ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರು ಮಿತವಾಗಿ ಬಳಸಿ ಉಳಿಸಿ’

ಸಂಪೂರ್ಣ ಕಾಲೇಜಿನಲ್ಲಿ ವಿಶ್ವ ಜಲ ದಿನಾಚರಣೆ
Last Updated 23 ಮಾರ್ಚ್ 2017, 6:50 IST
ಅಕ್ಷರ ಗಾತ್ರ

ಚನ್ನಪಟ್ಟಣ: ನೀರು ಪ್ರಕೃತಿಯ ಸಂಪತ್ತು. ಇದನ್ನು ಮಿತವಾಗಿ ಬಳಸುವುದರ ಮೂಲಕ ಮುಂದಿನ ಪೀಳಿಗೆಗೆ ಉಳಿಸುವ ಅಗತ್ಯವಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಫೆಲಿಕ್ಸ್ ಆಲ್ಫೋನ್ಸ್ ಆಂಥೋನಿ ಅವರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೆಳೆಕೆರೆ ಗ್ರಾಮದ ಸಂಪೂರ್ಣ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ರಿಸರ್ಚ್ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಸಂಪೂರ್ಣ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ‘ವಿಶ್ವ ಜಲ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು.

‘ಇಂದು ಅಂತರ್ಜಲ ಸಂಪೂರ್ಣವಾಗಿ ಕುಸಿದಿದೆ. ನೀರನ್ನು ಅತಿಯಾಗಿ ಬಳಸಿದ ಪರಿಣಾಮದಿಂದ ಜಲಮೂಲಗಳು ಕಾಣೆಯಾಗುತ್ತಿವೆ. ಈಗಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅನಾಹುತ ಖಂಡಿತ’ ಎಂದರು.

ವಿದ್ಯಾಸಂಸ್ಥೆ ಉಪಾಧ್ಯಕ್ಷೆ ಡಾ.ಸಂಪೂರ್ಣ ನಾಯ್ಡು ಮಾತನಾಡಿ, ‘ಪರಿಸರ ಸಂರಕ್ಷಣೆಯಿಂದ ನಾಗರಿಕರ, ರೈತರ ಸಂರಕ್ಷಣೆಯಾಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜನ್ಮದಿನವನ್ನು ಸಸಿ ನೆಟ್ಟು ಆಚರಿಸಿಕೊಳ್ಳಬೇಕು. ಪರಿಸರವನ್ನು ನಾವು ಕಾಪಾಡಿದಲ್ಲಿ ನಮ್ಮಿಂದ ಬೆಳೆದು ನಿಂತ ಮರಗಳು ಮೋಡಗಳನ್ನು ಆಕರ್ಷಿಸಿ ಮಳೆ ತರಿಸಿ ನೀರಿನ ಬವಣೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದರು.

ವಿದ್ಯಾಸಂಸ್ಥೆ ನಿರ್ದೇಶಕ ಡಾ.ಕೆ.ಎನ್. ಉಮೇಶ್ ಮಾತನಾಡಿ, ಈಗಾಗಲೇ ಕುಡಿಯುವ ನೀರನ್ನು ಹಣಕೊಟ್ಟು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಹಣಕೊಟ್ಟರೂ  ನೀರು ಸಿಗದಂಥ ಅಪಾಯಕಾರಿ ದಿನಗಳು ಬರಲಿವೆ. ಅತ್ಯಮೂಲ್ಯ ಜೀವಜಲವಾದ ನೀರನ್ನು ಸಂರಕ್ಷಿಸಿ ಉಳಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಗುರುತರ ಜವಾಬ್ದಾರಿ ಆಗಬೇಕು ಎಂದು ಕಿವಿಮಾತು ಹೇಳಿದರು.

ಆರೋಗ್ಯ ಇಲಾಖೆಯ ಡಿ.ಪುಟ್ಟಸ್ವಾಮಿಗೌಡ ಉಪನ್ಯಾಸ ನೀಡಿದರು. ಮಹಿಳಾ ಹಕ್ಕುಗಳ ಕುರಿತು ವಕೀಲೆ ಎಂ.ಪಿ. ರಶ್ಮಿ ಉಪನ್ಯಾಸ ನೀಡಿದರು.
ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ, ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಬಿ.ಎಸ್.ಎಂ.ನಾಯ್ಡು, ಪ್ರೊ.ಪಿ. ನರಸಿಂಹಮೂರ್ತಿ, ನ್ಯಾಯಾಧೀಶೆ ಕೆ.ಎಸ್.ನಮ್ರತಾ ರಾವ್, ಸರ್ಕಾರಿ ಸಹಾಯಕ ಅಭಿಯೋಜಕ ತಾರಾನಾಥ್, ವಕೀಲರ ಸಂಘದ ಉಪಾಧ್ಯಕ್ಷ ಎಂ.ಕೆ.ನಿಂಗಪ್ಪ ಭಾಗವಹಿಸಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಜಲ ಸಂರಕ್ಷಣೆ ಕುರಿತ ಕಿರುನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT