ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಿ ಕಿರಣಂ

ಪಿಚ್ಚರ್ ನೋಡಿ
Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಅಪರೂಪದ ಸಂಗೀತ ಪ್ರಧಾನ ಸಿನಿಮಾ ‘ಸ್ವಾತಿ ಕಿರಣಂ’. ಇದು ಸಂಗೀತದ ಕುರಿತಾದ ಚಿತ್ರವಾದರೂ ಬದುಕಿನ ಹಲವು ಒಳನೋಟಗಳನ್ನು ತಿಳಿಸುವ ಕಾರಣಕ್ಕೆ ಮಹತ್ವದ ಕೃತಿಯಾಗಿ ಗಮನ ಸೆಳೆಯುತ್ತದೆ. 1992ರಲ್ಲಿ ತೆರೆಕಂಡ ಈ ತೆಲುಗು ಸಿನಿಮಾದ ನಿರ್ದೇಶಕ ಕೆ.ವಿಶ್ವನಾಥ್‌. ಅಪಾರ ಜನಮೆಚ್ಚುಗೆಯ ಜತೆಗೆ ಈ ಸಿನಿಮಾದ ‘ಆಣತಿ ನೀಯರಾ’ ಎಂಬ ಹಾಡಿಗಾಗಿ ವಾಣಿ ಜಯರಾಂ ಅವರಿಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತ್ತು. ಸಂಗೀತ ನಿರ್ದೇಶಕ ಕೆ. ಎ. ಮಹಾದೇವನ್‌ ಅವರಿಗೆ ಫಿಲಂ ಫೇರ್‌ ಅವಾರ್ಡ್‌ ದೊರಕಿಸಿಕೊಟ್ಟಿದ್ದೂ ಇದೇ ಸಿನಿಮಾ.

ಸಂಗೀತವನ್ನೇ ಉಸಿರಾಗಿಸಿಕೊಂಡಿರುವ, ಉಸಿರಿನಷ್ಟೇ ಸಹಜವಾಗಿ ಸಂಗೀತವನ್ನು ಒಲಿಸಿಕೊಂಡಿರುವ ಬಾಲಕ ಗಂಗಾಧರನಿಗೆ ಯಾವುದೇ ರಾಗವನ್ನು ಒಮ್ಮೆ ಕೇಳಿದರೆ ಕಲಿತುಕೊಂಡು ಬಿಡುವಷ್ಟು ಸೂಕ್ಷ್ಮಗ್ರಾಹಿಗುಣವಿದೆ. ಅವನಿಗೆ ಭಾರತೀಯ ಪಾಶ್ಚಾತ್ಯ ಎಂಬ ಭೇದಭಾವಗಳಿಲ್ಲ.

ಎಲ್ಲಿಯೇ ಒಳ್ಳೆಯ ಸಂಗೀತ ಕಂಡರೂ ಮೈಮರೆಯುವ, ಮನದೊಳಗೆ ಇಳಿಸಿಕೊಳ್ಳುವ ತೆರೆದ ಹೃದಯ ಅವನದು. ಅವನಿಗೆ ಸಂಗೀತ ಸಾಮ್ರಾಟ ಅನಂತ ರಾಮ ಶರ್ಮ ಅವರ ಬಳಿ ಸಂಗೀತಾಭ್ಯಾಸ ಮಾಡಬೇಕು ಎಂಬ ಆಸೆ. ಅನಂತ ರಾಮ ಶರ್ಮ ಅಪಾರ ಸಂಗೀತ ಪಾಂಡಿತ್ಯ, ಪ್ರಸಿದ್ಧಿ ಮನ್ನಣೆ ಇರುವ ಗಾಯಕ. ಜತೆಗೆ ಅಹಂಕಾರ, ಸ್ವಪ್ರತಿಷ್ಠೆಗಳೂ ಜತೆಗೂಡಿವೆ.

ಗಂಗಾಧರ ಗಾಯನದ ನಡುವೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜತೆಗೆ ಪಾಶ್ವಾತ್ಯ ಸಂಗೀತವನ್ನು ಸೇರಿಸಿದ ಎಂಬ ಕಾರಣಕ್ಕೆ ಶಿಷ್ಯನನ್ನಾಗಿ ಸ್ವೀಕರಿಸಲು ನಿರಾಕರಿಸುತ್ತಾರೆ. ಆದರೆ ಅವರನ್ನೇ ಮಾನಸ ಗುರುವನ್ನಾಗಿ ಸ್ವೀಕರಿಸಿ ಗಂಗಾಧರ ಸಂಗೀತಾಭ್ಯಾಸ ಮುಂದುವರಿಸುತ್ತಾನೆ.
ಎಲ್ಲ ಕಲಾಪ್ರಕಾರಗಳಲ್ಲಿ ಎಲ್ಲ ಕಾಲದಲ್ಲಿಯೂ ಸಂಘರ್ಷಕ್ಕೆ ಕಾರಣವಾಗುವ ‘ಶಾಸ್ತ್ರೀಯತೆ’ ಮತ್ತು ‘ಆಧುನಿಕತೆ’ಗಳ ಪರಿಕಲ್ಪನೆಗಳು, ಕಲೆಯ ಜತೆಗೆ ಬರುವ ಕೀರ್ತಿಯ ಭಾರದ ಹೊಯ್ದಾಟಗಳು, ಅಹಂಕಾರದ ಪೋಷಾಕಿನಡಿಯಲ್ಲಿ ಎಲ್ಲರ ಅಡಿಯಲ್ಲಿ ಅಡಗಿರುವ ನೈಜಪ್ರತಿಭೆ ಎಲ್ಲವನ್ನೂ ಹೊಳೆಯಿಸುವ ಕಾರಣಕ್ಕೆ ಈ ಸಿನಿಮಾ ಮನಸ್ಸಿನಲ್ಲಿ ಉಳಿಯುತ್ತದೆ.

ಒಂದು ರೀತಿಯಲ್ಲಿ ಗುರುವಿಗಾಗಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಗಂಗಾಧರನ ದುರಂತ ಕತೆ ಇದು ಎನಿಸಿದರೂ ಇನ್ನೂ ಆಳಕ್ಕೆ ಇಳಿದು ನೋಡಿದರೆ ಅನುಭವದಲ್ಲಿಯೂ, ವಯಸ್ಸಿನಲ್ಲಿಯೂ ತುಂಬಾ ಚಿಕ್ಕವನಾದ ಶಿಷ್ಯನ ಎದುರು ಸೋತು, ತನ್ನೆಲ್ಲ ಅಹಂಕಾರಗಳನ್ನು ಕಳೆದುಕೊಂಡು ಮರುಹುಟ್ಟು ಪಡೆಯುವ ಅನಂತ ರಾಮ ಶರ್ಮ ಅವರದ್ದೇ ಕಥೆ ಎಂದು ಅರಿವಾಗುತ್ತದೆ.

ಸಂಗೀತವೇ ಈ ಸಿನಿಮಾದ ಆತ್ಮ. ಕೆ. ಎ. ಮಹಾದೇವನ್‌ ಅವರ ಸಂಗೀತ ಸಂಯೋಜನೆ ಮೈಮರೆಸುವಂತಿದೆ. ಪ್ರತಿಯೊಂದು ಹಾಡೂ ತನ್ನ ಶಾಸ್ತ್ರೀಯ ಗುಣದಿಂದ ಮನಸ್ಸಲ್ಲಿ ರಿಂಗಣಿಸುತ್ತದೆ. ವಾಣಿ ಜಯರಾಮ್‌, ಎಸ್‌.ಪಿ. ಬಾಲಸುಬ್ರಹ್ಮಣ್ಯ, ಕೆ.ಎಸ್‌. ಚೈತ್ರ ಅವರ ಕಂಠಮಾಧುರ್ಯವೂ ಹಾಡುಗಳಿಗೆ ಜೀವತುಂಬಿವೆ. ಮಾಸ್ಟರ್‌ ಮಂಜುನಾಥ್‌, ಮುಮ್ಮುಟ್ಟಿ, ರಾಧಿಕಾ ಶರತ್‌ಕುಮಾರ್‌ ಅವರ ಅಭಿನಯವೂ ಈ ಸಿನಿಮಾದ ಧನಾತ್ಮಕ ಅಂಶ.

ಸಂಗೀತ ಒಂದು ಸಿನಿಮಾವನ್ನು ಹೇಗೆ ಮೇಲೆತ್ತಬಲ್ಲದು ಮತ್ತು ಸಂಗೀತಪ್ರಧಾನವಾಗಿಟ್ಟುಕೊಂಡು ಹೇಗೆ ಮನುಷ್ಯಬದುಕಿನ ಆಳದ ಸತ್ಯಗಳನ್ನು ಹೊಳೆಯಿಸುವ ಘನ ಕಥೆಯನ್ನು ಹೇಳಬಹುದು ಎಂಬುದಕ್ಕೆ ‘ಸ್ವಾತಿಕಿರಣಂ’ ಒಂದು ಉತ್ತಮ ಉದಾಹರಣೆ. ಈ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ goo.gl/eL12sW ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT