ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಮೆಯೇ ಬಡತನಕ್ಕೆ ಮದ್ದು

Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇಂದ್ರಾಣಿ ಸಿಂಗ್

ಕಷ್ಟಗಳು ಬದುಕಿನ ದಾರಿ ತೋರಿಸುತ್ತವೆ ಎಂಬುದಕ್ಕೆ ಗುರುಗ್ರಾಮದ ಇಂದ್ರಾಣಿ ಸಿಂಗ್ ಅವರೇ ಸಾಕ್ಷಿಯಾಗಿದ್ದಾರೆ. ಕಷ್ಟಪಟ್ಟು ಓದಿ ಪೈಲಟ್ ಆಗಿದ್ದ ಇಂದ್ರಾಣಿ ಅವರು ಏರ್‌ಬಸ್‌ 320 ವಿಮಾನವನ್ನು ಚಾಲನೆ ಮಾಡಿದ ಏಷ್ಯಾದ ಮೊದಲ ಮಹಿಳೆ ಎಂಬ ಅಗ್ಗಳಿಕೆಗೆ ಪಾತ್ರರಾದವರು. ಇಂದು ಅವರು ಶಿಕ್ಷಣಾ ಸುಧಾರಕಿಯಾಗಿ ಮತ್ತು ಅಶಿಕ್ಷಿತ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡುವ ಕಾಯಕದಲ್ಲಿ ನಿರತರಾಗಿದ್ದಾರೆ.

ದೆಹಲಿ ಸಮೀಪದ ಗುರುಗ್ರಾಮದಲ್ಲಿನ ಬಡಕುಟುಂಬವೊಂದರಲ್ಲಿ ಇಂದ್ರಾಣಿ ಹುಟ್ಟಿದರು. ಮನೆಯಲ್ಲಿ ಬಡತನ ಇದುದ್ದರಿಂದ ಸರ್ಕಾರಿ ಹಾಸ್ಟೆಲ್‌ಗಳಲ್ಲಿ  ಇದ್ದುಕೊಂಡು ವಿದ್ಯಾಭ್ಯಾಸ ಪಡೆದರು. ಪೈಲಟ್ ಕೋರ್ಸ್ ಅನ್ನು ತುಂಬಾ ಕಷ್ಟಪಟ್ಟು ಮುಗಿಸಿದರು. ಬಳಿಕ ಪೈಲಟ್ ಆಗಿ ವೃತ್ತಿಜೀವನ ಆರಂಭಿಸಿದರು. ಒಂದು ದಶಕ ಪೈಲಟ್ ಆಗಿ ಕೆಲಸ ಮಾಡಿದ ಇಂದ್ರಾಣಿ ಅವರಲ್ಲಿ ಬಡವರ ಬದುಕಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಬೇಕು ಎಂಬ ಆಲೋಚನೆ ಮೊಳೆಯಿತು.  ಇದೇ ನಿಟ್ಟಿನೊಂದಿಗೆ, ಬಡಮಕ್ಕಳಿಗೆ ಶಿಕ್ಷಣ ಮತ್ತು ಅಶಿಕ್ಷಿತ ಮಹಿಳೆಯರ ಬದುಕಿಗೆ  ನೆರವು ನೀಡಬೇಕೆಂದು ನಿರ್ಧರಿಸಿದರು. ಬಡಮಕ್ಕಳಿಗೆ ಶಿಕ್ಷಣ ಕೊಡುವ ‘ಲಿಟೆರಸಿ ಇಂಡಿಯಾ’ ಹಾಗೂ ಅಶಿಕ್ಷಿತ ಮಹಿಳೆಯರಿಗೆ ಉದ್ಯೋಗ ನೀಡುವಂತಹ ‘ಇಂದಾಕ್ರಾಫ್ಟ್’ ಎಂಬ ಸಂಸ್ಥೆಗಳನ್ನು ಆರಂಭಿಸಿದರು.

‘ಇಂದಾಕ್ರಾಫ್ಟ್ ’ ಮೂಲಕ ಹೊಲಿಗೆ ತರಬೇತಿ, ಕರಕುಶಲ ಕಲೆ, ಕಸೂತಿ, ಕಾಗದವನ್ನು ಮರುಬಳಕೆ ಮಾಡುವ ಯೋಜನೆಗಳನ್ನು ರೂಪಿಸಿದರು. ಹತ್ತು ಮಹಿಳೆಯರಿಂದ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಇಂದು 350 ಮಹಿಳೆಯರು ಕೆಲಸ ಮಾಡುತ್ತಿದ್ದು, ಇವರೆಲ್ಲ ಅಶಿಕ್ಷಿತರು ಎಂಬುದು ವಿಶೇಷ. ಇನ್ನು ಲಿಟೆರಸಿ ಇಂಡಿಯಾ ಶಿಕ್ಷಣ ಸಂಸ್ಥೆಯ ಮೂಲಕ ಸಾವಿರಾರು ಬಡಮಕ್ಕಳಿಗೆ ಅಕ್ಷರ ಸೇವೆ ನೀಡುತ್ತಿದ್ದಾರೆ. ರಾಜಸ್ತಾನ, ಜಾರ್ಖಂಡ್, ಬಂಗಾಳ, ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳ ಹಿಂದುಳಿದ ಪ್ರದೇಶಗಳಲ್ಲಿ ಇಂದ್ರಾಣಿ ಅವರ ಈ ಎರಡು ಸಂಸ್ಥೆಗಳು ಕೆಲಸ ಮಾಡುತ್ತಿವೆ. ದೇಶದ ಅಶಿಕ್ಷಿತ ಮಹಿಳೆಯರ ಜೀವನಮಟ್ಟ ಉತ್ತಮಪಡಿಸುವುದೇ ಅವರ ಜೀವನದ ಗುರಿ. ಇದಕ್ಕಾಗಿ ಕ್ಲೌಡ್‌ಫಂಡಿಂಗ್ ಮೂಲಕ ಹಣ ಸಂಗ್ರಹ ಮಾಡಿ ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದಾರೆ.

http://indhacraft.org

***

ಹರಿಓಂ ಜಿಂದಾಲ್

ಲೂಧಿಯಾನದ ಕೊಳೆಗೇರಿಗಳು ಮತ್ತು ಬಡ ಜನರು ವಾಸಮಾಡುವ ಪ್ರದೇಶಗಳಲ್ಲಿ ಜಿಂದಾಲ್ ಮಾಸ್ಟರ್ ಅಂದರೆ ಸಾಕು ಮಕ್ಕಳು ಕುಣಿದು ಕುಪ್ಪಳಿಸುತ್ತಾರೆ. ಚಾಕೊಲೇಟ್ ಕೊಟ್ಟು ಪಾಠ ಮಾಡುವ ಈ ಶಿಕ್ಷಕನ ಸಾಮಾಜಿಕ ಕಾಳಜಿ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿ ಕೊಡುವಂತಹದ್ದು.
ಹರಿಓಂ ಜಿಂದಾಲ್ ಅವರು ಮೂಲತಃ ಉದ್ಯಮಿ.  ಸಾರಿಗೆ ಕ್ಷೇತ್ರದಲ್ಲಿ ಉದ್ಯಮ ನಡೆಸುತ್ತಾರೆ. ಅದ್ಯಾಕೋ ಅವರಿಗೆ ಕಂಪೆನಿಯ ಉಸ್ತುವಾರಿ ಕೆಲಸ ಬೇಸರ ಮೂಡಿಸಿತಂತೆ. ನಂತರ ಕಂಪೆನಿಗೆ ಬೇರೆಯವರನ್ನು ನೇಮಿಸಿ  ಕಪ್ಪುಕೋಟ್ ಧರಿಸಿ ವಕೀಲಿ ವೃತ್ತಿ ಆರಂಭಿಸಿದರು.

ನ್ಯಾಯಾಲಯದಲ್ಲಿ ವಕಾಲತ್ತು ಮಾಡುವುದೂ ಅವರಿಗೆ ಇಷ್ಟವಾಗಲಿಲ್ಲ. ಅಂತಿಮವಾಗಿ ಕೊಳೆಗೇರಿ ಮಕ್ಕಳಿಗೆ ಪಾಠ ಮಾಡಲು ಮುಂದಾದರು. ಮಕ್ಕಳ ಜತೆಗಿನ ಒಡನಾಟ ಮತ್ತು ಅವರ ಮುಗ್ಧತೆ ಇವರ ಮನವನ್ನು ಗೆದ್ದಿದಂತೆ! ಕಳೆದ ಐದು ವರ್ಷಗಳಿಂದ ಬೇರೆ ಕ್ಷೇತ್ರಕ್ಕೆ ವಲಸೆ ಹೋಗದ ಜಿಂದಾಲ್, ಅಕ್ಷರ ಸೇವೆಯಲ್ಲಿ ನಿರತರಾಗಿದ್ದಾರೆ.


ಮಕ್ಕಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಕಲಿಸುತ್ತಿದ್ದಾರೆ. ಅದಕ್ಕೆ ಬೇಕಾಗುವ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದಕ್ಕಾಗಿ ವಾರ್ಷಿಕ 20 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿರುವುದಾಗಿ ಜಿಂದಾಲ್ ಹೇಳುತ್ತಾರೆ. ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಪಾಠ ಮಾಡುತ್ತಾರೆ. ಕಲಿಕೆಯಲ್ಲಿ ಆಸಕ್ತಿ ತೋರದ ಮಕ್ಕಳು ಮೋರಿಗಳು, ಸೇತುವೆಗಳು, ಗಲ್ಲಿಗಲ್ಲಿಗಳಲ್ಲಿ ಅವಿತುಕೊಂಡಿರುತ್ತಾರೆ. ಅಂತಹ ಸ್ಥಳಗಳಿಗೆ ತೆರಳಿ ಆ ಮಕ್ಕಳನ್ನು ಕರೆದುಕೊಂಡು ಬಂದು ಪಾಠ ಮಾಡುತ್ತಾರೆ. ಅವಿತಿಟ್ಟುಕೊಂಡಿರುವ ಮಕ್ಕಳನ್ನು ಹುಡುಕುವುದು ಒಂದು ಸವಾಲಿನ ಕೆಲಸ ಎನ್ನುತ್ತಾರೆ ಜಿಂದಾಲ್.

ಭಾರತದ ಅಭಿವೃದ್ಧಿ, ಶಿಕ್ಷಣದ ತಳಹದಿಯ ಮೇಲೆ ನಿಂತಿದೆ. ಇಂದಿನ ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣ ನೀಡುವ ಮೂಲಕ ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಹುತೇಕ ಯುವಕರು ಶಿಕ್ಷಣದಿಂದ ವಂಚಿತರಾಗಿರುವವರು, ಬಡತನದಲ್ಲಿ ಬೇಯುತ್ತಿರುವವರು ಮತ್ತು ಆರ್ಥಿಕವಾಗಿ ಹಿಂದುಳಿದವರು ಎನ್ನುತ್ತಾರೆ ಜಿಂದಾಲ್. ಬಾಲ್ಯದಲ್ಲೇ
ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ಮೂಲಕ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎನ್ನುತ್ತಾರೆ  ಜಿಂದಾಲ್.

www.facebook.com/hari.jindal1

***

ನಾಲ್ವರು ಗೆಳೆಯರು ತಂದ ವೈಫೈ

ತಮ್ಮ ಹುಟ್ಟಿದ ಊರಿಗೆ ಏನಾದರೂ ಅಳಿಲುಸೇವೆ ಮಾಡಬೇಕು ಎಂದು ಕನಸು ಕಂಡವರಿವರು. ವಿಶೇಷ ಎಂದರೆ, ಈ ನಾಲ್ವರು ಗೆಳೆಯರು ಒಂದೇ ಶಾಲೆ, ಕಾಲೇಜಿನಲ್ಲಿ ಓದಿದವರು. ಎಲ್ಲರೂ ಒಟ್ಟಿಗೆ ಬಿ.ಇ ಪದವಿ ಪಡೆದು ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿದ್ದರು. ಊರಿನ ಜಾತ್ರೆಗೆ ಪ್ರತಿ ವರ್ಷ ಸೇರುತ್ತಿದ್ದಾಗ, ನಮ್ಮ ಹಳ್ಳಿಗೆ ಏನಾದರು ಒಂದು ಪುಟ್ಟ ಸೇವೆ ಮಾಡಬೇಕು ಎಂದು ಚರ್ಚಿಸುತ್ತಿದ್ದರು. ಇವರ ಈ ಚರ್ಚೆ ಸಾಕಾರಗೊಂಡಿದ್ದು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆ ಮೂಲಕ. ಈ ಯೋಜನೆಯಿಂದ ಪ್ರಭಾವಿತರಾದ ಈ ಗೆಳೆಯರು ತಮ್ಮ ಹುಟ್ಟೂರಿಗೆ ಉಚಿತ ವೈಫೈ ಸೇವೆ ನೀಡಲು ಮುಂದಾದರು. ಆ ಮೂಲಕ ಉಚಿತ ವೈಫೈ ಪಡೆದ ದೇಶದ ಮೊದಲ ಹಳ್ಳಿ ಎಂಬ ಹೆಗ್ಗಳಿಕೆಗೂ ಅವರ ಊರು ಪಾತ್ರವಾಯಿತು.

ಶಕೀಲ್, ತುಷಾರ್, ಅಭಿಷೇಕ್ ಮತ್ತು ಭಾನು ಎಂಬ ಯುವ ಗೆಳೆಯರೇ ತಮ್ಮ ಹುಟ್ಟೂರಿಗೆ ಉಚಿತ ವೈಫೈ ಸೇವೆ ಕಲ್ಪಿಸಿದವರು. ಇವರು ಮಧ್ಯಪ್ರದೇಶದ ರಾಜಘರ್ ಜಿಲ್ಲೆಯ ಶಿವನಾಥಪುರ ಗ್ರಾಮದವರು.ಇಂದು ಶಿವನಾಥ

ಪುರದಲ್ಲಿ ಉಚಿತ ವೈಫೈ ಸೇವೆ ಲಭ್ಯವಿದೆ ಎಂದರೆ, ಅದರ ಹಿಂದೆ ಈ ನಾಲ್ಕು ಸ್ನೇಹಿತರ ಕನಸಿದೆ. ಸರ್ಕಾರ ಅಥವಾ ಯಾವುದೇ ಸಂಘಸಂಸ್ಥೆಗಳಿಂದ ಆರ್ಥಿಕ ನೆರವನ್ನು ಪಡೆಯದೇ ವೈಫೈ ಸೇವೆ ನೀಡುತ್ತಿದ್ದಾರೆ. ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಶಿವನಾಥಪುರದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಈ ಸೇವೆ ಪಡೆಯುತ್ತಿದ್ದಾರೆ.

ಇದಕ್ಕಾಗಿ 6 ತಿಂಗಳು ಯೋಜನೆ ರೂಪಿಸಿದರು. ಉಚಿತ ವೈಫೈ ಸೇವೆಗಾಗಿ ತಲಾ 50 ಸಾವಿರ ರೂಪಾಯಿ ಹಾಕಿಕೊಂಡು 2 ಲಕ್ಷ ರೂಪಾಯಿ ವೆಚ್ಚದಲ್ಲಿ 80 ಅಡಿ ಟವರ್ ನಿರ್ಮಾಣ ಮಾಡಿದ್ದಾರೆ. ಪ್ರತಿ ತಿಂಗಳು 8 ಸಾವಿರ ರೂಪಾಯಿ ಇಂಟರ್ನೆಟ್ ಬಿಲ್ಲನ್ನು ಅವರೇ ಭರಿಸುತ್ತಿದ್ದಾರೆ.
‘ನಮ್ಮ ಹಳ್ಳಿಗೆ ನಮ್ಮ ಕೈಲಾದ ಸೇವೆ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯ’ ಎನ್ನುತ್ತಾರೆ ಅಭಿಷೇಕ್ ಮತ್ತು ಗೆಳೆಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT