ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ಬ್ಯಾಂಕ್‌ಗೆ ಅಲೆದಾಡಿಸಬೇಡಿ

ಬ್ಯಾಂಕ್‌ ಅಧಿಕಾರಿಗಳಿಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾವೇರಿ ಸೂಚನೆ
Last Updated 23 ಮಾರ್ಚ್ 2017, 4:53 IST
ಅಕ್ಷರ ಗಾತ್ರ

ಕೋಲಾರ: ಸಮರ್ಪಕ ದಾಖಲೆಪತ್ರಗಳನ್ನು ಹೊಂದಿರುವ ರೈತರಿಗೆ ಶೀಘ್ರವೇ ಸಾಲ ವಿತರಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಬುಧವಾರ ನಡೆದ ಪ್ರಸಕ್ತ ಹಣಕಾಸು ವರ್ಷದ ಜಿಲ್ಲಾ ಸಾಲ ಯೋಜನೆ ಬಿಡುಗಡೆ ಸಭೆಯಲ್ಲಿ ಮಾತನಾಡಿದ ಅವರು, ರೈತರನ್ನು ಪದೇ ಪದೇ ಬ್ಯಾಂಕ್‌ಗೆ ಅಲೆಯುವಂತೆ ಮಾಡಬೇಡಿ. ಸಾಲ ವಿತರಣೆಯಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಹೇಳಿದರು.

ಸಾಲ ಮತ್ತು ಸಹಾಯಧನ ವಿತರಣೆಯಲ್ಲಿ ಕಳೆದ ವರ್ಷ ಕೆಲವೆಡೆ ವಿಳಂಬವಾಗಿದೆ. ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ್ದರಿಂದ ಪೂರ್ಣ ಪ್ರಮಾಣದಲ್ಲಿ ಸಾಲ ವಿತರಿಸಲು ಸಾಧ್ಯವಾಗಿರಲಿಲ್ಲ. 2017–-18ನೇ ಸಾಲಿನಲ್ಲಿ ಈ ರೀತಿ ಆಗಬಾರದು. ಪೂರ್ಣ ಪ್ರಮಾಣದಲ್ಲಿ ಸಾಲ ವಿತರಣೆಯಾಗಬೇಕು ಎಂದು ತಿಳಿಸಿದರು.

ಜಿಲ್ಲೆಗೆ ಈ ಹಿಂದೆ ₹ 1,584 ಕೋಟಿ ಮಾತ್ರ ಸಾಲ ನೀಡಲಾಗುತ್ತಿತ್ತು. ಆದರೆ, ಈ ವರ್ಷದಿಂದ ಸಾಲ ಮತ್ತು ಸಹಾಯಧನ ಪ್ರಮಾಣವನ್ನು ₹ 1,800 ಕೋಟಿಗೆ ಏರಿಸಲಾಗಿದೆ. ಇದರಿಂದ ಮತ್ತಷ್ಟು ಫಲಾನುಭವಿಗಳಿಗೆ ಅನುಕೂಲವಾಗಲಿದೆ.

ಅಧಿಕಾರಿಗಳು ಸಾಲ ವಿತರಣೆ ಗುರಿ ಸಾಧನೆಗೆ ಹೆಚ್ಚು ಗಮನ ಹರಿಸಬೇಕು. ಅನುದಾನ, ಸಾಲ ವಿತರಣೆ ಸಂಬಂಧ ಯಾವುದೇ ಗೊಂದಲವಿದ್ದರೆ ಶೀಘ್ರವೇ ಬಗೆಹರಿಸಿಕೊಳ್ಳಿ. ಅನುದಾನ ಮತ್ತು ಸಾಲ ವಿತರಣೆ ವಿಳಂಬವಾದರೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಕ್ರಿಮಿನಲ್‌ ಪ್ರಕರಣ: ಕೈಗಾರಿಕೆಗಳಿಗೆ ನೀಡುವ ಸಾಲದ ಪ್ರಮಾಣ ದೊಡ್ಡ ಪ್ರಮಾಣದಲ್ಲಿರುತ್ತದೆ. ಕೈಗಾರಿಕೆಗಳಿಗೆ ಸಾಲ ನೀಡುವ ಸಂಬಂಧ ಸಮಿತಿಯಲ್ಲಿ ನಿರ್ಧಾರ ಕೈಗೊಂಡ ಬಳಿಕವಷ್ಟೇ ಬ್ಯಾಂಕ್‌ಗಳಿಗೆ ಕಳುಹಿಸಲಾಗುತ್ತದೆ. ಬ್ಯಾಂಕ್‌ಗಳಿಗೆ ಕೈಗಾರಿಕೆಯ ಸಂಪೂರ್ಣ ಮಾಹಿತಿಯ ಕೊಟೇಶನ್ ನೀಡಬೇಕಿದ್ದು, ಸಾಕಷ್ಟು ಸಂಸ್ಥೆಗಳು ತೆರಿಗೆ ಪಾವತಿಯ ಗುರುತಿನ ಸಂಖ್ಯೆ (ಟಿಐಎನ್‌) ಬಗ್ಗೆ ಸುಳ್ಳು ಮಾಹಿತಿ ಕೊಟ್ಟು ವಂಚಿಸುತ್ತಿವೆ. ಇಂತಹ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಆದೇಶಿಸಿದರು.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ವಿಭಾಗೀಯ ವ್ಯವಸ್ಥಾಪಕ ಪ್ರತಾಪ್, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವಿಭಾಗೀಯ ವ್ಯವಸ್ಥಾಪಕಿ ದೀಪ್ತಿಕುಮಾರಿ, ಕೆನರಾ ಬ್ಯಾಂಕ್ ಬೆಂಗಳೂರು ವಲಯದ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರರಾವ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸರಾವ್ ಸಭೆಯಲ್ಲಿ ಹಾಜರಿದ್ದರು.

*
ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಅವಲಂಬಿತ ರೈತರ ಸಂಖ್ಯೆ ಹೆಚ್ಚುತ್ತಿದೆ. ಈ ರೈತರಿಗೆ ಬ್ಯಾಂಕ್‌ಗಳಿಂದ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಿ ಕೊಡಬೇಕು.
–ಎಂ.ಎಸ್.ರಾಜು, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT