ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಸಿಬ್ಬಂದಿ ಜೊತೆ ಸ್ಥಳೀಯರ ವಾಗ್ವಾದ

ಕಾಮಗಾರಿಗೆ ಅಡ್ಡಿ, ಜೆಸಿಬಿ ಯಂತ್ರ ತಡೆದು ಪ್ರತಿಭಟನೆ
Last Updated 23 ಮಾರ್ಚ್ 2017, 6:59 IST
ಅಕ್ಷರ ಗಾತ್ರ

ವಿಜಯಪುರ:  ಸತ್ಯಮ್ಮ ಕಾಲೋನಿಯ ಕಾಮಗಾರಿ ನಡೆಸಲು ಬಂದಿದ್ದ ಜೆಸಿಬಿ ಯಂತ್ರವನ್ನು ಸ್ಥಳೀಯರು ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ 16 ನೇ ವಾರ್ಡಿನ ಸತ್ಯಮ್ಮ ಕಾಲೊನಿಯಲ್ಲಿನ ರಸ್ತೆಗೆ ಡಾಂಬರೀಕರಣ ಮಾಡಿದ್ದೇವೆಂದು ಸುಳ್ಳು ಮಾಹಿತಿ ನೀಡಿರುವ ಪುರಸಭಾ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತನಿಖೆ ನಡೆಸಬೇಕು ಎಂದು ಮೇಲ ಧಿಕಾರಿಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ. ಆದರೆ  ಕಾಮಗಾರಿಯ ನೈಜತೆಯ ಬಗ್ಗೆ ತನಿಖೆ ನಡೆಸದೆ ಎಸ್.ಸಿ.ಪಿ. ಯೋಜನೆಯಡಿ  ಸಿ.ಸಿ. ರಸ್ತೆ ನಿರ್ಮಾಣ ಮಾಡಿ ತನಿಖೆಯ ದಿಕ್ಕುತಪ್ಪಿಸಲು ಸಂಚು ನಡೆಸಿದ್ದಾರೆ ಎಂದು  ಸ್ಥಳೀಯರು ದೂರಿದರು.

ಪಟ್ಟಣದ 16 ವಾರ್ಡಿನ ಸತ್ಯಮ್ಮ ಕಾಲೊನಿಯಲ್ಲಿ ಪರಿಶಿಷ್ಟ ಜಾತಿ ಜನಾಂಗದವರೇ ಹೆಚ್ಚಾಗಿ ವಾಸವಾಗಿದ್ದಾರೆ.  2013–14 ರಿಂದ 2016–17 ರವರೆಗೆ ಪುರಸಭೆಯಿಂದ ಮಾಡಿರುವ ಕಾಮಗಾರಿಗಳಲ್ಲಿ ಸತ್ಯಮ್ ಕಾಲೋನಿಯಲ್ಲಿನ ರಸ್ತೆಗೆ ಮರುಡಾಂಬರೀಕರಣ ಮಾಡಲಿ ₹ 4.90 ಲಕ್ಷ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆ ಯಡಿಯಲ್ಲಿ ಪಡೆದುಕೊಂಡಿರುವ ದಾಖಲೆಗಳಲ್ಲಿ  ಮಾಹಿತಿ ನೀಡಿದ್ದಾರೆ.

‘ಈ ರಸ್ತೆಗೆ ಡಾಂಬರೀಕರಣ ಮಾಡಿಲ್ಲ, ಪುರಸಭೆಯ ಅಧಿಕಾರಿಗಳು ಕಾಮಗಾರಿ ಬದಲಾವಣೆ ಮಾಡಿ ಬೇರೆ ಕಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಿರುವುದಾಗಿ  ಮಾಹಿತಿ ನೀಡಿದ್ದರು.

ಪುನಃ ಮಾಹಿತಿ ಹಕ್ಕು ಕಾಯ್ದೆ ಯಡಿ ಅರ್ಜಿ ಸಲ್ಲಿಸಿ ಎಲ್ಲಿಗೆ ಕಾಮಗಾರಿ ಬದಲಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡುವಂತೆ ಮನವಿ ಮಾಡಿದಾಗ ಕಾಮಗಾರಿ ವರ್ಗಾವಣೆಗೊಂಡಿಲ್ಲವೆಂದು ನನಗೆ ಮಾಹಿತಿ ನೀಡಿರುವುದನ್ನು ನೋಡಿದರೆ ಹಣ ದುರ್ಬಳಕೆಯಾಗಿರುವುದು ಕಂಡು ಬರುತ್ತಿದೆ’ ಎಂದು ಆರ್‌ಟಿಐ  ಕಾರ್ಯಕರ್ತ ಶ್ರೀನಿವಾಸ್ ಆರೋಪಿಸಿದ್ದಾರೆ.

ಸ್ಥಳೀಯ ಮುಖಂಡ ನಿಲೇರಪ್ಪ ಮಾತನಾಡಿ, ಈ ಭಾಗದಲ್ಲಿ ಸರಿಯಾಗಿ ಕುಡಿಯಲು ನೀರು ಬರುತ್ತಿಲ್ಲ, ಹೊಸದಾಗಿ ಮೋರಿ ನಿರ್ಮಾಣ ಮಾಡುವುದಾಗಿ ಭರವಸೆ ಕೊಟ್ಟು ಇದ್ದ ಮೋರಿ ಕಿತ್ತುಹಾಕಿದ್ದಾರೆ. ಇದುವರೆಗೂ ಸರಿಪಡಿಸಿಲ್ಲ ಎಂದರು.

ಸ್ಥಳಕ್ಕೆ ಬಂದಿದ್ದ ಗುತ್ತಿಗೆದಾರರೊಂದಿಗೆ ವಾಗ್ವಾದ ನಡೆಸಿದ ಸ್ಥಳೀಯರು,  ‘ಕೆಲಸ ಮಾಡೊಕೆ ಬಿಡಲ್ಲ ಹೋಗ್ರಿ ವಾಪಸ್’ ಎಂದು ದಬಾಯಿಸಿದರು. ಸ್ಥಳಕ್ಕೆ ಬಂದ ಲೊಕೋಪಯೋಗಿ ಇಲಾಖೆಯ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಪೊಲೀಸ್‌ ಮಧ್ಯಪ್ರವೇಶ: ಅಭಿವೃದ್ಧಿ ಕಾಮಗಾರಿ ಮಾಡಲು ಅಡ್ಡಿಪಡಿ ಸುತ್ತಿರುವ ಬಗ್ಗೆ ಪುರಸಭಾ ಸದಸ್ಯ ಎಂ.ನಾಗರಾಜ್ ಅವರು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಹಿಂದೆ ಪುರಸಭೆಯ ಅಧಿಕಾರಿಗಳಿಂದ ಅನ್ಯಾಯವಾಗಿದ್ದರೆ ಮೇಲಧಿಕಾರಿಗಳಿಗೆ ದೂರುಕೊಡಬೇಕೆ ಹೊರತು ಕಾಮಗಾರಿಗೆ ಅಡ್ಡಿಪಡಿಸುವಂತಿಲ್ಲ ಎಂದರು. ನಂತರ ಕಾಮಗಾರಿ ಪ್ರಾರಂಭ ಮಾಡಲು ಅವಕಾಶ ಮಾಡಿಕೊಟ್ಟರು.

ಸ್ಥಳೀಯರಾದ ದೇವರಾಜ್, ಮುನಿರತ್ನಮ್ಮ, ಲಕ್ಷ್ಮೀ, ರುಕ್ಸಾನಾ, ರಾಜಮ್ಮ, ಮುನಿಗಿರಮ್ಮ, ವೆಂಕಟಮ್ಮ, ನಾಗರತ್ನಮ್ಮ, ಬೀಬಿಜಾನ್, ವಾಜಿದ್, ವೆಂಕಟೇಶ್, ಸುಬ್ರಮಣಿ, ಪೂಜಪ್ಪ, ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT