ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಮಾರ್ಗದಲ್ಲಿ ಮುನ್ನಡೆಯಿರಿ

ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಯುಕೆಪಿಯ ವಿಶೇಷ ಜಿಲ್ಲಾಧಿಕಾರಿ ಕರಿಗೌಡ ಸಲಹೆ
Last Updated 23 ಮಾರ್ಚ್ 2017, 9:58 IST
ಅಕ್ಷರ ಗಾತ್ರ

ಬಾಗಲಕೋಟೆ: ಸಂವಿಧಾನ ಶಿಲ್ಪಿ ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ತತ್ವಗಳನ್ನು ಇಂದಿನ ಯುವ ಸಮುದಾಯ ಅನುಸರಿಸಬೇಕು ಎಂದು ಯುಕೆಪಿಯ ವಿಶೇಷ ಜಿಲ್ಲಾಧಿಕಾರಿ ಕರಿಗೌಡ ಹೇಳಿದರು.

ನವನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳು ಹಾಗೂ ಪ್ರಸ್ತುತತೆ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಜೀವನದಲ್ಲಿ ಆದರ್ಶವಾಗುವ ವ್ಯಕ್ತಿ ಎಂದರೆ ಅಂಬೇಡ್ಕರ್. ಅವರು ಯುವಕರಿಗೆ ನಿಜವಾದ ಆದರ್ಶ ಪ್ರಾಯವಾಗಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯಬೇಕು. ಮಹಿಳಾ ಶಿಕ್ಷಣ, ಮಹಿಳೆಯರ ಹೆರಿಗೆ ಭತ್ಯೆ, ಉದ್ಯೋಗ ಭದ್ರತೆ ಮುಂತಾದ ಹತ್ತು ಹಲವು ಕಾನೂನುಗಳನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಜಾತಿ ವಿನಾಶದ ಬಗ್ಗೆ ಅಂಬೇಡ್ಕರ್ ಅವರು ಪ್ರಬಂಧ ಬರೆದಿದ್ದು, ಅದು 100 ಸಂಶೋಧನಾ ಪ್ರಬಂಧಗಳಿಗೆ ಸಮಾನವಾಗಿದೆ. ಇಂದಿನ ಯುಗದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಸಾಮಾಜಿಕ ಜಾಲತಾಣದಿಂದ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೇಶದ ಇತಿಹಾಸ ತಿಳಿದುಕೊಳ್ಳಲು ಅವರ 13 ಸಂಪುಟಗಳನ್ನು ಓದಿ ಅರಿತುಕೊಳ್ಳಬೇಕು. ಅವರು ಹಾಕಿಕೊಟ್ಟ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಾಹಿತಿ ಪ್ರಕಾಶ ಖಾಡೆ ಮಾತನಾಡಿ, ಇಂದು ಸಮಾಜ ಪ್ರತಿಯೊಬ್ಬ ಮಹಾ ಪುರುಷರನ್ನು ಒಂದು ಜಾತಿಗೆ ತಳಕು ಹಾಕುತ್ತಿದ್ದಾರೆ. ಇದರಿಂದ ಜನರಲ್ಲಿ ಪ್ರೀತಿ ವಿಶ್ವಾಸ ಕಡಿಮೆಯಾಗುತ್ತಿದೆ. ಜಾತಿ, ಅಸಮಾನತೆ, ಅಂತಸ್ತು ಹಾಗೂ ವರ್ಗಗಳನ್ನು ತೊಡೆದು ಹಾಕಬೇಕು. ಯುವ ಸಮುದಾಯ ಕಡ್ಡಾಯವಾಗಿ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ವಿಶ್ವ ಮಾನವ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಪ್ರೊ. ವಸಂತ ಗಾಣಿಗೇರ ಮಾತನಾಡಿ,  ಡಾ.ಅಂಬೇಡ್ಕರ್ ಅವರು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿ. ದೇಶದಲ್ಲಿ ಸಮಾನತೆಯ ಕನಸು ಕಂಡಿದ್ದ ಅವರು ಅದಕ್ಕಾಗಿಯೇ ತಮ್ಮ ಬದುಕನ್ನು ಮೀಸಲಿಟ್ಟವರು ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇೇಶಕ ಮಂಜುನಾಥ ಸುಳ್ಳೊಳ್ಳಿ ಮಾತನಾಡಿದರು. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಬಿ.ಕಂಚಿ ಅಧ್ಯಕ್ಷತೆ ವಹಿಸಿದ್ದರು. ಎಫ್.ಎಲ್.ಬನಶಂಕರಮ್ಮ ಸ್ವಾಗತಿಸಿದರು. ರೂಬಿನಾ ಮುದ್ದೇಬಿಹಾಳ ನಿರೂಪಿಸಿದರು.

*
ಸಮಾನತೆಗಾಗಿ ಹೋರಾಟ ಮಾಡಿದವರು ಅಂಬೇಡ್ಕರ್. ಅವರನ್ನು ಒಂದು ವರ್ಗಕ್ಕೆ ಸೀಮಿತ ಮಾಡಬಾರದು. ಅವರ ಮಾರ್ಗದರ್ಶನ ಎಲ್ಲ ವರ್ಗಕ್ಕೂ ಅವಶ್ಯವಾಗಿದೆ.
-ಕರಿಗೌಡ,
ಯುಕೆಪಿಯ ವಿಶೇಷ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT