ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಸಾಧಕನ ಮಾತು ಮಂಥನ

ನಗರದ ಅತಿಥಿ
Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕುತ್ತಿಗೆ ಮುಚ್ಚುವ ಬಿಳಿಯ ಕೂದಲು, ಹಸಿರು ಕಣ್ಣು, ವಯಸ್ಸು ಅರವತ್ತಾದರೂ ಮಾತಿನಲ್ಲಿ ತುಂಬು ಉತ್ಸಾಹ. ತಮ್ಮ ಸಂಗೀತ ಸಾಧನೆಯ ಬಗೆಗೆ ಪ್ರೀತಿಯ ಆತ್ಮವಿಶ್ವಾಸ. ಇವರು ಪಾಶ್ಚಾತ್ಯ ಸಂಗೀತಗಾರ ಕ್ರಿಸ್‌ವೈಟ್‌.

ರಾಜಸ್ತಾನದ ನೀರಿನ ಬರಕ್ಕೆ ದೇಣಿಗೆ ಸಂಗ್ರಹಿಸುವ ಸಲುವಾಗಿ 100 ಪೈಪರ್ಸ್‌ ಆಯೋಜಿಸಿದ್ದ ‘ದ ಡೈರ್‌ ಸ್ಟ್ರೇಟ್ಸ್‌ ಎಕ್ಸ್‌ಪೀರಿಯನ್ಸ್‌’ ಬ್ಯಾಂಡ್‌ ವತಿಯಿಂದ   ಸಂಗೀತ ಕಾರ್ಯಕ್ರಮ ನೀಡಲು ನಗರಕ್ಕೆ ಅವರು ಬಂದಿದ್ದರು. ಸಂಗೀತದೆಡೆಗಿನ ತಮಗಿರುವ ಅಪಾರ ಪ್ರೀತಿ, ಸಾಧಿಸಿದ ಹೆಮ್ಮೆಯನ್ನು ಮಾತಿನುದ್ದಕ್ಕೂ ವ್ಯಕ್ತಪಡಿಸುತ್ತಿದ್ದರು.

* ಸಂಗೀತ ಪ್ರೀತಿ ಬೆಳೆದದ್ದು ಹೇಗೆ?

ವಯೊಲಿನ್‌ ಕಲಿಯುತ್ತಿದ್ದೆ. ಏನೇ ಮಾಡಿದರೂ ಅದರೆಡೆಗೆ ನನಗೆ ಪ್ರೀತಿ ಬೆಳೆಯಲೇ ಇಲ್ಲ. ಟೀವಿಯಲ್ಲಿ ಕಲಾವಿದರೊಬ್ಬರು ಸ್ಯಾಕ್ಸೋಫೋನ್‌ ನುಡಿಸುತ್ತಿದ್ದುದನ್ನು ಕೇಳಿದೆ. ಯಾಕೋ ಅದು ಅದ್ಭುತ ಎನಿಸಿಬಿಟ್ಟಿತು. ಕಲಾವಿದರಾಗಿದ್ದ ಗಣಿತ ಶಿಕ್ಷಕರು ತಿಂಗಳೊಳಗೆ ಸ್ಯಾಕ್ಸೋಫೋನ್‌ನ ಪಾಠ ಶುರು ಮಾಡಿದರು. ಅದನ್ನು ಎತ್ತಿಕೊಂಡು ನುಡಿಸುವುದು ನನಗೆ ಕಷ್ಟವಾಗುತ್ತಿತ್ತು. ವಾದ್ಯ ಹಿಡಿದರೆ ಬೆರಳು ಚಲಿಸುತ್ತಿರಲಿಲ್ಲ. ಆದರೂ ಆ ನಾದದಲ್ಲಿ ಏನೋ ಆಕರ್ಷಣೆ ಇತ್ತು. ಅಂದಿನಿಂದ ಬೆಳೆದ ಆಕರ್ಷಣೆ ದೇಶ–ವಿದೇಶಗಳಲ್ಲಿ ಸಂಗೀತ ನುಡಿಸುವಷ್ಟರ ಮಟ್ಟಿಗೆ ನನ್ನನ್ನು ಬೆಳೆಸಿದೆ.

* ಭಾರತದಲ್ಲಿ ಕಾರ್ಯಕ್ರಮ ನೀಡಲು ಒಪ್ಪಿಕೊಂಡಿದ್ದೇಕೆ? ಈ ಮುಂಚೆ ಸಹಾಯಾರ್ಥವಾಗಿ ಸಂಗೀತ ಕಾರ್ಯಕ್ರಮ ನೀಡಿದ್ದಿದೆಯೇ?

ಪಾಶ್ಚಾತ್ಯ ಸಂಗೀತದಲ್ಲಿ ಈಗಾಗಲೇ ನಮ್ಮ ಬ್ಯಾಂಡ್‌ ಹೆಸರು ಮಾಡಿದೆ. ರಾಜಸ್ತಾನದಲ್ಲಿ ಅನುಭವಿಸುತ್ತಿರುವ ನೀರಿನ ಸಮಸ್ಯೆಯ ಸಹಾಯಾರ್ಥವಾಗಿ ಸಂಗೀತ ಕಾರ್ಯಕ್ರಮ ನೀಡಬೇಕು ಎನ್ನುವ ಆಹ್ವಾನ ಬಂದಾಗ ಹೆಮ್ಮೆ ಎನಿಸಿತು. ತಕ್ಷಣವೇ ಒಪ್ಪಿಕೊಂಡೆವು. ವೈಯಕ್ತಿಕವಾಗಿ ಹಾಗೂ ಬ್ಯಾಂಡ್‌ ವತಿಯಿಂದ ಅನೇಕ ಚಾರಿಟಿ ಕಾರ್ಯಕ್ರಮ ನೀಡಿದ್ದೇವೆ. ನನ್ನ ಸ್ನೇಹಿತರೊಬ್ಬರು ಸ್ತನ ಕ್ಯಾನ್ಸರ್‌ನಿಂದ ತೀರಿಕೊಂಡಾಗಲೂ ಕಾರ್ಯಕ್ರಮ ಮಾಡಿಕೊಟ್ಟಿದ್ದೇವೆ. ಅದು ನಮ್ಮ ಸಂಗೀತದ ಉದ್ದೇಶವೂ ಹೌದು.

* ಸಂಗೀತವನ್ನು ಹವ್ಯಾಸವಾಗಿ ತೆಗೆದುಕೊಳ್ಳಬಹುದಿತ್ತಲ್ಲ, ವೃತ್ತಿಯಾಗಿಯೇ ಏಕೆ?

ಸಂಗೀತ ಸೆಳೆತ ನನ್ನಲ್ಲಿ ಅಪಾರವಾಗಿತ್ತು. ಹೀಗಾಗಿ ಇದೇ ನನ್ನ ಹವ್ಯಾಸ, ವೃತ್ತಿ ಎಲ್ಲವೂ ಆಯಿತು.  ಸಂಗೀತ ಕ್ಷೇತ್ರ ನನಗೆ ಎಂದಿಗೂ ಆಸಕ್ತಿದಾಯಕ ವೃತ್ತಿಯಾಗಿಯೇ ಕಂಡಿದೆ. ಇದಕ್ಕೆ ನಿರ್ದಿಷ್ಟ ದಾರಿ ಎಂಬುದಿಲ್ಲ. ಪ್ರತಿಭೆ ಇದ್ದವನು ತನ್ನದೇ ದಾರಿ ಮಾಡಿಕೊಂಡು ಸಾಗಬೇಕು. ಇದೇ ಈ ಕ್ಷೇತ್ರದ ವೈಶಿಷ್ಟ್ಯ.
ಕಲಾವಿದ ನೀಡುವ ಸಂಗೀತ ನಿರಂತರವಾಗಿ ಜನಮಾನಸದಲ್ಲಿರುತ್ತದೆ.  ಅದೇ ಒಂದರ್ಥದಲ್ಲಿ ಗೆಲುವು. ನಮ್ಮ ಸುತ್ತಮುತ್ತಲು ಅತ್ಯದ್ಭುತವಾದ ಅನೇಕ ಕಲಾವಿದರಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಮಿಂಚಲು ಪ್ರತಿಭೆಯ ಜೊತೆಗೆ  ಅದೃಷ್ಟವೂ ಕೈಹಿಡಿಯಬೇಕು. 

* ಮೂರು ದಶಕಗಳಿಂದ ಈ ಕ್ಷೇತ್ರದಲ್ಲಿದ್ದೀರಿ. ಏನೆಲ್ಲಾ ಬದಲಾವಣೆಗಳಾಗಿವೆ?

ಸಾಕಷ್ಟು ಬದಲಾವಣೆಗಳಾಗಿವೆ. ಈಗ ಸಂಗೀತವನ್ನು, ಸಂಗೀತಗಾರರನ್ನು ತಲುಪಲು ಅಂತರ್ಜಾಲವೊಂದಿದ್ದರೆ ಸಾಕು. ಯಾವುದೋ ದೇಶದ ಸಂಗೀತಗಾರನ ಸಂಗೀತ ಇನ್ಯಾವುದೋ ದೇಶದಲ್ಲಿ ಜನಪ್ರಿಯವಾಗಿರುತ್ತದೆ. ಜನರೂ ವಿಭಿನ್ನ ಸಂಗೀತ ಶೈಲಿಗೆ ಮನಸೋಲುತ್ತಿದ್ದಾರೆ. ಅಲ್ಲದೆ ಯಾವುದೇ ಮಾಹಿತಿಯನ್ನು ಬೇಕಾದರೂ ಶೀಘ್ರದಲ್ಲಿ ಸಂಗ್ರಹಿಸಬಹುದು. ಹೀಗಾಗಿ ಸಂಗೀತದ ವಿಸ್ತಾರವೂ ಹೆಚ್ಚಾಗಿದೆ.

* ಕಾರ್ಯಕ್ರಮದಲ್ಲಿ ವಿಭಿನ್ನತೆಯನ್ನು ಹೇಗೆ ತರುತ್ತೀರಿ?

ನಾವು ಬ್ಯಾಂಡ್‌ ಸದಸ್ಯರೆಲ್ಲಾ ಸೇರಿ ಸಂಗೀತ ಅಭ್ಯಾಸ ಮಾಡಿರುತ್ತೇವೆ. ಆದರೂ ನಮ್ಮ ಕಾರ್ಯಕ್ರಮ ಹೇಗಿರಬೇಕು ಎನ್ನುವುದು ನಿರ್ಧಾರವಾಗುವುದು ವೇದಿಕೆಯಲ್ಲೇ. ಪ್ರೇಕ್ಷಕರು ಎಂಥವರು, ಅವರ ಮೂಡ್‌ ಹೇಗಿದೆ, ತೆರೆದ ವೇದಿಕೆಯೇ ಅಥವಾ ಒಳಾಂಗಣದಲ್ಲಿ ಕಾರ್ಯಕ್ರಮವೇ... ಮುಂತಾದ ಸಂಗತಿಗಳು ನಮ್ಮ ಕಾರ್ಯಕ್ರಮದ ರೂಪುರೇಷೆಯನ್ನು ನಿರ್ಧರಿಸುತ್ತವೆ.

* ಭಾರತೀಯ ಸಂಗೀತ ಕೇಳಿದ್ದೀರಾ, ನಿಮ್ಮಿಷ್ಟದ ಕಲಾವಿದರು?

ಇಲ್ಲ ಎನ್ನಲು ನಾಚಿಕೆ ಎನಿಸುತ್ತಿದೆ. ಭಾರತೀಯ ಸಂಗೀತ ಕೇಳಲು, ನಾದದ ಇಂಪು ಮನತುಂಬಿಕೊಳ್ಳಲು ಸನ್ನಿವೇಶ ಒದಗಿ ಬಂದಿಲ್ಲ. ನಾವು ಬೆಳೆದ ವಾತಾವರಣ ಇದಕ್ಕೆಲ್ಲಾ ಕಾರಣವಿರಬಹುದು. ಆದರೆ ಇನ್ನುಮುಂದೆ ಖಂಡಿತಾ ಭಾರತೀಯ ಸಂಗೀತದತ್ತ ಗಮನ ಹರಿಸಬೇಕು ಎನಿಸಿದೆ. ಅಂದಹಾಗೆ ನನಗೆ ಸಿತಾರ್‌  ವಾದಕ ರವಿಶಂಕರ್‌ ಅವರ ಪರಿಚಯವಿತ್ತು. ರವಿಶಂಕರ್‌ ಹಾಗೂ ಅನುಷ್ಕಾ ತಮ್ಮ ತಂಡದೊಂದಿಗೆ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದರು. ಆದರೆ ಸಮಕಾಲೀನ ಭಾರತೀಯ ಸಂಗೀತಗಾರರ ಬಗೆಗೆ ನನಗೆ ಏನೂ ಗೊತ್ತಿಲ್ಲ.

* ಸಂಗೀತ ಎಂದರೆ ನಿಮ್ಮ ಪ್ರಕಾರ?

ಸಂಗೀತ ಒಂದು ಭಾಷೆ. ನನ್ನನ್ನು ಪ್ರಸ್ತುತಪಡಿಸಿಕೊಳ್ಳಲು ಇರುವ ಮಾಧ್ಯಮ. ಬದುಕಿಗೊಂದು ಅರ್ಥ ಕೊಟ್ಟಿದ್ದು ಸಂಗೀತವೇ.

* ಬೆಂಗಳೂರು, ಭಾರತದ ಬಗೆಗೆ ನಿಮ್ಮ ಅಭಿಪ್ರಾಯ?

ಈ ಮೊದಲು ಮುಂಬೈಗೆ ಬಂದಿದ್ದೆ. ಅಂತೆಯೇ ಬೆಂಗಳೂರು ಎನಿಸುತ್ತಿದೆ. ಇಲ್ಲಿ ಹೆಚ್ಚು ಓಡಾಡಲು ಸಾಧ್ಯವಾಗಿಲ್ಲ. ಆದರೆ ವಿಮಾನ ನಿಲ್ದಾಣದಿಂದ ಇಲ್ಲಿಗೆ ಬರುವಷ್ಟರಲ್ಲಿ ಒಂದಿಷ್ಟು ಮರಗಳು ಕಂಡವು. ಇಲ್ಲಿನ ವಾತಾವರಣದ ತಂಪು ಇಷ್ಟವಾಯಿತು.

***

ಕ್ರಿಸ್‌ವೈಟ್‌ ಕುರಿತು

1955ರಲ್ಲಿ ಲಂಡನ್‌ನಲ್ಲಿ ಕ್ರಿಸ್‌ವೈಟ್‌ ಜನನ. 13ನೇ ವರ್ಷದಿಂದ ಸ್ಯಾಕ್ಸೊಫೋನ್‌ ಕಲಿಕೆ. ಜಾಜ್‌ ಹಾಗೂ ರಾಕ್‌ನಲ್ಲಿ ಸ್ಯಾಕ್ಸೊಫೋನ್‌ ನುಡಿಸುತ್ತಾರೆ. ವಿವಿಧ ಬ್ಯಾಂಡ್‌ಗಳ ಜೊತೆ ಕೆಲಸ ಮಾಡಿದ ಅವರು ವಿವಿಧ ದೇಶಗಳಲ್ಲಿ ಸಂಗೀತ ಸುಧೆ ಹರಿಸಿದ್ದಾರೆ. ಅಲ್ಲದೆ ಪಾಶ್ಚಾತ್ಯ ಸಂಗೀತ ವಲಯದ ಅನೇಕ ಜನಪ್ರಿಯ ಕಲಾವಿದರೊಂದಿಗೆ ಕೆಲಸ ಮಾಡಿದ ಅನುಭವ ಅವರಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT