ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಅರ್ಜಿ ವಿಚಾರಣೆ

ಬಾಬರಿ ಮಸೀದಿ ಧ್ವಂಸ ಪ್ರಕರಣ
Last Updated 22 ಮಾರ್ಚ್ 2017, 20:21 IST
ಅಕ್ಷರ ಗಾತ್ರ

ನವದೆಹಲಿ: ಬಾಬರಿ ಮಸೀದಿ ಧ್ವಂಸ  ಪ್ರಕರಣದ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಮಾಡಿರುವ ಮನವಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ.

ಅಲ್ಲದೇ,  ಅರ್ಜಿಯ ವಿಚಾರಣೆಯನ್ನು ಗುರುವಾರ (ಮಾರ್ಚ್‌ 23) ನಡೆಸುವುದಾಗಿಯೂ ಹೇಳಿದೆ. 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಹಾಗೂ ಬಿಜೆಪಿಯ ಇತರ ಮುಖಂಡರ ವಿರುದ್ಧದ ಅಪರಾಧ ಸಂಚು ಆರೋಪಗಳನ್ನು ಕೈ ಬಿಡುವ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನು ಸಿಬಿಐಯು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಮಾರ್ಚ್‌ 6ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್‌ ಮತ್ತು ಆರ್‌.ಎಫ್‌.ನಾರಿಮನ್‌ ಅವರಿದ್ದ ನ್ಯಾಯಪೀಠ, ತಾಂತ್ರಿಕ ಕಾರಣ ನೀಡಿ ಪ್ರಕರಣದ 13 ಆರೋಪಿಗಳ ವಿರುದ್ಧದ ಆರೋಪಗಳನ್ನು ಕೈಬಿಟ್ಟಿರುವುದು ತಪ್ಪು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

ಬುಧವಾರ, ನ್ಯಾಯಮೂರ್ತಿಗಳಾದ  ಪಿ.ಸಿ. ಘೋಷ್‌ ಮತ್ತು  ದೀಪಕ್‌ ಗುಪ್ತಾ ಅವರಿದ್ದ ಪೀಠದ ಮುಂದೆ ಈ ಅರ್ಜಿಯ ವಿಚಾರ ಪ್ರಸ್ತಾಪವಾಯಿತು.
ರಾಮಜನ್ಮಭೂಮಿ–ಬಾಬರಿ ಮಸೀದಿ ಮಾಲೀಕತ್ವ ಪ್ರಕರಣದ ಅರ್ಜಿದಾರರಾದ ಹಾಜಿ ಮೆಹಬೂಬ್‌ ಅಹಮದ್‌ ಪರ ವಕೀಲರಾದ ಎಂ.ಆರ್‌. ಶಂಶಾದ್ ಅವರು ಅರ್ಜಿ ವಿಚಾರಣೆಯನ್ನು ಒಂದು ವಾರ ಮುಂದೂಡುವಂತೆ ಮನವಿ ಮಾಡಿದರು.

ಲಖನೌ ಮತ್ತು ರಾಯ್‌ಬರೇಲಿಯ ವಿಚಾರಣಾ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಸ್ಥಿತಿಗತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಒಂದು ವಾರ ಸಮಯಬೇಕು ಎಂದು ಅವರು ಹೇಳಿದರು.

ಮನವಿಗೆ ಸಮ್ಮತಿಸಿ ನ್ಯಾಯಪೀಠವು ವಿಚಾರಣೆಯನ್ನು ಒಂದು ವಾರ ಮುಂದಕ್ಕೆ ಹಾಕಲು ಮುಂದಾಗುತ್ತಿದ್ದಂತೆ, ಅಡ್ವಾಣಿ ಅವರಿಗೆ ವೈಯಕ್ತಿಕ ಸಮಸ್ಯೆಗಳಿರುವುದರಿಂದ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡುವಂತೆ ಅವರ ಪರ ವಕೀಲ ಕೆ.ಕೆ. ವೇಣುಗೋಪಾಲ್‌  ಕೇಳಿಕೊಂಡರು.

‘ನಾಲ್ಕು ವಾರ ಅಂದರೆ ಮೇ ತಿಂಗಳಿಗೆ ಮುಂದೂಡಬೇಕು. ಮೇನಲ್ಲಿ ವಿಚಾರಣೆ ನಡೆಯಬೇಕು ಎಂದು ನೀವು ಬಯಸುತ್ತಿದ್ದೀರಾ? ಹಾಗಿದ್ದರೆ ಬೇಸಿಗೆ ರಜೆಯ ನಂತರ ಇದನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ ಪಿ.ಸಿ. ಘೋಷ್‌ ಹೇಳಿದರು. ಘೋಷ್‌ ಅವರು ಮೇ 27ರಂದು ನಿವೃತ್ತರಾಗಲಿದ್ದಾರೆ.

ಆದರೆ, ಎರಡೂ ಕಡೆಯ ವಕೀಲರು ಸಮ್ಮತಿಸಿದ ನಂತರ ನ್ಯಾಯಪೀಠವು ಗುರುವಾರ ಅರ್ಜಿ ವಿಚಾರಣೆ ನಿಗದಿಪಡಿಸಿತು. ನ್ಯಾಯಮೂರ್ತಿ ಆರ್‌.ಎಫ್‌ ನಾರಿಮನ್‌ ಅವರು ಗುರುವಾರ ತಮ್ಮೊಂದಿಗೆ ಇರಲಿದ್ದು, ಅರ್ಜಿಯನ್ನು ಅಂದೇ ಪರಿಗಣಿಸಲಾಗುವುದು ಎಂದು  ನ್ಯಾಯಮೂರ್ತಿ ಘೋಷ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT