ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯಾ ನಿರ್ದೇಶನ

ಸಿನಿಮಾತು
Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ನಾನು ನಟಿಯಾದಾಗಿನಿಂದಲೂ ಅಭಿನಯದ ಜೊತೆಗೆ ಸಿನಿಮಾ ತಂತ್ರಜ್ಞಾನದತ್ತ ವಿಶೇಷ ಆಸಕ್ತಿ ಹೊಂದಿದ್ದೆ. ಆ ಆಸಕ್ತಿಯೇ ಇಂದು ಸಿನಿಮಾ ನಿರ್ದೇಶನದ ಮಟ್ಟಕ್ಕೆ ನನ್ನನ್ನು ತಂದು ನಿಲ್ಲಿಸಿದೆ’ – ಹೀಗೆಂದು ಹೇಳುವಾಗ ವಿನಯಾ ಪ್ರಸಾದ್ ಅವರ ಕಣ್ಣುಗಳಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು.

26 ವರ್ಷದ ಸಿನಿಮಾ ಅನುಭವವನ್ನು ಬೆರೆಸಿ ಅವರು, ‘ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ’ ಎಂಬ ಸಿನಿಮಾ ನಿರ್ದೇಶಿಸಿ ಜೊತೆಗೆ ನಟಿಸುತ್ತಿದ್ದಾರೆ. ಪತಿ ಜ್ಯೋತಿಪ್ರಕಾಶ್ ಅತ್ರೆ ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಚಿತ್ರಕ್ಕಿದೆ. ‘ವಿನಯಾ ಪ್ರಸಾದ್ ಪ್ರೊಡಕ್ಷನ್‌’ನಿಂದ ನಿರ್ಮಾಣವಾಗುತ್ತಿರುವ ಚಿತ್ರದ ಮೂಲಕ ಅವರ ಪುತ್ರಿ ಕೂಡ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಹಾಗಾಗಿ, ಇದು ವಿನಯಾ ಪ್ರಸಾದ್ ಕುಟುಂಬ ನಿರ್ಮಿಸುತ್ತಿರುವ ಹಾಸ್ಯಭರಿತ ಕೌಟುಂಬಿಕ ಚಿತ್ರ ಎನ್ನಬಹುದು.

‘ಇದೇನಿದು ಶೀರ್ಷಿಕೆ ಇಷ್ಟೊಂದು ಉದ್ದ ಇದೆಯಲ್ಲಾ’ ಎಂಬ ಮಾತಿಗೆ ವಿನಯಾ ಪ್ರಸಾದ್ ನಗು ಚೆಲ್ಲುತ್ತಲೇ, ‘ಸೆಳೆತದ ಜೊತೆಗೆ ಟ್ರೆಂಡಿಯಾಗಿರಲೆಂದು ಈ ಶೀರ್ಷಿಕೆಯನ್ನು ಅಂತಿಮಗೊಳಿಸಿದ್ದೇವೆ’ ಎಂದರು.

‘ವಿವಾಹೋತ್ತರ ಪ್ರೇಮಕಥೆಯ ಈ ಚಿತ್ರ ಮನೆಮಂದಿಗೆಲ್ಲ ರಸದೌತಣ ನೀಡಲಿದೆ. ಕೌಟುಂಬಿಕ ಹಾಸ್ಯ ಚಿತ್ರ ಇದಾಗಿದ್ದು, ಇಲ್ಲಿ ಕಥೆ ನಾಯಕನಾದರೆ, ಚಿತ್ರಕಥೆ ನಾಯಕಿ. ನಾವೆಲ್ಲ ಅವುಗಳನ್ನ ಬೆಸೆಯುವ ಕೊಂಡಿಗಳಷ್ಟೆ. ಇವಿಷ್ಟರ ಹೊರತು ಕಥೆಯನ್ನು ಹೆಚ್ಚಾಗಿ ಬಿಟ್ಟುಕೊಡಲಾರೆ’ ಎಂದು ಮಾತು ಮುಗಿಸಿದರು.

ಅಮ್ಮನ ಆ್ಯಕ್ಷನ್–ಕಟ್‌ನಲ್ಲಿ ನಟಿಸುತ್ತಿರುವ ಪ್ರಥಮಾ ಪ್ರಸಾದ್ ರಾವ್, ‘ನಾನು ಹುಟ್ಟಿದ ಬಳಿಕವೇ ಸಿನಿಮಾಗಳಲ್ಲಿ ಅವಕಾಶಗಳು ಸಿಗಲಾರಂಭಿಸಿದವು ಎಂದು ಅಮ್ಮ ಹೇಳುತ್ತಿರುತ್ತಾರೆ. ಚಿಕ್ಕಂದಿನಿಂದ ಸೆಟ್‌ನಲ್ಲಿ ಅವರ ನಟನೆಯನ್ನು ನೋಡಿಕೊಂಡೇ ಬೆಳೆದು, ಕಿರುತೆರೆ ನಟಿಯಾದೆ. ಇದೀಗ ಅಮ್ಮ ನಿರ್ದೇಶಿಸುತ್ತಿರುವ ಚಿತ್ರದ ಮೂಲಕ ನನ್ನ ಸಿನಿಮಾ ಜರ್ನಿ ಆರಂಭವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
‘ಮನಸ್ಸಿಗೆ ರಿಲ್ಯಾಕ್ಸ್ ನೀಡುವ ಚಿತ್ರವಿದು’ ಎಂದು ಜ್ಯೋತಿ ಪ್ರಕಾಶ್ ಅತ್ರೆ ಚುಟುಕಾಗಿ ಹೇಳಿದರು.

ಚಿತ್ರಕ್ಕೆ ಕ್ಯಾಮೆರಾ ಹಿಡಿಯುವ ಹೊಣೆಯನ್ನು ಜೆ.ಜೆ. ಕೃಷ್ಣ ಹೊತ್ತಿದ್ದಾರೆ. ‘ವಿನಯಾ ಮೇಡಂ ಕಥೆ ಹೇಳಿದಾಗಲೇ, ಈ ಚಿತ್ರ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದ್ದೆ. ಅಲ್ಲದೆ, ಈ ಚಿತ್ರದ ಕೆಲಸಕ್ಕೆ ನನಗೆ ಮತ್ತೊಂದು ಪ್ರಶಸ್ತಿ ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ವಿನಯಾ ಪ್ರಸಾದ್ ಅವರ ಜೋಡಿಯಾಗಿ ಮಂಜುನಾಥ ಹೆಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿರುವ ಚಿತ್ರತಂಡ, ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಸಿನಿಮಾವನ್ನು ತೆರೆಗೆ ತರುವ ಆಲೋಚನೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT