ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಕ್ಕೊಂದು ಲೋಕಾಯುಕ್ತ ರಚನೆ: ದೇವನೂರ

25ರಂದು ಸ್ವರಾಜ್‌ ಇಂಡಿಯಾ ಜೊತೆ ಸರ್ವೋದಯ ಕರ್ನಾಟಕ ಪಕ್ಷ ವಿಲೀನ ಸಮಾವೇಶ
Last Updated 23 ಮಾರ್ಚ್ 2017, 6:24 IST
ಅಕ್ಷರ ಗಾತ್ರ

ಮೈಸೂರು: ದೇವನೂರ ಮಹಾದೇವ ಸಾರಥ್ಯದ ಸರ್ವೋದಯ ಕರ್ನಾಟಕ ಪಕ್ಷವು ಸ್ವರಾಜ್‌ ಇಂಡಿಯಾದೊಂದಿಗೆ ವಿಲೀನಗೊಳ್ಳಲು ವೇದಿಕೆ ಸಜ್ಜು ಗೊಂಡಿದೆ. ಮಾರ್ಚ್‌ 25ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ವಿಲೀನ ಸಮಾವೇಶ ನಡೆಯಲಿದೆ.

ಸ್ವರಾಜ್‌ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್‌, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ್‌ ಭಾಗವಹಿಸುತ್ತಾರೆ. ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಅವರಲ್ಲದೆ, ವಿವಿಧ ರಾಜ್ಯಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಸಮಾವೇಶದಲ್ಲಿ ಪುಟ್ಟಣ್ಣಯ್ಯ ಹಾಗೂ ದೇವನೂರ ಅವರು ಸ್ವರಾಜ್‌ ಇಂಡಿಯಾ ಪಕ್ಷದ ಸದಸ್ಯತ್ವವನ್ನು ಮೊದಲಿಗೆ ಸ್ವೀಕರಿಸಲಿದ್ದಾರೆ. ಬಳಿಕ ಹೊಸಮುಖಗಳಿಗೆ ಸದಸ್ಯತ್ವ ನೀಡಲಾಗುತ್ತದೆ. ಯಾದವ್‌ ಅವರು ಸ್ವರಾಜ್‌ ಅಭಿಯಾನ ಸಂಘಟನೆಯ ವಿಷನ್‌ ಕುರಿತು ಮಾತನಾಡುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದೇವನೂರ ಮಹಾದೇವ, ‘ಬಹಳ ವರ್ಷಗಳ ಕನಸು ಈಡೇರುವ ಸಮಯ ಸನ್ನಿಹಿತವಾಗಿದೆ. ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಸ್ವರಾಜ್‌ ಇಂಡಿಯಾ ಹುಟ್ಟುವ ಮೊದಲೇ ಯಾದವ್‌ ಜೊತೆಗೂಡಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹಲವು ವಿಷಯಗಳನ್ನು ಅವರೊಂದಿಗೆ ಚರ್ಚಿಸಿದ್ದೇನೆ. ಸ್ವರಾಜ್‌ ಅಭಿಯಾನದಲ್ಲೂ ಭಾಗವಹಿಸಿದ್ದೇನೆ’ ಎಂದು  ವಿವರಿಸಿದರು.

‘ಸ್ವರಾಜ್‌ ಇಂಡಿಯಾ ಪಕ್ಷದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇರುವುದಿಲ್ಲ. ಪಕ್ಷಕ್ಕೊಂದು ಲೋಕಾಯುಕ್ತ ಮಾದರಿಯ ಸಂಸ್ಥೆ ಇರುತ್ತದೆ. ಪಕ್ಷಾತೀತವಾಗಿ ಇರುವವರನ್ನು ಅದಕ್ಕೆ ನೇಮಿಸಲಾಗುತ್ತದೆ. ನ್ಯಾಯಾಧೀಶರೂ ಅದರಲ್ಲಿ ಇರುತ್ತಾರೆ’ ಎಂದು ಮಾಹಿತಿ ನೀಡಿದರು.

‘ಸ್ವರಾಜ್‌ ಅಭಿಯಾನ ವಿಷನ್‌ ಎಂಬುದು ಭಾರತದ ರಾಜಕಾರಣದ ಕಣ್ಣು ತೆರೆಸುವ ದಾಖಲೆ ಪ್ರತಿ ಇದ್ದಂತೆ. ಹೀಗಾಗಿ, ವಿಲೀನಕ್ಕೆ ಮುಂದಾಗಿದ್ದೇವೆ. ಸರ್ವೋದಯ ಕರ್ನಾಟಕ ಪಕ್ಷದಲ್ಲೇ ಪ್ರತ್ಯೇಕವಾಗಿ ಉಳಿಯಬೇಕೆಂಬ ಪ್ರತಿಷ್ಠೆ ನಮಗಿಲ್ಲ. ಅದನ್ನು ವಿಸ್ತರಿಸುವ ಉದ್ದೇಶದೊಂದಿಗೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದರು.

‘ಸ್ವರಾಜ್‌ ಇಂಡಿಯಾ ಪಕ್ಷಕ್ಕೆ ಒಂದು ಸಂವಿಧಾನ ಇದೆ. ಜೊತೆಗೆ ಒಂದು ನೋಟವಿದೆ. ಅದನ್ನು ವ್ಯಾಪಕವಾಗಿ ಪ್ರಚಾರ ನಡೆಸುತ್ತೇವೆ. ಇದು ತಳ   ಮಟ್ಟದ ಹಾಗೂ ಪಾರದರ್ಶಕ ರಾಜಕಾರಣ ಮಾಡಲಿದೆ’ ಎಂದು ಅವರು ಹೇಳಿದರು.

ಸರ್ವೋದಯ ಕರ್ನಾಟಕ ಪಕ್ಷದ ಒಳ ಸಂಘಟನೆಗಳಾದ ದಲಿತ ಸಂಘರ್ಷ ಸಮಿತಿ, ರೈತ ಸಂಘ ಹಾಗೂ ವಿವಿಧ ಬಣಗಳು ಸ್ವರಾಜ್‌ ಇಂಡಿಯಾದೊಂದಿಗೆ ವಿಲೀನವಾಗಲಿವೆ. ಪ್ರಜ್ಞಾವಂತರು, ದಲಿತರು, ರೈತರು, ಮಹಿಳೆಯರು, ತಳಸಮುದಾಯದ ಸಂಘಟನೆಗಳೆಲ್ಲ ಜತೆಗೂಡುತ್ತಿವೆ ಎಂದು ಅವರು ಮಾಹಿತಿ ನೀಡಿದರು.

‘ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಸ್ವರಾಜ್‌ ಇಂಡಿಯಾ ವತಿಯಿಂದ ರಾಜ್ಯದಾದ್ಯಂತ ಪ್ರವಾಸ ನಡೆಯುತ್ತಿದೆ. 20 ಜಿಲ್ಲೆಗಳಿಗೆ ಭೇಟಿ ನೀಡಿ ಹಿರಿಯರು, ಯುವಕರ ಹಾಗೂ ವಿವಿಧ ಸಂಘಟನೆ ಸದಸ್ಯರನ್ನು ಒಗ್ಗೂಡಿಸುವ ಕೆಲಸ ನಡೆಯುತ್ತಿದೆ’ ಎಂದು ಹೇಳಿದರು.

*
ರಚನಾತ್ಮಕ, ಪಾರದರ್ಶಕ ರಾಜಕಾರಣಕ್ಕಾಗಿ ಪಕ್ಷ ವಿಲೀನಗೊಳಿಸಲಾಗುತ್ತಿದೆ. ಈಗ ಮಾತಿನ ರಾಜಕಾರಣ ನಡೆಯುತ್ತಿದೆ. ನಡೆಯ ರಾಜಕಾರಣ ಮಾಡುವುದು ನಮ್ಮ ಉದ್ದೇಶ.
-ದೇವನೂರ ಮಹಾದೇವ,
ಅಧ್ಯಕ್ಷ, ಸರ್ವೋದಯ ಕರ್ನಾಟಕ ಪಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT