ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಪುರ ತಾಲ್ಲೂಕು ಕೇಂದ್ರ ರಚನೆಗೆ ಆಗ್ರಹ

ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಸರ್ಕಾರ ವಿರುದ್ಧ ಆಕ್ರೋಶ
Last Updated 23 ಮಾರ್ಚ್ 2017, 5:09 IST
ಅಕ್ಷರ ಗಾತ್ರ

ಧರ್ಮಪುರ: ಹೋಬಳಿ ಕೇಂದ್ರವನ್ನು ತಾಲ್ಲೂಕಾಗಿ ಘೋಷಣೆ ಮಾಡದೇ ಸರ್ಕಾರ ಪ್ರಮಾದ ಎಸಗಿದೆ ಎಂದು ಧರ್ಮಪುರ ತಾಲ್ಲೂಕು ಮತ್ತು ಫೀಡರ್‌ ಚಾನಲ್‌ ಹೋರಾಟ ಸಮಿತಿ ಆರೋಪಿಸಿದೆ.

ಧರ್ಮಪುರಕ್ಕೆ ತಾಲ್ಲೂಕು ಮಾನ್ಯತೆ ಸಿಗದ ಕಾರಣ ತಾಲ್ಲೂಕು ಹೋರಾಟ ಸಮಿತಿ, ವಂದೇ ಮಾತರಂ ಜಾಗೃತಿ ವೇದಿಕೆ, ಜಯ ಕರ್ನಾಟಕ,  ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಿವಿಧ ಮಹಿಳಾ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದವು.

ಶನೇಶ್ವರ ದೇವಸ್ಥಾನದಿಂದ ಡಾಲರ್‌ ಸರ್ಕಲ್‌ವರೆಗೆ ಹೋರಾಟ ಸಮಿತಿಯ ಸದಸ್ಯರು ಸರ್ಕಾರದ ವಿರುದ್ಧ ಮತ್ತು ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.

ಹೋರಾಟ ಸಮಿತಿಯ ಮುಖಂಡರು ಮಾತನಾಡಿ, ‘ತಾಲ್ಲೂಕು ರಚನೆಗೆ ಈ ಹಿಂದೆ ನೇಮಿಸಿದ್ದ ವರದಿಗಳಾದ ಗದ್ದಿಗೌಡರ್ ಸಮಿತಿ, ಹುಂಡೇಕರ್‌ ಸಮಿತಿ ಮತ್ತು ವಾಸುದೇವ ರಾವ್‌ ಸಮಿತಿಯ ವರದಿಗಳು ಧರ್ಮಪುರವನ್ನು ತಾಲ್ಲೂಕು ಮಾಡಲು ವರದಿ ಸಲ್ಲಿಸಿದ್ದವು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಿಂದ ಹೊಸ ತಾಲ್ಲೂಕುಗಳ ಪಟ್ಟಿಯಿಂದ ಧರ್ಮಪುರದ ಹೆಸರು ಇಲ್ಲದೇ ಇರುವುದು  ಈ ಭಾಗದ ಶಾಸಕರ ಮತ್ತು ಜನಪ್ರತಿನಿಧಿಗಳ ವೈಫಲ್ಯದ ಸಂಕೇತವಾಗಿದೆ’ ಎಂದು ದೂರಿದರು.

ಸರ್ಕಾರ ಈ ಭಾಗದ ಜನರ ಸಮಸ್ಯೆ ಆಲಿಸದೇ ಮುಖ್ಯಮಂತ್ರಿ ತಮಗೆ ಬೇಕಾದ ಜಿಲ್ಲೆಗಳಲ್ಲಿ ಮಾತ್ರ ಹೊಸ ತಾಲ್ಲೂಕುಗಳ ರಚನೆ ಮಾಡಿರುವುದು ಹಾಗೂ ಚಿತ್ರದುರ್ಗವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ದುರದೃಷ್ಟವೇ ಸರಿ. ಇದರಿಂದ ಜನತೆಗೆ ಸಂಪೂರ್ಣವಾಗಿ ನಿರಾಸೆಯಾಗಿದೆ. ಜನಪ್ರತಿನಿಧಿಗಳು ಮುಂದಾಳತ್ವ ತೆಗೆದುಕೊಂಡು ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪ್ರಸನ್ನಕುಮಾರ್‌ ಮಾತನಾಡಿ, ನಾವು ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ಸರ್ಕಾರ ಸ್ಪಂದನೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ  ಸ್ವಾತಂತ್ರ್ಯ ಹೋರಾಟಗಾರ ರಾದ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ ವೆಂಕಟೇಶಯ್ಯ, ‘ಮನವಿ ಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್‌.ಎಲ್‌.ಗುಣ್ಣಯ್ಯ, ಹಾರ್ಡ್‌ವೇರ್‌ ಶಿವಣ್ಣ, ಪುಟ್ಟಿರಮ್ಮ, ಹೊರಕೇರಪ್ಪ, ರತ್ನಮ್ಮ, ವೀಣಾ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಅರ್ಜುನ್‌, ಕರ್ನಾಟಕ ರಕ್ಷಣಾ ವೇದಿಕೆಯ ಮಹಾಂತೇಶ್‌, ಸಂತೋಷ್‌, ತಿಮ್ಮೇಗೌಡ, ಚಂದ್ರಪ್ಪ, ಶಿವಣ್ಣ, ಪಾಂಡು, ಮಂಜುನಾಥ್‌, ಹುಚ್ಚವ್ವನ ಹಳ್ಳಿ, ಪ್ರಸನ್ನ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT