‘ಸಂತೋಷ ಶ್ರೇಯಾಂಕ’ದಲ್ಲೂ ನಾವೇಕೆ ಕಳಪೆ?

ಇಡೀ ಸಮಾಜದಲ್ಲಿ ಸಂತಸದ ಮಟ್ಟ ಏರಬೇಕೆಂದರೆ ಸಮಾನತೆಯೇ ಅತಿ ಮುಖ್ಯ ಸೂಚಕವಾಗಿರಬೇಕು. ಈಗಿನ ಪಟ್ಟಿಯಲ್ಲಿ ಅತಿ ಹೆಚ್ಚು ಶ್ರೇಯಾಂಕ ಗಳಿಸಿದ ದೇಶಗಳಲ್ಲಿ ಧನಿಕರ ಮತ್ತು ಬಡವರ ನಡುವಣ ಅಂತರ ತೀರ ಕಡಿಮೆ ಇದೆ. ಭಾರತ ಇದಕ್ಕೆ ತದ್ವಿರುದ್ಧವಾದ ಪ್ರಗತಿಯ ಮಾರ್ಗದಲ್ಲಿ ಸಾಗುತ್ತಿದೆ. ಇಲ್ಲಿ ಕೆಲವರ ಓಡಾಟಕ್ಕೆ ಖಾಸಗೀ ವಿಮಾನಗಳಿವೆ. ಅನೇಕರಿಗೆ ಸೈಕಲ್ ಸವಾರಿಗೂ ಸುಗಮ ದಾರಿಯಿಲ್ಲ.

‘ಸಂತೋಷ ಶ್ರೇಯಾಂಕ’ದಲ್ಲೂ ನಾವೇಕೆ ಕಳಪೆ?
ಕಳೆದ ಮೂರು ದಿನಗಳಿಂದ ಸಾಲುಗಟ್ಟಿ ‘ಅಂತರರಾಷ್ಟ್ರೀಯ ದಿನಾಚರಣೆ’ಗಳು ಬಂದವು: ಮಾರ್ಚ್ 20- ಸಂತಸ ದಿನ, 21- ಅರಣ್ಯ ದಿನ, 22- ಜಲದಿನ. ಆ ಸಾಲಿನಲ್ಲಿ ನಾಲ್ಕನೆಯದಾಗಿ ಇಂದು, 23- ಹವಾಮಾನ ದಿನ ಬಂದಿದೆ.
 
ಇವುಗಳಲ್ಲಿ ಒಂದಾದರೂ ಸಂಭ್ರಮ ಆಚರಿಸುವ ದಿನವೆ? ಹವಾಮಾನ ದಿನದಿನಕ್ಕೆ ಹದಗೆಡುತ್ತಿದೆ; ನೀರಿನ ಹಾಹಾಕಾರ ಎಲ್ಲ ಕಡೆಗಳಿಂದಲೂ ಕೇಳಬರುತ್ತಿದೆ. ಇನ್ನು ಅರಣ್ಯಗಳ ಸ್ಥಿತಿಗತಿಯಂತೂ ಕೇಳುವುದೇ ಬೇಡ. ಮತ್ತೆ, ಮಾರ್ಚ್ 20ರ ‘ಅಂತರಾಷ್ಟ್ರೀಯ ಸಂತಸ ದಿನ’- ಅದೊಂದಾದರೂ ಸಂತಸದ ದಿನ ಆಗಿರಬೇಕಲ್ಲ?
 
ಅದನ್ನೇ ತುಸು ವಿವರವಾಗಿ ನೋಡೋಣ: ದುಡ್ಡು ಕಾಸು, ಬಂಗ್ಲೊ, ಕಾರುಗಳೇ ಶ್ರೀಮಂತಿಕೆಯ ಸೂಚಿಯಲ್ಲ ಎಂಬುದು ನಮಗೆಲ್ಲ ಗೊತ್ತಿದೆ. ಈ ಮನುಷ್ಯನೆಂಬ ಪ್ರಾಣಿ ಇಂಥ ಬರೀ ಭೋಗಲಾಲಸೆಯ ಬೆನ್ನಟ್ಟಿದ್ದರಿಂದಲೇ ಪ್ರಪಂಚದ ಎಲ್ಲ ಜೀವಿಗಳ ಬದುಕೂ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂಬುದು ವಿಶ್ವಮಟ್ಟದ ಚಿಂತಕರಿಗೂ ಈಗ ಗೊತ್ತಾಗಿದೆ.
 
ಅಭಿವೃದ್ಧಿಯ, ಜಿಡಿಪಿಯ ಮಂತ್ರವನ್ನು ಜಪಿಸುತ್ತ ಸಾಮೂಹಿಕ ವಿನಾಶದತ್ತ ಚಲಿಸುವ ಬದಲು ‘ಸಂತಸ’ವನ್ನೇ ಸಾಮಾಜಿಕ ಪ್ರಗತಿಯ ಅಳತೆಗೋಲಾಗಿ ಬಳಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ಪಕ್ಕದ ಭೂತಾನ್ ದೇಶ ಕಳೆದ ಮೂರು ದಶಕಗಳಿಂದ ‘ಜಿಡಿಪಿ’ ಎಂಬ ಅಭಿವೃದ್ಧಿ ಸೂಚ್ಯಂಕದ ಬದಲು ‘ಸಂತಸ ಸೂಚ್ಯಂಕ’ವನ್ನೇ ಬಳಸುತ್ತಿದೆ.
 
ಅದೇ ಮಾದರಿಯನ್ನು ಮುಂದಿಟ್ಟುಕೊಂಡು 2012ರಲ್ಲಿ ವಿಶ್ವಸಂಸ್ಥೆಯ ಉನ್ನತ ಮಟ್ಟದ ತಜ್ಞರು ಸಭೆ ನಡೆಸಿದ್ದರು. ಹಣಕಾಸಿನ ಶ್ರೀಮಂತಿಕೆಯ ಹೊರತಾಗಿ ಬದುಕಿನಲ್ಲಿ ನೆಮ್ಮದಿ ಕೊಡಬಲ್ಲ ಬೇರೆ ಏನೇನು ಅಂಶಗಳಿವೆ ಎಂಬುದನ್ನು ವೈಜ್ಞಾನಿಕವಾಗಿ ಅಳೆದು ನೋಡಲು ಸಾಧ್ಯವೇ ಎಂಬುದನ್ನು ಚರ್ಚಿಸಿದ್ದರು.
 
ಅಂದಿನಿಂದ ಪ್ರತಿ ವರ್ಷ ‘ವಿಶ್ವ ಸಂತಸ ವರದಿ’ಯನ್ನು (ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟನ್ನು) ಮಾರ್ಚ್ 20ರಂದು ವಿಶ್ವಸಂಸ್ಥೆ ಬಿಡುಗಡೆ ಮಾಡುತ್ತ ಬಂದಿದೆ. ವಿವಿಧ ಬಗೆಯ ಮಾನದಂಡಗಳನ್ನು ಆಧರಿಸಿ ಯಾವ ದೇಶದ ಪ್ರಜೆಗಳು ಎಷ್ಟರಮಟ್ಟಿಗೆ ಸಂತೋಷದಿಂದ ಇದ್ದಾರೆ ಎಂಬುದನ್ನು ಸೂಚಿಸುವ ‘ಸಂತಸ ಶ್ರೇಯಾಂಕ’ ಪಟ್ಟಿಯನ್ನು ಕೂಡ ಅದೇ ವರದಿಯ ಜೊತೆಯಲ್ಲಿ ಅದೇ ದಿನ ವಿಶ್ವಸಂಸ್ಥೆ ಬಿಡುಗಡೆ ಮಾಡುತ್ತಿದೆ. ಆ ದಿನವನ್ನು ‘ಹ್ಯಾಪಿನೆಸ್ ಡೇ ಎಂದು ಆಚರಿಸೋಣ’ ಎಂತಲೂ ಅದು ಕರೆ ನೀಡಿದೆ. ಮೊನ್ನೆ ಬಿಡುಗಡೆ ಮಾಡಿದ್ದು ಈ ಸರಣಿಯ 5ನೇ ‘ಸಂತಸ ಶ್ರೇಯಾಂಕ’ ಪಟ್ಟಿ.  
 
ಒಟ್ಟು 155 ದೇಶಗಳ ಸಮೀಕ್ಷೆ ಮಾಡಿ ತಯಾರಿಸಲಾದ ಈಗಿನ ಶ್ರೇಯಾಂಕ ಪಟ್ಟಿಯ ಪ್ರಕಾರ ನಾರ್ವೆ ದೇಶ ಜಗತ್ತಿನಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಇಂಡಿಯಾ 122ನೇ ಸ್ಥಾನದಲ್ಲಿದೆ. ಹಿಂದಿನ ಬಾರಿ ಅಳೆದು ನೋಡಿದಾಗ ನಾಲ್ಕನೆಯ ಸ್ಥಾನದಲ್ಲಿದ್ದ ನಾರ್ವೆ ಈಗ ಮೊದಲ ಸ್ಥಾನಕ್ಕೆ ಏರಿದೆ. ನಾವು ನಾಲ್ಕು ಸ್ಥಾನ ಕಳೆದುಕೊಂಡಿದ್ದೇವೆ.
 
ನಮ್ಮ ಅಕ್ಕಪಕ್ಕದ ಶ್ರೀಲಂಕಾ, ಬಾಂಗ್ಲಾದೇಶ, ಚೀನಾ, ನೇಪಾಳ, ಮಯಾನ್ಮರ್, ಕೊನೆಗೆ ಪಾಕಿಸ್ತಾನವೂ ನಮಗಿಂತ ತುಸು ಸಂತಸ ತುಂಬಿದ ದೇಶವೆಂದು ಈ ಪಟ್ಟಿಯಲ್ಲಿ ಹೇಳಲಾಗಿದೆ. ಅವರಿವರ ಸುದ್ದಿ ಹಾಗಿರಲಿ, ಇರಾಕ್ ಕೂಡ ನಮಗಿಂತ ಮೇಲಿದೆ. ಹೀಗೆ, ನಮ್ಮ ಆಚೀಚಿನ ಎಲ್ಲರಿಗಿಂತ ನಾವು ಅಸಂತುಷ್ಟಿಗಳೆಂಬ ಮಾಹಿತಿಯೇ ನಮ್ಮನ್ನು ಈ ಪಟ್ಟಿಯಲ್ಲಿ ಇನ್ನೂ ಕೆಳಕ್ಕೆ ತಳ್ಳಬಹುದೇನೊ.
 
ಸಂತಸ ಸಮೀಕ್ಷೆಯಲ್ಲಿ ಆಯಾ ದೇಶದ ಪ್ರಜೆಯ ಆದಾಯ, ಆರೋಗ್ಯವಂತ ಬದುಕಿನ ನಿರೀಕ್ಷೆ, ಸಂಕಷ್ಟದಲ್ಲಿ ನೆರವಿಗೆ ಬರುವವರ ನಿರೀಕ್ಷೆ, ಧಾರಾಳತನ, ಸ್ವಾತಂತ್ರ್ಯ ಮತ್ತು ವಿಶ್ವಾಸ ಈ ಆರು ಸೂಚಕಗಳನ್ನು ಬಳಸಲಾಗಿತ್ತು. ಭಾರತದ ಮಟ್ಟಿಗೆ ಆದಾಯ ನಿರಂತರವಾಗಿ ಏರುತ್ತಿದೆಯಾದರೂ ಇತರ ರಂಗಗಳಲ್ಲೆಲ್ಲ ಕುಸಿತ ಹೆಚ್ಚಾಗಿ ಕಂಡಿದ್ದರಿಂದ ನಮ್ಮ ದೇಶದ ಒಟ್ಟಾರೆ ಶ್ರೇಯಾಂಕದಲ್ಲೂ ಕುಸಿತವಾಗಿದೆ; ಹಣವೊಂದೇ ನೆಮ್ಮದಿ ತರಲಾರದು ಎಂಬುದು ಅಲ್ಲೂ ಸಾಬೀತಾಗಿದೆ.
 
ನಾರ್ವೆ ದೇಶ ಏಕೆ ಇತರ 154 ದೇಶಗಳಿಗಿಂತ ಹೆಚ್ಚು ಸಂತಸದಲ್ಲಿದೆ? ‘ನಮ್ಮ ಶಾಲೆಗಳು, ಆಸ್ಪತ್ರೆ, ಪೊಲೀಸ್ ಮತ್ತು ಆಡಳಿತ ವ್ಯವಸ್ಥೆ ಎಲ್ಲವೂ ಪ್ರಜೆಗಳನ್ನು ಗೌರವದಿಂದ ನೋಡುತ್ತವೆ. ನಮ್ಮ ಬೆಂಬಲಕ್ಕೆ ಎಷ್ಟೊಂದು ಮಂದಿ ಇದ್ದಾರಲ್ಲ ಎಂಬ ಭರವಸೆ ನಮಗಿರುತ್ತದೆ- ಅದೇ ನಮ್ಮ ಸಂತಸದ ಗುಟ್ಟು’ ಎಂದು ನಾರ್ವೆಯ ಪ್ರಜೆಗಳು ಹೇಳುತ್ತಾರೆ.
 
ವಿಶ್ವಸಂಸ್ಥೆಯ ವರದಿ ಬೇರೊಂದು ಗುಟ್ಟನ್ನು ಹೇಳುತ್ತದೆ: ನಾರ್ವೆಯಲ್ಲಿ ಭಾರಿ ದೊಡ್ಡ ತೈಲನಿಕ್ಷೇಪ ಇದೆ. ಅದನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಎತ್ತಿ ಹಣ ಗಳಿಸುವ ಬದಲು ನಾರ್ವೆ ಬೇಕಂತಲೇ ಕಡಿಮೆ ತೈಲವನ್ನು ಮೇಲೆತ್ತುತ್ತಿದೆ. ಹಾಗೆ ಎತ್ತಿದ್ದನ್ನೂ ಅದು ಇಂದಿನ ತುರ್ತಿಗಾಗಿ ಬಳಸುವ ಬದಲು ಭವಿಷ್ಯದ ಭದ್ರತೆಗಾಗಿ ಹೂಡಿಕೆ ಮಾಡುತ್ತಿದೆ. ತೈಲಬೆಲೆ ಇಳಿದರೂ ಅದರ ಬಿಸಿ ತಟ್ಟದಂತೆ ರಕ್ಷಾಕೋಟೆಯನ್ನು ನಿರ್ಮಿಸಿಕೊಂಡಿದೆ. ‘ಪರಸ್ಪರ ನಂಬಿಕೆ, ವಿಶ್ವಾಸ ತುಂಬಿರುವ ಪ್ರಜಾಸ್ತೋಮದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ’ ಎಂದು ವರದಿಯಲ್ಲಿ ಹೇಳಲಾಗಿದೆ. 
 
ಉತ್ತರ ಯುರೋಪ್‌ನ ಸುಮಾರು ಎಲ್ಲ ದೇಶಗಳೂ, ಅಂದರೆ ಫಿನ್ಲೆಂಡ್, ಐಸ್ಲೆಂಡ್, ಸ್ವಿತ್ಸರ್ಲೆಂಡ್, ಡೆನ್ಮಾರ್ಕ್ ಎಲ್ಲವೂ ಮೊದಲ ಹತ್ತು ಶ್ರೇಯಾಂಕದಲ್ಲೇ ಬರುತ್ತವೆ. ಅಷ್ಟೇ ಅಲ್ಲ, ಇತರೆಲ್ಲ ಅಭಿವೃದ್ಧಿ ಸೂಚ್ಯಂಕಗಳಲ್ಲೂ ಅವು ಅತ್ಯುನ್ನತ ಶ್ರೇಣಿಯಲ್ಲಿವೆ. ಸಮಾನತೆ ಜಾಸ್ತಿ ಇದೆ, ಭ್ರಷ್ಟಾಚಾರ ಇಲ್ಲ, ಪರಿಸರ ನಾಶ ಇಲ್ಲ, ಪೊಲೀಸರಿಗೆ ಜಾಸ್ತಿ ಕೆಲಸ ಇಲ್ಲ, ಗಡಿ ಜಗಳ ಇಲ್ಲ, ಆಡಳಿತ ಸುಗಮವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಮುದಾಯಗಳಲ್ಲಿ ಒಗ್ಗಟ್ಟಿದೆ.
 
ನೆರೆಹೊರೆಯ ಜನರು ಆಗಾಗ ಸೇರಿ ಊರೊಟ್ಟಿನ ಕೆಲಸಗಳಲ್ಲಿ ನಿರತರಾಗುತ್ತಾರೆ. ಅಲ್ಲಿನ ದೇಶಗಳಿಗೆ ಹೋಲಿಸಿದರೆ ಅಮೆರಿಕ ಕಳೆದ ವರ್ಷ 13ನೇ ಸ್ಥಾನದಲ್ಲಿದ್ದುದು ಈಗ 14ಕ್ಕೆ ಇಳಿದಿದೆ. ‘ನಾವು ಅಮೆರಿಕನ್ನರು ದಿನಗಳೆದಂತೆ ಸ್ವಾರ್ಥಿಗಳಾಗುತ್ತಿದ್ದೇವೆ. ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ; ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತಿದೆ’ ಎನ್ನುತ್ತಾರೆ ಈ ‘ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್‌’ನ ಸಹಲೇಖಕರಾದ ಕೊಲಂಬಿಯಾ ವಿಶ್ವವಿದ್ಯಾಲಯದ ಆರ್ಥಿಕ ತಜ್ಞ ಜೆಫ್ರಿ ಸ್ಯಾಕ್ಸ್.
 
ಹೆಚ್ಚಿನ ಮಾಹಿತಿ ಬಯಸುವವರು world happiness. report ಎಂಬ ಜಾಲತಾಣದಲ್ಲಿ ನೋಡಬಹುದು. ಇಡೀ ವರದಿ ಬೇಡವೆಂದರೆ ‘ಸಂತಸದ ಸಾಮಾಜಿಕ ನೆಲೆಗಳು’, ‘ಕೆಲಸದ ಪರಿಸರದಲ್ಲಿ ಸಂತಸ ಗಳಿಕೆ’, ‘ಸಂತಸ ಮತ್ತು ದುಃಖಗಳ ಪ್ರಧಾನ ಮೂಲಗಳು’ - ಹೀಗೆ ವಿವಿಧ ಅಧ್ಯಾಯಗಳಲ್ಲಿ ಮೌಲಿಕ ಚರ್ಚೆಗಳಿವೆ. ಅವಷ್ಟನ್ನೇ ಇಳಿಸಿಕೊಳ್ಳಬಹುದು.  
 
ಸಂತಸ ಎಂದರೆ ಏನು? ಅದನ್ನು ಗಳಿಸುವುದು, ಉಳಿಸಿಕೊಳ್ಳುವುದು ಹೇಗೆ? ಆಧ್ಯಾತ್ಮಿಕ ನೆಲೆಯಲ್ಲಿ ಅನೇಕ ಸಂತರು, ಯೋಗಿಗಳು, ಅನುಭಾವಿಗಳು, ಬ್ರಹ್ಮಕುಮಾರಿಗಳು ಅದೆಷ್ಟೊ ಹೇಳಿದ್ದಾರೆ; ಹೇಳುತ್ತಲೇ ಇದ್ದಾರೆ. ವಿಜ್ಞಾನಿಗಳೂ ಕಳೆದ ಹತ್ತೆಂಟು ವರ್ಷಗಳಲ್ಲಿ ಸಂತಸದ ಮೂಲವನ್ನು ಶೋಧಿಸಲು ಯತ್ನಿಸಿದ್ದಾರೆ.
 
ಮಾದಕ ವಸ್ತುಗಳಿಂದ ಲಭಿಸುವ ಕೃತಕ ಸಂತಸ ಮತ್ತು ನಮ್ಮದೇ ವರ್ತನೆಯಿಂದ, ಧೋರಣೆಯಿಂದ ಲಭಿಸುವ ಸಹಜ ಸಂತಸಗಳ ನಡುವಣ ವ್ಯತ್ಯಾಸವನ್ನು ತೋರಿಸಿದ್ದಾರೆ. ನಮ್ಮ ದೋಷಗಳನ್ನು ಗುಣಪಡಿಸಲು ಯತ್ನಿಸುವ ಬದಲು ನಮ್ಮಲ್ಲೇ ಅವಿತಿರುವ ಸಾಮರ್ಥ್ಯಗಳನ್ನು ಅನಾವರಣ ಮಾಡುವುದೇ ಮನೋವಿಜ್ಞಾನದ ಮೂಲ ಧ್ಯೇಯ ಆಗಬೇಕು ಎಂದು 1998ರಲ್ಲಿ ಅಮೆರಿಕದ ಸೈಕಾಲಜಿಕಲ್ ಸಂಘದ ಅಧ್ಯಕ್ಷತೆ ವಹಿಸಿಕೊಂಡ ಮಾರ್ಟಿನ್ ಸೆಲಿಗ್ಮನ್ ಒತ್ತು ನೀಡಿದ ಮೇಲೆ  ‘ಪಾಸಿಟಿವ್ ಸೈಕಾಲಜಿ’ (ಧನಾತ್ಮಕ ಮನೋವಿಜ್ಞಾನ) ಎಂಬ ಹೊಸ ಶಾಖೆ ರೂಪುಗೊಂಡಿದೆ.
 
ನಮ್ಮ ಬಗ್ಗೆ, ಬೇರೆಯವರ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಒಳ್ಳೆಯದನ್ನೇ ಆಶಿಸುವ ಮೂಲಕ ಹೇಗೆ ಒಳ್ಳೆಯತನವನ್ನು ಸುತ್ತೆಲ್ಲ ಹಿಗ್ಗಿಸುತ್ತ ಹೋಗಬಹುದು ಎಂಬುದೇ ಧನಾತ್ಮಕ ಮನೋವಿಜ್ಞಾನ. ಅಂಥ  ಒಳ್ಳೆಯತನವನ್ನು ಮೇಲಕ್ಕೆತ್ತಲೆಂದು ಸಲಹಾ ಕೇಂದ್ರಗಳು, ‘ಮೈಂಡ್‌ಫುಲ್‌ನೆಸ್’ ಶಿಬಿರಗಳು, ವ್ಯಕ್ತಿತ್ವ ವಿಕಸನದ ಸಮುದಾಯ ಚಟುವಟಿಕೆಗಳು ರೂಪುಗೊಂಡಿವೆ. ಜಾಲತಾಣಗಳಲ್ಲಿ ಅದಕ್ಕೆಂದೇ ಆಟಗಳು, ರಸಪ್ರಶ್ನೆಗಳು, ಸಲಹೆಗಳು ಸಿಗುತ್ತಿವೆ. 
 
ಜಾಗತಿಕ ಮಟ್ಟದಲ್ಲಿ ‘ಆಕ್ಷನ್ ಫಾರ್ ಹ್ಯಾಪಿನೆಸ್’ ಹೆಸರಿನ ಒಂದು ‘ಸಂತಸ ಅಭಿಯಾನ’ ಚಾಲನೆಗೆ ಬಂದಿದೆ. ಸ್ವಂತದ ಧಾರ್ಮಿಕ, ರಾಜಕೀಯ ನಿಲುವುಗಳನ್ನು ದೂರವಿಟ್ಟು ಯಾರು ಬೇಕಾದರೂ ಅದಕ್ಕೆ ಸೇರಿ ಸ್ವಾರ್ಥ, ತ್ವೇಷದಿಂದ ತುಂಬಿದ ಜಗತ್ತನ್ನು ಬದಲಿಸಲು ಕೈಜೋಡಿಸಬಹುದು. ದಲಾಯಿ ಲಾಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅದರಲ್ಲಿದ್ದಾರೆ. ಮೊದಲಿಗೆ ನಿಮ್ಮನ್ನು ನೀವೇ ಬದಲಿಸಿಕೊಳ್ಳುವ ಅನೇಕ ಸೂತ್ರಗಳು ಅದರಲ್ಲಿ ಉಚಿತವಾಗಿ ಸಿಗುತ್ತವೆ. 
 
ಉದಾಹರಣೆಗೆ ಯಂತ್ರಗಳನ್ನು ತುಸು ಕಮ್ಮಿ ಬಳಸಿ. ಬಸ್‌ನಿಂದ ಒಂದು ಸ್ಟಾಪ್ ಹಿಂದೆಯೇ ಇಳಿದು ನಡೆಯಿರಿ; ಲಿಫ್ಟ್ ಮೂಲಕ ಎಂಟನೇ ಅಂತಸ್ತಿಗೆ ಏರುವುದಾದರೆ 6ರ ಬಟನ್ ಒತ್ತಿ. ಟಿವಿ ಸ್ವಿಚಾಫ್ ಮಾಡಿ ಹೊರಗಡೆ ಸುತ್ತಾಡಿ. ಪ್ರತಿದಿನವೂ ಏನೊ ಹೊಸದನ್ನು ಮಾಡಿ. ಬೇರೆ ರಸ್ತೆಯಲ್ಲಿ ಹೋಗಿ. ಬೇರೆ ಪತ್ರಿಕೆ ಓದಿ. ಅಪರಿಚಿತರೊಂದಿಗೆ ಮಾತಾಡಿ. ಒಂದೆರಡು ಗಂಟೆಗಳ ಕಾಲ ನಗುನಗುತ್ತಲೇ ಇತರರೊಂದಿಗೆ ವ್ಯವಹರಿಸಿ. ವ್ಯತ್ಯಾಸ ಗಮನಿಸಿ. ನಮ್ಮ ಸುತ್ತಲಿನ ಸಂತಸಗಳನ್ನು ಗಮನಿಸಿ. ಪಕ್ಷಿಗಳ ಇಂಚರ, ಕಾಫಿ ಪರಿಮಳ, ಚಿಗುರೆಲೆ, ನಗುವಿನ ಅಲೆ...
 
ಅಂಥ ಖಾಸಗಿ ಸಂತಸದ ಏರಿಳಿತ ಇದ್ದೇ ಇರುತ್ತದೆ ಬಿಡಿ. ‘ವಿದಾಯದ ವೇದನೆ ಇಲ್ಲದೆ ಮರುಮಿಲನದ ಸಂತಸ ಸಿಕ್ಕೀತೆ? ಬಂಧನದ ಬವಣೆ ಅನುಭವಿಸದೆ ಬಿಡುಗಡೆಯ ಸಂತಸ ದಕ್ಕೀತೆ?’ ಎಂಬೆಲ್ಲ ತರ್ಕ ಮಂಡಿಸಬಹುದು. ಆದರೆ ಇಡೀ ಸಮಾಜದಲ್ಲಿ ಸಂತಸದ ಮಟ್ಟ ಏರಬೇಕೆಂದರೆ ಸಮಾನತೆಯೇ ಅತಿ ಮುಖ್ಯ ಸೂಚಕವಾಗಿರಬೇಕು.

ಈಗಿನ ಪಟ್ಟಿಯಲ್ಲಿ ಅತಿ ಹೆಚ್ಚು ಶ್ರೇಯಾಂಕ ಗಳಿಸಿದ ದೇಶಗಳಲ್ಲಿ ಧನಿಕರ ಮತ್ತು ಬಡವರ ನಡುವಣ ಅಂತರ ತೀರ ಕಡಿಮೆ ಇದೆ. ಭಾರತ ಇದಕ್ಕೆ ತದ್ವಿರುದ್ಧವಾದ ಪ್ರಗತಿಯ ಮಾರ್ಗದಲ್ಲಿ ಸಾಗುತ್ತಿದೆ. ಇಲ್ಲಿ ಕೆಲವರ ಓಡಾಟಕ್ಕೆ ಖಾಸಗೀ ವಿಮಾನಗಳಿವೆ. ಅನೇಕರಿಗೆ ಸೈಕಲ್ ಸವಾರಿಗೂ ಸುಗಮ ದಾರಿಯಿಲ್ಲ.  
 
ಇಷ್ಟಕ್ಕೂ ಇಡೀ ಭಾರತವನ್ನೇ ಒಂದೆಂದು ಪರಿಗಣಿಸಿ ಬೇರೆ ದೇಶಗಳೊಂದಿಗೆ ಹೋಲಿಕೆ ಮಾಡುವುದೇ ಸರಿಯಲ್ಲ. ಇಲ್ಲಿರುವಷ್ಟು ವೈವಿಧ್ಯಮಯ ಸಮುದಾಯ ಜಗತ್ತಿನಲ್ಲಿ ಬೇರೆ ಎಲ್ಲೂ ಇಲ್ಲ. ಭ್ರಷ್ಟಾಚಾರ ಶ್ರೇಯಾಂಕ ಇರಲಿ, ಬಡತನದ ಶ್ರೇಯಾಂಕ ಇರಲಿ, ಸಮಾನತಾ ಶ್ರೇಯಾಂಕ ಅಥವಾ ಸಂತಸ ಶ್ರೇಯಾಂಕವೇ ಇರಲಿ ಜಗತ್ತಿನ ಅತ್ಯುತ್ತಮವಾದುದೂ ಇಲ್ಲಿದೆ, ಅತ್ಯಂತ ಕನಿಷ್ಠದ್ದೂ ಇಲ್ಲಿರಬಹುದು.
 
ಯಾರಿಗೆ ಗೊತ್ತು, ಇಲ್ಲೂ ಯಾವುದೋ ಒಂದು ರಾಜ್ಯದ ಒಂದು ಗ್ರಾಮದ ಸಂತಸದ ಮಟ್ಟ ಇಡೀ ಕೆನಡಾದ ಶ್ರೇಯಾಂಕಕ್ಕಿಂತ ಮೇಲೆಯೇ ಇದ್ದೀತು. ಬಿಹಾರದ ಒಂದು ಇಡೀ ತಾಲ್ಲೂಕಿನ ಶ್ರೇಯಾಂಕ ಆಫ್ರಿಕಾದ ರುವಾಂಡಾಕ್ಕಿಂತ ಕೆಳಕ್ಕಿರಬಹುದು. ಉರಿಬೇಸಿಗೆಗಿಂತ ತಂಪಿನ ಸೆಪ್ಟೆಂಬರ್‌ನಲ್ಲಿ ಸಮೀಕ್ಷೆ ನಡೆಸಿದರೆ ಸಂತಸದ ಮಟ್ಟದಲ್ಲಿ ಭಾರೀ ಏರಿಕೆ ಕಾಣಬಹುದು. 
 
ಅಲ್ಲಿಗೆ ಇಂದಿನ ‘ವಿಶ್ವ ಹವಾಗುಣ ದಿನಾಚರಣೆ’ಗೆ ಕೊನೆಗೂ ತಲುಪಿದಂತಾಯಿತು. ಹವಾಮಾನ ಬದಲಾಗುತ್ತಿದೆ ಎಂಬುದೆಲ್ಲ ಸುಳ್ಳೆಂದು ಟ್ರಂಪಟಾಲಮ್ ಅದೆಷ್ಟೇ ಜೋರಾಗಿ ಹೇಳಿದರೂ ಕಳೆದ 40 ಲಕ್ಷ ವರ್ಷಗಳ ದಾಖಲೆಗಳನ್ನು ಮೀರಿಸಿ ವಾಯುಮಂಡಲದ ಇಂಗಾಲದ ಡೈಆಕ್ಸೈಡ್ ಮಟ್ಟ ಮೇಲಕ್ಕೇರಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇನ್ನುಮೇಲೆ ಶುದ್ಧನೀರು, ವಿದ್ಯುತ್ತು ಎರಡೂ ಇರುವಲ್ಲಿ ಮಾತ್ರ ಸಂತೋಷದ ಮಟ್ಟವನ್ನು ಅಳೆಯಬಹುದೇನೊ.  
Comments
ಈ ವಿಭಾಗದಿಂದ ಇನ್ನಷ್ಟು
ಅವಳ ದೇಹದಲ್ಲಿ ರೂಪುಗೊಂಡ ಅಮರ ಕೋಶ

ವಿಜ್ಞಾನ ವಿಶೇಷ
ಅವಳ ದೇಹದಲ್ಲಿ ರೂಪುಗೊಂಡ ಅಮರ ಕೋಶ

8 Mar, 2018
ಕಾರ್ಬನ್ ಮಸಿಯಲ್ಲೇ ಮಿನುಗುವ ವಜ್ರ

ವಿಜ್ಞಾನ ವಿಶೇಷ
ಕಾರ್ಬನ್ ಮಸಿಯಲ್ಲೇ ಮಿನುಗುವ ವಜ್ರ

22 Feb, 2018
ಹಸುರಿನ ಲೋಕದಲ್ಲಿ ಪ್ರಜ್ಞೆಯ ಪ್ರಶ್ನೆ

ವಿಜ್ಞಾನ ವಿಶೇಷ
ಹಸುರಿನ ಲೋಕದಲ್ಲಿ ಪ್ರಜ್ಞೆಯ ಪ್ರಶ್ನೆ

8 Feb, 2018
ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ

ವಿಜ್ಞಾನ ವಿಶೇಷ
ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ

25 Jan, 2018
ಕಂಪನಿಗಳ ಮುಷ್ಟಿಯಲ್ಲಿ ಸಕ್ಕರೆ, ಸೀರಿಯಲ್

ವಿಜ್ಞಾನ ವಿಶೇಷ
ಕಂಪನಿಗಳ ಮುಷ್ಟಿಯಲ್ಲಿ ಸಕ್ಕರೆ, ಸೀರಿಯಲ್

11 Jan, 2018