ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಬ್ಯಾರೇಜ್‌ಗಳು; ಬಾಯಾರಿದ ಹಳ್ಳಿಗಳು

ಯಾದಗಿರಿ ತಾಲ್ಲೂಕಿನಲ್ಲಿ ತೀರದ ಬವಣೆ: ಕುಡಿಯುವ ನೀರಿಗಾಗಿ ಜನರ ಪರದಾಟ
Last Updated 23 ಮಾರ್ಚ್ 2017, 8:32 IST
ಅಕ್ಷರ ಗಾತ್ರ

ಯಾದಗಿರಿ: ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಒಂದಷ್ಟು ನೀರು ಕಂಡಿದ್ದ ಕೆರೆ–ಕಟ್ಟೆಗಳು ಬೇಸಿಗೆಯ ಆರಂಭದಲ್ಲೇ ಬತ್ತುತ್ತಿವೆ. ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಜಲಾಶಯ ಈಗಾಗಲೇ ಬರಿದಾಗಿದ್ದು, ಕೊಳವೆ ಬಾವಿಗಳು ಜಿನುಗತೊಡಗಿವೆ. ಗುರುಮಠಕಲ್‌ ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಕೇಳಿ ಬರತೊಡಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ ಆರು ಹೋಬಳಿಗಳಲ್ಲಿ ಒಟ್ಟು 42 ಗ್ರಾಮ ಪಂಚಾಯಿತಿಗಳಿವೆ. ಅವುಗಳಲ್ಲಿ ಒಟ್ಟು 164 ಗ್ರಾಮಗಳಿದ್ದು, 152ರಲ್ಲಿ ಮಾತ್ರ ಜನವಸತಿ ಹಾಗೂ 12 ಗ್ರಾಮಗಳನ್ನು ಜನವಸತಿ ಇಲ್ಲದ ಗ್ರಾಮಗಳೆಂದು ಗುರುತಿಸಲಾಗಿದೆ. ಒಟ್ಟು 11,74,271 ಜನಸಂಖ್ಯೆ ಇದ್ದು, ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 9,53,594 ಹಾಗೂ ನಗರ ಪ್ರದೇಶದಲ್ಲಿ 2,20,677 ಜನಸಂಖ್ಯೆ ಇದೆ.

ಒಟ್ಟಾರೆ 4 ಲಕ್ಷ ಜನಸಂಖ್ಯೆಗೆ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಒದಗಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದರೂ, ಗ್ರಾಮೀಣ ಭಾಗದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ದಾಹವನ್ನು ಇದುವರೆಗೂ ಸಮರ್ಥವಾಗಿ ನೀಗಿಸಿಲ್ಲ ಎಂಬುದಾಗಿ ಚಪೆಟ್ಲಾ, ಪುಟಪಾಕ, ಗಾಜರಕೋಟ, ಕಾಳೆಬೆಳಗುಂದಿಯ ಗ್ರಾಮಸ್ಥರು ಹೇಳುತ್ತಾರೆ.

ಯಾದಗಿರಿ– ಗುರುಮಠಕಲ್ ನಗರ ಪ್ರದೇಶಗಳಿಗೆ ಭೀಮಾನದಿ ನೀರನ್ನು ಶುದ್ಧೀಕರಿಸಿ ಕುಡಿಯಲು ಪೂರೈಸಲಾಗುತ್ತಿದೆ. ಆದರೆ, ಈಗಾಗಲೇ ಭೀಮೆಯ ಒಡಲಿನಲ್ಲಿ ನೀರಿನ ಹರಿವು ಕಡಿಮೆಯಾಗುತ್ತಾ ಬಂದಿದೆ. ಜಾಕ್‌ವೆಲ್‌ಗಳಿಗೆ ನೀರು ನುಗ್ಗದೇ ಇರುವಷ್ಟು ನದಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಯಾದಗಿರಿ ನಗರದಲ್ಲಿ 1ಲಕ್ಷಕ್ಕೂ ಹೆಚ್ಚು ಗುರುಮಠಕಲ್‌ನಲ್ಲಿ 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಜನರಿಗೆ ನಿತ್ಯ ನೀರು ಪೂರೈಸಲು ಇರುವ ಶುದ್ಧೀಕರಣ ಘಟಕಗಳಿಂದ ಸಾಧ್ಯವಿಲ್ಲ.

1992ರಲ್ಲಿ ಸ್ಥಾಪಿಸಿರುವ ಇಲ್ಲಿನ ಶುದ್ಧೀಕರಣ ಕೇವಲ10 ಲಕ್ಷ ಗ್ಯಾಲನ್‌ ನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಇಷ್ಟು ನೀರನ್ನು ನಿತ್ಯ 30 ಸಾವಿರ ಜನಸಂಖ್ಯೆಗೆ ಮಾತ್ರ ಪೂರೈಸಬಹುದು.

ಉಳಿದ 70 ಸಾವಿರ ಜನಸಂಖ್ಯೆ ಇರುವ ಬಡಾವಣೆಗಳು ನೀರಿಗಾಗಿ ಹಾಹಾಕಾರ ಪಡುತ್ತವೆ. ನಗರಕ್ಕೆ ನೀರು ಒದಗಿಸಲು ಬೇರೆ ಮೂಲಗಳಿಲ್ಲದೇ ಇರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಗರ ನಿವಾಸಿಗಳಿಗೂ ತಪ್ಪಿಲ್ಲ.

‘ಒಟ್ಟು 42 ಗ್ರಾಮ ಪಂಚಾಯಿತಿಗಳಲ್ಲಿ ಚಪೆಟ್ಲಾ, ವರ್ಕನಹಳ್ಳಿ, ಅನಪುರ, ಯಲಸತ್ತಿ, ಕೌಳೂರು, ಚಂಡ್ರಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿವೆ. ಹೋದ ಬೇಸಿಗೆಯಲ್ಲೂ ಈ ಗ್ರಾಮ ಪಂಚಾಯಿತಿಗಳು ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಬೇಜವಾಬ್ದಾರಿ ತೋರಿವೆ. ಹಾಗಾಗಿ, ನೀರಿನ ಹಾಹಾಕಾರದಿಂದ ಜನರು ಗುಳೆ ಹೋದದ್ದು ಉಂಟು’ ಎಂದು ಚಂಡ್ರಿಕಿಯ ರಾಘವಯ್ಯ ಹೇಳುತ್ತಾರೆ.

ಬಹುತೇಕ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಕೊಳವೆ ಬಾವಿಗಳು ಪ್ರಮುಖ ಜಲಮೂಲ ಆಧಾರವಾಗಿವೆ. ಅವುಗಳ ಜತೆಗೆ ಸೇದುವ ಬಾವಿಗಳಲ್ಲೂ ಸ್ವಲ್ಪ ಪ್ರಮಾಣದಲ್ಲಿ ನೀರಿದೆ. ಅಂತರ್ಜಲಮಟ್ಟ ಚೆನ್ನಾಗಿರುವ ಕಡೆಗಳಲ್ಲಿ ತೆರೆದ ಬಾವಿಗಳಲ್ಲಿ ನೀರು ಸಂಗ್ರಹ ಇದೆ.

‘ಗುರುಮಠಕಲ್‌ನಲ್ಲಿರುವ ಸಿಹಿನೀರಿನ ಬಾವಿ ಶೇ 20ರಷ್ಡು ಜನರಿಗೆ ಕುಡಿಯುವ ನೀರು ಒದಗಿಸುತ್ತಿದೆ. ಏಪ್ರಿಲ್‌, ಮೇ ತಿಂಗಳಿನಲ್ಲಿ ತೆರೆದ ಬಾವಿಗಳ ಜತೆಗೆ ಕೊಳವೆ ಬಾವಿಗಳೂ ಸಹ ಬತ್ತುವುದರಿಂದ ಗುರುಮಠಕಲ್‌, ಯಾದಗಿರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಸಂಭವ ಇರುತ್ತದೆ’ ಎನ್ನುತ್ತಾರೆ ಹತ್ತಿಕುಣಿಯ ಮಂಜುನಾಥ ಚವಾಣ್, ಯಲ್ಹೇರಿಯ ಸಾಬಣ್ಣ.

ಕೆರೆಗಳಲ್ಲಿ ಕುಸಿದ ನೀರಿನ ಸಂಗ್ರಹ: ಯಾದಗಿರಿ ತಾಲ್ಲೂಕಿನಲ್ಲಿ ವಾಡಿಕೆ ಮಳೆ ಪ್ರಮಾಣ 81ಎಂ.ಎಂ. ಇದೆ. ಆದರೆ, ಪ್ರಸಕ್ತ ವರ್ಷದಲ್ಲಿ 137 ಎಂ.ಎಂ ವಾಸ್ತವಿಕ ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ 70ರಷ್ಟು ಹೆಚ್ಚು ಮಳೆಯಾಗಿದೆ. ಆದರೆ, ಹೂಳಿನಿಂದಾಗಿ ಹೆಚ್ಚು ಹೆಚ್ಚು ನೀರನ್ನು ಸಂಗ್ರಹಿಸುವ ಶಕ್ತಿ ಕೆರೆಗಳಿಲ್ಲದಂತಾಗಿದೆ. ಇದರಿಂದಾಗಿ ಬೇಸಿಗೆ ಆರಂಭದಲ್ಲಿಯೇ ಕೆರೆಗಳು ಬತ್ತುತ್ತಿವೆ.

ಅಕ್ಟೋಬರ್‌ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಸುಮಾರು 72 ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಿತ್ತು. ಆದರೆ, ಎಷ್ಟೋ ಕೆರೆಗಳು ಮಾರ್ಚ್‌ ಅಂತ್ಯದಲ್ಲಿ ಒಣಗಿವೆ. ಗೋಗಿ, ಗುಂಡನಹಳ್ಳಿ, ಖಾನಾಪುರ ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದೆ. ಹತ್ತಿಕುಣಿ ಜಲಾಶಯ ಬರಿದಾಗುತ್ತಾ ಬಂದಿದೆ.

ಕೆರೆ ಪುನಶ್ಚೇತನಕ್ಕೆ ಯೋಜನೆಗಳೇನು: ವಿಶ್ವಬ್ಯಾಂಕ್‌, ನಬಾರ್ಡ್ ಸಹಕಾರದೊಂದಿಗೆ ಅಂತರ್ಜಲ ಸುಧಾರಣೆಗಾಗಿ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಕೆರೆ ಅಭಿವೃದ್ಧಿಗೆ ಅನದಾನ ನೀಡುತ್ತವೆ. ಕೇಂದ್ರದ ವಿಶೇಷ ಅನುದಾನವೂ ಸಿಗುತ್ತದೆ. ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆಯೂ ಅನುದಾನ ನೀಡುತ್ತಾ ಬಂದಿದೆ.

ಭೂ ಸವಕಳಿ ಮತ್ತು ಅಂತರ್ಜಲಮಟ್ಟ ವೃದ್ಧಿಸಲು ನದಿಕಣಿವೆ ಯೋಜನೆ (ವಿಆರ್‌ಪಿ), ಬರಗಾಲ ಪೀಡಿತ ಪ್ರದೇಶಾಭಿವೃದ್ಧಿ ಯೋಜನೆ (ಡಿಡಿಪಿ), ಸಮಗ್ರ ಬಂಜರು ಅಭಿವೃದ್ಧಿ ಯೋಜನೆ (ಐಡಬ್ಲ್ಯುಡಿಪಿ) ಹಾಗೂ ಕೃಷ್ಣ ‘ಕಾಡಾ’ ಅಭಿವೃದ್ಧಿ ಪ್ರಾಧಿಕಾರದಿಂದ ಸಮಸ್ಯಾತ್ಮಕ ಭೂಮಿ ಅಭಿವೃದ್ಧಿ (ಬಸಿಗಾಲುವೆ)ಯಂತಹ ಅನೇಕ ಯೋಜನೆಗಳಿವೆ.

ಆದರೂ ಕೆರೆಗಳ ಸ್ಥಿತಿ ಬದಲಾಗಿಲ್ಲ. ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ಕೆರೆಗಳ ಬಗ್ಗೆ ಕಾಳಜಿ ವಹಿಸಿಲ್ಲ. ಈ ಇಲಾಖೆಯ ವ್ಯಾಪ್ತಿಗೆ ಒಟ್ಟು 72 ಕೆರೆಗಳು ಬರುತ್ತವೆ. ಅವುಗಳೆಲ್ಲದರಲ್ಲೂ ನೀರಿನ ಸಂಗ್ರಹ  ಕುಸಿದಿದೆ. ಅದಕ್ಕೆ ಕೆರೆಯಲ್ಲಿ ತುಂಬಿರುವ ಹೂಳು ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

*
ಬೇಸಿಗೆ ಎದುರಿಸಲು ಸಿದ್ಧ
ಮಾರ್ಚ್ ತಿಂಗಳಿನಲ್ಲಿ ಸುರಪುರ, ಶಹಾಪುರ, ಯಾದಗಿರಿ ತಾಲ್ಲೂಕುಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ಜತೆಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಯಾವ ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗುತ್ತದೆ ಎಂಬುದನ್ನು ಅವರಿಂದ ಮಾಹಿತಿ ಪಡೆಯಲಾಗಿದೆ. ಅಂತಹ ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಪೂರೈಕೆ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ಅಲ್ಲದೇ ಕೇಂದ್ರದ ಯೋಜನೆಗಳಾದ ಟಾಸ್ಕ್‌ಫೋರ್ಸ್, ಎನ್‌ಸಿಆರ್ಎಫ್ (ನ್ಯಾಷನಲ್‌ ಕಲಮಟಿ ರೂರಲ್ ಫಂಡ್), ಎನ್‌ಆರ್‌ಡಿಡಬ್ಲ್ಯುಪಿ (ನ್ಯಾಷನಲ್‌ ರೂರಲ್‌ ಡ್ರಿಂಕಿಂಗ್‌ ವಾಟರ್‌ ಪ್ರೋಗ್ರಾಂ) ಕ್ರಿಯಾಯೋಜನೆಯಲ್ಲಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆಗಳನ್ನು ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಖುಷ್ಬೂ ಗೋಯೆಲ್‌ ಚೌಧರಿ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು.
-ಖುಷ್ಬೂ ಗೋಯೆಲ್‌ ಚೌಧರಿ
ಜಿಲ್ಲಾಧಿಕಾರಿ

*
ನೀರಿಗಾಗಿ ₹35 ಕೋಟಿ ವೆಚ್ಚ
‘ಸರ್ಕಾರದ ಮೇಲೆ ಒತ್ತಡ ಹಾಕಿ ನಗರದ ಕುಡಿಯುವ ನೀರಿಗಾಗಿ ₹ 35ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ. ಗುರಸಣಗಿ ಬ್ರಿಡ್ಜ್‌ ಕಂ ಬ್ಯಾರೇಜ್ ಬಳಿ ₹15ಕೋಟಿ ವೆಚ್ಚದಲ್ಲಿ ಜಾಕ್‌ವೆಲ್‌ ಅಳವಡಿಸುವ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳಲಾಗುವುದು. ₹ 6 ಕೋಟಿ ವೆಚ್ಚದಲ್ಲಿ ಲಕ್ಷ್ಮಿ ನಗರದಲ್ಲಿ, ಗಂಜ್‌ ಪ್ರದೇಶ, ಹತ್ತಿಕುಣಿ ಕ್ರಾಸ್ ಬಳಿ ತಲಾ ಒಂದೊಂದು ಸೇರಿದಂತೆ ಒಟ್ಟು ಮೂರು ಓವರ್‌ಹೆಡ್ ಟ್ಯಾಂಕ್‌ ಮತ್ತು ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮಾರ್ಚ್‌ ಆರಂಭಕ್ಕೆ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು’ ಎಂದು ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ತಿಳಿಸಿದರು.
ಡಾ.ಎ.ಬಿ.ಮಾಲಕರೆಡ್ಡಿ
ಶಾಸಕ

*
ಖಾಸಗಿ ಕೊಳವೆಬಾವಿಗಳಿಗೆ ಮಾಸಿಕ ₹ 10 ಸಾವಿರ
‘ನೀರಿನ ತೀರಾ ಅಭಾವ ಇರುವ ಕಡೆಗಳಲ್ಲಿ ಖಾಸಗಿ ಮಾಲೀಕತ್ವದ ಕೊಳವೆಬಾವಿಗಳನ್ನು ವಶಪಡಿಸಿಕೊಂಡು ಜನರಿಗೆ ನೀರಿನ ಪೂರೈಕೆ ಮಾಡುವಂತೆ ಸರ್ಕಾರ ಆದೇಶಿಸಿದೆ. ಯಾದಗಿರಿ ತಾಲ್ಲೂಕಿನ ಗಡಿಗ್ರಾಮಗಳಲ್ಲಿ ನೀರಿನ ಸಮಸ್ಯೆಗಳು ಉದ್ಭವಿಸಬಹುದು. ಹಾಗಾಗಿ, ಖಾಸಗಿ ಮಾಲೀಕರ ಜಮೀನಿನಲ್ಲಿ ನೀರು ಇರುವ ಕೊಳವೆ ಬಾವಿಗಳನ್ನು ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಆಡಳಿತಕ್ಕೆ ವಹಿಸಿದರೆ ಅಂಥವರಿಗೆ ಮಾಸಿಕ ₹10 ಸಾವಿರ ನೀಡಲಾಗುತ್ತದೆ. ಮಳೆಗಾಲ ಆರಂಭದವರೆಗೂ ಅಂತಹ ಕೊಳವೆ ಬಾವಿಗಳನ್ನು ಬಳಕೆ ಮಾಡಿಕೊಂಡು ನಂತರ ಮಾಲೀಕರಿಗೆ ಬಿಟ್ಟುಕೊಡಲಾಗುತ್ತದೆ’ ಎಂದು ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳುತ್ತಾರೆ.
-ಚನ್ನಮಲ್ಲಪ್ಪ ಘಂಟಿ
ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT