ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಸಂಕುಲಕ್ಕೆ ಕುತ್ತು ಬರುವ ಸಾಧ್ಯತೆ: ಆತಂಕ

ಭಾರತೀಯ ವಿಜ್ಞಾನ ಸಂಸ್ಥೆಯಿಂದ ಅಘನಾಶಿನಿ ನದಿ ಉತ್ಪನ್ನ ಹಾಗೂ ಸೇವೆಯ ಸುಸ್ಥಿರ ಬಳಕೆ ಕಾರ್ಯಕ್ರಮ
Last Updated 23 ಮಾರ್ಚ್ 2017, 10:05 IST
ಅಕ್ಷರ ಗಾತ್ರ

ಕುಮಟಾ: ‘ಸುಮಾರು 280 ಲಕ್ಷ ವರ್ಷಗಳಷ್ಟು ಹಳೆಯ, ಹಿಮಾಲಯ ಪರ್ವತಕ್ಕಿಂತ ಹಿಂದಿನ ಅಘನಾಶಿನಿ ನದಿ ಅಳಿವೆಯಲ್ಲಿ ಕೇವಲ ಎರಡು ವರ್ಷ ಕಾಲ ಉಸುಕು, ಚಿಪ್ಪಿ ತೆಗೆಯುವುದನ್ನು ನಿಲ್ಲಿಸಿದರೆ 20 ಸಾವಿರ ಟನ್ ಗಳಷ್ಟು ಬೆಳಚು ಬೆಳೆಯುತ್ತದೆ’ ಎಂದು ಸಸ್ಯ ವಿಜ್ಞಾನಿ ಡಾ.ಎಂ.ಡಿ. ಸುಭಾಷ್‌ ಚಂದ್ರ ಹೇಳಿದರು.

ಅಘನಾಶಿನಿ ನದಿ ಉತ್ಪನ್ನ ಹಾಗೂ ಸೇವೆಯ ಸುಸ್ಥಿರ ಬಳಕೆ ಬಗ್ಗೆ ಕುಮಟಾದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತಿನ ಅತಿ ವಿರಳ ಅರಣ್ಯ ಎನಿಸಿಕೊಂಡಿರುವ ಪಶ್ಚಿಮ ಘಟ್ಟ ಪ್ರದೇಶದ ಮೂಲಕ ಹರಿದು ಬರುವ ಅಘನಾಶಿನಿ ನದಿ ಸಮುದ್ರ ಸೇರುವ ಅಳಿವೆಯಲ್ಲಿ ಜಲಚರಗಳಿಗೆ ಸಮೃದ್ಧ ಆಹಾರ ಒದಗಿಸುತ್ತದೆ. ಅಘನಾಶಿನಿ ಅಳಿವೆಯಲ್ಲಿ ಮನುಷ್ಯರ ತಿನ್ನುವ ಸುಮಾರು ಎಂಟು ಜಾತಿಯ ಬೆಳಚು ಸಿಗುತ್ತವೆ. ಉಪ್ಪು ನೀರು ಇದ್ದರೆ ಮಾತ್ರ ಅಲ್ಲಿ ಜಲಚರಗಳು ಹೆಚ್ಚೆಚ್ಚು ಬೆಳೆಯುತ್ತವೆ.

ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ  ನದಿಯ ಬೆಳಚು, ಮೀನು, ಸಿಗಡಿ, ಏಡಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹೆಚ್ಚಿನ ಮೀನು ಸಂತತಿಗಳು ಸಮುದ್ರದಲ್ಲಿ ಮೊಟ್ಟೆ ಇಟ್ಟು ಆಹಾರ ಹುಡುಕಿ ಅಳಿವೆ ಪ್ರದೇಶಕ್ಕೆ ಬರುತ್ತವೆ ಎಂದರು.

ವಾತಾವರಣದಲ್ಲಿ ಉಷ್ಣತೆ  ಕೂಡ ಹೆಚ್ಚಾಗಿ ಸಮುದ್ರ  ನೀರಿನ ಮಟ್ಟ ಏರುತ್ತಿದೆ. ಅಘನಾಶಿನಿ ನದಿ ಸಮುದ್ರ ಸೇರುವ ತದಡಿ ಪ್ರದೇಶದಲ್ಲಿ ಸರ್ಕಾರಿಂದ  ಬಂದರು ಅಭಿವೃದ್ಧಿ ಯೋಜನೆ ಜಾರಿಗೆ  ಬಂದರೆ ಭಾರವಾದ ಹಡಗುಗಳು ಓಡಾಡುವಂತೆ ಅಳಿವೆಯಲ್ಲಿ ಹತ್ತಾರು ಮೀಟರ್ ಆಳ ಮಾಡಲಾಗುತ್ತದೆ. ಆಗ ಜಲ ಸಂಕುಲಕ್ಕೆ ಕುತ್ತು ಬರುತ್ತದೆ ಎಂದು ವಿಷಾದಿಸಿದರು.

ಸಮುದ್ರ, ನದಿ  ಅಂಚಿಗೆ ಕಾಂಡ್ಲಾ ಗಿಡ, ಮುಂಡಿಗೆ ಹುಲ್ಲು ಮುಂತಾದವುಗಳನ್ನು ಬೆಳೆಸಿದರೆ ದಡ ಕೊರೆತ ತಡೆಯಬಹುದಾಗಿದೆ. ಹಿಂದೆ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಮಹಾತ್ಮಗಾಂಧಿ ಇಲ್ಲಿಗೆ ಬಂದು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಆದರೆ ಈಚೆಗೆ ತೀವ್ರ ಶೋಷಣೆ ಗೊಳಗಾಗುತ್ತಿರುವ ಅಘನಾಶಿನಿ ನದಿಯ ಸೇವೆ, ಉತ್ಪನ್ನಗಳ ಸುಸ್ಥಿರ ಬಳಕೆಯ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಕೃಷಿ–ಕೈಗಾರಿಕಾ ಸಮಿತಿ ಅಧ್ಯಕ್ಷ ಶಿವಾನಂದ  ಹೆಗಡೆ  ‘ಮನುಷ್ಯನ ಆಕ್ರಮಣಕಾರಿ ಮನೋಭಾವಕ್ಕೆ ಪರಿಸರ ಬಲಿಯಾಗದಂತೆ ತಡೆಯುವ ಪ್ರಯತ್ನಗಳು ನಡೆಯಬೇಕಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರದೀಪ ನಾಯಕ,  ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರನ್,  ಎಂ.ಆರ್‌.ಹೆಗಡೆ,  ಮಂಗಲ್ ಶೆಟ್ಟಿ ವೇದಿಕೆಯಲ್ಲಿದ್ದರು. ದೀಪ್ತಿ ಹೆಬ್ಬಾಲೆ ನಿರೂಪಿಸಿದರು. ಸಚಿನ್ ಹೆಗಡೆ ಸ್ವಾಗತಿಸಿದರು. ಅಘನಾಶಿನಿ ನದಿ ತೀರದ ವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ದಾಖಲಿಸಿದರು.

*
ಇತ್ತೀಚೆಗೆ ಎಷ್ಟೋ ದಶಲಕ್ಷ ಟನ್ ಗಳಷ್ಟು ಕಾರ್ಬನ್ ಅಘನಾಶಿನಿ ನದಿ ಅಳಿವೆ ಪ್ರದೇಶದಲ್ಲಿ ಸಂಗ್ರಹವಾಗಿರುವ ಕಾರಣ ಜಲಚರಗಳ ಆಹಾರಕ್ಕೆ ಕುತ್ತುಂಟಾಗಿದೆ.
-ಡಾ.ಎಂ.ಡಿ. ಸುಭಾಷ್‌ ಚಂದ್ರ,
ಸಸ್ಯ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT