ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್‌ ಯಾತ್ರೆಗೆ 9 ವರ್ಷ; ದಾಖಲೆ ಕನಸು

ಹುಬ್ಬಳ್ಳಿ ಮೂಲಕ ಮುಂಬೈಗೆ ಪಯಣಿಸಿದ ಅಮನ್‌ದೀಪ್; ದುಶ್ಚಟ ಮುಕ್ತ ಸಮಾಜದ ಭರವಸೆ
Last Updated 23 ಮಾರ್ಚ್ 2017, 8:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಳೆ ಮಾದರಿಯ ಹೀರೊ ಸೈಕಲ್. ಅದರ ಒಂದು ಬದಿಯಲ್ಲಿ ಬಟ್ಟೆಗಳು ತುಂಬಿದ ಚೀಲ. ಮತ್ತೊಂದು ಭಾಗದಲ್ಲಿರುವ ಚೀಲದಲ್ಲಿ ಪಾತ್ರೆಗಳು. ಬೆನ್ನಿನಲ್ಲಿರುವ ಬ್ಯಾಗ್‌ನಲ್ಲಿ ಲ್ಯಾಪ್‌ಟಾಪ್‌, ಕ್ಯಾಮೆರಾ ಹಾಗೂ ಸ್ಮಾರ್ಟ್ ಫೋನ್‌.

ದುಶ್ಚಟ ಬಿಡಿಸುವ ಉದ್ದೇಶದೊಂದಿಗೆ ಸೈಕಲ್‌ನಲ್ಲಿ ದೇಶಸಂಚಾರ ಮಾಡುತ್ತಿರುವ ಅಮನ್‌ದೀಪ್ ಸಿಂಗ್ ಮಂಗಳವಾರ ಹುಬ್ಬಳ್ಳಿಗೆ ಬಂದಿದ್ದರು. ಇಲ್ಲಿಯ ವರೆಗೆ 2 ಲಕ್ಷ 10 ಸಾವಿರ ಕಿಲೋಮೀಟರ್‌ ಸೈಕಲ್‌ ತುಳಿದಿರುವುದಾಗಿ ಹೇಳುವ ಅವರು ಇದೀಗ ಗಿನ್ನಿಸ್ ದಾಖಲೆಯ ಕನಸಿನಲ್ಲಿದ್ದಾರೆ.

ಅಮನ್‌ದೀಪ್ ಸಿಂಗ್ ಅವರ ಮೂಲ ಹೆಸರು ಮಹಾದೇವ ರೆಡ್ಡಿ. ಕೋಲಾರ ಜಿಲ್ಲೆ ಮಾಲೂರಿನ ಚಿಕ್ಕತಿರುಪತಿ ಗ್ರಾಮದವರಾದ ಅವರು ಅಪ್ಪ ಕಾಲೇಜಿಗೆ ಕಳುಹಿಸಲಿಲ್ಲ ಎಂಬ ಕಾರಣದಿಂದ ಮನೆ ಬಿಟ್ಟು ರೈಲು ಹತ್ತಿದರು. ಪಂಜಾಬ್‌ನ ಗುರುದ್ವಾರದಲ್ಲಿ ಆಶ್ರಯ ಪಡೆದ ನಂತರ ಸಿಖ್‌ ಧರ್ಮಕ್ಕೆ ಮತಾಂತರಗೊಂಡರು. ಈಗ ಅವರಿಗೆ 57 ವರ್ಷ ವಯಸ್ಸು.

ಮದ್ಯಪಾನದಿಂದ ಸೋದರ ಮಾವ ಮೃತಪಟ್ಟ ನಂತರ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಲು ಮುಂದಾದ ಅವರು ಇದಕ್ಕಾಗಿ ಆಯ್ದುಕೊಂಡದ್ದು ಸೈಕಲ್‌ ಯಾತ್ರೆ. ಈ ಯಾತ್ರೆಯ ಮಧ್ಯೆ ಮೂರು ವರ್ಷಗಳ ಹಿಂದೆಯೂ ಹುಬ್ಬಳ್ಳಿಗೆ ಬಂದಿದ್ದರು. ತಿರುಪತಿ ಮೂಲಕ ಮಂಗಳವಾರ ನಗರಕ್ಕೆ ಬಂದ ಅವರು ಬುಧವಾರ ಬೆಳಿಗ್ಗೆ ಇಲ್ಲಿಂದ ಮುಂಬೈಗೆ ಹೊರಟರು.

ಅತ್ಯಾಧುನಿಕ ಉಪಕರಣಗಳು
ಯಾತ್ರೆಯ ಮಹತ್ವದ ಘಟ್ಟಗಳನ್ನು ಫೋಟೊ, ವಿಡಿಯೊ ಮತ್ತು ಮೊಬೈಲ್‌ ಫೋನ್‌ನಲ್ಲಿ ದಾಖಲಿಸಿಕೊಂಡಿದ್ದಾರೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನ ಅಧಿಕಾರಿಗಳ ಮುಂದೆ ಅವುಗಳನ್ನು ಪ್ರಸ್ತುತಪಡಿಸಲು ಮುಂದಾಗಿದ್ದಾರೆ.

‘ಗಿನಿಸ್‌ ದಾಖಲೆಗೆ ಸಂಬಂಧಿಸಿ ಮಾಹಿತಿ ನೀಡುವಂತೆ ಆಹ್ವಾನ ಬಂದಿದೆ. ಇದಕ್ಕಾಗಿ ಮುಂಬೈಗೆ ತೆರಳುತ್ತಿದ್ದೇನೆ. ಅಲ್ಲಿ ಯಾತ್ರೆಗೆ ಮುಕ್ತಾಯ ಹಾಡಲಿದ್ದು ಒಂಬತ್ತು ವರ್ಷಗಳ ನಂತರ ಮನೆಗೆ ತೆರಳಲಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘2008ರ ಜನವರಿ ಒಂದರಂದು ಯಾತ್ರೆ ಆರಂಭಿಸಿದ್ದು ಇಲ್ಲಿಯವರೆಗೆ ತುಳಿದ ದೂರ 2.10 ಲಕ್ಷ ಕಿಲೊಮೀಟರ್ ಆಗಿದೆ. ಅಮೆರಿಕದ 1.25 ಲಕ್ಷ ಕಿಲೊಮೀಟರ್ ಸೈಕಲ್ ತುಳಿದು ದಾಖಲೆ ನಿರ್ಮಿಸಿದ್ದ ಅಮೆರಿಕದ ಜಾನ್ ವಿಲ್ಸನ್ ಅವರ ದಾಖಲೆ ನಾನು ಮುರಿದಿದ್ದೇನೆ.

ಆದ್ದರಿಂದ ಗಿನಿಸ್ ಬುಕ್‌ಗೆ ಸೇರುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ‘ದಾಖಲೆಯಾದರೆ ಸಿಗುವ ಹಣದಿಂದ ಶಾಲೆ ಆರಂಭಿಸಿ ವ್ಯಸನಮುಕ್ತ ಸಮಾಜಕ್ಕಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

‘ಯಾತ್ರೆಗೆ ಇಲ್ಲಿಯ ವರೆಗೆ ಆಗಿರುವ ವೆಚ್ಚ ₹ 1 ಲಕ್ಷ ಮಾತ್ರ. ಏಳು ಬಾರಿ ಸೈಕಲ್‌  ಬದಲಾಯಿಸಿದ್ದು , 45 ಟೈರ್‌, 25 ಟ್ಯೂಬ್‌ ಹಾಕಿದ್ದೇನೆ. ಲ್ಯಾಪ್‌ಟಾಪ್‌ನಲ್ಲಿ ಏಳು ಸಾವಿರ ಫೋಟೊಗಳಿವೆ. ಸಾಕಷ್ಟು ವಿಡಿಯೊಗಳು ಕೂಡ ಇವೆ’ ಎಂದು ಅವರು ವಿವರಿಸಿದರು.

ಮಗಳ ಮದುವೆಗೂ ಹೋಗಲಿಲ್ಲ
ನಿರಂತರ ಯಾತ್ರೆಯಲ್ಲಿರುವುದರಿಂದ ಅಮನ್‌ದೀಪ್ ಅವರಿಗೆ ತಮ್ಮ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. 2012ರ ಜೂನ್‌ 12ರಂದು ಮಗಳು ಅಮನ್‌ಪ್ರೀತ್‌ ಕೌರ್‌ ಅವರ ಮದುವೆ ಬೆಂಗಳೂರಿನಲ್ಲಿ ಆಗಿತ್ತು. ಆಗ ಅಮನ್‌ದೀಪ್‌ ಪಶ್ಚಿಮ ಬಂಗಾಳದಲ್ಲಿದ್ದರು. ಅವರ ಪುತ್ರ ಶರವಣಸಿಂಗ್‌ ಅಮೆರಿಕದಲ್ಲಿ ವೈದ್ಯರಾಗಿದ್ದಾರೆ.

‘ಸ್ವಂತ ಅಡುಗೆ ಮಾಡಿ ಆಹಾರ ಸೇವಿಸುತ್ತೇನೆ. ಹೀಗಾಗಿ ಇಲ್ಲಿ ತನಕ ಅನಾರೋಗ್ಯ ಕಾಡಲಿಲ್ಲ. ಏರು ಪ್ರದೇಶದಲ್ಲಿ ಸೈಕಲ್ ತಳ್ಳಿಕೊಂಡು ಹೋಗುತ್ತೇನೆ. ಬೆಳಿಗ್ಗೆ ಉಪಾಹಾರ ಸೇವಿಸಿ ಹೊರಟರೆ ಮತ್ತೆ ರಾತ್ರಿ ಊಟ. ಮಧ್ಯಾಹ್ನ ತುಂಬಾ ಹಸಿವಾದರೆ ಮಾತ್ರ ಬಿಸ್ಕತ್, ಹಣ್ಣು ಸೇವಿಸುತ್ತೇನೆ’ ಎನ್ನುತ್ತಾರೆ ಅವರು.

*
ದುಶ್ಚಟ ಬಿಡಿಸುವ ಕುರಿತು ಇಲ್ಲಿಯ ವರೆಗೆ ಸಾವಿರಾರು ಶಿಕ್ಷಣ ಸಂಸ್ಥೆಗಳಲ್ಲಿ ಮಾತನಾಡಿದ್ದೇನೆ. ಸಮಾಜದ ಮೇಲೆ ಇದರ ಪರಿಣಾಮ ಆಗುತ್ತದೆ ಎಂಬುದರಲ್ಲಿ ಸಂದೇಹ ಇಲ್ಲ.
-ಅಮನ್‌ದೀಪ್ ಸಿಂಗ್‌,
ಸೈಕಲ್‌ ಯಾತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT