ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟಿಗರ ಸಂಭಾವನೆ ದುಪ್ಟಟ್ಟು

ಕೇಂದ್ರಿಯ ಗುತ್ತಿಗೆ ಆಟಗಾರರಿಗೆ ಸಂಭ್ರಮ
Last Updated 22 ಮಾರ್ಚ್ 2017, 19:38 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ತನ್ನ ಕೇಂದ್ರ ಗುತ್ತಿಗೆಯಲ್ಲಿರುವ ಆಟಗಾರರ ಸಂಭಾವನೆ ಮತ್ತು ಪಂದ್ಯದ ಶುಲ್ಕವನ್ನು ದುಪ್ಟಟ್ಟು ಮಾಡಿದೆ.  

ಇದರಿಂದಾಗಿ ಗುತ್ತಿಗೆಯ ಮೂರು ದರ್ಜೆಗಳಲ್ಲಿಯೂ (ಎ,ಬಿ,ಸಿ) ಇರುವ ಒಟ್ಟು 32 ಆಟಗಾರರು ಮೊದಲಿಗಿಂತಲೂ ದುಪ್ಟಟ್ಟು ಹಣವನ್ನು ಪಡೆಯಲಿದ್ದಾರೆ. ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಬಿಸಿಸಿಐ ಆಡಳಿತ ಸಮಿತಿಯು    ಬುಧವಾರ ಸಂಭಾವನೆ ಪರಿಷ್ಕರಣೆ ಪಟ್ಟಿಯನ್ನು ಪ್ರಕಟಿಸಿದೆ. 2016ರ ಅಕ್ಟೋಬರ್ 1ರಿಂದ ಪರಿಷ್ಕೃತ ಸಂಭಾವನೆ ಮತ್ತು ಶುಲ್ಕವನ್ನು ಘೋಷಿಸಲಾಗಿದೆ.

‘ಎ’ ದರ್ಜೆಯಲ್ಲಿರುವ  ಆಟಗಾರರು ಈ ಮೊದಲು ₹ 1 ಕೋಟಿ ಪಡೆಯುತ್ತಿದ್ದರು. ಇದೀಗ  ಆ ಮೊತ್ತವು ₹ 2ಕೋಟಿಗೆ ಏರಿಕೆಯಾಗಿದೆ.  ಬಿ ದರ್ಜೆ  ಮತ್ತು ಸಿ ದರ್ಜೆಗಳ ಆಟಗಾರರು ಕ್ರಮವಾಗಿ ₹ 50 ಮತ್ತು ₹ 25 ಲಕ್ಷ ಪಡೆಯುತ್ತಿದ್ದರು. ಅವರು ಇನ್ನು ಮುಂದೆ ಕ್ರಮವಾಗಿ ₹ 1 ಕೋಟಿ  ಮತ್ತು ₹ 50 ಲಕ್ಷ ಮೊತ್ತವನ್ನು ಪಡೆಯಲಿದ್ದಾರೆ.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ,  ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಮಹೇಂದ್ರಸಿಂಗ್ ದೋನಿ ಸೇರಿದಂತೆ ಒಟ್ಟು ಏಳು ಆಟಗಾರರು ‘ ಎ’ ದರ್ಜೆ ಗುತ್ತಿಗೆಯಲ್ಲಿದ್ದಾರೆ. ಅನುಭವಿ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಆಶಿಶ್ ನೆಹ್ರಾ ಅವರು ಕ್ರಮವಾಗಿ ‘ಬಿ’ ಮತ್ತು ‘ಸಿ’ ದರ್ಜೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಕರ್ನಾಟಕದ ಕೆ.ಎಲ್. ರಾಹುಲ್ ಅವರು ಬಿ ದರ್ಜೆ,  ಕರುಣ್ ನಾಯರ್ ಮತ್ತು ಮನೀಷ್ ಪಾಂಡೆ ಅವರು ಸಿ ದರ್ಜೆ ಗುತ್ತಿಗೆಯಲ್ಲಿದ್ದಾರೆ.
ಪಂದ್ಯ ಶುಲ್ಕ ಏರಿಕೆ: ಆಟಗಾರರ ಪಂದ್ಯದ ಶುಲ್ಕವನ್ನೂ ಪರಿಷ್ಕರಣೆ ಮಾಡಲಾಗಿದೆ. ಮೂರು ಮಾದರಿಗಳಲ್ಲಿಯೂ ಶುಲ್ಕವನ್ನು ದುಪ್ಟಟ್ಟು ಮಾಡಲಾಗಿದೆ.

ಟೆಸ್ಟ್ ಪಂದ್ಯದಲ್ಲಿ ಆಡುವ ಆಟಗಾರರು ಶುಲ್ಕವನ್ನು ₹ 7.50 ಲಕ್ಷದಿಂದ ₹ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ.  ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳಲ್ಲಿ ಆಡುವವರ ಶುಲ್ಕವನ್ನು ಕ್ರಮವಾಗಿ ₹ 6 ಮತ್ತು ₹ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಎ ದರ್ಜೆ: (₹ 2 ಕೋಟಿ)
ವಿರಾಟ್ ಕೊಹ್ಲಿ, ಮಹೇಂದ್ರಸಿಂಗ್ ದೋನಿ, ಆರ್. ಆಶ್ವಿನ್, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜ, ಮುರಳಿ ವಿಜಯ್.

ಬಿ ದರ್ಜೆ (₹ 1 ಕೋಟಿ)
ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಸ್‌ಪ್ರೀತ್ ಬೂಮ್ರಾ, ಯುವರಾಜ್ ಸಿಂಗ್.

ಸಿ ದರ್ಜೆ  (₹ 50 ಲಕ್ಷ)
ಶಿಖರ್ ಧವನ್, ಅಂಬಟಿ ರಾಯುಡು,  ಅಮಿತ್ ಮಿಶ್ರಾ,  ಮನೀಷ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಆಶಿಶ್ ನೆಹ್ರಾ,  ಕೇದಾರ್ ಜಾಧವ್, ಯಜುವೇಂದ್ರ ಚಾಹಲ್, ಪಾರ್ಥಿವ್ ಪಟೇಲ್, ಜಯಂತ್ ಯಾದವ್, ಮನದೀಪ್ ಸಿಂಗ್,  ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್, ರಿಷಭ್ ಪಂತ್.

ರೈನಾಗೆ ಕೊಕ್
ಅನುಭವಿ ಆಟಗಾರ ಸುರೇಶ್ ರೈನಾ ಅವರನ್ನು  ಗುತ್ತಿಗೆ ಆಟಗಾರರ ಪಟ್ಟಿಯಿಂದ ಕೈಬಿಡಲಾಗಿದೆ. ಗಾಯದ ಸಮಸ್ಯೆ ಮತ್ತು ಅನಾರೋಗ್ಯದಿಂದಾಗಿ ಅವರು  ಹೋದ ವರ್ಷದ ಅಕ್ಟೋಬರ್‌ 1 ರ ನಂತರ ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿಯೂ ಆಡಿಲ್ಲ.
ಹಿರಿಯ ಆಟಗಾರರಾದ ಪಂಜಾಬ್‌ನ ಹರಭಜನ್ ಸಿಂಗ್ ಮತ್ತು  ದೆಹಲಿಯ ಗೌತಮ್ ಗಂಭೀರ್ ಅವರನ್ನೂ ಗುತ್ತಿಗೆಗೆ ಪರಿಗಣಿಸಲಾಗಿಲ್ಲ.

ಸಾವಂತ್ ಕುಟುಂಬಕ್ಕೆ ₹ 15 ಲಕ್ಷ
ಕರ್ತವ್ಯದಲ್ಲಿದ್ದಾಗ ನಿಧನರಾಗಿದ್ದ  ಜೂನಿಯರ್ ತಂಡದ  ತರಬೇತಿ ಸಿಬ್ಬಂದಿ ರಾಜೇಶ್ ಸಾವಂತ್ ಅವರ ಕುಟುಂಬಕ್ಕೆ ₹ 15 ಲಕ್ಷದ ಪರಿಹಾರದ ಚೆಕ್ ನೀಡಲಾಯಿತು. 19 ವರ್ಷದೊಳಗಿನವರ ಭಾರತ ತಂಡದ ತರಬೇತಿ ಸಿಬ್ಬಂದಿಯಾಗಿದ್ದ ಅವರು ಇತ್ತೀಚೆಗೆ  ಹೃದಯಾಘಾತದಿಂದ ನಿಧನರಾಗಿದ್ದರು.  ಅವರ ಪತ್ನಿ ಸಂಧ್ಯಾ ರಾಜೇಶ್ ಸಾವಂತ್ ಅವರಿಗೆ ಚೆಕ್ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT