ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಾಶ್ರಮ ಕಟ್ಟುವ ಅನಿವಾರ್ಯತೆ: ದೊರೆಸ್ವಾಮಿ ಬೇಸರ

ಲಿಂಗೈಕ್ಯ ಶಿವಶಾಂತವೀರ ಶಿವಯೋಗಿ ಪುಣ್ಯಸ್ಮರಣೋತ್ಸವ, ಗವಿಮಠದ ವತಿಯಿಂದ ನೂತನ ವೃದ್ಧಾಶ್ರಮ ಉದ್ಘಾಟನೆ
Last Updated 23 ಮಾರ್ಚ್ 2017, 8:35 IST
ಅಕ್ಷರ ಗಾತ್ರ

ಕೊಪ್ಪಳ: ವೃದ್ಧಾಶ್ರಮಗಳು ಅಗತ್ಯವೇ? ಅನಿವಾರ್ಯವಾಗಿ ಕಟ್ಟುತ್ತಿದ್ದಾರೆ. ತಂದೆತಾಯಿಗಳನ್ನು ನೋಡಿಕೊಳ್ಳಬೇಕಾದ ಮಕ್ಕಳು ಸರಿಯಾಗಿಲ್ಲ. ಹಲವು ಕಾರಣಗಳಿಂದ ಮನೆಯಿಂದ ತಂದೆತಾಯಿ ಹೊರಹಾಕಲ್ಪಟ್ಟಿರುತ್ತಾರೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದ ಗವಿಮಠದ ವತಿಯಿಂದ ನಿರ್ಮಿಸಲಾದ ನೂತನ ವೃದ್ಧಾಶ್ರಮ ಉದ್ಘಾಟಿಸಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ವಿದ್ಯಾವಂತ, ಪ್ರಾಜ್ಞರೆನಿಸಿಕೊಂಡವರೇ ತಂದೆತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ದುಃಸ್ಥಿತಿ ಇದೆ. ಇದು ಬದಲಾಗಬೇಕು. ಇಲ್ಲವಾದರೆ ಮುಂದಿನ ಪೀಳಿಗೆ ತುಂಬ ತೊಂದರೆಗೊಳಗಾಗಲಿದೆ ಎಂದು ಅವರು ಹೇಳಿದರು.

ನಾಡಿನಲ್ಲಿ ಬರಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಅವರು, ಪಾಪಕಾರ್ಯವನ್ನು ಮಾಡುತ್ತಿರುವುದರಿಂದ ಬರ ಬಿದ್ದಿದೆ. ಇದು ದೇವರ ಶಾಪವಿರಬೇಕೇನೋ ಅನಿಸುತ್ತಿದೆ. ಕೆರೆಗಳನ್ನು ಚೆನ್ನಾಗಿಟ್ಟುಕೊಂಡು ಜನರಿಗೆ ಇಂಥ ಕಾಲದಲ್ಲಿ ನೀರು ಪೂರೈಸಬೇಕು ಎಂಬ ಪರಿಜ್ಞಾನ ಸರ್ಕಾರಕ್ಕೆ ಇಲ್ಲ. ಇದೆಲ್ಲಾ ನೀರಿನ ವ್ಯಾಪಾರಿಗಳಿಗೆ ಅನುಕೂಲವಾಗಿದೆ ಎಂದರು.

ಸಾಲ ಮನ್ನಾ ಮಾಡಬೇಕು ಅನ್ನುವುದನ್ನು ಒಪ್ಪುವುದಿಲ್ಲ. ಪ್ರತಿ ವರ್ಷ ಈ ಕೂಗು ಕೇಳಿಬರುವುದು ಪರಿಪಾಠವಾಗಿದೆ. ರೈತ ತಾನು ಚೆನ್ನಾಗಿ ದುಡಿಯುತ್ತೇನೆ. ಬಡ್ಡಿ ಸಾಲಕ್ಕೆ ತನ್ನನ್ನು ಒಡ್ಡಿಕೊಳ್ಳುವುದಿಲ್ಲ ಎಂಬ ದೃಢ ನಿರ್ಧಾರ ಹೊಂದಬೇಕು.

ಹಿಂದೆ ಈ ರೀತಿ ಸಾಲದ ಶೂಲಕ್ಕೆ ಒಳಗಾಗುವ ಪರಿಸ್ಥಿತಿ ಇರಲಿಲ್ಲ. ಆದ್ದರಿಂದ ಸರ್ಕಾರ ಈ ಬಾರಿ ಮಾತ್ರ ಒಂದು ಬಾರಿ ಸಾಲ ಮನ್ನಾ ಮಾಡಲಿ. ಆದರೆ, ಇದು ಮತ್ತೆ ಮುಂದುವರಿಯಬಾರದು ಎಂದರು. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಾಲ ಮನ್ನಾ ಕುರಿತು ಬದ್ಧತೆ ಇರಬೇಕು ಎಂದರು.

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ ಆಸೆ ತೋರಿಸಿ ಕೈಬಿಟ್ಟಿದ್ದಾರೆ. ಈಗಾಗಲೇ ₹ 1 ಸಾವಿರ ಗೌರವಧನ ಹೆಚ್ಚಳ ಮಾಡಿದ್ದಾರೆ. ಇನ್ನೂ ಒಂದು ಸಾವಿರ ರೂಪಾಯಿ ಹೆಚ್ಚಳ ಮಾಡಬೇಕು ಎಂದರು.

ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸಕ್ತಿ ಕಳೆದುಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಯವರಿಗೆ ಯಾವುದರಲ್ಲಿ ಆಸಕ್ತಿ ಇದೆ? ಅವರಿಗೆ ಚುನಾವಣೆಯಲ್ಲಿ ಮಾತ್ರ ಆಸಕ್ತಿಯಿದೆ. ಇವರೊಬ್ಬರೇ ಅಲ್ಲ. ಯಾರು ಬಂದರೂ ಇದೇ ಕೆಲಸ ಮಾಡುತ್ತಾರೆ.

ಬಡವರಿಗೆ ಅಕ್ಕಿ ಕೊಡುವ ಬದಲು ಉತ್ಪತ್ತಿ ಮಾಡುವ ಸಾಧನ ಕೊಟ್ಟು ದುಡಿದುಕೊಂಡು ತಿನ್ನು ಎಂದು ಹೇಳಬೇಕು. ಆದರೆ, ಈಗಿನ ಜನನಾಯಕರು ಜನರನ್ನು ಕೊಂಡುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದ ಬದಲಿಗೆ ರಾಕ್ಷಸಿ ಆಡಳಿತ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜನ ತಮ್ಮನ್ನು ಮಾರಿಕೊಳ್ಳಬಾರದು. ಹೆಂಡ ಕುಡಿಯಬಾರದು. ಇಷ್ಟೆಲ್ಲಾ ಆದರೂ ಬದಲಾವಣೆ ಆಗುತ್ತದೆ ಎಂಬ ನಂಬಿಕೆ ಇಲ್ಲ. ಅದೇ ಯಂಕ, ಶೀನ, ನಾಣಿ ಇವರೇ ಆಯ್ಕೆಯಾಗುತ್ತಾರೆ ಎಂದು ಹೇಳಿದರು.

ದೊರೆಸ್ವಾಮಿ ಹೇಳಿದ್ದು...
ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಕೇಳಿ ದೇವೇಗೌಡರ ಬಳಿ ಹೋದರೆ ನೀನೇನು ಎಂ.ಎಂ. ರಾಮಸ್ವಾಮಿಯೋ ಎಂದು ಕೇಳಿದರು. ಮತ್ತೊಬ್ಬ ಅಕ್ಕಸಾಲಿಗನ ಹೆಸರೂ ಹೇಳಿದರು. ಅಂದರೆ ಇವರು ಮಾತ್ರವಲ್ಲ. ಎಲ್ಲ ಪಕ್ಷದವರೂ ಹೀಗೇ ದುಡ್ಡಿದ್ದವರಿಗೆ ಅವಕಾಶ ಕೊಡುತ್ತಾರೆ. ಹಣ ನಮ್ಮನ್ನು ದಾಸರನ್ನಾಗಿಸಿದೆ.

*
ಸೇನಾ ಟ್ರಕ್‌ ಡ್ರೈವರ್‌ ಆಗಿದ್ದ ಅಣ್ಣಾ ಹಜಾರೆ ಇಡೀ ದೇಶವನ್ನು ಬಡಿದೆಬ್ಬಿಸಿ ನಿಲ್ಲಿಸುತ್ತಾರೆ ಎಂದರೆ, ನಿಮಗೆ (ಮಠಾಧೀಶರಿಗೆ) ಒಂದು ಊರನ್ನು ಎಚ್ಚರಿಸಿ ನಿಲ್ಲಿಸುವ ಸಾಮರ್ಥ್ಯ ಇಲ್ಲವೇ?
-ಎಚ್‌.ಎಸ್‌. ದೊರೆಸ್ವಾಮಿ,
ಹಿರಿಯ ಸ್ವಾತಂತ್ರ್ಯ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT