ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಹ್ಲಿ ವರ್ಚಸ್ಸಿಗೆ ಧಕ್ಕೆ ತರುವ ಯತ್ನ’

ಡೊನಾಲ್ಡ್‌ ಟ್ರಂಪ್‌ಗೆ ಹೋಲಿಸಿದ್ದು ಮೂರ್ಖತನ: ವಿರಾಟ್‌ ಬೆಂಬಲಕ್ಕೆ ಕ್ಲಾರ್ಕ್‌
Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):‘ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ವರ್ಚಸ್ಸಿಗೆ ಧಕ್ಕೆ ತರಲು ಆಸ್ಟ್ರೇಲಿಯಾದ ಕೆಲ ಮಾಧ್ಯಮಗಳು ಮುಂದಾಗಿವೆ. ಹೀಗಾಗಿ ಅವರ ಬಗ್ಗೆ ಇಲ್ಲ ಸಲ್ಲದ  ಸುದ್ದಿ ಬಿತ್ತರಿಸುತ್ತಿವೆ. ಇದರ ಬಗ್ಗೆ ಕೊಹ್ಲಿ ಹೆಚ್ಚು ತಲೆಕೆಡಿಸಿಕೊಳ್ಳಬಾರದು’ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ತಿಳಿಸಿದ್ದಾರೆ.

‘ಕೊಹ್ಲಿ ಕ್ರಿಕೆಟ್‌ ಲೋಕದ ಡೊನಾಲ್ಡ್‌ ಟ್ರಂಪ್‌ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ತಾವು ಮಾಡಿದ ತಪ್ಪನ್ನು ಮರೆಮಾಚು ವುದಕ್ಕಾಗಿ ಆಸ್ಟ್ರೇಲಿಯಾದ ಆಟಗಾರರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿ ದ್ದಾರೆ. ಅವರು ವಿಶ್ವ ಕ್ರಿಕೆಟ್‌ನ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ’ ಎಂದು ಮಂಗಳವಾರ ಆಸ್ಟ್ರೇಲಿಯಾದ ‘ದಿ ಡೈಲಿ ಟೆಲಿಗ್ರಾಫ್’ ತನ್ನ ವರದಿಯಲ್ಲಿ ಟೀಕಿಸಿತ್ತು.

ಇದನ್ನು ಖಂಡಿಸಿರುವ ಕ್ಲಾರ್ಕ್‌ ‘ವಿರಾಟ್‌ ಅವರನ್ನು ಟ್ರಂಪ್‌ಗೆ ಹೋಲಿಕೆ ಮಾಡಿರುವುದು ಮೂರ್ಖತನ. ಸ್ಟೀವನ್‌ ಸ್ಮಿತ್‌ ಅವರಷ್ಟು ತಪ್ಪುಗಳನ್ನಂತೂ ಕೊಹ್ಲಿ ಮಾಡಿಲ್ಲ. ಎಂತಹದೇ ಸವಾಲಿಗೂ ಎದೆಯೊಡ್ಡುವ ದಿಟ್ಟತನ  ವಿರಾಟ್‌ ಅವರಲ್ಲಿದೆ. ಹೀಗಾಗಿ ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಆಸ್ಟ್ರೇಲಿಯಾದ ಜನರೂ ಅವರನ್ನು ಬಹಳ ಇಷ್ಟಪಡುತ್ತಾರೆ’ ಎಂದು ಕ್ಲಾರ್ಕ್‌ ನುಡಿದಿದ್ದಾರೆ.

‘ಅಂಗಳದಲ್ಲಿದ್ದಾಗ ಪ್ರತಿಯೊಬ್ಬ ಆಟಗಾರನೂ  ತಂಡದ ಗೆಲುವಿಗಾಗಿ ಕೆಚ್ಚೆದೆಯಿಂದ ಹೋರಾಡುತ್ತಾನೆ. ಒಬ್ಬ ಬ್ಯಾಟ್ಸ್‌ಮನ್‌ ಚೆನ್ನಾಗಿ ಆಡುತ್ತಿರುವಾಗ ಆತನ ಏಕಾಗ್ರತೆಗೆ ಭಂಗ ತರಲು ಎದುರಾಳಿ ಆಟಗಾರರು ಕೆಣಕುವ, ಹೀಯಾಳಿಸುವ ತಂತ್ರಗಳನ್ನು ಅನು ಸರಿಸುವುದು ಸಾಮಾನ್ಯ. ಅದು ಆಟದ ಒಂದು ಭಾಗವಷ್ಟೆ.  ಅಂಗಳದ ಹೊರಗೆ ಬಂದ ಮೇಲೆ ಎರಡೂ ತಂಡಗಳ ಆಟಗಾರರು ಬಹಳ ಆತ್ಮೀಯರಾಗಿ ಬೆರೆಯುತ್ತಾರೆ. ಈ ಸಂಗತಿ ಬಹಳ ಮಂದಿಗೆ ಗೊತ್ತಿಲ್ಲ’ ಎಂದಿದ್ದಾರೆ.

‘ವಿರಾಟ್‌  ಆಕ್ರಮಣಶೀಲ ವ್ಯಕ್ತಿತ್ವ ಉಳ್ಳವರು.  ತಂಡ ವಿಶ್ವ ಕ್ರಮಾಂಕ ಪಟ್ಟಿ ಯಲ್ಲಿ ಅಗ್ರಸ್ಥಾನದಲ್ಲಿದ್ದಾಗ,ನಾಯಕನೂ ಆಕ್ರಮಣಕಾರಿಯಾಗಿರಬೇಕಾಗುತ್ತದೆ.   ವಿರಾಟ್ ಮಾಡುತ್ತಿರುವುದೂ ಅದನ್ನೇ. ಅವರು ಮೊದಲ ಮೂರು ಪಂದ್ಯದಲ್ಲಿ ವಿಫಲರಾಗಿರಬಹುದು.  ಆದರೆ ಧರ್ಮ ಶಾಲಾದಲ್ಲಿ ಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಡಬಲ್ಲರು. ಆ ತಾಕತ್ತು ಅವರಲ್ಲಿ ಖಂಡಿತವಾಗಿಯೂ ಇದೆ’  ಎಂದು ಕೊಹ್ಲಿಯವರನ್ನು ಬೆಂಬಲಿಸಿದ್ದಾರೆ.

‘ಮೊದಲ ಮೂರು ಪಂದ್ಯಗಳಂತೆ ಧರ್ಮಶಾಲಾದಲ್ಲೂ ಟಾಸ್‌ ನಿರ್ಣಾಯಕ ಪಾತ್ರ ವಹಿಸಲಿದೆ. ಟಾಸ್‌ ಗೆದ್ದವರಿಗೆ ಪಂದ್ಯ ಜಯಿಸುವ ಅವಕಾಶ ಹೆಚ್ಚಿರಲಿದೆ’ ಎಂದೂ ಮೈಕಲ್‌ ಅಭಿಪ್ರಾಯಪಟ್ಟಿದ್ದಾರೆ.

ಸ್ಮಿತ್‌ ಪಡೆ ನಿರಾತಂಕವಾಗಿ ಆಡಲಿದೆ
‘ಧರ್ಮಶಾಲಾದ ಪಿಚ್‌ ವೇಗದ ಬೌಲರ್‌ಗಳಿಗೆ ಹೆಚ್ಚು ನೆರವು ನೀಡಲಿದ್ದು  ನಮ್ಮ ಬ್ಯಾಟ್ಸ್‌ಮನ್‌ಗಳು ನಿರಾತಂಕವಾಗಿ ಆಡಲಿದ್ದಾರೆ’ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಮಿಷೆಲ್‌ ಜಾನ್ಸನ್‌ ನುಡಿದಿದ್ದಾರೆ.

‘ಧರ್ಮಶಾಲಾ ಪಿಚ್‌  ಮೇಲೆ ಸ್ವಲ್ಪ ಹುಲ್ಲು ಬೆಳೆದಿರುತ್ತದೆ. ಇದು ವೇಗಿಗಳ ಸ್ನೇಹಿಯಾಗಿದ್ದು, ಈ ಪಿಚ್‌ನಲ್ಲಿ ಬ್ಯಾಟಿಂಗ್‌ ಮಾಡಲು ನಮ್ಮವರಿಗೆ ಕಷ್ಟವಾಗ ಲಾರದು. ಆದರೆ ಭಾರತದ ಬ್ಯಾಟ್ಸ್‌ ಮನ್‌ಗಳು ನಮ್ಮ ವೇಗಿಗಳ ಎದುರು ಪರದಾಡುವುದಂತೂ ನಿಜ’ ಎಂದು ಅವರು ತಿಳಿಸಿದ್ದಾರೆ.
‘ಧರ್ಮಶಾಲಾದಲ್ಲಿ ಸ್ಪಿನ್ನರ್‌ ಸ್ಟೀವ್‌ ಓ ಕೀಫ್‌ ಬದಲು ಜಾಕ್ಸನ್‌ ಬರ್ಡ್‌ ಅವರನ್ನು ಕಣಕ್ಕಿಳಿಸುವುದು ಉತ್ತಮ. ಇದರಿಂದ ಎದುರಾಳಿಗಳ ಮೇಲೆ ಹೆಚ್ಚು ಒತ್ತಡ ಹಾಕಬಹುದು’ ಎಂದು ಜಾನ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

‘ರಾಂಚಿ ಟೆಸ್ಟ್‌ ನಮ್ಮ ಕೈತಪ್ಪುವ ಹಂತದಲ್ಲಿತ್ತು. ಆ ಪಂದ್ಯದಲ್ಲಿ ಪೀಟರ್ ಹ್ಯಾಂಡ್ಸ್‌ಕಂಬ್‌ ಮತ್ತು ಶಾನ್‌ ಮಾರ್ಷ್‌ ಅಮೋಘ ಜೊತೆಯಾಟ ಆಡಿದರು. ಹೀಗಾಗಿ ನಾವು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದೆವು. ಆ ಪಂದ್ಯದಲ್ಲಿ ಭಾರತದವರು ಸ್ಮಿತ್‌ ಮತ್ತು ವಾರ್ನರ್‌ ಅವರನ್ನೇ ಗುರಿಯಾಗಿಟ್ಟು ಕೊಂಡಿದ್ದರು. ಸ್ಮಿತ್‌ ಮತ್ತು ಡೇವಿಡ್‌ ಅವರನ್ನು ಹೊರ ತುಪಡಿಸಿ ತಂಡದಲ್ಲಿರುವ ಇತರರೂ ಚೆನ್ನಾಗಿ ಆಡಬಲ್ಲರು ಎಂಬುದು ಈಗ ಕೊಹ್ಲಿ ಬಳಗಕ್ಕೆ ಮನವರಿಕೆಯಾದಂತಿದೆ. ಮುಂದಿನ ಪಂದ್ಯದಲ್ಲಿ ಅವರು ಯಾರನ್ನೂ ಕಡೆಗಣಿಸುವಂತಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT