ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಂಪ್ರದಾಯಿಕ ಕೃಷಿಯಿಂದ ಅನುಕೂಲವಾಗದು’

ಜಾಣ್ಮೆಯಿಂದ ಕೃಷಿ ಮಾಡಲು ರೈತರಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಜಿ. ಪಾಟೀಲ ಸಲಹೆ
Last Updated 23 ಮಾರ್ಚ್ 2017, 9:36 IST
ಅಕ್ಷರ ಗಾತ್ರ

ಬೆಳಗಾವಿ: ಸಾವಯವ ಹಾಗೂ ಸಾಂಪ್ರದಾಯಿಕ ಕೃಷಿಗೆ ವ್ಯತ್ಯಾಸವಿದೆ. ರೈತರು ಇದನ್ನು ಅರಿತು ಸಾಂಪ್ರದಾಯಿಕ ಪದ್ಧತಿಯಿಂದ ಹೊರಬರಬೇಕು. ಜಾಣ್ಮೆಯಿಂದ ಕೃಷಿ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವೆಂಕಟರಾಮರೆಡ್ಡಿ ಪಾಟೀಲ ಇಲ್ಲಿ ಸಲಹೆ ನೀಡಿದರು.

ಇಫ್ಕೋ (ಇಂಡಿಯನ್ ಫಾರ್ಮರ್ಸ್‌ ಫರ್ಟಿಲೈಸರ್ಸ್‌ ಕೋ– ಆಪರೇಟಿವ್ ಕಂಪೆನಿ) ತನ್ನ ಭಾರತೀಯ ಸಹಕಾರಿ ಡಿಜಿಟಲ್ ವೇದಿಕೆ ವತಿಯಿಂದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹೊಸ ಕಾಯಿಪಲ್ಲೆ ಮಾರುಕಟ್ಟೆ ಸಮೀಪ ಬುಧವಾರ ಆರಂಭಿಸಿದ ‘ಇಪ್ಕೋ ಬಜಾರ್, ಕಿಸಾನ್ ಸುವಿಧಾ ಕೇಂದ್ರ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಸ್ಥಿತಿಯಲ್ಲಿ ಸಾಂಪ್ರದಾಯಿ ಕೃಷಿಯಿಂದ ಅನುಕೂಲವಾಗುವುದಿಲ್ಲ. ಹಿಂದೆ ದಡ್ಡನಿದ್ದರೆ ಕೃಷಿಗೆ ಹಾಕು ಎನ್ನುತ್ತಿದ್ದರು. ಆದರೆ, ಇಂದು ಜಾಣನಾಗಿದ್ದರೆ ಕೃಷಿಗೆ ಬರಬೇಕು. ದಡ್ಡರಿಗೆ ಇಲ್ಲಿ ಜಾಗವಿಲ್ಲ. ಪ್ರಸ್ತುತ ಮಾರುಕಟ್ಟೆಯನ್ನು ಅರಿತು, ಎಲ್ಲಿ ಮಾರಿದರೆ ಹೆಚ್ಚಿನ ಬೆಲೆ ಸಿಗುತ್ತದೆ, ಯಾವ ರೀತಿಯ ಕೃಷಿ ಮಾಡಬೇಕು ಎನ್ನುವ ಜ್ಞಾನವಿರಬೇಕಾಗುತ್ತದೆ’ ಎಂದು ತಿಳಿಸಿದರು.

ಶೇ 70ರಷ್ಟು ಸಂಶೋಧನೆ ಲ್ಯಾಬ್‌ನಲ್ಲೇ ಇದೆ:‘ಸಮೀಕ್ಷೆಯ ಪ್ರಕಾರ, ಸಂಶೋಧನೆಯ ಪ್ರಯೋಜನ ಜಮೀನುಗಳಿಗೆ ಶೇ 30ರಷ್ಟು ಮಾತ್ರವೇ ತಲುಪಿದೆ. ಶೇ 70ರಷ್ಟು ಇನ್ನೂ ಪ್ರಯೋಗಾಲಯದಲ್ಲಿಯೇ ಇದೆ. ವಿಸ್ತರಣಾ ಕಾರ್ಯ ಸಮರ್ಪಕವಾಗಿ ನಡೆದಿರುವುದು ಇದಕ್ಕೆ. ಇದರ ಭಾಗವಾಗಿ ಸರ್ಕಾರದ ಸೂಚನೆ ಮೇರೆಗೆ ಕಿಸಾನ್‌ ಸುವಿಧಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ರೈತರಿಗೆ ಮಾಹಿತಿಕೊಡಲಾಗುತ್ತಿದೆ’ ಎಂದು ಹೇಳಿದರು.

ಇಫ್ಕೋ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕ ಸಿ.ಎಸ್. ಪಾಟೀಲ ಮಾತನಾಡಿ, ‘1967ರಲ್ಲಿ 50 ವರ್ಷಗಳ ಹಿಂದೆ 57 ಸಹಕಾರಿ ಸಂಘಗಳ₹6 ಲಕ್ಷ ಷೇರು ಬಂಡವಾಳದೊಂದಿಗೆ ಆರಂಭವಾದ ಇಫ್ಕೋ ಪ್ರಸ್ತುತ 36,000 ಸಹಕಾರಿ ಸಂಘಗಳ ಷೇರು ಬಂಡವಾಳವನ್ನು ಹೊಂದಿದೆ. ಸಹಕಾರ ರಂಗದಲ್ಲಿ ಕೆಲಸ ಮಾಡುತ್ತಿರುವುದರಿಂದ ಇಷ್ಟು ಬೃಹತ್ತಾಗಿ ಬೆಳೆದಿದೆ. ರೈತರು, ಸಹಕಾರಿಗಳು ಇಫ್ಕೋದಿಂದ ರಸಗೊಬ್ಬರ, ಔಷಧಿ ಮೊದಲಾದ ಕೃಷಿ ಪರಿಕರಗಳನ್ನು ಖರೀದಿಸುತ್ತಿದ್ದಾರೆ’ ಎಂದು ತಿಳಿಸಿದರು.

ವೈಜ್ಞಾನಿಕವಾಗಿ ಬಳಸುತ್ತಿದ್ದೇವೆಯೇ?: ‘ದೇಶದಲ್ಲಿ ರೈತರು ವಾರ್ಷಿಕ 400 ಟನ್‌ನಷ್ಟು ರಸಗೊಬ್ಬರ ಬಳಸುತ್ತಾರೆ. ಇಫ್ಕೋದಿಂದ ಸಿದ್ಧಪಡಿಸಿದ 85 ಲಕ್ಷ ಟನ್‌ ಹಾಗೂ ಆಮದು ಮಾಡಿಕೊಂಡ 50 ಟನ್ ಸೇರಿ ಒಟ್ಟು 135 ಲಕ್ಷ ಟನ್‌ನಷ್ಟು ಗೊಬ್ಬರವನ್ನು ರೈತರಿಗೆ ಒದಗಿಸಲಾಗುತ್ತಿದೆ.

ರಸಗೊಬ್ಬರ ತಯಾರಿಸಲು ಬೇಕಾದ ಕಚ್ಚಾ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ವಿವಿಧ ದೇಶಗಳಲ್ಲಿ ಅಲ್ಲಿನ ಸರ್ಕಾರಗಳ ಸಹಯೋಗದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲಾಗಿದೆ’ ಎಂದು ಹೇಳಿದರು.

‘ಸರ್ಕಾರವು ವಾರ್ಷಿಕ ₹ 120 ಲಕ್ಷ ಕೋಟಿಯಷ್ಟು ಸಬ್ಸಿಡಿಯನ್ನು ವಿವಿಧ ಕಂಪೆನಿಗಳಿಂದ ರೈತರು ಖರೀದಿಸುವ ರಸಗೊಬ್ಬರಕ್ಕೆ ನೀಡುತ್ತಿದೆ. ಆದರೆ, ಅದನ್ನು ವೈಜ್ಞಾನಿಕವಾಗಿ ಬಳಸುತ್ತಿದ್ದೇವೆಯೇ ಎನ್ನುವ ಕುರಿತು ವಿಚಾರ ಮಾಡಬೇಕಾಗಿದೆ.

ಈ ನಿಟ್ಟಿನಲ್ಲಿ ರೈತರಿಗೆ ಅರಿವು ಮೂಡಿಸಲು ಇಫ್ಕೋದಿಂದ ದೇಶದಾದ್ಯಂತ 1000 ಹಾಗೂ ಕರ್ನಾಟಕದಲ್ಲಿ 30 ಕಿಸಾನ್‌ ಸುವಿಧಾ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ರೈತರು ಬೆಳೆ ವೈವಿಧ್ಯದೊಂದಿಗೆ, ಉಪಕಸುಬುಗಳನ್ನೂ ಮಾಡಿದರೆ ಲಾಭ ಕಾಣಬಹುದು’ ಎಂದರು.

ಕೇಂದ್ರ ಉದ್ಘಾಟಿಸಿದ ಮಾಜಿ ಮೇಯರ್‌ ಸಿದ್ದನಗೌಡ ಪಾಟೀಲ ಮಾತನಾಡಿ, ಕೃಷಿ ಇಲಾಖೆಯಿಂದ ಸಾಕಷ್ಟು ಸೌಲಭ್ಯಗಳು ದೊರಕುತ್ತಿದ್ದು, ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಇದರಿಂದ ಕೃಷಿಯಲ್ಲಿ ಉನ್ನತಿ ಸಾಧಿಸಲು ಸಾಧ್ಯ’ ಎಂದರು.

ಇಪ್ಕೋ ಹುಬ್ಬಳ್ಳಿಯ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಎ.ಎಸ್. ಹರಿಯಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಮಹಾಮಂಡಳದ ದಂಡಿನ ದುಡಗಿ, ರಾಜ್ಯ ಸಹಕಾರ ಮಹಾಮಂಡಳ ಬೆಳಗಾವಿ ವ್ಯವಸ್ಥಾಪಕ ಎ.ಎಚ್‌. ಹುಳ್ಳೇರ, ಸಾಗರ್‌ ಟ್ರಾನ್ಸ್‌ಪೋರ್ಟ್‌ ಪ್ರವರ್ತಕ ಸಾಗರ ಅಮಟೆ ಭಾಗವಹಿಸಿದ್ದರು.

*
ಈಗಾಗಲೇ 3.50 ಲಕ್ಷ ರೈತರ ಮಾಹಿತಿ ಪಡೆಯಲಾಗಿದ್ದು, ವಿವಿಧ ಯೋಜನೆಗಳ ಮಾಹಿತಿಯನ್ನು ಎಸ್‌ಎಂಎಸ್‌ ಮೂಲಕ ತಿಳಿಸಲಾಗುತ್ತಿದೆ. ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ.
-ವೆಂಕಟರಾಮರೆಡ್ಡಿ  ಜಿ.ಪಾಟೀಲ,
ಕೃಷಿ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT