ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

‘ವಿಶ್ವ ಜಲ ದಿನಾಚರಣೆ’ ಕಾರ್ಯಕ್ರಮ; ನ್ಯಾಯಾಧೀಶರಾದ ಶರ್ಮಿಳಾ ಕಾಮತ್ ಸಲಹೆ
Last Updated 23 ಮಾರ್ಚ್ 2017, 6:17 IST
ಅಕ್ಷರ ಗಾತ್ರ

ವಿರಾಜಪೇಟೆ : ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳುಸುವುದರ ಮೂಲಕ ಜಲ ಸಂರಕ್ಷಣೆ ಮಾಡುವ ಅಗತ್ಯವಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಶರ್ಮಿಳಾ ಕಾಮತ್ ಹೇಳಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ‘ವಿಶ್ವ ಜಲ ದಿನಾಚರಣೆ’ ಅಂಗವಾಗಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿತ್ಯ ಬಳಸುವ ನೀರನ್ನು ಮರುಬಳಕೆ ಮಾಡಬೇಕು. ಮಿತಿಮೀರಿ ಕೊಳವೆ ಬಾವಿ ತೆಗೆಸುವುದರಿಂದ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಅಮೂಲ್ಯವಾಗಿ ರುವ ನೀರನ್ನು ಸಂರಕ್ಷಿಸುವ ದೃಷ್ಟಿ ಯಿಂದ ಜಲಮೂಲಗಳನ್ನು ಸಂರಕ್ಷಿಸು ವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಮಾತನಾಡಿ, ನೀರನ್ನು ಮಿತವಾಗಿ ಬಳಕೆ ಮಾಡದಿದ್ದರೆ ಮುಂದಿನ ದಿನದಲ್ಲಿ ಹಣಕೊಟ್ಟು ನೀರನ್ನು ಪಡೆದುಕೊಳ್ಳವ ಸ್ಥಿತಿ ಬರುತ್ತದೆ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರೊ. ಎಂ.ಎಂ. ಸುನಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಕೀಲ ಬಿ.ಬಿ. ಮಾದಪ್ಪ  ನದಿ ಜಲಮೂಲಗಳನ್ನು ಸಂರಕ್ಷಣೆ ಕುರಿತು ಉಪನ್ಯಾಸ ನೀಡಿ, ಸಾಕ್ಷ್ಯಚಿತ್ರ ಪ್ರದರ್ಶಿಸಿದರು. ಕಾಲೇಜಿನ ಪರಿಸರ ಕ್ಲಬ್‌ ಸಂಚಾಲಕ ಎಂ.ಎನ್. ವನಿತ್ ಕುಮಾರ್  ಸ್ವಾಗತಿಸಿದರು. ವಿದ್ಯಾರ್ಥಿನಿ ಯೋಗಿತಾ ನಿರೂಪಿಸಿದರು.

ಮಾನವನ ನಿರಂತರ ದಬ್ಬಾಳಿಕೆ
ಸೋಮವಾರಪೇಟೆ
: ಪ್ರಕೃತಿಯ ಮೇಲೆ ಮಾನವನ ನಿರಂತರ ದಬ್ಬಾಳಿಕೆಯಿಂದ  ಪರಿಸರ ನಾಶವಾಗುತ್ತಿದೆ ಎಂದು ಇಲ್ಲಿನ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ದೊಡ್ಡಮನಿ ವಿಷಾದಿಸಿದರು.

ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪಟ್ಟಣ ಪಂಚಾಯಿತಿ ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಲೆನಾಡಿನಲ್ಲಿ ಪರಿಸರದ ಮಹತ್ವ ಅರಿಯದೇ ಕೆಲವರ ದುರಾಸೆಯಿಂದ ಮರಗಳು ನಾಶವಾಗುತ್ತಿವೆ. ಇದರಿಂದ ಪರಿಸರದಲ್ಲಿ ಏರುಪೇರಾಗುತ್ತಿದೆ. ಕಾವೇರಿ ನದಿಪಾತ್ರದಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವುದು ನಮ್ಮ ದುರಂತ ಎಂದರು.

ಸಿವಿಲ್ ನ್ಯಾಯಾಧೀಶ ಶ್ಯಾಂ ಪ್ರಕಾಶ್ ಮಾತನಾಡಿ, ಸಮಾಜದಲ್ಲಿನ ಎಲ್ಲರೂ ತಮ್ಮೊಳಗೆ ದ್ವೇಷ, ಅಸೂಯೆ, ದುರಾಸೆಗಳನ್ನು ಬಿಟ್ಟು, ಉತ್ತಮ ಜೀವನ ನಡೆಸಲು ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ನೀರಿನ ಮರುಬಳಕೆಗೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಬೇಕು. ಕಸದ ತೊಟ್ಟಿಗಳಾಗುತ್ತಿರುವ ನದಿ ತೊರೆಗಳನ್ನು ರಕ್ಷಿಸಬೇಕು. ಮಳೆ ನೀರು ಸಂಗ್ರಹ ಮಾಡಲು ಹೆಚ್ಚಿನ ಆದ್ಯತೆ ನೀಡಬೇಕು.

ನದಿ ಪಾತ್ರದಲ್ಲಿ ಕೈಗಾರಿಕೆಗಳನ್ನು ನಿರ್ಬಂಧಿಸಬೇಕು ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ, ಮುಖ್ಯಾಧಿಕಾರಿ ನಾಚಪ್ಪ ಉಪಸ್ಥಿತರಿದ್ದರು.

ಜಾಗೃತಿ ಜಾಥಾ
ಕುಶಾಲನಗರ:
ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶ್ರೀರಮಾನುಜಂ ವಿಜ್ಞಾನ ಕೇಂದ್ರ ಹಾಗೂ ಜಗದೀಶ್ ಚಂದ್ರ ಬೋಸ್ ಇಕೋ ಕ್ಲಬ್ ಆಶ್ರಯದಲ್ಲಿ ಬುಧವಾರ ವಿಶ್ವ ಜಲ ದಿನವನ್ನು ಆಚರಿಸಲಾಯಿತು.

ವಿಶ್ವಜಲ ದಿನದ ಅಂಗವಾಗಿ ವಿದ್ಯಾ ರ್ಥಿಗಳು ಹಾಗೂ ಶಿಕ್ಷಕರು ಊರಿನ ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿ ನೀರಿನ ಸಂರಕ್ಷಣೆ, ನೀರಿನ ಮಿತಬಳಕೆ ಬಗ್ಗೆ ಘೋಷಣೆಗಳನ್ನು ಕೂಗುತ್ತ ಜನರಲ್ಲಿ ಜಾಗೃತಿ ಮೂಡಿಸಿದರು. ಶಾಲಾ ಆವರಣದಲ್ಲಿ  ಜಾಥಾಗೆ ಮುಖ್ಯಶಿಕ್ಷಕ ಕೃಷ್ಣನಾಯಕ್ ಚಾಲನೆ ನೀಡಿದರು.

ವಿಜ್ಞಾನ ಶಿಕ್ಷಕ ಡಿ.ಎಸ್.ವೆಂಕಟೇಶ್ ಮಾತನಾಡಿ, ಪ್ರತಿಯೊಂದು ಜೀವಿಗೂ ಶುದ್ಧ ನೀರು, ಶುದ್ಧ ಗಾಳಿ ಅವಶ್ಯ ಆದರೆ ಮಾನವ ತನ್ನ ವಿವೇಚನಾರಹಿತ ಚಟುವಟಿಕೆಗಳಿಂದಾಗಿ ಇಡೀ ಪರಿಸರವನ್ನೇ ಮಾಲಿನ್ಯ ಮಾಡುತ್ತಿದ್ದಾನೆ. ಇದನ್ನು ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಶಿಕ್ಷಕರಾದ ಲಕ್ಷ್ಮಣ, ಶ್ರೀನಿವಾಸ್ ಬಿ.ನಾಯಕ್, ಲತಾ, ಮೀನಾಕ್ಷಿ, ಸುವರ್ಣ, ಬಲ್ಕಿಷ್, ವಿಜಯಲಕ್ಷ್ಮಿ ಹಾಜರಿದ್ದರು.

ನೀರು ಮಿತವಾಗಿ ಬಳಸಿ
ಸುಂಟಿಕೊಪ್ಪ:
ನೀರನ್ನು ಅಗತ್ಯಕ್ಕೆ ತಕ್ಕಂತೆ, ಮಿತವಾಗಿ ಬಳಕೆ ಮಾಡಬೇಕು ಎಂದು ಇಕೋ-ಕ್ಲಬ್  ಸಂಯೋಜಕ, ಶಿಕ್ಷಕ ಟಿ.ಜಿ.ಪ್ರೇಮ್ ಕುಮಾರ್ ಮಾಹಿತಿ ನೀಡಿದರು.

ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಘಟಕ,  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಇಕೋ-ಕ್ಲಬ್ ನಿಂದ ಬುಧವಾರ 'ವಿಶ್ವ ಜಲ ದಿನ'ದ ಅಂಗವಾಗಿ ಜನಜಾಗೃತಿ ನಡೆಸಿ ಅವರು ಮಾತನಾಡಿದರು.

’ಜಲ ದಿನ ಮತ್ತು ಜಲಸಂಪನ್ಮೂಲ ಗಳ ಸುಸ್ಥಿರ ಬಳಕೆ’ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಅವರು, ಮಳೆ ನೀರು ಸಂಗ್ರಹಣೆ ಹಾಗೂ ಅಂತರ್ಜಲ ಸಂರಕ್ಷಣೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

ವಿಜ್ಞಾನ ಸಂಘದ ಸಂಚಾಲಕಿ ಮತ್ತು ಶಿಕ್ಷಕಿ ಎಂ.ಎನ್.ಲತಾ ಅವರು, 'ಜಲ ಸಂರಕ್ಷಣೆ' ಕುರಿತಂತೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಹಾಗೂ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT