ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯಪೂರ್ವಕ ಜಿಗಿತ!

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

* ನಿರ್ದೇಶಕಿಯಾಗಬೇಕೆಂದು ಅನಿಸಿದ್ದು ಯಾವಾಗ?

ಚಿತ್ರರಂಗಕ್ಕೆ ಬಂದಾಗಲೇ ನಿರ್ದೇಶಕಿಯಾಗಬೇಕು ಅನಿಸಿತ್ತು. ಅದಕ್ಕೆ ಪೂರಕವಾಗಿ ನಟನೆಯ ಜೊತೆಗೆ ಸಿನಿಮಾ ತಂತ್ರಜ್ಞಾನದತ್ತಲೂ ಗಮನ ಹರಿಸಿದ್ದೆ. ಆದರೆ, ನಾನೂ ನಿರ್ದೇಶಕಿಯಾಗಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿಸಿದ್ದು ವಿಷ್ಣುವರ್ಧನ್.  ‘ಮಂಗಳ ಸೂತ್ರ’ ಚಿತ್ರದ ಶೂಟಿಂಗ್ ವೇಳೆ ಇಬ್ಬರಿಗೂ, ಸಹಾಯಕ ನಿರ್ದೇಶಕರು ಸ್ಕ್ರಿಪ್ಟ್ ಕೈಗಿಟ್ಟು ಹೋದರು. ಅದನ್ನು ಓದಿದ ಮೇಲೆ, ‘ಈ ದೃಶ್ಯವನ್ನು ಹೀಗೂ ಸ್ವಲ್ಪ ಬದಲಾಯಿಸಬಹುದಾ ನೋಡಿ ಸರ್’ ಎಂದು ಸ್ನೇಹಪೂರ್ವಕವಾಗಿ ವಿಷ್ಣುವರ್ಧನ್ ಅವರಿಗೆ ಹೇಳಿದೆ. ಆಗವರು, ‘ಸಿನಿಮಾ ಬಗ್ಗೆ ಇಷ್ಟೊಂದು ತಿಳಿದುಕೊಂಡಿರುವ ನೀವು ಯಾಕೆ ನಿರ್ದೇಶನ ಮಾಡಬಾರದು’ ಎಂದಿದ್ದರು. ಅವರಾಡಿದ ಮಾತುಗಳು ನನ್ನೊಳಗಿದ್ದ ನಿರ್ದೇಶನದ ಕನಸಿಗೆ ಮತ್ತಷ್ಟು ಜೀವ ತುಂಬಿದವಲ್ಲದೆ, ಆತ್ಮವಿಶ್ವಾಸ ಕೂಡ ಹೆಚ್ಚಲು ಕಾರಣವಾಯಿತು. ಈಗ ಕಾಲ ಕೂಡಿ ಬಂದಿದೆ.

* ಚಿತ್ರದ ಶೀರ್ಷಿಕೆ ಇಷ್ಟೊಂದು ಉದ್ದ ಇರುವುದರ ಗುಟ್ಟೇನು?

‘ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ’ ಎಂಬ ಶೀರ್ಷಿಕೆ ಕಥೆಗೆ ಸೂಕ್ತವಾಗುತ್ತಿತ್ತು. ಶೀರ್ಷಿಕೆಯ ಮೂಲಕ ಒಂದು ಟ್ರೆಂಡ್ ಸೃಷ್ಟಿಸುವ ಇರಾದೆ ನನ್ನದಾಗಿತ್ತು. ಈ ಶೀರ್ಷಿಕೆಯನ್ನು ಶಾರ್ಟ್ ಆಗಿ ‘ಎಲ್‌ಎನ್‌ಪಿಬಿ’ ಎಂದು ಕರೆಯಬಹುದು. ಅಲ್ಲದೆ ಲಕ್ಷ್ಮೀ, ನಾರಾಯಣ, ಪ್ರಪಂಚ ಹಾಗೂ ಬೇರೆ – ಪ್ರೇಕ್ಷಕರಿಗೆ ಈ ಪದಗಳೆಲ್ಲವೂ ಪರಿಚಿತವಾಗಿರುವುದರಿಂದ, ಇವರ ಪ್ರಪಂಚದಲ್ಲಿ ಏನಿದೆ ಎಂಬ ಕುತೂಹಲ ಅವರಲ್ಲಿ ಮೂಡುತ್ತದೆ.

* ‘ಲಕ್ಷ್ಮೀನಾರಾಯಣರ ಪ್ರಪಂಚ’ ಹೇಗೆ ಭಿನ್ನ?

ಇದು ಲವ್ ಸ್ಟೋರಿಯ ಚಿತ್ರ. ಆದರೆ, ಮಳೆಯಲ್ಲಿ ಬಂದು ಹೋಗುವ ಪ್ರೇಮಕಥೆಯಲ್ಲ. ಮನಸ್ಸಿನಲ್ಲಿ ಹರ್ಷದ ಮಳೆ ತರುವ, ಮದುವೆಯ ನಂತರದ ಸಾಂಸಾರಿಕ ಲವ್ ಸ್ಟೋರಿ. ಪ್ರತಿ ಮನೆಯೊಳಗೆ ನಡೆಯುವಂತಹದ್ದು ಎನಿಸುವಷ್ಟು ಸಿಂಪಲ್ ಕಥೆ.  ಸಿನಿಮಾ ಎಂಬುದು ಬದುಕಿನಾಚೆಯದಲ್ಲ, ಅದು ಬದುಕಿನೊಳಗೆ ಅಡಕವಾಗಿರುವಂತಹದ್ದು. ಹೆಚ್ಚು ಪರಿಣಾಮಕಾರಿಯಾಗಿರುವ ಈ ಕಥೆಗೆ ಹಾಸ್ಯದ ಸ್ಪರ್ಶ ಕೊಟ್ಟು ತೆರೆ ಮೇಲೆ ತರಲು ಮುಂದಾಗಿದ್ದೇನೆ ಅಷ್ಟೆ.

* ನಟಿಯಾಗಿ ಮೂರು ದಶಕದ ಸಿನಿಪಯಣದಲ್ಲಿ, ನಿರ್ದೇಶನ–ನಿರ್ಮಾಣದ ಕುರಿತು ನೀವು ಕಂಡುಕೊಂಡಿದ್ದೇನು?

ನಿರ್ದೇಶನದ ವಿಷಯಕ್ಕೆ ಬಂದರೆ ಎಲ್ಲರೂ ಆಯಾ ಕಾಲದ ಯಶಸ್ಸಿನ ಸೂತ್ರವನ್ನು ಅನುಕರಿಸುತ್ತಾರೆ. ನಿರ್ಮಾಪಕರೂ ಇದಕ್ಕೆ ಹೊರತಲ್ಲ. ಒಂದೆರಡು ಯಶಸ್ವಿ ಚಿತ್ರಗಳ ಹೆಸರು ಹೇಳಿ, ‘ಇದೇ ಮಾದರಿಯ ಚಿತ್ರಗಳನ್ನು ಮಾಡಿಕೊಡಿ’ ಎನ್ನುವ ನಿರ್ಮಾಪಕರು ಇದ್ದಾರೆ. ‘ಒಳ್ಳೆಯ ಚಿತ್ರ ಮಾಡಿಕೊಡಿ’ ಎಂದು ಕೇಳುವವರು ತುಂಬಾ ಕಡಿಮೆ. ಆದರೆ, ಜನ ಈಗ ಎಲ್ಲವನ್ನೂ ಗಮನಿಸುತ್ತಾರೆ. ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವುದರಿಂದ ಬೇಗನೇ ಚಿತ್ರವೊಂದನ್ನು ಗೆಲ್ಲಿಸುವ ಅಥವಾ ನೇಪಥ್ಯಕ್ಕೆ ಸರಿಸುವಷ್ಟು ಬುದ್ಧಿವಂತರು. ಜನರಿಗೆ ದೊಡ್ಡ ಬಜೆಟ್ ಅಥವಾ ಸಣ್ಣ  ಬಜೆಟ್, ದೇಶ – ವಿದೇಶ ಅಥವಾ ಗುಡಿಸಲು ತೋರಿಸಿದ್ದಾರೋ ಎನ್ನುವುದು ವಿಷಯವಲ್ಲ. ಕಥೆ ಚೆನ್ನಾಗಿದೆಯೋ ಇಲ್ಲವೋ ಎಂಬುದೇ ಇಲ್ಲಿ ಮುಖ್ಯ. ಕನ್ನಡದಲ್ಲಿ ಇತ್ತೀಚೆಗೆ ಬರುತ್ತಿರುವ ಒಳ್ಳೆಯ ಸಿನಿಮಾಗಳು ಹಲವು ವಿಷಯಗಳಲ್ಲಿ ಗಮನ ಸೆಳೆದವು. ಕಥೆ ಪ್ರಧಾನವಾದ ಚಿತ್ರಗಳು ಗೆಲ್ಲುತ್ತಾ ಬಂದಿರುವುದು ನಾನು ನಿರ್ದೇಶನ ಮತ್ತು ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಪ್ರೇರಣೆ ಎನ್ನಬಹುದು.

* ನಿರ್ದೇಶನ– ನಿರ್ಮಾಣ ಎರಡೂ ಹೊಸದಾಗಿರುವುದರಿಂದ ಸವಾಲೆನಿಸುವುದಿಲ್ಲವೇ?

ನಮ್ಮದು ಸಿನಿಮಾ ಕುಟುಂಬ. ಪತಿ ಜ್ಯೋತಿ ಪ್ರಕಾಶ್ ಅತ್ರೆ ಅವರೂ ಚಿತ್ರರಂಗದಲ್ಲಿದ್ದು, ತೆರೆಯ ಹಿಂದೆ ಕೆಲಸ ಮಾಡುತ್ತಾರೆ. ಸಿನಿಮಾ ನಿರ್ದೇಶಿಸಬೇಕು ಅಂದುಕೊಂಡಾಗ, ‘ನೀನು ಸಿನಿಮಾ ನಿರ್ಮಿಸುವುದಕ್ಕೂ ಇದು ಸಕಾಲ’ ಎಂದರು. ಒಂದೇ ಕ್ಷೇತ್ರದಲ್ಲಿದ್ದರೂ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುವುದರಿಂದ, ನಿರ್ದೇಶನ ಹಾಗೂ ನಿರ್ಮಾಣದ ತಂತ್ರಗಳ ಬಗ್ಗೆ ಇಬ್ಬರಿಗೂ ಗೊತ್ತಿದೆ. ಎಲ್ಲೆಲ್ಲಿ ಬಜೆಟ್ ಸೋರಿಕೆಯಾಗುತ್ತದೆ ಎಂಬುದರ ಅರಿವಿದೆ. ನಮ್ಮ ಈ ಪ್ರಯತ್ನದ ಹಿಂದೆ ಅಧ್ಯಯನವೂ ಇದೆ.

* ಮಾರುಕಟ್ಟೆ ಸೆಳೆಯಲು ಏನೆಲ್ಲಾ ತಯಾರಿ ನಡೆಸಿದ್ದೀರಾ? ಚಿತ್ರ ಯಾವಾಗ ತೆರೆಗೆ ಬರಲಿದೆ?

ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬಿಡುಗಡೆಗೆ ಮುಂಚೆ ಪ್ರೇಕ್ಷಕರ ಮನಸ್ಸಿನಲ್ಲಿ ಚಿತ್ರದ ಬಗ್ಗೆ ಕುತೂಹಲ ಹುಟ್ಟಹಾಕಲು ತಯಾರಿ ನಡೆಸಿದ್ದೇವೆ. ಚಿತ್ರರಂಗದೊಳಗೆ ನಮ್ಮ ಕುಟುಂಬ ಇರುವುದರಿಂದ, ಮಾರುಕಟ್ಟೆಯ ಗಣಿತವೂ ಸ್ವಲ್ಪ ಮಟ್ಟಿಗೆ ಗೊತ್ತಿರುವುದರಿಂದ ಆ ಕುರಿತು ಆಸ್ಥೆ ವಹಿಸಿದ್ದೇವೆ. ಸದ್ಯ ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ನಾನು ಬಿಜಿ. ಜುಲೈ ಹೊತ್ತಿಗೆ ನಮ್ಮ ಚಿತ್ರ ತಯಾರಾದರೂ, ಮಳೆಗಾಲ ಮುಗಿಸಿಕೊಂಡು ಆಗಸ್ಟ್‌ನಲ್ಲಿ ತೆರೆಗೆ ಬರುವ ಯೋಜನೆ ಇದೆ.

* ಚಿತ್ರದಲ್ಲಿ ನಿಮ್ಮ ಮಗಳೂ ನಟಿಸುತ್ತಿದ್ದಾರೆ?

ಈಗಾಗಲೇ ಧಾರಾವಾಹಿಗಳ ಮೂಲಕ ಪರಿಚಿತವಾಗಿರುವ ನನ್ನ ಮಗಳು ಪ್ರಥಮ ಪ್ರಸಾದ್ ರಾವ್, ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾಳೆ. ಮುದ್ದಾದ ಹುಡುಗಿಯ ಪಾತ್ರ ಅವಳದು. ಅವಳನ್ನು ವಿಭಿನ್ನವಾಗಿ ತೋರಿಸುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT