವರು ಹಾಡಿದ ‘ಕಾಗದದ ದೋಣಿಯಲ್ಲಿ...’ ಹಾಡು ಜನಪ್ರಿಯ ಆಗಿದೆ. ಪನ್ನಗ ಭರಣ ನಿರ್ದೇಶನದ ‘ಹ್ಯಾಪಿ ನ್ಯೂ ಇಯರ್‌’ ಸಿನಿಮಾಕ್ಕೆ ಬರೆದಿರುವ ‘ಬದುಕೇ ನೀನೆಂಥ ನಾಟಕ’ ಪ್ಯಾಥೋ ಸಾಂಗ್‌ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಈ ನಡುವೆ ರಾಘು ಶಿವಮೊಗ್ಗ ನಿರ್ದೇಶನದ ‘ಚೂರಿಕಟ್ಟೆ’ ಮತ್ತು ರಿಷಬ್‌ ಶೆಟ್ಟಿ ನಿರ್ದೇಶನದ ಮಕ್ಕಳ ಸಿನಿಮಾ ‘ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’– ಎರಡೂ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವ ಅವಕಾಶ ಅವರದಾಗಿದೆ. ಈ ವಾರ ತೆರೆಕಂಡ ‘ಉರ್ವಿ’ ಸಿನಿಮಾದಲ್ಲಿ ಒಂದು ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದಾರೆ.

ವೃತ್ತಿಜೀವನದಲ್ಲಿ ಉನ್ನತಿಯ ಲಿಫ್ಟ್‌ನಲ್ಲಿ ವೇಗವಾಗಿ ಮೇಲೇರತೊಡಗಿದ್ದರೂ ಅವರು ವಿನಯವನ್ನು ಮರೆತಿಲ್ಲ.

‘ಯಶಸ್ಸು, ಅವಕಾಶಗಳು ಸಿಕ್ಕಿವೆ. ಅದರಿಂದ ಜವಾಬ್ದಾರಿಗಳು ಹೆಚ್ಚಿವೆ. ಹಾಗೆಂದು ನಾನೇನೋ ಸಾಧಿಸಿಬಿಟ್ಟಿದ್ದೇನೆ ಎಂಬ ಭ್ರಮೆಯೆಲ್ಲ ನನಗಿಲ್ಲ. ಹಂಸಲೇಖರಂಥ ಎಷ್ಟೋ ಜನರು ಮಾಡಿರುವ ಸಾಧನೆ, ಗಳಿಸಿರುವ ಕೀರ್ತಿಯ ಎದುರು ನನ್ನದು ಯಾವ ಲೆಕ್ಕವೂ ಅಲ್ಲ’ ಎನ್ನುವ ಅವರದು ನೆಲಕ್ಕೆ ಅಂಟಿಕೊಂಡು ಬಾನಿಗೆ ಕೈಚಾಚುವ ಹಂಬಲದ ವ್ಯಕ್ತಿತ್ವ.

ಮುಂದೆ ಸಂಗೀತ ಸಂಯೋಜಕನಾಗಿಯೇ ಗುರ್ತಿಸಿಕೊಳ್ಳಬೇಕು ಎನ್ನುವುದು ಅವರ ಅಭಿಲಾಷೆ. ‘ಸಿನಿಮಾರಂಗದಲ್ಲಿ ಎಷ್ಟೇ ತೊಡಗಿಕೊಂಡರೂ, ಯಶಸ್ಸು ಕಂಡರೂ ರಂಗಭೂಮಿಯ ನಂಟನ್ನು ತೊರೆಯುವುದು ಸಾಧ್ಯವೇ ಇಲ್ಲ’ ಎಂಬುದು ವಾಸುಕಿ ಅವರ ಖಡಾಖಂಡಿತ ನಿರ್ಧಾರ.

‘ಯಾಕೆಂದರೆ ನನ್ನ ಎಲ್ಲ ಯಶಸ್ಸಿನ ತಾಯಿಬೇರು ಇರುವುದು ರಂಗಭೂಮಿಯಲ್ಲಿ. ಅದೇ ನನ್ನೆಲ್ಲ ಸೃಜನಶೀಲ ಚಟುವಟಿಕೆಗಳ ಮೂಲಸೆಲೆ’ ಎಂದು ನೆನೆಯುತ್ತಾರೆ ಅವರು.

ತಮಗೆ ಅತ್ಯಂತ ಇಷ್ಟವಾದ ಬ್ಯಾಡ್ಮಿಂಟನ್‌ ಆಟದ ಮೂಲಕವೂ ಸೃಜನಶೀಲ ಸ್ಫೂರ್ತಿ ಪಡೆದುಕೊಳ್ಳುವ ಈ ಯುವ ಪ್ರತಿಭೆಗೆ ಕನ್ನಡ ಚಿತ್ರರಂಗದಲ್ಲಿ ಅಪ್ಪಟ ಕನ್ನಡದ ಗಂಧವನ್ನು ಹೆಚ್ಚಿಸಬಲ್ಲ ಶಕ್ತಿ ಮತ್ತು ಉತ್ಸಾಹ ಎರಡೂ ಇದೆ.

**

ಆಬ್ಸೆಂಟ್‌ ಮೈಂಡ್‌ ವಾಸುಕಿ
ಕಾಲೇಜು ದಿನಗಳಲ್ಲಿ ವಾಸುಕಿ ಫಸ್ಟ್‌ಬೆಂಚ್‌ ಸ್ಟೂಡೆಂಟ್‌ ಏನೂ ಆಗಿರಲಿಲ್ಲ. ಅಲ್ಲಿ ಕ್ಲಾಸಿಗೆ ಬಂಕ್‌ ಹೊಡೆದು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಿದ್ದುದೇ ಹೆಚ್ಚು. ‘ನಮಗೆ ಕಾಲೇಜ್‌ ಅಂದ್ರೆ ಕಲ್ಚರಲ್‌ ಡೇ ಆಗಿತ್ತು’ ಎಂದು ನೆನಪಿಸಿಕೊಂಡು ನಗುತ್ತಾರೆ ಅವರು. ಜತೆಗೆ ಮಹಾನ್‌ ಆಬ್ಸೆಂಟ್‌ ಮೈಂಡೆಡ್‌ ಕೂಡ ಆಗಿದ್ದರು.

ಒಮ್ಮೆಯಂತೂ ತಂದೆಯವರ ಬೈಕ್‌ ತೆಗೆದುಕೊಂಡು ಕಾಲೇಜಿಗೆ ಹೋದವರು ಮರಳಿ ಬರುವಾಗ ಮರೆತು ಬೈಕ್‌ ಅನ್ನು ಅಲ್ಲೇ ಬಿಟ್ಟು ಬಸ್‌ ಹತ್ತಿ ಮನೆಗೆ ಬಂದುಬಿಟ್ಟಿದ್ದರಂತೆ.

‘ಕಾಲೇಜಿಗೆ ಬೈಕ್‌ ತೆಗೆದುಕೊಂಡು ಹೋಗಿದ್ದೇ ನೆನಪಿಲ್ಲ. ರಾತ್ರಿ ಒಂಬತ್ತು ಗಂಟೆಯಷ್ಟೊತ್ತಿಗೆ ಅಪ್ಪ ‘ಬೈಕ್‌ ಎಲ್ಲಿ? ಎಂದು ಪ್ರಶ್ನಿಸಿದಾಗಲೇ ನೆನಪಾಗಿದ್ದು’ ತಕ್ಷಣ ಕಾಲೇಜಿಗೆ ಹೋದೆ. ಆದರೆ ಅಲ್ಲಿ ಗೇಟ್‌ ಕ್ಲೋಸ್‌ ಆಗಿತ್ತು. ಕಾಂಪೌಂಡ್‌ ಹಾರಿ ಸೆಕ್ಯೂರಿಟಿ ಕಣ್ತಪ್ಪಿಸಿ, ಬೇರೆ ದಾರಿಯಿಂದ ಬೈಕ್‌ ತರುವಷ್ಟರಲ್ಲಿ ಸಾಕೋ ಸಾಕಾಗಿತ್ತು’ ಎಂದು ಪೇಚಿನ ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT