ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡು ಮನಸ್ಥಿತಿಯ ‘ಕಥಾನಾಯಕಿ’

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಜನಪ್ರಿಯ ಅಥವಾ ಒಳ್ಳೆಯ ನಿರ್ದೇಶಕರ ಜೊತೆ ಕೆಲಸ ಮಾಡುವುದೇ ಒಂದು ಸೌಭಾಗ್ಯ ಎಂದುಕೊಳ್ಳುವ ಮನಸ್ಥಿತಿ ನನ್ನದಲ್ಲ’. ಅಕ್ಷತಾ ಪಾಂಡವಪುರ ಅವರ ಮಾತು ನೇರವಾಗಿತ್ತು ಹಾಗೂ ಅವರ ನೇರವಂತಿಕೆಯನ್ನು ಸೂಚಿಸುವಂತಿತ್ತು.

‘ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ’ದ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಎರಡನೇ ಪ್ರಶಸ್ತಿ ಪಡೆದ ‘ಪಲ್ಲಟ’ ಸಿನಿಮಾದ ಕಥಾನಾಯಕಿ ಈ ಅಕ್ಷತಾ. ತನಗೆ ಅನಿಸಿದ್ದನ್ನು ಗಟ್ಟಿ ದನಿಯಲ್ಲಿ ಹೇಳಿಬಿಡುವುದು ಅವರಿಗೆ ಅಭ್ಯಾಸ. ತಾನೇನು ಮಾಡುತ್ತಿದ್ದೇನೆ, ಏನು ಮಾತನಾಡುತ್ತಿದ್ದೇನೆ ಎಂಬ ಸ್ಪಷ್ಟತೆ ಇರುವ ಅವರು ತಮ್ಮ ನೇರ ಮಾತುಗಳಿಂದ ಕಷ್ಟ–ನಷ್ಟ ಅನುಭವಿಸಿದ್ದಾರಂತೆ.

‘ಇಷ್ಟಕಾಮ್ಯ’ ಚಿತ್ರದಲ್ಲಿ ತೆಂಗಿನ ಮರ ಹತ್ತುವ ಒಂದು ಚಿಕ್ಕ ಪಾತ್ರ ಮಾಡಿದ್ದ ಅಕ್ಷತಾಗೆ ತೆರೆಯ ಮೇಲೆ ತಾನು ಯಾರೆಂದೇ ಗೊತ್ತಾಗದ ಸ್ಥಿತಿ ನಿರ್ಮಾಣವಾಗಿತ್ತಂತೆ. ‘ಪಲ್ಲಟ’ ಸಿನಿಮಾ ನನಗೆ ಮೊದಲೇ ದೊರೆತಿದ್ದರೆ ‘ಇಷ್ಟಕಾಮ್ಯ’ದಲ್ಲಿ ನಟಿಸುತ್ತಲೇ ಇರಲಿಲ್ಲ’ ಎಂದರು ಅಕ್ಷತಾ.

ನಿರ್ದೇಶಕ ರಘು ಎಸ್.ಪಿ. ಅವರು ತಮ್ಮ ‘ಪಲ್ಲಟ’ ಚಿತ್ರಕ್ಕಾಗಿ ನಟಿಯ ಹುಡುಕಾಟ ನಡೆಸಿದ್ದಾಗ, ರಂಗಾಯಣದ ಒಬ್ಬರು ಅಕ್ಷತಾ ಹೆಸರು ಸೂಚಿಸಿದ್ದು. ‘ಹುಡುಗಿ ಸ್ಟೈಲಿಷ್ ಆಗಿದ್ದಾಳೆ, ಪಾತ್ರಕ್ಕೆ ಹೊಂದಿಕೊಳ್ಳುತ್ತಾಳಾ ಎಂದೆಲ್ಲ ನಿರ್ದೇಶಕರು ಯೋಚನೆ ಮಾಡಲಿಲ್ಲ. ಪಾಂಡವಪುರದ ಹುಡುಗಿ, ರಂಗಭೂಮಿಯ ಹಿನ್ನೆಲೆ ಇದೆ, ಹಾಗಾಗಿ ನಟನೆ ತೆಗೆಸಬಹುದು ಎಂದು ನಂಬಿದರು. ಅದೇ ಖುಷಿಗೆ ನಾನು ಪಾತ್ರವನ್ನು ಒಪ್ಪಿಕೊಂಡುಬಿಟ್ಟೆ’ ಎನ್ನುವಾಗ ಅಕ್ಷತಾ ಅವರ ದನಿಯಲ್ಲಿ ಖುಷಿಯ ಸೆಳಕೊಂದು ಕಾಣಿಸಿಕೊಳ್ಳುತ್ತದೆ.

‘ಪಲ್ಲಟ’ ಚಿತ್ರದಲ್ಲಿ ಅಕ್ಷತಾ ಪದವಿ ಓದುವ ದಲಿತ ಹುಡುಗಿ. ತಂದೆ ತಮಟೆ ಬಾರಿಸಿ ಜೀವನ ಸಾಗಿಸುತ್ತಿರುವವನು. ಅಪ್ಪನ ವೃತ್ತಿ ಮಗಳಿಗೆ ಇಷ್ಟವಿಲ್ಲ. ಪುಡಿಕಾಸಿಗಾಗಿ ಅವರಿವರ ಮನೆಯ ಮುಂದೆ ಕೈ ಚಾಚಿ ನಿಲ್ಲುವುದು ಕೊನೆಯಾಗಬೇಕು ಎನ್ನುವುದು ತಂದೆಗೆ ಮಗಳ ಬುದ್ಧಿವಾದ. ತಾನು ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಾ ಓದಿನ ಜೊತೆಗೆ ತಂದೆಯನ್ನೂ ನೋಡಿಕೊಳ್ಳುವ ಬುದ್ಧಿವಂತ ಹೆಣ್ಣುಮಗಳು ‘ಪಲ್ಲಟ’ದ ನಾಯಕಿ.

ಹಾರೋಹಳ್ಳಿಯ ಅಕ್ಷತಾ ಪಾಂಡವಪುರದಲ್ಲಿ ಪಿಯುಸಿವರೆಗೂ ಓದಿ, ನಂತರ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಮೈಸೂರಿಗೆ ತೆರಳಿದರು. ಅಲ್ಲೇ ಕೆಲ ದಿನ ಟೆಲಿಕಾಲರ್ ಆಗಿಯೂ ದುಡಿದರು. ಮತ್ತೆ ಜೀವನ ನಿರ್ವಹಣೆಗಾಗಿ ನೃತ್ಯ ಸಂಯೋಜನೆ, ನಿರೂಪಣೆಯ ಕೆಲಸ ಆರಂಭಿಸಿದರು. ಕಾಲೇಜಿನ ಕೊನೆಯ ಎರಡು ವರ್ಷಗಳಲ್ಲಿ ಮೈಸೂರು ರಂಗಾಯಣದ ಸಹವಾಸಕ್ಕೆ ಒಳಗಾಗಿ, ನಾಟಕಗಳಲ್ಲಿ ಬಣ್ಣಹಚ್ಚಿದರು. ತಂದೆ ಪೌರಾಣಿಕ ನಾಟಕಗಳಲ್ಲಿ ನಟಿಸುತ್ತಿದ್ದುದರಿಂದ ಅಕ್ಷತಾಗೂ ನಟನೆಯಲ್ಲಿ ಆಸಕ್ತಿ ಸಹಜವಾಗಿಯೇ ಇತ್ತು.

ಮೊದಲ ಬಾರಿ ನಾಟಕದಲ್ಲಿ ಅಕ್ಷತಾ ಅಭಿನಯಿಸಿದ್ದು ಸೂತ್ರಧಾರನ ಪಾತ್ರವನ್ನು. ಅದುವರೆಗೂ, ಇಂಗ್ಲಿಷ್ ಬಾರದ ಈ ಹಳ್ಳಿ ಹುಡುಗಿಯನ್ನು ಕಾಲೇಜಿನಲ್ಲಿ ಯಾರೂ ವಿಶೇಷವಾಗಿ ಮಾತನಾಡಿಸಿದ್ದಿಲ್ಲ. ಆದರೆ ನಾಟಕದಲ್ಲಿನ ಅಭಿನಯವನ್ನು ನೋಡಿ ತನ್ನ ಬಗ್ಗೆ ಜನ ಮಾತನಾಡುವುದರಿಂದ ಪುಳಕಗೊಂಡ ಅಕ್ಷತಾ, ‘ಇದರಲ್ಲೇನೋ ಇದೆ’ ಎಂಬುದನ್ನು ಗಮನಿಸಿದರು; ರಂಗಭೂಮಿಯತ್ತ ವಿಶೇಷ ಆಸಕ್ತಿ ಬೆಳೆಸಿಕೊಂಡರು.

ನಾಟಕ, ಕಥೆ, ಕವಿತೆಗಳನ್ನೂ ಅಕ್ಷತಾ ಬರೆಯುತ್ತಾರೆ. ಆದರೆ ಬರವಣಿಗೆ ತನ್ನ ಅಭಿವ್ಯಕ್ತಿ ಮಾರ್ಗ ಅಲ್ಲ ಎನ್ನುವ ಅವರಿಗೆ, ನಟಿಯಾಗಿಯೇ ಗುರ್ತಿಸಿಕೊಳ್ಳುವ ಹಂಬಲ.

ಪತ್ರಿಕೋದ್ಯಮ ಪದವಿ ಮುಗಿಸಿದ ತಕ್ಷಣ ಒಂದು ವರ್ಷ ‘ನೀನಾಸಮ್’ನಲ್ಲಿ ಅಭ್ಯಾಸ ಮಾಡಿದರು. ಅಲ್ಲಿಂದ ನೇರ ದೆಹಲಿಯ ‘ಎನ್ಎಸ್‌ಡಿ’ಗೆ ತೆರಳಿ ಮೂರು ವರ್ಷ ನಟನೆಯಲ್ಲಿ ಪರಿಣತಿ ಪಡೆದರು. ತಾನು ಏನು ಮಾಡಬೇಕು, ಮಾಡಬಾರದು ಎಂಬುದು ಚೆನ್ನಾಗಿ ಗೊತ್ತಾದಾಗ ಮಾತ್ರ ಪರಿಪೂರ್ಣ ನಟನೆ ಸಾಧ್ಯ ಎಂಬುದು ‘ಎನ್ಎಸ್‌ಡಿ’ಯಲ್ಲಿ ಅವರು ಕಂಡುಕೊಂಡ ಸತ್ಯ.

ಯಾವುದೋ ಒಂದು ವಿಷಯದ ಕುರಿತು ಏಕಪಾತ್ರಾಭಿನಯ ಮಾಡುತ್ತಾ, ಪ್ರೇಕ್ಷಕರೊಂದಿಗೆ ಸಂವಾದದ ರೂಪದಲ್ಲಿ ಪ್ರಸ್ತುತಪಡಿಸುವುದು ಅಕ್ಷತಾ ನೆಚ್ಚಿನ ಶೈಲಿ. ನಾಟಕಗಳಿಗಿಂತ ಹೆಚ್ಚಾಗಿ ಏಕವ್ಯಕ್ತಿ ಪ್ರದರ್ಶನಗಳನ್ನೇ ಅವರು ಮಾಡುತ್ತಿರುತ್ತಾರೆ. ‘ಸಿನಿಮಾ ನಟನೆಗೆ ರಂಗಭೂಮಿ ಹೆಚ್ಚು ಸಹಕಾರಿಯಲ್ಲ. ಒಂದೆರಡು ಸಿನಿಮಾ ಮಾಡಿದಾಗಲೇ ಅಲ್ಲಿನ ಒಳಸುಳಿ ಅರ್ಥವಾಗುವುದು. ಆದರೆ ರಂಗಭೂಮಿ ನನಗೆ ಸಹಿಷ್ಣುತೆ, ಪಾತ್ರದ ನಿರ್ವಹಣೆ ಬಗೆಗಿನ ವಿಶ್ವಾಸವನ್ನು ಕರುಣಿಸಿದೆ’ ಎನ್ನುತ್ತಾರೆ.ನಾಟಕ ಮತ್ತು ಸಿನಿಮಾದಲ್ಲಿ ಅಭಿನ

ಯಕ್ಕೆ ಇರುವ ವ್ಯತ್ಯಾಸವನ್ನು ಕಡಿಮೆ ಅವಧಿಯಲ್ಲೇ ಕಂಡುಕೊಂಡಿರುವ ಅಕ್ಷತಾ ಕೆಲವು ತಂತ್ರಗಳಿಂದ ಈ ತೊಡಕನ್ನು ನಿರ್ವಹಿಸುತ್ತಾರೆ. ‘ಕ್ಯಾಮೆರಾ ಮುಂದೆ ಸಟಲ್ ಆಗಿ ನಟಿಸುತ್ತೇವೆ. ನಾಟಕದಲ್ಲಿ ಎಲ್ಲರನ್ನೂ ತಲುಪುವ ಉದ್ದೇಶದಿಂದ ಬೆನ್ನುಹುರಿಯನ್ನು ಸೆಟೆದುಕೊಂಡಿರುತ್ತೇವೆ’ ಎನ್ನುತ್ತಾರೆ.

ನಾಟಕ ಒಮ್ಮೆ ಆರಂಭವಾದರೆ ಮುಗಿದ ನಂತರವೇ ಬಣ್ಣ, ವೇಷ ತೆಗೆಯುವುದು. ಸಿನಿಮಾ ಹಾಗಲ್ಲ. ಚಿತ್ರೀಕರಣ ಹಿಂದುಮುಂದಾಗಿರುತ್ತದೆ. ಈ ಕಾರ್ಯಶೈಲಿ ಅಕ್ಷತಾಗೆ ‘ಪಲ್ಲಟ’ದಲ್ಲಿ ಏಟು ಕೊಟ್ಟಿದೆ. ಕೆಲವು ಕಡೆಗಳಲ್ಲಿ ತಾನು ಭಾವನೆಗಳನ್ನು ದಾಟಿಸುವಲ್ಲಿ ಯಶಸ್ವಿಯಾಗಿಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ತಂದೆ ಸತ್ತಾಗ ಇರುವ ಭಾವನೆಯು ಸಂಸ್ಕಾರ ಮಾಡುವವರೆಗೂ ಮುಂದುವರಿಯಬೇಕು. ಆದರೆ ದೃಶ್ಯೀಕರಣ ಹಿಂದುಮುಂದಾದಾಗ ಅಭಿವ್ಯಕ್ತಿಯಲ್ಲಿ ಎಡವಟ್ಟಾಗಿರುವುದನ್ನು ಉದಾಹರಿಸುತ್ತಾರೆ. ಇದನ್ನು ನಿವಾರಿಸಿಕೊಳ್ಳುವುದು ಕಷ್ಟವಲ್ಲ ಎಂಬುದೂ ಅವರಿಗೆ ತಿಳಿದಿದೆ. ‘ನಟನೆಯಲ್ಲಿ ವೈವಿಧ್ಯ ಸಾಧಿಸುವುದು ಕಷ್ಟವಲ್ಲ. ತಾನು ಒಂದು ಪಾತ್ರ ನಿಭಾಯಿಸುತ್ತಿದ್ದೇನೆ, ಸಿನಿಮಾ ಬಿಡುಗಡೆ ಆದಾಗ ಜನರು ಅದರ ಕುರಿತು ಮಾತನಾಡುತ್ತಾರೆ ಎಂಬುದನ್ನೆಲ್ಲ ತಲೆಯಿಂದ ತೆಗೆದು, ಆ ಕ್ಷಣದಲ್ಲಿ ಎದುರಾಗುವ ಸನ್ನಿವೇಶಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದರೆ ಸಾಕು’ ಎಂಬ ಪಾಠವನ್ನು ರಂಗಭೂಮಿಯಿಂದ ಕಲಿತಿದ್ದಾರೆ.

ಸಿನಿಮಾದಲ್ಲಿನ ‘ನಾಯಕಿ’ ಪದದ ಬಗೆಗೆ ಅಕ್ಷತಾಗೆ ತಕರಾರಿದೆ. ‘ಕಲೆಯ ವಿಚಾರದಲ್ಲಿ ನಾಯಕ, ನಾಯಕಿ ಎಂಬುದಿಲ್ಲ. ಕಥಾನಾಯಕ, ಕಥಾನಾಯಕಿ ಇಷ್ಟೇ ಇರುತ್ತಾರೆ. ಅವರೂ ಎಲ್ಲರಂತೆ ಕಲಾವಿದರು’ ಎಂದು ಆವೇಶದಿಂದ ಅಸಮಾಧಾನ ಹೊರಹಾಕುತ್ತಾರೆ. ‘ನಾಯಕನಿಗೆ ಪೂರಕವಾಗಿ ಒಂದೆರಡು ಹಾಡು, ದೃಶ್ಯಗಳಲ್ಲಿ ನಟಿಸುವವರಿಗೆ ನಾಯಕಿ ಎನ್ನುತ್ತಿದ್ದೇವೆ. ನಾನು ಅಂಥ ಪಾತ್ರಗಳನ್ನೆಲ್ಲ ಮಾಡುವುದಿಲ್ಲ. ಕಥೆಗೆ ನಾಯಕಿಯಾದರೆ ಮಾತ್ರ ನಟಿಸುತ್ತೇನೆ’ ಎನ್ನುತ್ತಾರೆ.

ತಾನು ಯಾವ ಹಾದಿಯಲ್ಲಿ ಮುಂದುವರೆಯಬೇಕು ಎಂಬುದನ್ನು ನಿರ್ಧರಿಸಿಕೊಂಡಿರುವ ಅಕ್ಷತಾ ‘ಪಲ್ಲಟ’ದ ನಂತರದ ಕೆಲವು ಸಿನಿಮಾ ಅವಕಾಶಗಳನ್ನು ಒಪ್ಪಿಕೊಳ್ಳಲಿಲ್ಲ. ‘ನಿರೀಕ್ಷೆಯಷ್ಟು ಒಳ್ಳೆಯ ಪಾತ್ರಗಳು ಬಂದಿಲ್ಲ. ರಂಗಭೂಮಿ ನನ್ನ ಮೊದಲ ಆದ್ಯತೆ. ಅದೇ ಕಾರಣಕ್ಕೆ ಧಾರಾವಾಹಿಗಳಿಂದಲೂ ದೂರ’ ಎಂದು ಆಯ್ಕೆಯ ಮಾತನಾಡುತ್ತಾರೆ. ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲಿ ಒಂದು ಖಡಕ್ ಪಾತ್ರ ನಿರ್ವಹಿಸುವ ಆಸೆ ಅವರದ್ದು. ಪ್ರಶಸ್ತಿ ಪುರಸ್ಕೃತ ನಿರ್ದೇಶಕರೊಬ್ಬರ ಜೊತೆ ಶೀಘ್ರ ಒಂದು ಸಿನಿಮಾ ಸೆಟ್ಟೇರುವ ಸಿದ್ಧತೆಯೂ ನಡೆಯುತ್ತಿದೆ.

***

ಡಬ್ಬಿಂಗ್‌ನಲ್ಲಿ ಅಸಹಜತೆ!

ಸಾಮಾನ್ಯವಾಗಿ ಮಂಡ್ಯ ಶೈಲಿಯಲ್ಲಿ ಮಾತನಾಡುವುದು ಅಕ್ಷತಾ ಅವರಿಗೆ ಸಲೀಸು. ‘ಇಷ್ಟಕಾಮ್ಯ’ ಚಿತ್ರದ ಡಬ್ಬಿಂಗ್ ಸಂದರ್ಭದಲ್ಲಿ – ‘ಮಂಡ್ಯದ ಗೌಡರ ಹುಡುಗಿ ಕೈಲಿ ಮಲೆನಾಡಿನ ಹವ್ಯಕ ಭಾಷೆ ಮಾತನಾಡಿಸ್ತಾರಲ್ಲ’ ಎಂದು ಗೊಣಗಿದ್ದರಂತೆ. ‘ಆಯ್ತಾಯ್ತು. ನಾನೂ ಮಂಡ್ಯದ ಗೌಡನೇ. ಮಾತಾಡು ಪರವಾಗಿಲ್ಲ’ ಎಂಬ ಸೂಚನೆ ಎದುರಾಯಿತಂತೆ. ‘ಡಬ್ಬಿಂಗ್‌ನಲ್ಲಿ ಸಹಜತೆ ಇರುವುದಿಲ್ಲ. ಅದು ತನಗೆ ಕಷ್ಟ’ ಎನ್ನುವ ಅನಿಸಿಕೆ ಅವರದು.

‘ಇಷ್ಟಕಾಮ್ಯ’ದ ಮತ್ತೊಂದು ತಮಾಷೆಯ ಘಟನೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ. ಚಿತ್ರೀಕರಣ ನೋಡುವಾಗ ಬೇರೆ ಕಲಾವಿದರು ಮೂರು ನಾಲ್ಕು ಟೇಕ್ ತೆಗೆದುಕೊಳ್ಳುವುದನ್ನು ಗಮನಿಸಿದ್ದ ಅಕ್ಷತಾ, ‘ತನಗೂ ಅಷ್ಟು ಅವಕಾಶಗಳು ಸಿಗುತ್ತವೆ. ಒಂದೊಂದು ಟೇಕ್‌ನಲ್ಲಿ ಒಂದೊಂದು ರೀತಿಯ ಅಭಿನಯ ಕೌಶಲ್ಯ ಪ್ರದರ್ಶಿಸಬೇಕು’ ಎಂದುಕೊಂಡಿದ್ದರು. ಆದರೆ ಇವರ ಸರದಿ ಬಂದಾಗ ಒಂದೇ ಟೇಕ್‌ಗೆ ನಿರ್ದೇಶಕರು ‘ಓಕೆ’ ಎನ್ನಬೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT