ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯ ಸಿಗುವವರೆಗೂ ನಾವಿಲ್ಲೇ ಇರ್ತೀವಿ’

ಕರೆಗಳಿಗೆ ಉತ್ತರಿಸುತ್ತಿದ್ದ ಪರಿ
Last Updated 23 ಮಾರ್ಚ್ 2017, 5:01 IST
ಅಕ್ಷರ ಗಾತ್ರ

ಬೆಂಗಳೂರು: ಕತ್ತಲು ಕವಿಯುತ್ತಿದ್ದರೂ ಮಹಿಳೆಯರ ಕಣ್ಣಲ್ಲಿ ಕಿಚ್ಚು ಮಾತ್ರ ಕಡಿಮೆಯಾಗಿರಲಿಲ್ಲ. ಧರಣಿ ಕೂತವರ ಹೊಟ್ಟೆ ಹಸಿವಿನಿಂದ ಚುರುಗುಟ್ಟುತ್ತಿದ್ದರೂ ಮನಸ್ಸು ಮಾತ್ರ ವಿಚಲಿತವಾಗಿರಲಿಲ್ಲ.

‘ನಮಗೆ ಏನೂ ಆಗೋದಿಲ್ಲ, ನೀವು ಹೆದರಬ್ಯಾಡ್ರಿ. ಎಷ್ಟು ದಿನ ಆದರೂ ನ್ಯಾಯ ಸಿಗುವವರೆಗೂ ನಾವಿಲ್ಲೇ ಇರ್ತೀವಿ. ಮಕ್ಕಳನ್ನು ನೀವು ಹೆಂಗಾದರೂ ಸಂಭಾಳಿಸಿ. ನಾ ಬಂದ್ ಮ್ಯಾಲೆ ಮನೆ ಎಲ್ಲಾ ಸ್ವಚ್ಛ ಮಾಡ್ತೀನಿ’ –ಧರಣಿ ಕೂತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ಮನೆಗಳಿಂದ ಬಂದ ಕರೆಗಳಿಗೆ ಉತ್ತರಿಸುತ್ತಿದ್ದ ಪರಿ ಇದು. ಧಾಟಿ ಯಾವುದೇ ಆಗಿದ್ದರೂ ಅವರೆಲ್ಲರ ಮನೆಗಳಿಗೆ ಸಿಗುತ್ತಿದ್ದ ಉತ್ತರಗಳು ಮಾತ್ರ ಒಂದೇ ಆಗಿದ್ದವು.

‘ಇಲ್ಲಿ ಪಾಯಿಖಾನೆ ಅಷ್ಟಕಷ್ಟೇರಿ. ಪ್ರತಿಭಟಿಸಲು ಬಂದವರಿಗೆ ಎಲ್ಲಾ ವ್ಯವಸ್ಥೆ ಸಿಗತ್ತೆ ಅಂತ ಅಂದ್ಕೊಳ್ಳೋದು ಮೂರ್ಖತನ. ನಮ್ಮ ಊರಿಂದ ಬಂದ ಕಾರ್ಯಕರ್ತೆಯರಲ್ಲಿ ಒಬ್ಬಾಕಿ ಬೆಳಿಗ್ಗೆ ಮುಟ್ಟಾಗಿದ್ದಾಳೆ. ಅದನ್ನು ನಾವು ಸಂಭಾಳಿಸಿಕೊಳ್ಳುತ್ತೇವೆ. ಅದು ನಮ್ಮ ದೌರ್ಬಲ್ಯವಲ್ಲ’ ಎಂದು ಕೊಪ್ಪಳದಿಂದ ಬಂದಿದ್ದ ಶಾರದಮ್ಮ  ಅವರು ಹೇಳಿದರು.

‘ಗಂಡನನ್ನು ಕಳೆದುಕೊಂಡ, ಮಕ್ಕಳಿಲ್ಲದ ನೊಂದ ಮಹಿಳೆಯರೇ ಹೆಚ್ಚು ಮಂದಿ ಈ ಕೆಲಸದಲ್ಲಿ ಇದ್ದಾರೆ. ಮನೆ ನಡೆಸಲು ಕಷ್ಟಪಡುತ್ತಿದ್ದಾರೆ. ಹೊಲದ ಕೆಲಸಕ್ಕೆ ಹೋಗುವ ಮಹಿಳೆಯರು  ಮಕ್ಕಳನ್ನು ಅಂಗನವಾಡಿಯಲ್ಲಿ ಬಿಟ್ಟು ಹೋಗುತ್ತಾರೆ. ಸಂಜೆವರೆಗೂ ಅವರನ್ನು ಸಂಭಾಳಿಸಬೇಕು. ನಮ್ಮ ಕಡೆ ನೀರಿನ ತೊಂದರೆ ಇದೆ. ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಆರೋಗ್ಯ ಹೆಚ್ಚು ಕಡಿಮೆ ಆದರೆ ನಮಗೆ ಕೇಳುತ್ತಾರೆ. ಅದಕ್ಕಾಗಿ ದಿನಕ್ಕೆ ₹5 ಕೊಟ್ಟು ಶುದ್ಧೀಕರಿಸಿದ ನೀರನ್ನು ತಂದು ಕೊಡುತ್ತೇವೆ. ಬರುವ ಸಂಬಳದ ಕಾಲು ಭಾಗ ಮಕ್ಕಳಿಗಾಗಿಯೇ ಖರ್ಚು ಮಾಡುತ್ತೇವೆ’ ಎಂದು ಮುಧೋಳದ ಬಸಮ್ಮ ವಿವರಿಸಿದರು.

‘ಬೆಳಿಗ್ಗೆಯಿಂದ ಸಂಜೆವರೆಗೂ ಮಕ್ಕಳನ್ನು ನೋಡಿಕೊಳ್ಳುವುದಷ್ಟೇ ಅಲ್ಲದೆ ನಮ್ಮೂರಿಗೆ ಸೊಸೆ ಬಂದರೆ, ಅವಳು ಬಸರಿ ಆದರೆ, ಮಗು ಹುಟ್ಟಿದರೆ ಹೀಗೆ 24 ದಾಖಲೆ ಪುಸ್ತಕಗಳನ್ನು ನಿರ್ವಹಿಸಬೇಕು. ವಯಸ್ಸಾದ ಹೆಂಗಸರು ಬಸರಿಯಾದ ತಮ್ಮ ಸೊಸೆಯರನ್ನು ಹೊರಗೆ ಬಿಡುವುದಿಲ್ಲ. ನಿಮ್ಮ ಕಾಲದಂತೆ ಅಲ್ರಿ ಅವ್ವ... ಈಗ ಕಾಲ ಬದಲಾಗ್ಯಾದ ಎಂದು ಅವರ ಮನವೊಲಿಸಿ ಆಸ್ಪತ್ರೆಗೆ ಕಳುಹಿಸುವ ಜವಾಬ್ದಾರಿಯೂ ನಮ್ಮದೇ’

‘ಯಾವ ಇಲಾಖೆ ಏನೇ ಕೆಲಸ ಕೊಟ್ಟರೂ ಮಾಡಬೇಕು. ಮಾಡಲಿಲ್ಲ ಎಂದರೆ ರಾಷ್ಟ್ರೀಯ ಕಾರ್ಯಕ್ರಮ ಇದು, ಮಾಡ್ರಿ ಎಂದು ಹೆದರಿಸುತ್ತಾರೆ. ರುಬೆಲ್ಲ ಲಸಿಕೆ ಕಾರ್ಯಕ್ರಮದಲ್ಲಿ ದುಡಿದದ್ದಕ್ಕೆ ಒಂದು ರೂಪಾಯಿಯೂ ನೀಡಿಲ್ಲ. ಹೀಗೆ ಲಾರ್ವ ಸಮೀಕ್ಷೆ, ಶೌಚಾಲಯ ಸಮೀಕ್ಷೆ ಯನ್ನೂ ನಮ್ಮಿಂದ ಮಾಡಿಸಿಕೊಂಡಿದೆ. ಇದುವರೆಗೂ ಬಿಡಿಗಾಸು ಬಿಚ್ಚಿಲ್ಲ’ ಎಂದು ಬಸಮ್ಮ ನೋವಿನಿಂದ ಹೇಳಿಕೊಂಡರು.

‘ಏಳು ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಬಂದಿದ್ದೇನೆ. ರಾತ್ರಿಯಾದ ಕೂಡಲೇ ಅಮ್ಮ ಬೇಕು ಎಂದು ಅಳುತ್ತಾನೆ. ಗಂಡ ಕುಡುಕ, ಒಂದು     ಪೈಸೆ ಸಂಪಾದನೆ ಇಲ್ಲ. ಈಗ ಮಗನಿಗಾಗಿ ಮನೆಗೆ ಹೋದರೆ ಅವನಿಗೊಂದು ಭವಿಷ್ಯ ರೂಪಿಸಲು ಸಾಧ್ಯವಾಗುವುದೇ ಇಲ್ಲ. ಪ್ರತಿ ವರ್ಷ ಪ್ರತಿಭಟಿಸಿದಾಗಲೂ ₹500 ಜಾಸ್ತಿ ಮಾಡುತ್ತಾರೆ.    ದೇವಸ್ಥಾನ, ಮಠ ಕಟ್ಟಲು ಬಜೆಟ್‌ನಲ್ಲಿ ಹಣ ಇಡುವ ಸರ್ಕಾರ, ದುಡಿಯುವ ನಮಗೆ ಹಣ ನೀಡಿ ಎಂದರೆ ಯೋಚಿಸುತ್ತದೆ’ ಎನ್ನುತ್ತಾ ಕೋಲಾರದಿಂದ ಬಂದಿದ್ದ ರೂಪ ಸಿಟ್ಟಿನಿಂದ ಕೈ ಕುಟ್ಟಿದರು.

ಜಿಲ್ಲಾ ಗಡಿಯಲ್ಲೇ  ತಡೆದ ಪೊಲೀಸರು
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಅಹೋರಾತ್ರಿ ಧರಣಿಯು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅದನ್ನು ಹತ್ತಿಕ್ಕಲು ಸರ್ಕಾರವು ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ‘ರಾಜ್ಯದ ಎಲ್ಲ ಜಿಲ್ಲೆಗಳಿಂದ ರಾಜಧಾನಿಗೆ ಬರುತ್ತಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ತಮ್ಮ ಗಡಿ ಭಾಗದಲ್ಲೇ ತಡೆದು ವಾಪಸ್‌ ಕಳುಹಿಸುವಂತೆ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಆರ್.ಕೆ.ದತ್ತ ಅವರು ಜಿಲ್ಲಾ ಎಸ್ಪಿಗಳಿಗೆ ಮೌಖಿಕ ಸೂಚನೆ ನೀಡಿದ್ದಾರೆ’ ಎಂದು ಸಿಪಿಐ(ಎಂ) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ದೂರಿದರು.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಚಿಕ್ಕಬಳ್ಳಾಪುರದಿಂದ  ಬರುತ್ತಿದ್ದ ಕಾರ್ಯಕರ್ತೆಯರ ವಾಹನಗಳನ್ನು  ಮಂಗಳವಾರ ರಾತ್ರಿ ಹೊಸಕೋಟೆ ಬಳಿಯೇ ಪೊಲೀಸರು ತಡೆದು ನಿಲ್ಲಿಸಿದ್ದರು. ಈ ಬಗ್ಗೆ ಎಸ್ಪಿ ಅಮಿತ್‌ ಸಿಂಗ್‌ ಅವರನ್ನು ಪ್ರಶ್ನಿಸಿದಾಗ ಡಿಜಿಪಿ ಅವರ ಸೂಚನೆ ಇರುವುದಾಗಿ ಹೇಳಿದರು’ ಎಂದು ಮಾಹಿತಿ ನೀಡಿದರು. ‘ರಾಜ್ಯದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಗಸ್ತು ತಿರುಗುತ್ತಿರುವ ಪೊಲೀಸರು, ಕಾರ್ಯಕರ್ತೆಯರನ್ನು ಒಳಗೆ ಬಿಡುತ್ತಿಲ್ಲ. ಈ ಬಗ್ಗೆಯೂ  ಕೆಲವರು ಕರೆ ಮಾಡಿ ವಿಷಯ ತಿಳಿಸಿದ್ದಾರೆ.’ ‘ಸರ್ಕಾರದ ಭರವಸೆಗಳನ್ನು ಕೇಳಿ ಸಾಕಾಗಿರುವ ಕಾರ್ಯಕರ್ತೆಯರು ಈ ಬಾರಿ ಬೇಡಿಕೆ ಈಡೇರುವರೆಗೂ ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಇದಕ್ಕೆ ನಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲ ನೀಡಿದ್ದೇವೆ’ ಎಂದು ಹೇಳಿದರು.

ಕೇಂದ್ರದ ಅನುದಾನ ಹೆಚ್ಚಳಕ್ಕೆ ಆಗ್ರಹ
ನವದೆಹಲಿ:
ರಾಜ್ಯದಲ್ಲಿ ಅಂಗನ ವಾಡಿ ನೌಕರರು ಎದುರಿಸುತ್ತಿರುವ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳು ವಂತೆ ತುಮಕೂರು ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಲೋಕಸಭೆಯಲ್ಲಿ ಬುಧವಾರ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ತಮ್ಮ ಮಕ್ಕಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.

ಮೊದಲು ಅಂಗನವಾಡಿ ನೌಕರರ ವೇತನ ನೀಡಲು ಶೇ 90ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು. ಈಗ ಕಡಿತ ಉಂಟು ಮಾಡಿ, ಶೇ 60ರಷ್ಟು ಹಣ ಮಾತ್ರ ನೀಡಲಾಗುತ್ತಿದೆ. ವೇತನದ ಶೇ 40ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಬೇಕಿದೆ. ಇದ ರಿಂದಾಗಿ ಹೆಚ್ಚಿನ ಹೊರೆಯಾ ಗುತ್ತಿದೆ. ಕೇಂದ್ರ ಸರ್ಕಾರವು ಮೊದಲಿನಂತೆಯೇ ಶೇ 90ರಷ್ಟು ಅನುದಾನ ಒದಗಿಸಬೇಕು ಎಂದು ಅವರು ಕೋರಿದರು.

ಪತ್ರಕರ್ತನ ಸೋಗಿನಲ್ಲಿ ಅಸಭ್ಯ ವರ್ತನೆ: ಬಂಧನ
ಸಂಜೆ ಪತ್ರಿಕೆಯೊಂದರ ಸಂಪಾದಕ ನೆಂದು ಹೇಳಿಕೊಂಡು  ಕಾರ್ಯಕರ್ತೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಜೆ.ಪಿ.ನಗ ರದ ಮುರುಳಿ (30) ಎಂಬಾತನನ್ನು ಪೊಲೀಸರು ಬಂಧಿಸಿದರು. ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಮುರುಳಿ, ಕಾರ್ಯಕರ್ತೆಯರ ಸಂದರ್ಶನ ಮಾಡುವ ನೆಪದಲ್ಲಿ ಅವರ ಮೊಬೈಲ್‌ ನಂಬರ್‌ ಪಡೆದು, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಈ ವೇಳೆ ಅಸಭ್ಯವಾಗಿ ವರ್ತಿಸುತ್ತಿದ್ದ. ಅದನ್ನು ಗಮನಿಸಿದ ಉಪ್ಪಾರಪೇಟೆ  ಪೊಲೀಸರು, ಈತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

‘ಆರೋಪಿಯು ಪತ್ರಕರ್ತನಲ್ಲ ಎಂಬುದು ಗೊತ್ತಾಗಿದೆ. ಆತ ಪದೇ ಪದೇ ಹೇಳುತ್ತಿದ್ದ ಸಂಜೆ ಪತ್ರಿಕೆಯ ನೈಜ ಸಂಪಾದಕರೇ ದೂರು ಕೊಟ್ಟಿದ್ದಾರೆ. ಅದರಡಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ ಅನುಚೇತ್‌, ‘ಆರೋಪಿಯ  ಮೊಬೈಲ್‌ ಹಾಗೂ ಬೈಕ್‌ ಜಪ್ತಿ ಮಾಡಿದ್ದೇವೆ. ಆತ ಯಾರು ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದರು.

ಚುನಾವಣಾ ನೀತಿ ಸಂಹಿತೆ ನೆಪ
‘ರಾಜ್ಯದಲ್ಲಿ ಉಪ ಚುನಾವಣೆ ಇದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇದರಿಂದ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಸರ್ಕಾರ ನೆಪ ಹೇಳುತ್ತಿದೆ’ ಎಂದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಎಸ್‌.ವೈ.ಲಕ್ಷ್ಮಿ ದೂರಿದರು. ‘ನೀತಿ ಸಂಹಿತೆ ಇದ್ದರೂ ಬಜೆಟ್‌ ಮಂಡಿಸಲಾಗಿದೆ. ಹಲವು ಯೋಜನೆ ಘೋಷಿಸಲಾಗಿದೆ. ಅದಕ್ಕೆ ಇಲ್ಲದ ನೀತಿ ಸಂಹಿತೆ ನಮಗೆ ಏಕೆ’ ಎಂದು ಪ್ರಶ್ನಿಸಿದರು. ‘ಪ್ರತಿಭಟನೆಯನ್ನು ಸರ್ಕಾರವು ಹಗುರವಾಗಿ ಪರಿಗಣಿಸಿತ್ತು. ಇದರಿಂದಾಗಿ  ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ.ಬೇಡಿಕೆ ಈಡೇರಿಸುವರೆಗೂ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT