ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಭಾರತಾಮೃತದ ಸಭಾಪರ್ವದೊಳಗಿನ ರಹಸ್ಯಗಳು

e–ಪುಸ್ತಕ
Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವೋದಯ ಕಾಲದ ಪ್ರಮುಖ ಲೇಖಕರಲ್ಲೊಬ್ಬರಾದ ಗಳಗನಾಥರು ತಮ್ಮ ಕಾದಂಬರಿಗಳ ಮೂಲಕ ಹಾಗೂ ‘ಸದ್ಭೋದ ಚಂದ್ರಿಕೆ’ ಪತ್ರಿಕೆಯ ಮೂಲಕ ಜನಪ್ರಿಯರು. ವೆಂಕಟೇಶ ತಿರಕೊ ಕುಲಕರ್ಣಿ ಗಳಗನಾಥ ಅವರ ಪೂರ್ಣ ಹೆಸರು. ಮಹಾಭಾರತ ಕೃತಿ ಪ್ರತಿಪಾದಿಸುವ ಮೌಲ್ಯಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು, ಭಾರತವನ್ನು ತಮ್ಮ ಹಲವು ಕೃತಿಗಳಿಗೆ ಆಕರವಾಗಿ ಬಳಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಉದಾಹರಿಸಬಹುದಾದ ಕೃತಿ: ‘ಮಹಾಭಾರತಾಮೃತದ ಸಭಾಪರ್ವದೊಳಗಿನ ರಹಸ್ಯಗಳು’.

1933ರಲ್ಲಿ ಗಳಗನಾಥರೇ ಬರೆದು ಪ್ರಕಟಿಸಿದ ಈ ಕೃತಿ (ಬೆಲೆ:10 ಆಣೆ) –‘ದೇಶಹಿತ ಚಿಂತಿಸುವವರು ಮಹಾಭಾರತದ ಸಭಾಪರ್ವದಲ್ಲಿನ ರಹಸ್ಯಗಳನ್ನು ವಿಶೇಷವಾಗಿ ತಿಳಿಯುವುದು ಅವಶ್ಯಕ’ ಎನ್ನುವುದು ಗಳಗನಾಥರ ನಂಬಿಕೆಯನ್ನು ಕೇಂದ್ರವಾಗಿ ಇರಿಸಿಕೊಂಡಿದೆ. ಧರ್ಮದ ನೆಲೆಗಟ್ಟಿನಲ್ಲಿ ದೇಶದ ಹಿತಾಸಕ್ತಿಯನ್ನು ಚರ್ಚಿಸುವ ಈ ಕೃತಿಯುದ್ದಕ್ಕೂ ಸಾರ್ವಜನಿಕ ಬದುಕಿನಲ್ಲಿನ ಧರ್ಮದ ಪಾತ್ರವನ್ನು ಹಲವು ಕೋನಗಳಿಂದ ವಿಶ್ಲೇಷಿಸಲಾಗಿದೆ. ಭಗವದ್ಗೀತೆಯ ಬಗ್ಗೆ ಭಕ್ತಿಭಾವ ಹೊಂದಿದ್ದೂ, ಮಹಾಭಾರತ ಬೋಧಿಸುವ ಧರ್ಮದ ಬಗ್ಗೆ ನಿಷ್ಠೆ ಹೊಂದಿದ್ದೂ ಗಳಗನಾಥರು ಹೇಳುವ ಧರ್ಮ ಮಾನವೀಯ ನೆಲೆಗಟ್ಟಿನದು.

‘ಎಲ್ಲ ಧರ್ಮಗಳೂ ಹೆಚ್ಚು ಕಡಿಮೆ ಪ್ರಮಾಣದಿಂದ ವಿಷಯಾಸಕ್ತಿಗೆ ನಿರ್ಬಂಧವನ್ನುಂಟುಮಾಡಿ ಜಗತ್ತಿನ ಕಲ್ಯಾಣವನ್ನೇ ಉಂಟುಮಾಡುವುದರಿಂದ, ಎಲ್ಲ ಧರ್ಮಗಳೂ ಮನುಷ್ಯನ ಅಧಿಕಾರದಂತೆ ಅವನ ಕಲ್ಯಾಣವನ್ನೇ ಮಾಡುತ್ತಿರಲು, ಯೋಗ್ಯರೀತಿಯಿಂದ ಆದ ಧರ್ಮಾಂತರದಿಂದ ಧರ್ಮನಾಶವಾಗದೆ ಧರ್ಮರಕ್ಷಣವೇ ಆಗುವುದು’ ಎನ್ನುವ ಆರೋಗ್ಯಕರ ನಿಲುವು ಅವರದು. ಜಗತ್ತಿನಲ್ಲಿ ಭಿನ್ನ ಭಿನ್ನ ಧರ್ಮಗಳಿರುವುದು ಜಗತ್ತಿನ ಕಲ್ಯಾಣದ ದೃಷ್ಟಿಯಿಂದ ಅವಶ್ಯವಿರುವುದು ಎನ್ನುವ ಅವರ ಮಾತು ‘ಬಹುತ್ವ’ದ ಅಗತ್ಯಕ್ಕೆ ಎಳೆದ ಅಡಿಗೆರೆಯಾಗಿದೆ.

ಸ್ವಧರ್ಮ ನಿಷ್ಠೆಯ ಜೊತೆಗೆ ಪರಧರ್ಮ ಸಹಿಷ್ಣುತೆಯನ್ನು ಪ್ರತಿಪಾದಿಸುವ ಗಳಗನಾಥರು, ಐದು ಸಾವಿರ ವರ್ಷಗಳ ಹಿಂದಿನ ಸಂಗತಿಗಳನ್ನು ಹೇಳುತ್ತ, ಈ ಕಾಲದ ಜನರ ಮನೋಧರ್ಮವನ್ನು ವಿಶ್ಲೇಷಿಸುವುದು ಕುತೂಹಲಕಾರಿಯಾಗಿದೆ. ‘ಈಗಿನವರ ಸೌಜನ್ಯವು ಕೇವಲ ಸ್ವಾರ್ಥದ್ದಾದ್ದರಿಂದ ಅದು ಮೋಸದ್ದೆಂದು ತಿಳಿಯಬೇಕು. ಈಗಿನ ಕಾಲದಲ್ಲಿ ದುಡ್ಡಿಗೆ, ಅಧಿಕಾರಕ್ಕೆ, ದುಷ್ಟತನಕ್ಕೆ ನಮಸ್ಕಾರವಿರುವುದಲ್ಲದೆ, ಹಿರಿಯತನಕ್ಕೆ, ಸಜ್ಜನತೆಗೆ, ಗುರುತ್ವಕ್ಕೆ ನಮಸ್ಕಾರವಿರುವುದಿಲ್ಲವು’ ಎನ್ನುವ ಅವರ ಮಾತು –ಬದುಕಿನ ಆದ್ಯತೆಗಳ ಕುರಿತಂತೆ ಉಂಟಾದ ಪಲ್ಲಟಗಳನ್ನು ಹಿಡಿದಿಡುವಂತಿದೆ. ಗಳಗನಾಥರ ಈ ಕೃತಿಯನ್ನು goo.gl/aK1PWJ ಕೊಂಡಿ ಬಳಸಿ ಓದಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT