ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿಗೆ ಜಾತಿ, ಧರ್ಮದ ಹಂಗು ಸಲ್ಲ

ಕವಿ ಸತ್ಯಮಂಗಲ ಮಹಾದೇವ ಅವರಿಗೆ ಅಭಿನಂದನೆ; ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ಅಭಿಪ್ರಾಯ
Last Updated 23 ಮಾರ್ಚ್ 2017, 4:42 IST
ಅಕ್ಷರ ಗಾತ್ರ

ತುಮಕೂರು: ‘ಯಶಸ್ಸಿಗೆ ಜಾತಿ, ಧರ್ಮ, ಭಾಷೆಯ ಹಂಗು ಸಲ್ಲದು’ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ಹೇಳಿದರು.

ಪ್ರಸಕ್ತ ಸಾಲಿನ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಕೃತಿಯ ಲೇಖಕ ಸತ್ಯಮಂಗಲ ಮಹಾದೇವ ಅವರನ್ನು ಅಭಿನಂದಿಸಿ ಮಾತನಾಡಿದರು.

‘ಸಾಮಾನ್ಯರೊಂದಿಗೆ ಬದುಕಿದವರಿಗೆ ಭಾಷೆಯ ಹಿಡಿತ ಸಿಗುತ್ತದೆ. ಕವಿ ಬೇಂದ್ರೆ ಅವರು ಕಾವ್ಯವನ್ನು ಬಿಟ್ಟರೆ ಬದುಕೇ ಇಲ್ಲ ಎಂಬಂತೆ ಜೀವಿಸಿದರು. ಬೇಂದ್ರೆ ಅವರಂತೆ ತನ್ನ ಅಂತರಂಗವನ್ನು ತಾನೇ ನೋಡಿಕೊಳ್ಳುವ ಮಟ್ಟಕ್ಕೆ ಕವಿ ಬೆಳೆಯಬೇಕು’ ಎಂದು ಹೇಳಿದರು.

‘ಭೌತಿಕ ಆಕಾರ, ಬೌದ್ಧಿಕ ಆಕಾರ ಪರಿಸರದಿಂದ ಸಿಗುತ್ತದೆ. ಬೌದ್ಧಿಕ ದಾಹ ಇದ್ದಾಗ ಹೊಸ ದಾರಿಗಳ ಬಗ್ಗೆ ಕುತೂಹಲದಿಂದ ಸಂಶೋಧನೆ ನಡೆಸಬಹುದು. ಈ ಸಂಶೋಧನೆಯಿಂದ ಮೌನದ ಅರ್ಥ ತಿಳಿಯಲಿದೆ’ ಎಂದರು.

‘ಕವಿತೆ ಬೀಸುವ ಗಾಳಿಯಂತೆ. ಸ್ಪರ್ಶಕ್ಕೆ ನಿಲುಕುತ್ತದೆ. ಶಬ್ದದ ಅರ್ಥ, ಅರ್ಥದ ಪ್ರಾಣವಾಯು ಈ ಕವಿತೆಯಲ್ಲಿದೆ. ಹಾಗಾಗಿ ಕವಿತೆ ಜೀವನದ ಇನ್ನೊಂದು ಮುಖವಾಗಿದೆ’ ಎಂದು ಹೇಳಿದರು.

ಯುವ ಕವಿ ಸ್ವಾಮಿ ನಾ.ಕೋಡಿಹಳ್ಳಿ ಮಾತನಾಡಿ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ ಕಾವ್ಯದಲ್ಲಿ ಬೌದ್ಧಿಕ ಶೋಧನೆ ಅರಿವಿಗೆ ಬರದಂತೆ ನಿರಂತರತೆ ಕಾಯ್ದುಕೊಂಡಿದೆ. ಸಮುದಾಯದ ಅನುಭವವನ್ನು ಕಾವ್ಯಶಕ್ತಿಯನ್ನಾಗಿಸುವಲ್ಲಿ ಮಹಾದೇವ ಅವರು ಯಶಸ್ವಿಯಾಗಿದ್ದಾರೆ’ಎಂದು ಹೇಳಿದರು.

‘ನಾವು ಬೆಳೆದು ಬಂದ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕು. ತಾನು ಬೆಳೆದು ಬಂದ ಪರಿಸರದ ನಡುವೆ ಮನುಷ್ಯತ್ವದ ನೆಲೆ ಹುಡುಕುವ ಪ್ರಯತ್ನ ಕಾವ್ಯದಲ್ಲಿ ಕಂಡು ಬರುತ್ತದೆ’ ಎಂದರು.

ಯೂನಿಯನ್‌ ಕ್ರಿಶ್ಚಿಯನ್‌ ಕಾಲೇಜು ಪ್ರಾಂಶುಪಾಲ ಪಿ.ಜೋಯಲ್‌ ಜಯಪ್ರಕಾಶ್‌ ಮಾತನಾಡಿ, ‘ವ್ಯಕ್ತಿಯ ಬದುಕಿನಲ್ಲಿ ಜ್ಞಾನ ಇದ್ದರೆ ಸಾಲದು. ಸನ್ನಡತೆಯೂ ಇರಬೇಕು. ಆಗ ಮಾತ್ರ ಪ್ರಗತಿ ಸಾಧ್ಯ’ ಎಂದು ಹೇಳಿದರು.

‘ಜ್ಞಾನದೊಂದಿಗೆ ವಿನಯಯಂತಹ ಸದ್ಗುಣಗಳನ್ನು ಬೆಳೆಸಿಕೊಂಡಾಗ ಸಮಾಜ, ದೇಶಕ್ಕೆ ಶಾಶ್ವತವಾದ ಫಲ ಕೊಡಬಹುದು’ ಎಂದರು. ಕವನ ವಾಚನ ಸ್ಪರ್ಧೆಯಲ್ಲಿ ವಿಜೇತರಾದ ಗೀತಾ, ಯಶಸ್ವಿನಿ, ಎಸ್‌.ಚೇತನ್‌ ಅವರಿಗೆ ಕ್ರಮವಾಗಿ ಮೊದಲ ಮೂರು ಬಹುಮಾನಗಳನ್ನು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT