ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಈಗಲೂ ಬಲಿಷ್ಠ: ನ್ಯಾ. ವಿಶ್ವನಾಥ

Last Updated 23 ಮಾರ್ಚ್ 2017, 6:52 IST
ಅಕ್ಷರ ಗಾತ್ರ

ರಾಮನಗರ: ‘ಭ್ರಷ್ಟಾಚಾರ ನಿಗ್ರಹದಳವು ಲೋಕಾಯುಕ್ತದ ಆಶಯಗಳಿಗೆ ಪೂರಕವಾಗಿಯೇ ಕಾರ್ಯ ನಿರ್ವಹಿಸಲಿದ್ದು, ಅಗತ್ಯ ಸಂದರ್ಭಗಳಲ್ಲಿ ಅದನ್ನು ಬಳಸಿಕೊಳ್ಳಲು ನಮಗೆ ಅವಕಾಶವಿದೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಸ್ಪಷ್ಟಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಲೋಕಾಯುಕ್ತ ದುರ್ಬಲಗೊಂಡಿದೆ ಎಂಬುದು ಜನರ ಅಭಿಪ್ರಾಯವಷ್ಟೇ. ಭ್ರಷ್ಟಾಚಾರ ನಿಗ್ರಹ ದಳ ಸ್ವತಂತ್ರ ಸಂಸ್ಥೆಯಾಗಿದ್ದರೂ ಲೋಕಾಯುಕ್ತ ಸಂಸ್ಥೆ ಅದಕ್ಕೂ ಪ್ರಕರಣ ದಾಖಲಿಸುವಂತೆ ಸೂಚನೆ ನೀಡುವ ಅಧಿಕಾರವನ್ನು ಹೊಂದಿದೆ. ಭ್ರಷ್ಟಾಚಾರ ನಿಗ್ರಹ ದಳ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಡ್ಡಿಯಿಲ್ಲ. ಅದರಲ್ಲಿ ನಾವು ಮಧ್ಯ ಪ್ರವೇಶಿಸುವುದೂ ಇಲ್ಲ’ ಎಂದು ವಿವರಿಸಿದರು.

‘ಲೋಕಾಯುಕ್ತನಾಗಿ ನೇಮಕಗೊಂಡ ಬಳಿಕ ಈವರೆಗೆ ರಾಜ್ಯದ 10 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಸಮಸ್ಯೆಗಳ ಇತ್ಯರ್ಥಕ್ಕೆ 10–12 ವಾರ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಲೋಪಗಳನ್ನು ಸರಿಪಡಿಸಿಕೊಂಡು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದೇನೆ’ ಎಂದು ಅವರು ತಿಳಿಸಿದರು.

ದೃಷ್ಟಿಕೋನ ಬದಲಾಗಲಿ: ‘ಲೋಕಾಯುಕ್ತ ಎಂದರೆ ಕೇವಲ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ಮಾಡುವವರು ಎನ್ನುವ ಭಯದ ವಾತಾವರಣ ಇದೆ. ಅದನ್ನು ಹೋಗಲಾಡಿಸಿ, ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟಾಚಾರ ರಹಿತ ವ್ಯವಸ್ಥೆ ಜಾರಿಗೆ ತರುವ ಆಶಯ ನನ್ನದಾಗಿದೆ.

ನಾನು ಅಧಿಕಾರಿ ವರ್ಗವನ್ನು ಕೆಟ್ಟ ದೃಷ್ಟಿಯಿಂದ ನೋಡುವ, ಬೆದರಿಸಿ ಕೆಲಸ ಮಾಡಿಸುವವನಲ್ಲ. ಅವರ ಸ್ವಾಭಿಮಾನ, ಗೌರವಕ್ಕೆ ಧಕ್ಕೆ ಬಾರದಂತೆ ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವವನು. ನನ್ನ ವಿಶ್ವಾಸಕ್ಕೆ ದ್ರೋಹ ಎಸಗಿದಾಗ ಕಾನೂನು ಅಸ್ತ್ರ ಪ್ರಯೋಗಿಸುತ್ತೇನೆ’ ಎಂದು ಅವರು ಹೇಳಿದರು.

‘ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದರೆ ಯಾವ ತೊಂದರೆಗಳೂ ಎದುರಾಗುವುದಿಲ್ಲ. ಜನರೂ ಅಧಿಕಾರಿ ವರ್ಗದವರಿಗೆ ಆಮಿಷ ತೋರಿಸದೆ ಕಾನೂನು ವ್ಯಾಪ್ತಿಯೊಳಗೆ ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಮುಂದಿನ ಹಂತದಲ್ಲಿ ಜಿಲ್ಲೆಯಲ್ಲಿ ಮತ್ತೆ ಪ್ರವಾಸ ಕೈಗೊಂಡು ಜನರ ಸಮಸ್ಯೆ ಆಲಿಸಿ, ಅದಕ್ಕೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ಲೋಕಾಯುಕ್ತದಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ನಮ್ಮಲ್ಲಿಯೂ ಅಲ್ಪ ಪ್ರಮಾಣದಲ್ಲಿ ಕೆಳ ಹಂತದ ಸಿಬ್ಬಂದಿಯ ಕೊರತೆ ಇದೆ. ಆದರೆ ಇರುವ ಸಿಬ್ಬಂದಿಯನ್ನೇ ಉತ್ತಮವಾಗಿ ಬಳಸಿಕೊಂಡು ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಗುರಿ ಹೊಂದಿದ್ದೇನೆ’ ಎಂದರು.

ಲೋಕಾಯುಕ್ತ ಎಡಿಜಿಪಿ ಪರಶಿವಮೂರ್ತಿ, ಎಸ್ಪಿ ಅಂಜಲಿ, ಜಿಲ್ಲಾಧಿಕಾರಿ ಬಿ.ಆರ್. ಮಮತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಕಾಧಿಕಾರಿ ಸಿ.ಪಿ. ಶೈಲಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ರಮೇಶ್‌ ಇದ್ದರು.

*
ಪ್ರತಿಯೊಬ್ಬ ಅಧಿಕಾರಿಯೂ ತಾನೇ ಲೋಕಾಯುಕ್ತ ಎನ್ನುವಂತೆ ಶ್ರದ್ಧೆ, ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಬೇಕು. ಆಗ ನಮ್ಮ ವ್ಯವಸ್ಥೆ ತನ್ನಿಂದ ತಾನೇ ಬದಲಾವಣೆ ಹೊಂದುತ್ತದೆ.
-ಪಿ. ವಿಶ್ವನಾಥ ಶೆಟ್ಟಿ , ಲೋಕಾಯುಕ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT