ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿತದ ಕೆಡುಕಿನ ಜಾಗೃತಿ ಕಾರ್ಯಕ್ರಮ

ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ರುದ್ರಪ್ಪ
Last Updated 23 ಮಾರ್ಚ್ 2017, 5:25 IST
ಅಕ್ಷರ ಗಾತ್ರ

ದಾವಣಗೆರೆ: ‘ಮದ್ಯಪಾನದಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿ ಕರಲ್ಲಿ ಅರಿವು ಮೂಡಿಸುವುದು ಮದ್ಯಪಾನ ಸಂಯಮ ಮಂಡಳಿಯ ಮುಖ್ಯ ಉದ್ದೇಶ’ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆಯ ಮಾನಸಿಕ ವಿಭಾಗ, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗ ದೊಂದಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಗುರಿ ಇದೆ’ ಎಂದರು.

‘ಮದ್ಯಪಾನದಿಂದ ಆಗುತ್ತಿರುವ ತೊಂದರೆ ನಿಯಂತ್ರಿಸಲು ಸ್ತ್ರೀಶಕ್ತಿ ಸಂಘಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದು ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಕೊಳ್ಳಲಾಗುವುದು. ಜಾಗೃತಿ ಮೂಡಿಸುವ ಸಲುವಾಗಿ ವರ್ಷಕ್ಕೆ 20 ಬೀದಿನಾಟಕ ಪ್ರದರ್ಶನಕ್ಕೆ ಸರ್ಕಾರ ತಲಾ ಒಂದು ನಾಟಕಕ್ಕೆ ₹ 3 ಸಾವಿರ ಅನುದಾನ ನೀಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರ ಮಂಡಳಿಗೆ ₹ 1.90 ಕೋಟಿ ಅನುದಾನ ಬಿಡುಗಡೆ ಮಾಡಿದೆ’ ಎಂದು ಹೇಳಿದರು.

‘ಮಂಡಳಿಗೆ ಎಲ್ಲಾ ಜಿಲ್ಲೆಗಳಿಂದ ತಲಾ ಒಬ್ಬರು ಸದಸ್ಯರನ್ನು ಸರ್ಕಾರ ನೇಮಿಸಿದೆ. ವಿವಿಧ ಇಲಾಖೆಯ ಒಂಬತ್ತು ಜನ ಪ್ರಧಾನ ಕಾರ್ಯದರ್ಶಿ ಗಳಿದ್ದಾರೆ. ದಾವಣಗೆರೆಯಲ್ಲಿ 120 ಸಿಎಲ್2, 14 ಎಂಎಸ್‌ಐಎಲ್, 119 ಸಿಎಲ್ 9 (ವೈನ್ ಶಾಪ್)ಗಳಿದ್ದು, ಮೂರು ರಾಜ್ಯ ಹೆದ್ದಾರಿಗಳಿವೆ.

ಸುಪ್ರೀಂ ಕೋರ್ಟ್‌ ಆದೇಶದಂತೆ ಹೆದ್ದಾರಿಯ 500 ಮೀಟರ್ ಒಳಗಡೆ ಬರುವ 106 ಸಿಎಲ್ 2 ಗಳನ್ನು ಹೆದ್ದಾರಿಯಿಂದ ಬೇರೆಡೆ ವರ್ಗಾವಣೆ ಮಾಡಿಸಲು ಅಬಕಾರಿ ಇಲಾಖೆಯಿಂದ ಕ್ರಮ ವಹಿಸಲಾಗಿದ್ದು, ಅವರೆಲ್ಲ ನ್ಯಾಯಾಲಯಕ್ಕೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಇದೇ 27ರಂದು ನ್ಯಾಯಾಲಯದ ವಿಚಾರಣೆ ಇದೆ. ತೀರ್ಪು ನೋಡಿಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು’ ಎಂದರು.

ತಂಬಾಕು ನಿಯಂತ್ರಣ ತನಿಖಾ ತಂಡ (ಕೋಟ್ಪಾ)ದ ವತಿಯಿಂದ ಜಿಲ್ಲೆಯ ಪಾನ್‌ಶಾಪ್, ಅಂಗಡಿಗಳಲ್ಲಿ ದಾಳಿ ನಡೆಸಿ, ಅರಿವು ಮೂಡಿಸುವ ಮತ್ತು ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತಿದೆ. 2016ರಲ್ಲಿ 3,236 ಪ್ರಕರಣದಲ್ಲಿ ₹ 5,91,800 ದಂಡ ಮತ್ತು ಫೆ.2017ರವರೆಗೆ 537 ಪ್ರಕರಣದಲ್ಲಿ ₹ 77,200 ದಂಡ ವಸೂಲು ಮಾಡಲಾಗಿದೆ ಎಂದು ಜಿಲ್ಲಾಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವಿವರಿಸಿದರು.

ಮಹಿಳೆಯರು ಮತ್ತು ಶಾಲಾ-ಕಾಲೇಜಿನ ಮಕ್ಕಳಲ್ಲಿ ಜಾಗೃತಿ ಮೂಡಿಸಲು ರೋಟರಿ ಸಂಸ್ಥೆ, ಧರ್ಮಸ್ಥಳ ಮತ್ತಿತರ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಸೇವೆ ಸಲ್ಲಿಸುವ ಒಂದು ಸಂಸ್ಥೆಗೆ ಸರ್ಕಾರ ₹ 10 ರಿಂದ ₹ 15 ಲಕ್ಷ ಅನುದಾನ ನೀಡುತ್ತಿದೆ.

ಧರ್ಮಸ್ಥಳ ಸಂಸ್ಥೆಯು 12 ದಿನಗಳ ವ್ಯಸನ ಮುಕ್ತಿಗೊಳಿಸುವ ತರಬೇತಿ ನೀಡುತ್ತದೆ. ಇದುವರೆಗೆ 1,043 ಇಂತಹ ಶಿಬಿರಗಳನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಆಸಕ್ತಿ ವಹಿಸಿ ನಡೆಸಿದ್ದಾರೆ ಎಂದರು.

ಮದ್ಯಪಾನ ಸೇರಿದಂತೆ ದುಶ್ಚಟಗಳ ಬಗ್ಗೆ ಸಂಯಮ ಮಂಡಳಿ ಮೂಲಕ ಅರಿವು ಮೂಡಿಸಲು ಜಿಲ್ಲಾ ಪ್ರವಾಸ ಕೈಗೊಳ್ಳಲಾಗುತ್ತಿದೆ. ಮಂಡಳಿ, ಮಾದಕ ವಸ್ತುಗಳ ಮಾಯಾಜಾಲ, ಕುಡಿತ ಬೇಡ ಮುಂತಾದ ಕಿರುಪುಸ್ತಕ, ಕರಪತ್ರಗಳನ್ನು ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗೆ ಮಂಡಳಿ ವೆಬ್‌ಸೈಟ್‌ www.kar-temperance.org  ಹಾಗೂ ಮಂಡಳಿಯ ಜಿಲ್ಲಾ ಸದಸ್ಯೆ ಗೀತಾ ಮೊ: 81050 33515 ಸಂಪರ್ಕಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಸದಸ್ಯೆ ಗೀತಾ ಉಪಸ್ಥಿತರಿದ್ದರು. ಸುದ್ದಿಗೋಷ್ಠಿಗೂ ಮೊದಲು ನಡೆದ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ವಿವಿಧ ಇಲಾಖೆಗಳಿಂದ ಜಿಲ್ಲೆಯಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ವಿಷಯದಲ್ಲಿ ಜಾರಿಗೊಳಿಸಿದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಿ. ಎಸ್.ರಮೇಶ್, ಜಿ.ಪಂ. ಸಿಇಒ ಎಸ್.ಅಶ್ವತಿ, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ನಾಗರಾಜಪ್ಪ, ಅಧಿಕಾರಿಗಳಾದ ರವಿ ನಾಗರಾಜ್, ಕೆ.ಎಲ್‌.ನಾಗರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT