ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗರ’... ಗರಗರನೆ

Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಗರ’ ಚಿತ್ರದ ಬಗ್ಗೆ ಪೀಠಿಕೆ ಹಾಕಿದ ನಿರೂಪಕಿ ಅನುಪಮಾ ಭಟ್, ‘ಚಿತ್ರದ ನಿರ್ಮಾಪಕ ಯಾರೆಂಬುದು ನನಗೂ ಗೊತ್ತಿಲ್ಲ. ತಿಳಿದುಕೊಳ್ಳುವ ಕುತೂಹಲ ನನಗೂ ಇದೆ’ ಎಂದರು. ಕುತೂಹಲಕ್ಕೆ ತೆರೆ ಎಳೆಯಲು ಮುಂದಾದ ನಿರ್ದೇಶಕ ಕೆ.ಆರ್. ಮುರಳಿಕೃಷ್ಣ, ‘ಚಿತ್ರದ ಮೊದಲ ನಿರ್ಮಾಪಕರು ಯಾರೆಂಬುದನ್ನು ಹೇಳುತ್ತೇನೆ ಎಂದವರೇ, ಮಾಧ್ಯಮದವರತ್ತ ಕೈ ತೋರಿಸಿ ಜೋರು ಧ್ವನಿಯಲ್ಲಿ – ನೀವೇ ಮೊದಲ ನಿರ್ಮಾಪಕರು’ ಎಂದರು.

ಅವರ ಮಾತಿನ ಓಘಕ್ಕೆ ತಕ್ಕಂತೆ ಚಿತ್ರತಂಡದ ಮೂರ್ನಾಲ್ಕು ಮಂದಿ ಮಾರುದ್ದದ ಹೂವಿನ ಮಾಲೆಯನ್ನು ಮಾಧ್ಯಮದವರ ಮುಂದೆ ಹಿಡಿದು ನಿಂತರು. ಎಲ್ಲರೂ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ಒಳಗೊಳಗೇ ನಗತೊಡಗಿದರು. ವಾಸ್ತವವಾಗಿ ಮುರಳಿಕೃಷ್ಣ ಅವರೇ ಚಿತ್ರಕ್ಕೆ ಆ್ಯಕ್ಷನ್–ಕಟ್ ಹೇಳುವ ಜತೆಗೆ, ಬಂಡವಾಳವನ್ನೂ ಹೂಡಿದ್ದಾರೆ. ಆದರೆ, ಅವರು ಮೊದಲ ನಿರ್ಮಾಪಕರು ಎಂಬ ಪಟ್ಟ ಕೊಟ್ಟಿದ್ದು ಮಾತ್ರ ಮಾಧ್ಯಮದವರಿಗೆ.

ಮುರಳಿಕೃಷ್ಣ ಅವರು, ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರಲ್ಲೊಬ್ಬರಾದ ಶಾಂತಾರಾಮ್ ಅವರ ಸಹೋದರ. ತಮ್ಮ ಈ ಚಿತ್ರಕ್ಕೆ ಬಾಲಿವುಡ್‌ನ ಖ್ಯಾತ ಹಾಸ್ಯ ನಟ ಜಾನಿ ಲಿವರ್ ಅವರನ್ನು ದಕ್ಷಿಣ ಭಾರತಕ್ಕೆ ಮೊದಲ ಸಲ ಕರೆತಂದಿರುವ ಹೆಗ್ಗಳಿಕೆ ಅವರದು. ‘ಖ್ಯಾತ ಬರಹಗಾರ ಆರ್‌.ಕೆ. ನಾರಾಯಣ್ ಅವರ ಕಥೆಯ ಒಂದು ಸಾಲು ಈ ಚಿತ್ರಕ್ಕೆ ಸ್ಫೂರ್ತಿ. ಇದು ಈಗಿನ ಕಾಲದ ಲವ್ ಸ್ಟೋರಿಯ ಸಿನಿಮಾ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲೊಲ್ಲೆ’ ಎಂದ ನಿರ್ದೇಶಕರು, ‘ಬೇರೆ ಭಾಷೆಯವರು ಇಲ್ಲಿನ ಚಿತ್ರಗಳನ್ನು ರಿಮೇಕ್ ಮಾಡುವಂತಹ ಸಿನಿಮಾಗಳನ್ನು ನಿರ್ಮಿಸುತ್ತೇನೆ’ ಎನ್ನುತ್ತಾ ಪಕ್ಕದವರಿಗೆ ಮೈಕ್ ಹಸ್ತಾಂತರಿಸಿದರು.

ನಿರೂಪಕ ರೆಹಮಾನ್ ಮತ್ತು ಕಿರುತೆರೆ ನಟ ಪ್ರದೀಪ್ ಈ ಚಿತ್ರದ ನಾಯಕರು. ಕೇರಳದ ಸುಂದರಿ ಆವಾಂತಿಕಾ ನಾಯಕಿ.

‘ಪತ್ರಿಕೋದ್ಯಮದ ಹತ್ತು ವರ್ಷದ ಒಡನಾಟದ ಬಳಿಕ ಸಿನಿಮಾರಂಗಕ್ಕೆ ಬಂದಿದ್ದೇನೆ. ಎರಡೂ ಮಾಧ್ಯಮಗಳೇ. ಆದರೆ, ನಾನು ನಿಲ್ಲುವ ಜಾಗ ಮಾತ್ರ ಬದಲಾಗಿದೆ’ ಎಂದು ಅವಕಾಶ ಕೊಟ್ಟ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.

ಪತ್ರಿಕಾಗೋಷ್ಠಿಯ ಕೇಂದ್ರಬಿಂದುವಾಗಿದ್ದ ಬಾಲಿವುಡ್‌ನ ಹಾಸ್ಯ ಚಕ್ರವರ್ತಿ ಜಾನಿ ಲಿವರ್, ‘ದಕ್ಷಿಣ ಭಾರತದ ಚಿತ್ರಗಳಲ್ಲಿ ಸಾಕಷ್ಟು ಅವಕಾಶಗಳು ಬಂದರೂ ನಟಿಸಲಾಗಿರಲಿಲ್ಲ. ಕನ್ನಡದ ಚಿತ್ರದ ಮೂಲಕ ಈ ಭಾಗದಲ್ಲಿ ನನ್ನ ಜರ್ನಿ ಆರಂಭವಾಗಿರುವುದು ಸಂತಸ ತಂದಿದೆ’ ಎನ್ನುತ್ತಾ, ತಾವು ‘ಗರ’ದ ಭಾಗವಾಗಲು ಕಾರಣರಾದ ಮಿತ್ರ ಗುರುರಾಜ್ ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದರು.

‘ಜಾನಿ ಲಿವರ್ ಮತ್ತು ಸಾಧು ಕೋಕಿಲಾ ಈ ಚಿತ್ರದಲ್ಲಿ ಸಹೋದರರಾಗಿ ಕಾಣಿಸಿಕೊಳ್ಳುತ್ತಿದ್ದು, ಇಬ್ಬರೂ ಭರ್ಜರಿ ನಗೆಯೂಟ ಬಡಿಸಲಿದ್ದಾರೆ’ ಎಂದು ಅವರ ಮಾತಿಗೆ ಮುರಳಿ ಕೃಷ್ಣ ದನಿಗೂಡಿಸಿದರು.

ಎಚ್‌.ಸಿ. ವೇಣು ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದು, ಗುರುರಾಜ್ ಅವರ ಮಗ ಸಾಗರ್ ಗುರುರಾಜ್ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
‘ಚಿತ್ರದಲ್ಲಿ ಐದು ಹಾಡುಗಳಿವೆ. ತಾಯಿ ಮಂಜುಳಾ ಗುರುರಾಜ್, ಸಹೋದರಿ ಸಂಗೀತಾ ಗುರುರಾಜ್, ಸೋನು ನಿಗಮ್, ವಿಜಯ್ ಪ್ರಕಾಶ್ ಹಾಗೂ ಅಜಯ್ ವಾರಿಯರ್ ಹಾಡುಗಳಿಗೆ ದನಿಯಾಗಿದ್ದಾರೆ’ ಎಂದ ಸಾಗರ್, ಅವಕಾಶ ನೀಡಿದ ನಿರ್ದೇಶಕರಿಗೆ ಕೃತಜ್ಞತೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT