ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ಮಾರಾಟ; ನಾಲ್ವರ ಬಂಧನ

ನಂಜನಗೂಡು ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್‌ನಿಂದ ಮುಂದುವರಿದ ಪ್ರಚಾರ ಭರಾಟೆ
Last Updated 23 ಮಾರ್ಚ್ 2017, 6:26 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇರೆಗೆ ನಾಲ್ವರನ್ನು ಬಂಧಿಸಲಾಗಿದೆ. ಅವರಿಂದ 48 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಹುಲ್ಲಹಳ್ಳಿಯ ಶಿವು, ಮರಳೂರು ಗ್ರಾಮದ ಶಿವಣ್ಣ, ತಾಂಡವಪುರದ ಪ್ರಶಾಂತ್ ಹಾಗೂ ಬಂಚನಹಳ್ಳಿ ಕೈಗಾರಿಕಾ ಪ್ರದೇಶದ ಸುನಿಲ್‌ ಬಂಧಿತರು. ಆರೋಪಿಗಳಿಂದ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಮದ್ಯ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ 5 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹುಲ್ಲಹಳ್ಳಿಯ ಶಿವ ವೈನ್ಸ್‌ ಹಾಗೂ ಹಡತಲೆ ಗ್ರಾಮದ ಎಂಎಸ್‌ಐಎಲ್‌ ಮದ್ಯದಂಗಡಿಯ ಅಬಕಾರಿ ಸನ್ನದನ್ನು ಮಾರ್ಚ್‌ 22ರಿಂದ ಏ.10ರವರೆಗೆ ಅಮಾನತ್ತಿನಲ್ಲಿ ಇಟ್ಟು ಜಿಲ್ಲಾಧಿಕಾರಿ ಡಿ.ರಂದೀಪ್ ಆದೇಶಿಸಿದ್ದಾರೆ.

ಚುನಾವಣೆಯನ್ನು ಶಾಂತ ರೀತಿಯಿಂದ ನಡೆಸುವ ಸಂಬಂಧ ಮದ್ಯ ಹಾಗೂ ಮಾದಕ ವಸ್ತು ಕಳ್ಳಸಾಗಣೆಯ ಮೇಲೆ ಅಬಕಾರಿ ಸಿಬ್ಬಂದಿ ಹಾಗೂ ಪೊಲೀಸರು ಕಣ್ಣಿಟ್ಟಿದ್ದರು. ಮಾರ್ಚ್‌ 17ರಿಂದ 21ರವರೆಗೆ ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ  ವಿವಿಧೆಡೆ ದಾಳಿ ನಡೆಸಿದ್ದರು.

ಈ ನಡುವೆ ಕ್ಷೇತ್ರದಲ್ಲಿ ಉಪ ಚುನಾವಣೆ ಪ್ರಚಾರದ ಭರಾಟೆ ಮುಂದುವರಿದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಮುಖಂಡರು ಮನೆ ಮನೆಗೆ ತೆರಳಿ ಮತಯಾಚಿಸಿದರು.

ಬಿಜೆಪಿ ಸಂಸದರಾದ ಬಿ.ಶ್ರೀರಾಮುಲು ಹಾಗೂ ಶೋಭಾ ಕರಂದ್ಲಾಜೆ ಅವರು ತೇಗೂರು ಹಾಗೂ ದಿಡ್ಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಪರ ಪ್ರಚಾರ ನಡೆಸಿದರು. ನಂಜನಗೂಡಿನ ದೇವರಸನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನಟ ಜಗ್ಗೇಶ್‌ ಅವರು ಕಾಲ್ನಡಿಗೆಯಲ್ಲಿ ತೆರಳಿ ಮತಯಾಚಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ 12 ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆ ಹೊಂದಿದ್ದರೂ ತವರೂರು ಮೈಸೂರು ಜಿಲ್ಲೆಗೆ ಅವರ ಕೊಡುಗೆ ಶೂನ್ಯ ಎಂದು ಕರಂದ್ಲಾಜೆ ಆರೋಪಿ ಸಿದರು.

ಕವಲಂದೆ ಸೇರಿ ದಂತೆ ಅವರ ಸ್ವಕ್ಷೇತ್ರಕ್ಕೆ ಬಹುಗ್ರಾಮ ಕುಡಿಯುವ ನೀರು ಒದಗಿಸಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರಬೇಕಾಯಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ಗ್ರಾಮಕ್ಕೂ ಒಂದು ಸಾವಿರ ಮನೆ ಮಂಜೂರಾ ಗಿತ್ತು.  ಅದು ಈಗ 10ಕ್ಕೆ ಇಳಿದಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ನ ಅಭ್ಯರ್ಥಿ ಕಳಲೆ ಕೆ.ಕೇಶವಮೂರ್ತಿ ಪರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ  ಡಾ.ಯತೀಂದ್ರ ಅವರು ವಿವಿಧ ಹಳ್ಳಿಗಳಿಗೆ ತೆರಳಿ ಬೆಂಬಲಿಗರೊಂದಿಗೆ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ಮೈಸೂ ರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರ ಆಡಳಿತ ಯಂತ್ರ ದುರುಪಯೋಗ ಮಾಡಿಕೊಳ್ಳುತ್ತಿದೆ. ಬಲಪ್ರಯೋಗದ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆ ಯಾಚಿಸಬೇಕು ಎಂದರು.

ಕ್ಷೇತ್ರದ ಉಪಚುನಾವಣೆಯ ನಾಮಪತ್ರಗಳ ಪರಿಶೀಲನೆ ಬುಧವಾರ ನಡೆದಿದ್ದು, ಇಬ್ಬರ ಉಮೇದುವಾರಿಕೆ ತಿರಸ್ಕೃತಗೊಂಡಿವೆ. ಪಕ್ಷೇತರ ಅಭ್ಯರ್ಥಿಗಳಾದ ಆರ್‌.ರೇಣುಕಾ ಹಾಗೂ ಶಿವಪ್ಪ ಅವರ ನಾಮಪತ್ರಗಳು ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕರಿಸಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

ಕಳಲೆ ಕೇಶವಮೂರ್ತಿ (ಕಾಂಗ್ರೆಸ್‌), ವಿ.ಶ್ರೀನಿವಾಸಪ್ರಸಾದ್‌ (ಬಿಜೆಪಿ) ಸೇರಿದಂತೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಮೇದುವಾರಿಕೆ ಹಿಂಪಡೆಯಲು ಮಾರ್ಚ್‌ 24 ಕಡೆಯ ದಿನ.

ತರಬೇತಿಗಾಗಿ ಅಧಿಕಾರಿಗಳು ನವದೆಹಲಿಗೆ
ಮತ ಖಾತರಿ (ವಿವಿ ಪ್ಯಾಟ್‌) ಯಂತ್ರಗಳ ಅಳವಡಿಕೆ ಹಾಗೂ ಬಳಕೆ ಸಂಬಂಧ ತರಬೇತಿಗಾಗಿ ಜಿಲ್ಲಾಡಳಿತವು ಇಬ್ಬರು ಅಧಿಕಾರಿಗಳನ್ನು ನವದೆಹಲಿಗೆ ಕಳುಹಿಸಿದೆ.

ಮತ ಖಾತರಿ ಯಂತ್ರಗಳ ಬಳಕೆ ಸಂಬಂಧ ಸಿಬ್ಬಂದಿಗೆ ತರಬೇತಿ ಕೂಡ ನಡೆಯಲಿದೆ. ಈ ಯಂತ್ರಗಳನ್ನು ತರಲು ಇಬ್ಬರು ಅಧಿಕಾರಿಗಳನ್ನು ಈಗಾಗಲೇ ಉತ್ತರ ಪ್ರದೇಶದ ಬಾರಾಬಂಕಿಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT