ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸದ ಮಾರ್ಚ್

Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪೆಚ್ಚಾಗಿದ್ದೇ ನೆನಪು
ಪ್ರತಿ ವರ್ಷವೂ ಮಾರ್ಚ್‌–ಏಪ್ರಿಲ್‌ ತಿಂಗಳೆಂದರೆ ವಿದ್ಯಾರ್ಥಿಗಳಿಗೆ ವಿಶೇಷ. ಏಕೆಂದರೆ ಪರೀಕ್ಷೆಗಳು ಹಾಗೂ ಅದರ ಫಲಿತಾಂಶಗಳಿಗೆ ಕಾಲ ಮಾರ್ಚ್‌ ತಿಂಗಳೇ. ನಾನು ಆಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ನನಗೆ ಇರುವ ಒಬ್ಬನೇ ಅಣ್ಣ, ನನ್ನ ಒಳ್ಳೆಯ ಫಲಿತಾಂಶಕ್ಕಾಗಿ ತನ್ನೆಲ್ಲಾ ಕೆಲಸಗಳನ್ನು ಬದಿಗೊತ್ತಿ ನನಗೆ ತಿಳಿಯದ ಹಲವಾರು ವಿಷಯಗಳ ಬಗ್ಗೆ ತಿಳಿ ಹೇಳಿ, ಅತ್ಯಂತ ಕಷ್ಟದ ಸಮಯದಲ್ಲೂ ಉತ್ತರಗಳನ್ನು  ಉರು ಹೊಡೆಸುತ್ತಾ ಮನೆಯವರ ಕುಂದು ಕೊರತೆಗಳನ್ನು ಲೆಕ್ಕಿಸದೆ ಸಹಾಯ ಮಾಡುತ್ತಿದ್ದ. ಏಕೆಂದರೆ ನಾನು ಶತದಡ್ಡ. ಎಸ್ಸೆಸ್ಸೆಲ್ಸಿ ಆದರೆ ಹೇಗಾದರೂ ಪಿ.ಯು.ಸಿ. ಮಾಡಿಸಿ ನಂತರ ಡಿಗ್ರಿಯೋ ಏನಾದರೂ ಮಾಡಿಸೋಣ ಎಂಬ ಮುಂದಾಲೋಚನೆ ಅಣ್ಣನದ್ದು.

‌ಇನ್ನೇನು ಎರಡು ದಿನಗಳಿವೆ ಪರೀಕ್ಷೆ ಪ್ರಾರಂಭ ಆಗಲು ಎನ್ನುವಾಗ ನನ್ನ ಹತ್ತಿರದ ಸ್ನೇಹಿತ ಯಾರಿಗೂ ತಿಳಿಯದಂತೆ ನನ್ನ ಬಳಿ ಬಂದು ‘ಬಾಲೂ, ಫಿಸಿಕ್ಸ್‌, ಮ್ಯಾಥಮೆಟಿಕ್‌್ಸ, ಕ್ವಶ್ಚನ್‌ ಪೇಪರುಗಳು ಲೀಕಾಗಿವೆ. ಏನಾದರೂ ಮಾಡಿ ಅದನ್ನು ಪಡೆದು ಅತಿ ಹೆಚ್ಚು ಅಂಕಗಳನ್ನು ಪಡೆಯಬಹುದು. ಏತಕ್ಕಾಗಿ ಇಷ್ಟೆಲ್ಲ ಕಷ್ಟಪಡುತ್ತೀಯ? ನಿಮ್ಮಣ್ಣನಿಗೂ ಬುದ್ಧಿಯಿಲ್ಲ. ಪರೀಕ್ಷೆಯ ಹತ್ತಿರದಲ್ಲಿ ಯಾರಾದರೂ ಟ್ಯೂಶನ್‌ ಮಾಡ್ತಾರಾ, ಮಾಡಿದರೆ ಪರೀಕ್ಷೆ ಹಾಲ್‌ನಲ್ಲಿ ಗೊಂದಲ ಆಗಲ್ಲವೇ?’ ಎಂದೆಲ್ಲಾ ಹೇಳಿದಾಗ, ಹೌದಲ್ಲಾ ಎನ್ನಿಸಿ, ಇಷ್ಟೆಲ್ಲಾ ಬುದ್ಧಿ ಇರುವ ಈ ಮಂಜನೇ ನನಗೆ ಅಣ್ಣನಿಗಿಂತ ಹೆಚ್ಚಾದ. ಅಣ್ಣನಿಗೆ ಪುಸಲಾಯಿಸಿ ಬಿಡಿಸಿಕೊಂಡು ಲೀಕಾದ ಪ್ರಶ್ನೆ ಪತ್ರಿಕೆಗಾಗಿ ಮಂಜುವಿನೊಡನೆ ಸುತ್ತಾಟ. ಒಂದು ದಿನ ಪೂರ್ತಿ ಸುತ್ತಿದ ನಂತರ ಕೊನೆಗೂ ಮಂಜುವಿನ ಸ್ನೇಹಿತ ಪ್ರಶ್ನೆ ಪತ್ರಿಕೆ ಕೊಟ್ಟು ನಮಗೆ ನಿಂತಲ್ಲಿಯೇ ಕಾಪಿ ಮಾಡಿ ಕೊಡಲು ಹೇಳಿದ. ನಮಗೋ ಒಂದು ಕಡೆ ಸಂತೋಷ, ಇನ್ನೊಂದೆಡೆ ಆತಂಕ. ಬೇಗ ಕಾಪಿ ಮಾಡದಿದ್ದರೆ ವಾಪಸು ಪಡೆದುಬಿಟ್ಟರೆ ಎನ್ನುವ ಆತಂಕದಿಂದ ಹೆಚ್ಚಾಗಿ ನಿಂತಲ್ಲಿಯೇ ಇದರ ಕಾಪಿಯನ್ನು ತೆಗೆದು ವಾಪಸು ಅವನಿಗೆ ಪ್ರಶ್ನೆ ಪತ್ರಿಕೆ ಕೊಟ್ಟ ನಂತರ ಸಮಾಧಾನ. ಅವನಿಗೆ ವಂದನೆಯನ್ನು ತಿಳಿಸಿ ಪಾರಾದಂತೆ ತಿರುಗಿಬಂದೆವು.
ಉಳಿದದ್ದು ಒಂದೇ ದಿನ. ಆ ಪ್ರಶ್ನೆ ಪತ್ರಿಕೆಗೆ ತಕ್ಕಂತೆ ಉತ್ತರಗಳನ್ನು ಕಲಿತು, ಅರೆದು ಕುಡಿದು, ಅದು ಗಂಟಲೊಳಗೆ ಹೋಗದಿದ್ದರೂ ಬಿಡದೆ, ಅಂತೂ ಅರಗಿಸಿಕೊಂಡೆವು.

ಪರೀಕ್ಷೆ ಬಂದೇ ಬಂತು. ಹೋಗಿ ಒಳಗೆ ಕುಳಿತು ಯಾವಾಗ ಪ್ರಶ್ನೆ ಪತ್ರಿಕೆ ಸಿಕ್ಕುತ್ತದೋ, ಯಾವಾಗ ಅರಗಿಸಿದ್ದನ್ನೆಲ್ಲಾ ಬಿಳಿ ಹಾಳೆಯ ಮೇಲೆ ಉಗಿಯುತ್ತೇನೋ ಎಂಬ ಕಾತರ, ತವಕದಿಂದ ಕುಳಿತದ್ದೇ ಆಯಿತು. 10 ನಿಮಿಷಗಳ ನಂತರ ಪ್ರಶ್ನೆ ಪತ್ರಿಕೆ ಕೈಗೆ ಎಟುಕಿಯೂ ಆಯಿತು. ಕೈಯಲ್ಲಿ ಹಿಡಿದು ನೋಡುತ್ತೇನೆ. ಅದು ಯಾವ ಪ್ರಶ್ನೆ ಎಂಬುದೇ ಅರ್ಥವಾಗಲೊಲ್ಲದು. ಅದು ಪಠ್ಯ ಪುಸ್ತಕಕ್ಕೆ ಸಂಬಂಧಿಸಿದ್ದುದೋ ಅಥವಾ ಬೇರೆ ಯಾವುದಾದರೂ ಪಠ್ಯಪುಸ್ತಕದ್ದೋ ಎಂಬ ಸಂಶಯ. ಅಲ್ಲದೆ, ನಾನು ಓದಿ ಅರಗಿಸಿಕೊಂಡಿದ್ದ ಪ್ರಶ್ನೆಗಳಿಗೆ ಉತ್ತರವು ಎಲ್ಲಾ ಪಲ್ಟಿಯಾದಂತಾಗಿ ಏನೇನೂ ಅರ್ಥವಾಗದೆ, ಅಳುವುದೊಂದೇ ಬಾಕಿ. ಏಕೆಂದರೆ ನಾವು ಓದಿದ್ದಕ್ಕೂ ಅವರು ಕೊಟ್ಟ ಪ್ರಶ್ನೆ ಪತ್ರಿಕೆಗೂ ಸಾಮ್ಯವೇ ಇಲ್ಲ. ಅಲ್ಲದೆ ನಾವು ಓದದೇ ಇದ್ದ ಪಾಠಗಳಿಂದ ಆಯ್ದಿರುವ ಪ್ರಶ್ನೆಗಳೇ ಎಲ್ಲಾ ಆಗಿ ಇಂಗು ತಿಂದ ಮಂಗನಂತಾದೆ. ಅರ್ಧ ಗಂಟೆ ಮುಗಿದ ಕೂಡಲೆ ಉತ್ತರ ಪುಟವನ್ನು ಮಾಸ್ತರರಿಗೆ ಕೊಟ್ಟು ಹೊರಗೆ ಬಂದರೆ, ಮಂಜ ಪ್ರಪಂಚವೇ ತಲೆ ಮೇಲೆ ಬಿದ್ದಂತೆ ಕುಳಿತಿದ್ದಾನೆ. ‘ಏನೋ ಮಂಜ, ಏನಾಯಿತೋ’ ಎಂದರೆ ಬಾಯಿ ಬಾರದ ಮೂಗನಂತಾಗಿದ್ದ. ಸಾಕಪ್ಪ, ಲೀಕಾದ ಪ್ರಶ್ನೆ ಪತ್ರಿಕೆ ಸಹವಾಸ ಎಂದು ಒಂದು ವರ್ಷವನ್ನು ಸುಮ್ಮನೆ ಕಳೆಯುವಂತಾಯಿತು, ಇದ್ದ ಕ್ಲಾಸಿನಲ್ಲೇ ಕುಳಿತು.

ದೊಡ್ಡವರ ಮಾತನ್ನು ಅರ್ಥೈಸಿಕೊಂಡು, ಚೆನ್ನಾಗಿ ಓದಿದ್ದರೆ ಈ ಗೋಳಿರುತ್ತಿರಲಿಲ್ಲವಲ್ಲ ಎಂಬ ಕೊರಗು ಈಗಲೂ ಮನ ಪಟಲದಲ್ಲಿ ಆಗಾಗ ಬಂದು ಹೋಗುತ್ತದೆ.  ಮಾರ್ಚ್‌ ತಿಂಗಳು ಬಂದರೆ ಈ ನೆನಪುಗಳೂ ಬರುತ್ತವೆ.

–ಬಾಲಕೃಷ್ಣ ಎಂ.ಆರ್‌.

‌***
ವಿದ್ವತ್‌ಪೂರ್ಣ ಬೋಧನೆಯ ಅನುರಣನ

ವಿದ್ಯಾರ್ಥಿ ದೆಸೆಯಲ್ಲಂತೂ ಮಾರ್ಚ್ ತಿಂಗಳು ಎಂದರೆ ಪರೀಕ್ಷಾ ಜ್ವರ ಇದ್ದದ್ದೆ. ಪರೀಕ್ಷಾ ಜ್ವರ ಈ ಸಮಯದಲ್ಲಿ ತೀವ್ರವಾಗಿ ಕಾಡುತ್ತಿತ್ತು. ಮುಂದೆ ನಾನು ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮುಗಿಸಿ ಕಾಲೇಜು ಅಧ್ಯಾಪಕನಾದ ಮೇಲೆ ಈ ಪರೀಕ್ಷೆಯೆನ್ನುವುದು ಮಾರ್ಚ್ ತಿಂಗಳ ಒಂದು ವಾಡಿಕೆ ಆಗಿಹೋಯಿತು. ಪ್ರಾಂಶುಪಾಲನಾದ ಮೇಲಂತೂ, ಅದೊಂದು ದೊಡ್ಡ ಆತಂಕವಾಗಿ ಪರಿಣಮಿಸುತ್ತಿತ್ತು, ನಾನಾ ಕಾರಣಗಳಿಂದಾಗಿ. ಆದರೆ ಸಹೋದ್ಯೋಗಿಗಳ ಸಹಕಾರದಿಂದಾಗಿ ಅದನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದೆ ಎನ್ನಿ.

ನಾನು ಸರ್ಕಾರಿ ಸೇವೆಯಲ್ಲಿದ್ದುದರಿಂದ, ಮಾರ್ಚ್ ತಿಂಗಳು ಬಂತೆಂದರೆ, ವಾರ್ಷಿಕ ವರ್ಗಾವಣೆಯ ತವಕ ತಲ್ಲಣದ ಆರಂಭ. ಆ ವರ್ಷ ವರ್ಗಾವಣೆಯ ಭಯವಿಲ್ಲವೆಂದು ಎನಿಸುತ್ತಿದ್ದರೂ, ವರ್ಗಾವರ್ಗಿಯ ಪಟ್ಟಿ ಹೊರಬರುವವರೆಗೆ ಆತಂಕ ತಪ್ಪುತ್ತಿರಲಿಲ್ಲ.

ಮಾರ್ಚ್ ಎಂದರೆ ನನಗೆ ಇನ್ನೂ ಚೆನ್ನಾಗಿ ನೆನಪಿರುವುದು, ಸೀನಿಯರ್ ಎಂ.ಎ.ಯಲ್ಲಿದ್ದಾಗ, ಟಿ.ಎಸ್. ಎಲಿಯಟ್‌ನ ಖ್ಯಾತ ಪದ್ಯ ‘ವೇಸ್ಟ್ ಲ್ಯಾಂಡ್‌’ ಅನ್ನು ನಮ್ಮ ಪ್ರಾಧ್ಯಾಪಕ ಸಿ.ಡಿ. ನರಸಿಂಹಯ್ಯನವರು ತಮ್ಮದೇ ಆದ ಬೋಧನಾ ಧಾಟಿಯಲ್ಲಿ ನಮಗೆ ಬೋಧಿಸಿದ್ದು. ಆ ಸಮಯದಲ್ಲಿ ನನಗೆ ಜ್ವರವಿದ್ದರೂ ಅವರ ವೈಖರಿಯ ಪಾಠ ಕೇಳಲು ತಪ್ಪಿಸಿಕೊಳ್ಳದೇ ಅವರ ತರಗತಿಗೆ ಹಾಜರಾಗಿದ್ದೆ. ಎಲಿಯಟ್ ಕಾವ್ಯದ ವಿಶ್ಲೇಷಣೆ-ಆಧುನಿಕ ಮನುಷ್ಯನ ದುಸ್ಥಿತಿ, ಬಿಕ್ಕಟ್ಟು, ತಲ್ಲಣ ಹಾಗೂ ಗೊಂದಲಗಳನ್ನು ರೂಪಕಗಳ ಮುಖಾಂತರ ಅದ್ಭುತವಾಗಿ ಚಿತ್ರಿಸುವ ವೇಸ್ಟ್ ಲ್ಯಾಂಡ್ ಪದ್ಯವನ್ನು ಸಿ.ಡಿ.ಎನ್.ರವರ ಧ್ವನಿಯಲ್ಲಿ ಕೇಳಿದ್ದು ಒಂದು ಅವಿಸ್ಮರಣೀಯ ಅನುಭವ. ಅದರಲ್ಲೂ ಆ ದೀರ್ಘಪದ್ಯದಲ್ಲಿ ಉಪನಿಷತ್ತಿಗೆ ಸಂಬಂಧಿಸಿದ ಕೊನೆಯ ಸಾಲುಗಳನ್ನು ಅವರು ಕಾವ್ಯಮಯವಾಗಿ ವರ್ಣಿಸಿದ ರೀತಿಯನ್ನು ನಾನು ಮರೆಯಲಾರೆ. 

ಆ ಕಾವ್ಯದ ಮಹತ್ವ ಮತ್ತು ಪ್ರಸ್ತುತಿಯನ್ನು ನಾಲ್ಕೈದು ತರಗತಿಗಳಲ್ಲಿ ವಿಷದಪಡಿಸಿದ್ದರು. ಪದ್ಯದಲ್ಲಿ, ಮೋಡಗಳು ಆ ರೀತಿ ಹೇಳಿದ್ದು ಕಲ್ಪನೆಯೋ ಅಥವಾ ವಾಸ್ತವವೋ. ಆದರೆ ಸಿ.ಡಿ.ಎನ್.ರವರ ಗಡಸು ಧ್ವನಿಯ ಅಭಿವ್ಯಕ್ತಿ ನನ್ನ ಕಿವಿಯಲ್ಲಿ ಇಂದಿಗೂ ಅನುರಣಿಸುತ್ತಿದೆ. ಹೀಗಾಗಿ ಮಾರ್ಚ್ ತಿಂಗಳು ಎಂದರೆ ನನ್ನ ಪಾಲಿಗೆ ವಿದ್ವತ್‌ಪೂರ್ಣ ಬೋಧನೆಯ ಅನುರಣನವೇ ಆಗಿ ಉಳಿದಿದೆ.

-ಪ್ರೊ. ಎಂ.ಎಸ್. ರಘುನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT