ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಕೊಳವೆ ನಲ್ಲಿಗಳ ಸಂಪರ್ಕ ಕಡಿತಕ್ಕೆ ನಿರ್ಣಯ

ಶಿರಾ ನಗರಸಭೆ ವಿಶೇಷ ಸಾಮಾನ್ಯ ಸಭೆ; ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ಸಂಪರ್ಕವೂ ಸ್ಥಗಿತ
Last Updated 23 ಮಾರ್ಚ್ 2017, 5:01 IST
ಅಕ್ಷರ ಗಾತ್ರ

ಶಿರಾ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾರಣ ಮುಖ್ಯಕೊಳವೆನಿಂದ ಅಕ್ರಮವಾಗಿ ಹಾಕಿಕೊಂಡಿರುವ ನಲ್ಲಿಗಳ ಸಂಪರ್ಕ ಕಡಿತ ಮಾಡಲು ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ನಿರ್ಣಯ ಕೈಗೊಳ್ಳಲಾಯಿತು.

ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಅಂಜಿನಪ್ಪ,  ತಮ್ಮ ವಾರ್ಡ್‌ನಲ್ಲಿ ಕಳೆದ 43 ದಿನಗಳಿಂದ ನೀರು ಪೂರೈಕೆ ಮಾಡಿಲ್ಲ ಇಲ್ಲಿ ಬಡಜನತೆ ಹೆಚ್ಚಾಗಿದ್ದಾರೆ ಅಧಿಕಾರಿಗಳು ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಖ್ಯಕೊಳವೆಗೆ ನಲ್ಲಿಗಳನ್ನು ಹಾಕಿಕೊಂಡಿರುವುದರಿಂದ ವಾರ್ಡ್‌ಗೆ ಹೋಗುವ ವೇಳೆಗೆ ಖಾಲಿಯಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದಾಗ. ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ತಕ್ಷಣ ಮುಖ್ಯಕೊಳವೆ ಗಳ ಸಂಪರ್ಕವನ್ನು ಕಡಿತ ಮಾಡಿ ಎಂದು ಪೌರಾಯುಕ್ತ ಯೋಗಾನಂದ್ ಹೇಳಿದರು.

ಕಲ್ಯಾಣ ಮಂಟಪ, ಸರ್ವೀಸ್ ಸ್ಟೇಷನ್, ಹೊಟೆಲ್‌ ಸೇರಿದಂತೆ ವಾಣಿಜ್ಯ ಉದ್ದೇಶಕ್ಕೆ ಪಡೆದಿರುವ ಅಕ್ರಮವಾಗಿ ರೈಸಿಂಗ್ ಮೇನ್‌ಗಳ ಸಂಪರ್ಕವನ್ನು ತಕ್ಷಣ ಕಡಿತಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ಯುಗಾದಿಗೆ ನೀರು:  ಯುಗಾದಿ ಹಬ್ಬದ ಕಾರಣ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳುವಂತೆ ಸದಸ್ಯರಾದ ಎಸ್.ಜೆ.ರಾಜಣ್ಣ, ಮಂಜುನಾಥ್, ಆರ್.ಉಗ್ರೇಶ್, ಅಂಜಿನಪ್ಪ, ಶ್ರೀನಿವಾಸ ಗುಪ್ತ, ಪ್ರಕಾಶ್ ಮುದ್ದರಾಜು, ನರಸಿಂಹಯ್ಯ ಒತ್ತಾಯಿಸಿದರು.

ಯುಗಾದಿ ಹಬ್ಬದ ಸಮಯದಲ್ಲಿ 3 ದಿನ ಹಿಂದೂಗಳು ಹೆಚ್ಚಿರುವ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವುದು ಹಾಗೂ ಅವಶ್ಯವಾದರೆ ಟ್ಯಾಂಕರ್‌ಗಳನ್ನು ನೀರು ಪೂರೈಸಲು ಸಭೆಯಲ್ಲಿ ಪಕ್ಷಾತೀತವಾಗಿ ನಿರ್ಣಯ ತೆಗೆದುಕೊಳ್ಳಲಾಯಿತು.

ಕಾಂಪ್ಲೆಕ್ಸ್ ನಿರ್ಮಾಣ:  ನಗರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಹಳೇ ಪಂಪ್ ಹೌಸ್ ತೆರವುಗೊಳಿಸಿ ಅದೇ ಸ್ಥಳದಲ್ಲಿ ಹೊಸದಾಗಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಧ್ಯಕ್ಷ ಅಮಾನುಲ್ಲಾ ಖಾನ್ ಮಾತನಾಡಿ, ಐಡಿಎಸ್‌ಎಂಟಿ ಯೋಜನೆಯಲ್ಲಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಿದರೆ ಮುಂದೆ ಬರುವ ಬಾಡಿಗೆ ಹಣ ಬಳಕೆ ಮಾಡಿಕೊಳ್ಳಲು ಸಾಧ್ಯ ಇಲ್ಲ. ಅದ್ದರಿಂದ ನಗರೋತ್ಥಾನ ಯೋಜನೆಯಲ್ಲಿ ₹ 2 ಕೋಟಿ ವೆಚ್ಚದಲ್ಲಿ
ಕಾಂಪ್ಲೆಕ್ಸ್ ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು.

ತಂಗುದಾಣ ನಿರ್ಮಾಣ:  ಬಸ್ ನಿಲ್ದಾಣ, ತುಮಕೂರು ರಸ್ತೆ, ಅಮರಾಪುರ ರಸ್ತೆ, ಬುಕ್ಕಾಪಟ್ಟಣ ರಸ್ತೆಗಳಲ್ಲಿ ತಂಗುದಾಣ ನಿರ್ಮಾಣ ಮಾಡಲು ಖಾಸಗಿಯವರಿಗೆ 15 ವರ್ಷ ಅವಧಿಗೆ ನೀಡಿದರೆ ಅವರೇ ನಿರ್ಮಿಸಿಕೊಂಡು ನಿರ್ವಹಣೆ ಮಾಡುತ್ತಾರೆ ಜೊತೆಗೆ ನಗರಸಭೆಗೆ ಬಾಡಿಗೆ ನೀಡುತ್ತಾರೆ ಎಂದು ಅಧ್ಯಕ್ಷರು ಹೇಳಿದಾಗ ಇದಕ್ಕೆ ಸದಸ್ಯರಾದ ಆರ್.ಉಗ್ರೇಶ್, ಶ್ರೀನಿವಾಸ ಗುಪ್ತ, ಎಸ್.ಜೆ.ರಾಜಣ್ಣ, ಮಂಜುನಾಥ್, ಪುಟ್ಟರಾಜು ವಿರೋಧಿಸಿದರು.

ಒಂದು ವೇಳೆ ತಂಗುದಾಣ ನಿರ್ಮಾಣ ಮಾಡುವಂತಿದ್ದರೆ ನಗರಸಭೆಯಿಂದ ಮಾಡಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿ ಖಾಸಗಿಯವರಿಗೆ ಯಾವುದೇ ಕಾರಣಕ್ಕೆ ಕೊಡುವುದು ಬೇಡ ಎಂದು ಪಟ್ಟು ಹಿಡಿದರು.

ಸಂತೆ ಬದಲಾವಣೆ:  ನಗರದ ಉರ್ದು ಶಾಲೆಯ ಮೈದಾನದಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ಚಂಗಾವರ ರಸ್ತೆಗೆ ಬದಲಾಯಿಸಲು ಅಗತ್ಯ ಮೂಲ ಸೌಕರ್ಯಗಳನ್ನು ನಗರೋತ್ಥಾನ ಯೋಜನೆಯಲ್ಲಿ ಕೈಗೊಳ್ಳುವಂತೆ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ಉಪಾಧ್ಯಕ್ಷೆ ಶುಭಾ ಮಾರುತೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜು, ಲೆಕ್ಕಾಧೀಕ್ಷಕ ವಿಶ್ವೇಶ್ವರಯ್ಯ ಸೇರಿದಂತೆ ನಗರಸಭೆ ಸಿಬ್ಬಂದಿ ಹಾಜರಿದ್ದರು.

ಉಪಾಧ್ಯಕ್ಷರ ಗಮನಕ್ಕೆ ತನ್ನಿ
ಕಾಮಗಾರಿಗಳ ಟೆಂಡರ್‌ ಪ್ರಕಟಣೆಗೆ ಮೊದಲು ಕಾಮಗಾರಿಗಳ ಬಗ್ಗೆ ಉಪಾಧ್ಯಕ್ಷರ ಗಮನಕ್ಕೆ ತನ್ನಿ ಅವರಿಗೆ ಹೆಚ್ಚಿನ ಅಧಿಕಾರ ನೀಡಿ ಎಂದು ನಾವು ಕೇಳುತ್ತಿಲ್ಲ. ಅವರ ಕಾನೂನು ಬದ್ಧ ಅಧಿಕಾರಕ್ಕೆ ಏಕೆ ತೊಂದರೆ ಮಾಡುತ್ತೀರಿ. ಮಹಿಳೆ ಎನ್ನುವ ಕಾರಣಕ್ಕೆ ಅವರನ್ನು ಕಡೆಗಣಿಸಲಾಗುತ್ತಿದೆ.

ಪಾರದರ್ಶಕವಾದ ಆಡಳಿತ ನಡೆಸಿ ಉಪಾಧ್ಯಕ್ಷರಿಗೆ ಮಾಹಿತಿ ನೀಡದೆ ಇಂದು ಕಾಮಗಾರಿಗಳಿಗೆ ಅನುಮೋದನೆ ನೀಡಿ ಎಂದರೆ ಹೇಗೆ ಎಂದು ಮಹಿಳಾ ಸದಸ್ಯರಾದ ಅನ್ನಪೂರ್ಣಮ್ಮ, ಸರಿತಾ, ಶಾರದಮ್ಮ ಹೇಳಿದಾಗ ಇವರಿಗೆ ಧ್ವನಿಗೂಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಅಧ್ಯಕ್ಷರು ಹಾಗೂ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ಮುಂದೆ ಈ ರೀತಿಯಾಗದಂತೆ ಕಾಮಗಾರಿಗಳ ಟೆಂಡರ್‌ ಕರೆಯುವುದಕ್ಕೆ ಮೊದಲು ಉಪಾಧ್ಯಕ್ಷರ ಗಮನಕ್ಕೆ ತಂದು ಅವರಿಂದ ಸಹಿ ಪಡೆದು ಪತ್ರಿಕೆಗಳಿಗೆ ಜಾಹೀರಾತು ನೀಡುವುದಾಗಿ ಪೌರಾಯುಕ್ತರು ಹೇಳಿದ ನಂತರ ಕಾಮಗಾರಿಗಳಿಗೆ ಅನುಮೋದನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT