ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಧರ್ಮ ಸಮಭಾವ ಸಂದೇಶ ಇಂದಿನ ಅನಿವಾರ್ಯ

ರಾಮಕೃಷ್ಣ- ವಿವೇಕಾನಂದ ಆಶ್ರಮದ ಬೆಳ್ಳಿಹಬ್ಬ ರಜತಯಾನಕ್ಕೆ ಚಾಲನೆ
Last Updated 23 ಮಾರ್ಚ್ 2017, 4:42 IST
ಅಕ್ಷರ ಗಾತ್ರ

ತುಮಕೂರು: ‘ಸರ್ವಧರ್ಮ ಸಮಭಾವವೇ ರಾಮಕೃಷ್ಣ ಪರಮಹಂಸರ ಜೀವನ ಸಂದೇಶ. ಅದೇ ಇಂದಿನ ಸಮಾಜದ ಅನಿವಾರ್ಯತೆ’ ಎಂದು ಕೋಲ್ಕತ್ತ ರಾಮಕೃಷ್ಣ ಮಹಾಸಂಘದ ಉಪಾಧ್ಯಕ್ಷ ಸ್ವಾಮಿ ಗೌತಮಾನಂದ ಮಹಾರಾಜ್ ಹೇಳಿದರು.

ನಗರದ ರಾಮಕೃಷ್ಣ– ವಿವೇಕಾನಂದ ಆಶ್ರಮದ ಬೆಳ್ಳಿಹಬ್ಬ ರಜತಯಾನಕ್ಕೆ ಬುಧವಾರ ಚಾಲನೆ ನೀಡಿದ ಬಳಿಕ ಆಶೀರ್ವಚನ ನೀಡಿದರು.
‘ವಿವಿಧ ಆಧ್ಯಾತ್ಮಿಕ ನಾಯಕರು ವಿವಿಧ ಧಾರ್ಮಿಕ ದೃಷ್ಟಿಕೋನಗಳನ್ನು ಪ್ರತಿಪಾದಿಸಿದರು. ಆದರೆ ಅವರೆಲ್ಲರ ಅಂತಿಮ ಗುರಿ ಆರೋಗ್ಯಕರ ಸಮಾಜ ನಿರ್ಮಾಣವೇ ಆಗಿತ್ತು’ ಎಂದರು.

‘ಶಂಕರರು ಅದ್ವೈತ ಪ್ರತಿಪಾದಿಸಿದರೆ, ಮಧ್ವಾಚಾರ್ಯರು ದ್ವೈತ, ರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಿಸಿದರು. ಶ್ರೀರಾಮಕೃಷ್ಣರು ಎಲ್ಲ ಧರ್ಮಗಳ ಸಮನ್ವಯತೆಯನ್ನು ಎತ್ತಿಹಿಡಿದರು’ ಎಂದು ವಿಶ್ಲೇಷಿಸಿದರು.

‘ಜೀವನದ ಉದ್ದೇಶವೇ ಭಗವಂತನ ಸಾಕ್ಷಾತ್ಕಾರ. ದೇವರ ಸಾಕ್ಷಾತ್ಕಾರದಿಂದಲೇ ನಿಜವಾದ ಸಂತೃಪ್ತಿ, ಶಾಂತಿ,ನೆಮ್ಮದಿ ದೊರೆಯುತ್ತದೆ ಎಂದು ರಾಮಕೃಷ್ಣ ಪರಮಹಂಸರು ನಂಬಿದ್ದರು. ಹಾಗಾಗಿ ಸಾಧ್ಯವಾದಷ್ಟು ಒಳ್ಳೆಯ ದಾರಿಯಲ್ಲಿ ಮುಂದುವರಿಯುವುದೇ ನಮ್ಮೆಲ್ಲರ ಉದ್ದೇಶ ಆಗಬೇಕು’ ಎಂದು ಸಲಹೆ ನೀಡಿದರು.

‘ಎಲ್ಲರನ್ನೂ ಪ್ರೀತಿಯಿಂದ ಕಂಡು, ಶುದ್ಧಾಂತಕರಣದಿಂದ ವ್ಯವಹರಿಸಬೇಕು. ಶುದ್ಧ ಕಣ್ಣುಗಳಿಂದ ನೋಡಬೇಕು. ಸತ್ಯ, ಪಾವಿತ್ರ್ಯ, ನಿಸ್ವಾರ್ಥ ಹಾಗೂ ಪರಮಾತ್ಮನಲ್ಲಿ ನಂಬಿಕೆಗಳೇ ಶ್ರೇಷ್ಠ ಬದುಕು ನಿರ್ಮಿಸಬಲ್ಲವು’ ಎಂದರು.

‘ಆನಂದ, ಆತ್ಮಶಾಂತಿ ನೀಡುವುದೇ ನಿಜವಾದ ಧರ್ಮ ಎಂಬುದನ್ನು ರಾಮಕೃಷ್ಣ ಹಾಗೂ ವಿವೇಕಾನಂದರ ಅಭಿಪ್ರಾಯ ಆಗಿತ್ತು. ಅಂತಹ ಧರ್ಮ ಸಮಾಜಕ್ಕೆ ಅಗತ್ಯವಿದೆ’ ಎಂದರು.

ಗದಗ ಹಾಗೂ ವಿಜಯಪುರ ರಾಮಕೃಷ್ಣ– ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ‘ಪ್ರತಿ ಜಿಲ್ಲೆಯಲ್ಲೂ ಬೇಲೂರು ಮಠದಂತಹ ಆಶ್ರಮಗಳ ನಿರ್ಮಾಣ ಆಗಬೇಕು. ಅಲ್ಲಿಂದ ವೀರ ಸನ್ಯಾಸಿಗಳು ಹೊರಬರಬೇಕು ಎಂಬುದು ವಿವೇಕಾನಂದರ ಆಶಯವಾಗಿತ್ತು.
ಅಂತಹ ಆಶಯವನ್ನು ತುಮಕೂರು ಆಶ್ರಮ ನಿಜವಾಗಿಸುತ್ತಿದೆ’ ಎಂದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಕೆ.ಎಚ್. ಗೋಪಾಲಕೃಷ್ಣೇಗೌಡ, ವಾಗ್ದೇವಿ ವಿಲಾಸ ಶಿಕ್ಷಣ ಸಮೂಹದ ಅಧ್ಯಕ್ಷ ಕೆ.ಹರೀಶ್‌, ಉದ್ಯಮಿ ಆರ್‌.ಎಲ್‌.ರಮೇಶ್‌ಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT