ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೆಲೆ ಏರಿಕೆಗೆ ಗ್ರಾಹಕ ತತ್ತರ

ರೈತನಿಗೂ ದಕ್ಕದ ಲಾಭ; ದಲ್ಲಾಳಿಗಳ ಪಾಲು
Last Updated 23 ಮಾರ್ಚ್ 2017, 4:58 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ತರಕಾರಿ ಬೆಲೆ ದಿನ ದಿನಕ್ಕೂ  ಏರಿಕೆ ಯಾಗುತ್ತಿದೆ. ಮಾಗಿ ಚಳಿಯಲ್ಲಿ ತರಕಾರಿ ಬೆಲೆ ತುಸು ಅಗ್ಗವಾಗಿತ್ತು. ಮಾಗಿ ಕಳೆಯುತ್ತಿದ್ದಂತೆ ಬೆಲೆ ವಾರದಿಂದ ವಾರಕ್ಕೆ ಹೆಚ್ಚುತ್ತಿದೆ. ಚಿಂತಾಮಣಿ ಮಾರುಕಟ್ಟೆಗೆ ತರಕಾರಿ ಆವಕದ ಪ್ರಮಾಣ ಕಡಿಮೆಯಾಗುತ್ತಿ ರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಉತ್ತಮ ಮಳೆ ಸುರಿಯುವವರೆಗೂ ತರಕಾರಿ ಬೆಲೆ ಇಳಿಮುಖವಾಗುವ ಲಕ್ಷಣ ಕಾಣಿಸುತ್ತಿಲ್ಲ.

ತಾಲ್ಲೂಕಿನಲ್ಲಿ ಬರಗಾಲದ ಕಾರಣ ಅಂತರ್ಜಲ ಕುಸಿದಿದೆ. ಕೊಳವೆ ಬಾವಿಗಳು ಬತ್ತಿವೆ. ಕೆಲವು ಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿರುವ ಕಾರಣ ಬಹುತೇಕ ರೈತರಿಗೆ ತರಕಾರಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದರ ಪ್ರಭಾವ ಬೆಲೆ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಲಕ್ಷ್ಮಿನಾರಾಯಣ್‌.

ಕಳೆದ ವಾರಕ್ಕೆ ಹೋಲಿಸಿದರೆ ಬಹುತೇಕ ತರಕಾರಿ ಬೆಲೆ ಶೇ 30 ರಿಂದ 50 ರಷ್ಟು ಏರಿಕೆಯಾಗಿದೆ.  ಆಲೂಗಡ್ಡೆ ಮತ್ತು ಈರುಳ್ಳಿ ಹೊರತುಪಡಿಸಿ ಯಾವ ತರಕಾರಿಯೂ ₹ 50ಕ್ಕಿಂತ ಕಡಿಮೆ ಇಲ್ಲ.  ಬಿಸಿಲ ಬೇಗೆಯಂತೆ ತರಕಾರಿ ಬೆಲೆ ಸಹ ಏರಿಕೆಯ  ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಬಿಸಿ ತರಿಸಿದೆ. 

ಅಂಗಡಿಗಳಿಗಿಂತ ಭಾನುವಾರದ ಸಂತೆಯಲ್ಲಿ ತುಸು ಕಡಿಮೆ ಬೆಲೆಗೆ ತರಕಾರಿ ಸಿಗುತ್ತದೆ ಎಂದು ಸಂತೆಗೆ ಬರುವ ಗ್ರಾಹಕರು ಬೆಲೆಗಳನ್ನು ಕಂಡು ಬೆಚ್ಚಿ ಬೀಳುವಂತಾಗಿದೆ. ಹಿಂದೆ ಕೆ.ಜಿ.ಕೊಳ್ಳುತ್ತಿದ್ದವರು ಅರ್ಧ ಕೆಜಿ ಖರೀದಿಸುತ್ತಿದ್ದಾರೆ. ಅರ್ಧ ಕೆ.ಜಿ. ಖರೀದಿಸುತ್ತಿದ್ದವರು ಈಗ ಕಾಲು ಕೆ.ಜಿ.ಕೊಳ್ಳುತ್ತಿದ್ದಾರೆ. ಕೆಲವು ಗ್ರಾಹಕರು 2–3 ತರಕಾರಿ ಸೇರಿಸಿ ಅರ್ಧ ಕೆ.ಜಿ ಖರೀದಿಸುತ್ತಿದ್ದಾರೆ.

ಬೀನ್ಸ್‌ ಬೆಲೆ ಗಗನಕ್ಕೆ: ಕಳೆದ ವಾರ ಕೆ.ಜಿ.ಗೆ ₹ 40ಕ್ಕೆ ಮಾರಾಟವಾಗಿದ್ದ ಬೀನ್ಸ್‌ ಈ ವಾರ ₹ 100ಕ್ಕೆ ಜಿಗಿದಿದೆ. ಬೇಡಿಕೆಯಷ್ಟು ಬೀನ್ಸ್‌ ಮಾರುಕಟ್ಟೆಗೆ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿ ರತ್ನಮ್ಮ.

ದಳ್ಳಾಳಿಗಳ ಕಾಟ: ತರಕಾರಿ ಬೆಲೆ ಏರಿಕೆ ಯಾಗಿದ್ದರಿಂದ ಬೆಲೆ ರೈತನಿಗೆ ದೊರೆಯು ತ್ತದೆ ಎಂದರೆ ಅದೂ ಸಾಧ್ಯವಾಗುತ್ತಿಲ್ಲ. ಏರಿಕೆಯ ಲಾಭವನ್ನು ದಳ್ಳಾಳಿಗಳು ಕಬಳಿಸುತ್ತಿದ್ದಾರೆ. ಸಮರ್ಪಕ ಮಾರುಕಟ್ಟೆ ಸೌಲಭ್ಯ ಇಲ್ಲದಿರುವುದರಿಂದ ಹೆಚ್ಚಿನ ಲಾಭ ದಳ್ಳಾಳಿಗಳ ಮತ್ತು ವ್ಯಾಪಾರಸ್ಥರ ಪಾಲಾಗುತ್ತಿದೆ. ರೈತರು ಮತ್ತು ಗ್ರಾಹಕರು ಹತಾಶರಾಗಿದ್ದಾರೆ.

ಮಾರುಕಟ್ಟೆ, ಸಂತೆಗಳಲ್ಲಿ ದಳ್ಳಾಳಿ ಗಳ ಕಾಟ ತಪ್ಪಿಸಬೇಕು. ಬೆಲೆ ಏರಿಕೆಯ ಲಾಭ ರೈತರಿಗೆ ದೊರೆಯಬೇಕು. ಹಾಗೆಯೇ ಬೆಲೆ ಇಳಿದಾಗ ಅದರ ಲಾಭ ಗ್ರಾಹಕರಿಗೆ ಸಿಗಬೇಕು. ರೈತರನ್ನು ದಳ್ಳಾಳಿಗಳ ಕಾಟದಿಂದ ಪಾರುಮಾಡ ಬೇಕು ಎನ್ನುತ್ತಾರೆ ಕೃಷಿಕ ಸಮಾಜದ ನಿರ್ದೇಶಕ ಆಂಜನೇಯರೆಡ್ಡಿ.
–ಎಂ.ರಾಮಕೃಷ್ಣಪ್ಪ

*
ಮಳೆ ಇಲ್ಲ, ಬೆಳೆಗಳಿಲ್ಲ. ಕೂಲಿ  ಸಿಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಿತ್ಯದ ಅಗತ್ಯ ವಸ್ತುಗಳಾದ ತರಕಾರಿ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಬಡವರ ಜೀವನ ಮೂರಾ ಬಟ್ಟೆಯಾಗಿದೆ.
-ಪಲ್ಲವಿ, ಗೃಹಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT