ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ವ್ಯಕ್ತಿತ್ವಗಳ ಜೊತೆ ಮತ್ತೆ ರಮೇಶ್‌ ಮಾತು–ಕತೆ

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸೆಲೆಬ್ರಿಟಿಗಳ ಯಶೋಗಾಥೆಯನ್ನು ಕಿರುತೆರೆಯ ಮೇಲೆ ತೆರೆದಿಡುವ ‘ವೀಕೆಂಡ್  ವಿತ್ ರಮೇಶ್’ ರಿಯಾಲಿಟಿ ಷೋನ ಹೊಸ ಋತು ಆರಂಭವಾಗುತ್ತಿದೆ. ನಟ ರಮೇಶ್ ಅರವಿಂದ್ ಅವರ ಲವಲವಿಕೆಯ ನಿರೂಪಣೆಯ ಕಾರಣಕ್ಕೆ ಪ್ರೇಕ್ಷಕರ ಮನಸು ಗೆದ್ದಿರುವ ಈ ರಿಯಾಲಿಟಿ ಷೋ ಈಗ ಮೂರನೇ ಆವೃತ್ತಿಯನ್ನು ಆರಂಭಿಸುತ್ತಿದೆ. ಈ ಸುತ್ತಿನಲ್ಲಿ ಕಾಣಿಸಿಕೊಳ್ಳಲಿರುವ ಮೊದಲ ಸೆಲೆಬ್ರಿಟಿ ಪ್ರಕಾಶ್ ರೈ.

‘ತನ್ನ ಮೇಲಿಟ್ಟಿರುವ ನಂಬಿಕೆಯ ಪದರಗಳನ್ನು ಒಬ್ಬ ವ್ಯಕ್ತಿ ಹೇಗೆ ಮೇಲುಸ್ತರಕ್ಕೆ ಏರಿಸಿಕೊಳ್ಳುತ್ತಾ ಹೋದ ಎಂಬುದನ್ನು ಒಂದು ಕ್ರಮದಲ್ಲಿ ತೆರೆದಿಡುವುದೇ ವೀಕೆಂಡ್ ವಿತ್ ರಮೇಶ್. ಜೀವನ ಸುಲಭವಲ್ಲ. ಆದರೆ ಅದು ಸುಂದರವಾಗಿದೆ ಎಂಬುದು ಇಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಈ ಅವಧಿಯಲ್ಲಿ, ನಾನು ಎಷ್ಟೋ ವರ್ಷಗಳಿಂದ ಒಡನಾಡಿದ ಸ್ನೇಹಿತರಿಗೆ ಇನ್ನೂ ಹತ್ತಿರವಾಗುತ್ತಿರುತ್ತೇನೆ’ ಎಂದು ಷೋ ಬಗೆಗಿನ ತಮ್ಮ ಮಾತುಗಳನ್ನು ಬಿಚ್ಚಿಟ್ಟರು ರಮೇಶ್.

ಸೆಲೆಬ್ರಿಟಿಗಳ ಜೀವನದ ಕಥೆ ಹೇಳುವ ಕಂತುಗಳನ್ನು ನೋಡುವಂತೆಯೇ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಮಾನ್ಯರ ಜೀವನ ತೆರೆದಿಡುವ ಕಂತುಗಳನ್ನೂ ಪ್ರೇಕ್ಷಕ ನೋಡಿದರೆ, ಅಂಥವರನ್ನು ಹೆಚ್ಚು ಹೆಚ್ಚು ಈ ವೇದಿಕೆಗೆ ಕರೆತಂದು ಪರಿಚಯಿಸಲು ಸಾಧ್ಯ ಎಂದರು ರಮೇಶ್.

ಷೋನ ಯಶಸ್ಸಿನ ಹಿಂದೆ ದೊಡ್ಡ ತಂಡವೇ ಇದೆ, ತಾನು ಈ ಕಾರ್ಯಕ್ರಮದ ಮುಖವಾಡವಷ್ಟೇ ಎಂಬುದು ಅವರ ಅನಿಸಿಕೆ.

‘ವೀಕೆಂಡ್ ವಿತ್ ರಮೇಶ್ ಬೇರೆ ಷೋಗಳಂತಲ್ಲ. ಇದು ಭಾವನೆಗಳನ್ನು ಅರಳಿಸುವ ಕಾರ್ಯಕ್ರಮ. ಈ ಬಾರಿ ಇನ್ನೊಂದಿಷ್ಟು ಸೆಲೆಬ್ರೇಟ್ ಮಾಡುವ ವ್ಯಕ್ತಿತ್ವಗಳು ನಮ್ಮ ಜೊತೆ ಇರಲಿವೆ’ ಎಂದರು ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು.

ಹದಿನಾಲ್ಕು ವಾರ, ಇಪ್ಪತ್ತೆಂಟು ಸಂಚಿಕೆಗಳಲ್ಲಿ ಪ್ರಸಾರವಾಗುವ ಈ ಬಾರಿಯ ಷೋನಲ್ಲಿ ಜಗ್ಗೇಶ್, ರಮ್ಯಾ, ವಿ. ಹರಿಕೃಷ್ಣ, ಹಂಸಲೇಖ, ಅರ್ಜುನ್ ಜನ್ಯ, ಗಂಗಾವತಿ ಪ್ರಾಣೇಶ್, ಸಂತೋಷ್ ಹೆಗ್ಡೆ, ವೀರೇಂದ್ರ ಹೆಗ್ಗಡೆ, ಎಚ್.ಡಿ. ದೇವೇಗೌಡ, ಮೈಸೂರಿನ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣವರ್ ಮುಂತಾದವರ ಬದುಕಿನ ಪುಟಗಳು ತೆರೆದುಕೊಳ್ಳಲಿವೆ. ಮಾರ್ಚ್ 25ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ‘ಜೀ ಕನ್ನಡ ವಾಹಿನಿ’ಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

**

ರಮೇಶ್ ಸಲಹೆಯಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ ‘ಗೋಲ್ಡ್ ಕ್ಲಾಸ್‍’ ಪರಿಚಯಿಸುತ್ತಿರುವುದು ಈ ಬಾರಿಯ ವಿಶೇಷ. ಬೇರೆ ಬೇರೆ ವೈಶಿಷ್ಟ್ಯದಿಂದ ಸಮಾಜದ ಗಮನ ಸೆಳೆದಿರುವ ಎಳೆಯರ ಕುರಿತು ‘ವೀಕೆಂಡ್...’ನಲ್ಲಿ ಒಂದಿಡೀ ಕಂತನ್ನು ರೂಪಿಸುವುದು ಕಷ್ಟ. ಅಂತಹ ಪುಟಾಣಿಗಳನ್ನು ಕಾರ್ಯಕ್ರಮಕ್ಕೆ ಕರೆದು ಅವರ ಪರಿಚಯ ಮಾಡಿಸುವುದು ‘ಗೋಲ್ಡ್ ಕ್ಲಾಸ್’ನ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT