ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದ ಎಲ್ಲ ದಿನವೂ ನೀರು ಸಂರಕ್ಷಣೆ ಅಗತ್ಯ

ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಎಸ್.ರುದ್ರೇಗೌಡ
Last Updated 23 ಮಾರ್ಚ್ 2017, 5:28 IST
ಅಕ್ಷರ ಗಾತ್ರ

ಶಿವಮೊಗ್ಗ:  ವಿಶ್ವ ಜಲ ದಿನಾಚರಣೆ ಸಮಯದಲ್ಲಿ ಮಾತ್ರ ನೀರಿನ ಸಂರಕ್ಷಣೆ ಕುರಿತು ಕಾಳಜಿ ತೋರದೆ ವರ್ಷದ ಎಲ್ಲ ದಿನವೂ ಅಂತರ್ಜಲ ವೃದ್ಧಿ ಹಾಗೂ ನೀರಿನ ಸಮರ್ಪಕ ಬಳಕೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಉದ್ಯಮಿ ಎಸ್.ರುದ್ರೇಗೌಡ ಹೇಳಿದರು.

ಮಾಚೇನಹಳ್ಳಿಯ ಉದ್ಯಮ ಭವನದಲ್ಲಿ ಬುಧವಾರ ಶಿವಮೊಗ್ಗ ಹಾಲು ಒಕ್ಕೂಟ, ಮಾಚೇನಹಳ್ಳಿ ಕೈಗಾರಿಕಾ ಸಂಘ ಹಾಗೂ ಶಾಹಿ ಎಕ್ಸ್‌ಪೋರ್ಟ್ಸ್ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭೂಮಿ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರಿದ್ದರೂ ಬಳಕೆಗೆ ಯೋಗ್ಯವಾದ ನೀರು  ಅತ್ಯಲ್ಪ. ಮಳೆ ಕೊರತೆ ತೀವ್ರವಾಗಿರುವ ಈ ದಿನಗಳಲ್ಲಿ ನೀರಿನ ಸಂರಕ್ಷಣೆ ಕುರಿತು ಸಮಾಜದ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕಿದೆ. ನೀರು ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ನೀರಿನ ಮಹತ್ವ ಕುರಿತು ಜಲತಜ್ಞರು ದಶಕಗಳಿಂದಲೂ ಜಾಗೃತಿ ಮೂಡಿಸುತ್ತಿದ್ದರೂ ವ್ಯರ್ಥ ನೀರು ತಡೆಯಲು ಸಾಧ್ಯವಾಗಿಲ್ಲ. ಜಲಮೂಲಗಳ ನಿರ್ಲಕ್ಷ್ಯ ಹೀಗೆ ಮುಂದುವರಿದರೆ ನೀರಿಗಾಗಿ  ಕಾದಾಡುವ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ಕೈಗಾರಿಕಾ ವಲಯದಲ್ಲಿ ನೀರಿನ ಬಳಕೆ ಹೆಚ್ಚಿರುತ್ತದೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಮರುಬಳಕೆ ಮಾಡುವ ಮೂಲಕ ನೀರಿನ ಕೊರತೆ ನೀಗಿಸಬಹುದು. ಅಂತರ್ಜಲ ವೃದ್ಧಿಗೆ ಪೂರಕ ಕಾರ್ಯಕ್ರಮ ಹಾಗೂ ಯೋಜನೆ ರೂಪಿಸಿ ನೀರು ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ‘ಶಿಮುಲ್’ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಟಿ.ಗೋಪಾಲ್, ಸಹಜವಾಗಿ ಬಯಲುಸೀಮೆಯಲ್ಲಿ ಕಾಡುತ್ತಿದ್ದ ನೀರಿನ ಸಮಸ್ಯೆ ಇದೀಗ ಮಲೆನಾಡಿಗೂ ವ್ಯಾಪಿಸಿದೆ. 2040ರ ವೇಳೆಗೆ ನೀರಿನ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿದೆ. ಈಗಿನಿಂದಲೇ ನೀರಿನ ಸಂರಕ್ಷಣೆ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಸಲಹೆ ನೀಡಿದರು.

ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಎಂ.ಎ.ರಮೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪರಿಸರ ತಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ, ರಾಜ್ಯ ತಾಂತ್ರಿಕ ಉನ್ನತೀಕರಣ ಪರಿಷತ್‌ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಉಪ್ಪಿನ್ ಉಪನ್ಯಾಸ ನೀಡಿದರು.

ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಜಗದೀಶಪ್ಪ ಬಣಕಾರ್, ಶಾಹಿ ಎಕ್ಸ್‌ಪೋರ್ಟ್ಸ್‌ನ ಅಧ್ಯಕ್ಷ ಸುಶೀಲ್ ಕುಮಾರ್, ಶಿಮುಲ್‌ ಕಾರ್ಯಕ್ರಮ ಸಂಯೋಜಕ ಮಲ್ಲಿಕಾರ್ಜುನ್ ಇದ್ದರು.

ಜಾಗೃತಿ ಜಾಥಾ:  ವಿಶ್ವ ಜಲ ದಿನಚಾರಣೆ ಅಂಗವಾಗಿ ಪರೋಪಕಾರಂ ಟೀಂ, ಭಾವಸಾರ ವಿಜನ್ ಇಂಡಿಯಾ ಆಶ್ರಯದಲ್ಲಿ ಸ್ವಚ್ಛ, ಸ್ವಸ್ಥ ಹಾಗೂ ಸುಂದರ ಸಮಾಜಕ್ಕಾಗಿ ನಗರದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.

ನೈಸರ್ಗಿಕ ಸಂಪನ್ಮೂಲ ರಕ್ಷಿಸಬೇಕು. ಜಲಸಂಪತ್ತು ಉಳಿಸಿಕೊಳ್ಳುವ ಮೂಲಕ ವಿಶ್ವಕ್ಕೆ ಎದುರಾಗುವ ಆಪತ್ತು ತಪ್ಪಿಸಬೇಕು ಎಂದು  ಕರಪತ್ರಗಳ ಮೂಲಕ ಜಾಗೃತಿ ಮೂಡಿಸಿದರು.

ರವೀಂದ್ರನಗರ ಗಣಪತಿ ದೇವಸ್ಥಾನದಿಂದ ರಾಜೇಂದ್ರ ನಗರ, ವೆಂಕಟೇಶ ನಗರ, ಗಾಂಧಿನಗರದ ಉದ್ಯಾನದವರೆಗೆ ಜಾಥಾ ನಡೆಸಲಾಯಿತು.ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿ, ಸತೀಶ್, ಬಸವರಾಜ್, ಪರಿಸರ ನಾಗರಾಜ್ ಹಾಗೂ ಪರೋಪಕಾರಂ ತಂಡ ಮತ್ತು ಭಾವಸಾರ ವಿಜನ್ ಪದಾಧಿಕಾರಿಗಳು ಇದ್ದರು.

*
ನೀರಿನ ಸಂರಕ್ಷಣೆ ಮಾಡುವ ದೃಷ್ಟಿಯಿಂದ ನೀರಿನ ಪುನರ್ ಬಳಕೆ ಕ್ರಮ ಅತ್ಯಂತ ಅನಿವಾರ್ಯ.
-ಎಸ್.ರುದ್ರೇಗೌಡ,
ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT