ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಮುಲ್‌: ನೀರು ಮರುಬಳಕೆಯ ಯಶೋಗಾಥೆ

Last Updated 23 ಮಾರ್ಚ್ 2017, 5:33 IST
ಅಕ್ಷರ ಗಾತ್ರ

ಶಿವಮೊಗ್ಗ:  ಪ್ರತಿ ದಿನ ರೈತರಿಂದ ನಾಲ್ಕು ಲಕ್ಷ ಲೀಟರ್‌ ಹಾಲು ಖರೀದಿಸಿ, ಗ್ರಾಹಕರಿಗೆ ಮಾರಾಟ ಮಾಡುವ ‘ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ’ (ಶಿಮುಲ್) ಹಾಲು ಸಂಸ್ಕರಣೆ ಹಾಗೂ ಸ್ವಚ್ಛತೆಗೆ ದಿನವೂ ಐದು ಲಕ್ಷ ಲೀಟರ್‌ಗೂ ಹೆಚ್ಚು ನೀರು ಬಳಸುತ್ತದೆ.

ಹಾಲು ಸಂಸ್ಕರಣೆ ಹಾಗೂ ಸ್ವಚ್ಛತೆಗೆ ಬಳಸುತ್ತಿದ್ದ ನೀರು ಹಲವು ದಶಕಗಳಿಂದ ವ್ಯರ್ಥವಾಗಿ ಚರಂಡಿಗೆ ಹರಿದು ಹೋಗುತ್ತಿತ್ತು. ಹೀಗೆ ವ್ಯರ್ಥವಾಗುವ ನೀರನ್ನು ಹಲವು ಹಂತಗಳಲ್ಲಿ ಮರು ಬಳಕೆ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ  ನೀರು ಸಂರಕ್ಷಣೆಯತ್ತ ಶಿಮುಲ್ ದಿಟ್ಟ ಹೆಜ್ಜೆ ಇಟ್ಟಿದೆ.

ಶಿವಮೊಗ್ಗ ಸಮೀಪದ ಮಾಚೇನಹಳ್ಳಿ, ದಾವಣಗೆರೆ ಸಮೀಪದ ಬಾತಿ ಬಳಿ ಇರುವ ಘಟಕಗಳಲ್ಲಿ ಹಾಲು ಸಂಸ್ಕರಿಸಿ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಸಿಹಿ ಪದಾರ್ಥ ಸಿದ್ಧಪಡಿಸಲಾಗುತ್ತದೆ.

ಪ್ರತಿ ದಿನವೂ ಬೃಹತ್‌ ಪ್ರಮಾಣದ ಹಾಲು ಸಂಸ್ಕರಿಸಿ ವಿವಿಧ ಉತ್ಪನ್ನ ತಯಾರಿಸಲು ಸಾಕಷ್ಟು ಪ್ರಮಾಣದ ನೀರು ಬಳಕೆ ಮಾಡಲಾಗುತ್ತದೆ. ಮಾಚೇನಹಳ್ಳಿ ಬಳಿ ಇರುವ ಮೂಲ ಘಟಕದಲ್ಲೇ ಪ್ರತಿ ದಿನ ಸರಾಸರಿ 2.5 ಲಕ್ಷ ಲೀಟರ್‌ ಹಾಲು ಸಂಸ್ಕರಿಸಲಾಗುತ್ತದೆ.

ಹಾಲಿಗೆ ಒಂದೂ ಹನಿ ನೀರೂ ಬೆರಕೆ ಮಾಡದೆ ಒಂದೇ ಮಾರ್ಗದಲ್ಲಿ ಪ್ರತ್ಯೇಕ ಪೈಪ್‌ಗಳ ಮೂಲಕ ಒಂದಕ್ಕೊಂದು ತಾಕಿಕೊಂಡು ಇರುವಂತೆ ಹಾಲು ಮತ್ತು ನೀರು ಸಮಾನಾಂತರವಾಗಿ ಹರಿಸಲಾಗುತ್ತದೆ. ಒಂದು ಬದಿಯ ಪೈಪ್‌ನಲ್ಲಿ ಬಿಸಿ ಮತ್ತು ತಂಪು ನೀರು ಹರಿಸಿ ಮತ್ತೊಂದು ಬದಿಯ ಹಾಲು ಬಿಸಿ ಹಾಗೂ ತಂಪಾಗಿಸುವ ಪ್ರಕ್ರಿಯೆಗಳು ನಿರಂತರವಾಗಿ ನಡೆಸಲಾಗುತ್ತದೆ.

ಸಂಸ್ಕರಿಸಲು ಒಂದು ಲೀಟರ್ ಹಾಲಿಗೆ ಒಂದು ಲೀಟರ್‌ ನೀರು ಬಳಸಲಾಗುತ್ತದೆ. ಹಾಗಾಗಿ, ಪ್ರತಿ ದಿನ 2.5 ಲಕ್ಷ ಲೀಟರ್‌ ನೀರು ಬೇಕಾಗುತ್ತದೆ. ಜತೆಗೆ, ಒಮ್ಮೆ ಪ್ರಕ್ರಿಯೆ ಮುಗಿದ ತಕ್ಷಣವೇ ಇಡೀ ಘಟಕವನ್ನು ನೀರಿನಿಂದ ಸ್ವಚ್ಛಗೊಳಿಸಿ, ಮರು ದಿನ ಹೊಸ ಹಾಲು ಹರಿಸಲಾಗುತ್ತದೆ. ಹಳೆಯ ಹಾಲಿನ ಒಂದಿಷ್ಟು ಅಂಶ ಉಳಿದುಕೊಂಡರೂ ಹಾಲು ಬೇಗನೆ ಕೆಡುತ್ತದೆ. ದೊಡ್ಡ ದೊಡ್ಡ ಹಾಲಿನ ಟ್ಯಾಂಕರ್‌, ತೊಟ್ಟಿಗಳು, ಪೈಪ್‌ಗಳು, ಯಂತ್ರಗಳು, ನೆಲ ಎಲ್ಲವನ್ನೂ ನೀರಿನಿಂದ ಸ್ವಚ್ಛಗೊಳಿಸಲಾಗುತ್ತದೆ.

ಸಂಸ್ಕರಣೆಯ ನಿರಂತರ ಪ್ರಕ್ರಿಯೆ: ಘಟಕದಲ್ಲಿ ಹಾಲು ಬಿಸಿ ಮಾಡುವ, ತಂಪಾಗಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಸಮಾನಾಂತರ ಕೊಳವೆಯಲ್ಲಿ ಹರಿಯುವ 71.5 ಡಿಗ್ರಿ ಸೆಂಟಿಗ್ರೇಡ್‌ ಶಾಖದ ಬಿಸಿನೀರು ಹಾಲನ್ನು ಬಿಸಿ ಮಾಡುತ್ತದೆ. ಮತ್ತೆ ನಾಲ್ಕು ಸೆಕೆಂಡ್‌ಗಳಲ್ಲೇ ಆ ನೀರು ನಾಲ್ಕು ಡಿಗ್ರಿ ಸೆಂಟಿಗ್ರೇಡ್‌ಗೆ ಮರಳುವ ಮೂಲಕ ಹಾಲು ತಂಪಾಗುತ್ತದೆ.

ಉತ್ಪತ್ತಿಯಾಗುವ ಬಿಸಿನೀರು ವಿವಿಧ ಪ್ರಕ್ರಿಯೆಗಳ ನಂತರ ಹೊರಗಡೆ ಹರಿದು ವ್ಯರ್ಥವಾಗುತ್ತಿತ್ತು. ಹೀಗೆ ವ್ಯರ್ಥವಾಗುತ್ತಿದ್ದ ನೀರು ದೊಡ್ಡ ತೊಟ್ಟಿಯಲ್ಲಿ ಸಂಗ್ರಹಿಸಿ ಪೈಪ್‌ಗಳಿಗೆ ಮತ್ತೆ ಹರಿಸುವ ಮೂಲಕ ಮರು ಬಳಕೆ ಮಾಡಲಾಗುತ್ತಿದೆ.

ಹಾಲು ಪ್ಯಾಕಿಂಗ್‌ಗೂ ಮರು ಬಳಕೆ: ಹಾಲು ಪ್ಯಾಕಿಂಗ್  ಮಾಡುವ ಯಂತ್ರಗಳಲ್ಲಿ ಸೀಲಿಂಗ್, ಕೂಲಿಂಗ್‌ ಮಾಡಲು  ಬಳಸುವ ನೀರನ್ನು ಪ್ರತ್ಯೇಕ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ತಣ್ಣಗೆ ಮಾಡಿ ಮರುಬಳಕೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಪರಿಣಾಮ ಹಾಲಿನ ಪ್ಯಾಕೆಟ್‌ಗಳ ಸೀಲಿಂಗ್ ಕ್ರಮಬದ್ಧವಾಗಿರುತ್ತದೆ.

ಹಾಲು ಸೋರುವಿಕೆ ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಈ ಕಾರ್ಯಕ್ಕಾಗಿಯೇ ಪ್ರತಿ ದಿನ 22 ಸಾವಿರ ಲೀಟರ್‌ ತಂಪು ನೀರು ಮರುಬಳಕೆ ಮಾಡಲಾಗುತ್ತಿದೆ.

ಯಂತ್ರ ತಂಪಾಗಿಸುವ ನೀರೂ ಮರು ಬಳಕೆ: ನೀರು ತಂಪಾಗಿಸುವ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಯಂತ್ರಗಳ ತಾಪಮಾನ   ನಿಯಂತ್ರಣದಲ್ಲಿ ಇಡಲು ಪೈಪ್‌ಗಳ ಮೂಲಕ ತಂಪು ನೀರು ಹರಿಸಲಾಗುತ್ತದೆ.  ಹೀಗೆ ಹರಿಸಿದ ನೀರನ್ನೂ ಪ್ರತ್ಯೇಕ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ, ಮರುಬಳಕೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲೂ ಪ್ರತಿ ದಿನ ಅಂದಾಜು 20 ಸಾವಿರ ಲೀಟರ್‌ ನೀರು ಉಳಿತಾಯವಾಗುತ್ತಿದೆ.

ತುಪ್ಪ ಸಂಸ್ಕರಿಸಿದ ನೀರು ಮರು ಬಳಕೆ: ತುಪ್ಪದ ಡಬ್ಬಿಗಳನ್ನು ನೀರು ತುಂಬಿದ ದೊಡ್ಡ ಟ್ಯಾಂಕ್‌ಗಳಲ್ಲಿ ಇಟ್ಟು ತಂಪು ಮಾಡಲಾಗುತ್ತದೆ. ಈ ಪ್ರಕ್ರಿಯೆಗೆ ಬಳಸುವ ನಾಲ್ಕು ಸಾವಿರ ಲೀಟರ್‌ ಬೇರೆ ಕಾರ್ಯಗಳಿಗೆ ಮರು ಬಳಸಲಾಗುತ್ತದೆ.

ಕಲ್ಮಶ ನೀರು ಉದ್ಯಾನ ಅಭಿವೃದ್ಧಿಗೆ: ಸ್ವಚ್ಛತಾ ಕಾರ್ಯಕ್ಕೆ ಬಳಸಿದ ಕಲ್ಮಶ ನೀರನ್ನು ನೇರವಾಗಿ ನೀರು ಶುದ್ಧೀಕರಣ ಘಟಕಕ್ಕೆ ಹರಿಸಲಾಗುತ್ತದೆ. ಘಟಕವು ನೀರಿನಲ್ಲಿನ ಜಿಡ್ಡು, ಕಲ್ಮಶ ಬೇರ್ಪಡಿಸುತ್ತದೆ. ಆ ನೀರು ಘಟಕದ ಆವರಣದ ಹುಲ್ಲುಹಾಸು, ಹೂವಿನ ತೋಟ, ಔಷಧೀಯ ವನ, ಉದ್ಯಾನಗಳಿಗೆ ಬಳಸಲಾಗುತ್ತಿದೆ.

ಇಂಧನ ಉಳಿತಾಯಕ್ಕೂ ಆದ್ಯತೆ:  ಶೀತಲೀಕರಣ ಘಟಕದಲ್ಲಿ ಅಮೋನಿಯಾ ಕಂಪ್ರೆಸರ್‌ಗಳ ಮೂಲಕ ಬಿಸಿ ನೀರು ಉತ್ಪಾದಿಸಲಾಗುತ್ತದೆ. ಈ ನೀರನ್ನು ಬಾಯ್ಲರ್‌ಗಳಿಗೆ ಬಳಸಿ ಇಂಧನ ಉಳಿತಾಯ ಮಾಡಲಾಗುತ್ತಿದೆ. ಈ ತಂತ್ರಜ್ಞಾನದ ಪರಿಣಾಮ ಪ್ರತಿದಿನ ಶೇ 4ರಷ್ಟು ಕಡಿಮೆ ಇಂಧನ ಸಾಕಾಗುತ್ತಿದೆ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷ ಜಗದೀಶಪ್ಪ ಬಣಕಾರ್.

ಇಂಧನ ಉಳಿತಾಯದ ಸಾಧನೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 2010–11ನೇ ಸಾಲಿನಲ್ಲಿ ಇಂಧನ ಉಳಿತಾಯ ಪ್ರಶಸ್ತಿ ನೀಡಿ ಪುರಸ್ಕರಿಸಿವೆ.
ಹಾಲು ಸಂಗ್ರಹ ಘಟಕಗಳಿಗೂ ನೀರು ಪೂರೈಕೆ: ಮೂರೂ ಜಿಲ್ಲೆಗಳ ವ್ಯಾಪ್ತಿಯಲ್ಲಿ 61,403 ಹಾಲು ಉತ್ಪಾದಕರು ಪ್ರತಿದಿನ ಹಾಲು ಮಾರಾಟ ಮಾಡು
ತ್ತಾರೆ. ಹಾಲು ಸಂಗ್ರಹಿಸಲು 63 ಹಾಲು ಸಂಗ್ರಹ ಕೇಂದ್ರಗಳಿವೆ (ಬಲ್ಕ್‌ ಮಿಲ್ಕ್ ಸೆಂಟರ್).

ಈ ಬಾರಿ ಮಳೆ ಕೊರತೆಯ ಪರಿಣಾಮ ಹಲವು ಘಟಕಗಳಿಗೆ ನೀರಿನ ಕೊರತೆ ಎದುರಾಗಿದೆ. ಮಾಚೇನಹಳ್ಳಿಯಿಂದ ನಿತ್ಯವೂ ಹಾಲು ತರಲು ಹೊರಡುವ ಟ್ಯಾಂಕರ್‌ಗಳಲ್ಲಿ ನೀರು ತುಂಬಿಸಿ ನೀರಿನ ಸಮಸ್ಯೆ ಎದುರಿಸುತ್ತಿರುವ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ ಎನ್ನುತ್ತಾರೆ ಘಟಕದ ವ್ಯಸವ್ಥಾಪಕ ಕೆ.ಎಂ.ರುದ್ರಯ್ಯ.

*
ಭದ್ರಾ  ನೀರು ಬಳಕೆ
‘ಭದ್ರಾ ನದಿಯ ಕೆಐಎಡಿಬಿ ಪಂಪ್‌ಹೌಸ್‌ನಿಂದ ಪೈಪ್‌ಲೈನ್‌ ಮೂಲಕ ಶಿಮುಲ್‌ಗೆ ಮೊದಲು 2.5 ಲಕ್ಷ ಲೀಟರ್‌ ನೀರು ಹರಿದು ಬರುತ್ತಿತ್ತು. ಮರು ಬಳಕೆಯ ನಂತರ ಈ ಪ್ರಮಾಣ 1.80 ಲಕ್ಷ ಲೀಟರ್‌ಗೆ ಇಳಿದಿದೆ’ ಎನ್ನುತ್ತಾರೆ.
-‘ಶಿಮುಲ್‌’ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಟಿ.ಗೋಪಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT