ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಜೀವಜಲ; ಮಿತವಾಗಿ ಬಳಸಿ

‘ವಿಶ್ವ ಜಲ ದಿನಾಚರಣೆ’ಯಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ
Last Updated 23 ಮಾರ್ಚ್ 2017, 5:18 IST
ಅಕ್ಷರ ಗಾತ್ರ

ಚಿತ್ರದುರ್ಗ: ನೀರು ಅತ್ಯಮೂಲ್ಯವಾದುದು. ಮಿತವಾಗಿ ಬಳಸುವ ಮೂಲಕ ಜಲಸಂಪತ್ತನ್ನು ಉಳಿಸಲು ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ವಕೀಲರ ಸಂಘ, ನಗರಸಭೆ, ವಿವಿಧ ಸಂಘ ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ‘ವಿಶ್ವ ಜಲ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವ, ಪ್ರಾಣಿ, ಪಕ್ಷಿ ಸಂಕುಲದ ಉಳಿವಿಗೆ ನೀರು ಜೀವಜಲವಾಗಿದೆ. ಆಹಾರ ಉತ್ಪಾದನೆ, ಗಿಡ ಮರ ಸೇರಿದಂತೆ ಪ್ರತಿಯೊಂದಕ್ಕೂ ನೀರಿನ ಅವಶ್ಯಕತೆ ಇದೆ. ಇಷ್ಟೆಲ್ಲಾ ಗೊತ್ತಿದ್ದರೂ ಸಹ ಕೆಲವರು ನೀರನ್ನು ದುರ್ಬಳಕೆ ಮಾಡುತ್ತಿದ್ದಾರೆ. ನೀರಿನ ಮಹತ್ವ ತಿಳಿಯದೆ ಹೋದರೆ, ಮುಂದಿನ ದಿನಗಳಲ್ಲಿ ಅದರಿಂದಾಗುವ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಪಂಚದಲ್ಲಿ 3/4 ಭಾಗ ನೀರಿದ್ದು, 1/4 ರಷ್ಟು ಮಾತ್ರ ಭೂಮಿ ಇದೆ. ನೀರಿನ ಪ್ರಮಾಣ ಹೆಚ್ಚಿದ್ದರೂ ಕುಡಿಯಲು ಯೋಗ್ಯವಾದ ನೀರು ಸಿಗುವುದು ತುಂಬಾ ಕಡಿಮೆ. ಅಂತಹ ನೀರು ನಮಗೆ ಮಳೆ ಮೂಲಕ, ನದಿಗಳು ಮತ್ತು ಅಂತರ್ಜಲದಿಂದ ದೊರೆಯುತ್ತಿದೆ. ಅದನ್ನು ಅನಗತವ್ಯವಾಗಿ ವ್ಯರ್ಥ ಮಾಡದೆ ಮಿತವಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮನುಷ್ಯನ ದುರಾಸೆಯಿಂದ ಕಾಡನ್ನು ನಾಶ ಮಾಡಿರುವುದೇ ಇದಕ್ಕೆ ಕಾರಣ ಎಂದ ಅವರು, ಮನುಷ್ಯ ಹೇಗಾದರೂ ಬದುಕುತ್ತಾನೆ. ಆದರೆ, ಪ್ರಾಣಿಗಳೂ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬರದಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ತೀವ್ರ ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ ಮಾಡುವವರು ಕಡ್ಡಾಯವಾಗಿ ಮಳೆ ಸಂಗ್ರಹ ಪದ್ಧತಿ ಅಳವಡಿಸಿಕೊಂಡಲ್ಲಿ ಮಾತ್ರ ಮನೆ ಕಟ್ಟಲು ಅನುಮತಿ ನೀಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಆರ್.ದಿಂಡಲಕೊಪ್ಪ ಮಾತನಾಡಿ, ಜಿಲ್ಲೆಯಲ್ಲಿ ಭೀಕರ ಬರಗಾಲ ಸಂಭವಿಸಿದ್ದು, ನೀರಿಗೆ ತತ್ವಾರ ಉಂಟಾಗಿದೆ. ಆದ್ದರಿಂದ ಅನೇಕ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜನತೆ ಈ ಬಗ್ಗೆ ಜಾಗೃತರಾಗಬೇಕು. ಅಂತರ್ಜಲದ ಉಳಿವಿಗಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ ಮಾತನಾಡಿ, ನಗರಕ್ಕೆ ನೀರು ಸರಬರಾಜು ಮಾಡುವ ಎರಡು ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ಈಗ ಪೂರೈಕೆ ಆಗುತ್ತಿರುವ ನೀರಿನಲ್ಲಿ ಸುಮಾರು ಶೇ 40 ರಷ್ಟು ನೀರು ವ್ಯರ್ಥವಾಗುತ್ತಿದೆ. ಈ ಕುರಿತು ಜನರು ಜಾಗೃತರಾಗಿ ನೀರನ್ನು ಮಿತವಾಗಿ ಬಳಸಬೇಕು ಎಂದು ಕೋರಿದರು.

ಜಿಲ್ಲಾ ಪಂಚಾಯ್ತಿ ಸಿಇಒ ನಿತೇಶ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷೆ ಎಂ.ವಿ. ವೀಣಾ, ಕಾರ್ಯದರ್ಶಿ ಲೋಕೇಶ್, ಕರ್ನಾಟಕ ಜಲಮಂಡಳಿ ಎಂಜಿನಿಯರ್ ಹನುಮಂತಪ್ಪ ಇದ್ದರು.

*
ನೀರಿನ ಬಳಕೆ ಅಥವಾ ಸಂರಕ್ಷಣೆ ಬಗ್ಗೆ ಕೇವಲ ಒಂದು ದಿನ ಮಾತ್ರ ಚಿಂತನೆ ನಡೆಸಿದರೆ ಸಾಲದು. ನೀರನ್ನು ಉಳಿತಾಯ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು.
– ಎಸ್‌.ಬಿ.ವಸ್ತ್ರಮಠ,
ಜಿಲ್ಲಾ ನ್ಯಾಯಾಧೀಶರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT