ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಲಪಲ್ಲಿ ರಾಷ್ಟ್ರೀಯ ಪುರಸ್ಕಾರ

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸಂಗೀತದಲ್ಲಿ ಅನನ್ಯ ಸಾಧನೆ ಮಾಡಿದ ಕಲಾವಿದರಿಗೆ ಸಹಜವಾಗಿಯೇ ಪ್ರಶಸ್ತಿ, ಪುರಸ್ಕಾರಗಳು ಒಲಿಯುತ್ತವೆ. 

ಸದ್ಯ ನಗರದ ಚಿಂತಲಪಲ್ಲಿ ಪರಂಪರಾ ಟ್ರಸ್ಟ್‌ 2017ರ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಮಾರ್ಚ್‌ 24ರಿಂದ 26ರವರೆಗೆ ಆಸ್ಥಾನ ವಿದ್ವಾನ್‌ ಚಿಂತಲಪಲ್ಲಿ ರಾಮಚಂದ್ರರಾವ್‌ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದೆ. ಆ ಪ್ರಯುಕ್ತ ಮೂರು ದಿನಗಳ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮ 26ರಂದು ಚೌಡಯ್ಯ ಹಾಲ್‌ನ ಹಿಂಭಾಗದಲ್ಲಿರುವ ಶ್ರೀಕೃಷ್ಣದೇವರಾಯ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ.  ‘ಚಿಂತಲಪಲ್ಲಿ ರಾಷ್ಟ್ರೀಯ ಪುರಸ್ಕಾರ’ವನ್ನು ಗಾಯಕ ಡಾ.ಜಿ.ಎ.ಕುಮಾರಸ್ವಾಮಿ ಅವರಿಗೆ ನೀಡಲಾಗುವುದು. ‘ಪರಂಪರಾ ಪದೀಪನಾಚಾರ್ಯ’ ಗೌರವ ಪ್ರಶಸ್ತಿ ವಿದ್ವಾನ್‌ ಎಲ್‌. ಭೀಮಾಚಾರ್‌ ಅವರಿಗೆ, ಸಂಗೀತ ಕ್ಷೇತ್ರಕ್ಕೆ ನ.ರಾಜಾರಾವ್‌  ಅವರಿಗೆ, ಸಾಹಿತ್ಯ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಪಿ.ಆರ್‌. ಶ್ರೀನಿವಾಸಮೂರ್ತಿ (ಪ.ರಾ.ಶ್ರೀ) ಅವರಿಗೆ ನೀಡಲಾಗುವುದು.

ಸಂಗೀತ ಪರಂಪರಾ ನಿಧಿ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುತ್ತದೆ. ಶಿಕ್ಷಣ ತಜ್ಞ ಶಾಮಸುಂದರ ಶರ್ಮ, ಸಮಾಜಸೇವೆಯಲ್ಲಿ ಎಂ.ಅನಂತ್‌, ವಿ.ಅನಂತ್‌, ಬಸವರಾಜ್‌ ಕೊಡೆ (ಎಂಜಿನಿಯರ್‌) ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ಮೋರ್ಚಿಂಗ್‌ ‘ಭೀಮ’: ಮೋರ್ಚಿಂಗ್‌ನಲ್ಲಿ ವಿದ್ವಾನ್‌ ಎಲ್‌.ಭೀಮಾಚಾರ್‌ ಅವರದು ‘ಭೀಮ ಪ್ರತಿಭೆ’. ತಾವು ಈ ಪುಟಾಣಿ ವಾದ್ಯದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದಷ್ಟೇ ಅಲ್ಲದೆ  ತಮ್ಮ ಮಕ್ಕಳಾದ ಧ್ರುವರಾಜ್‌, ರಾಜಶೇಖರ್‌ ಮತ್ತು ಭಾಗ್ಯಲಕ್ಷ್ಮಿ ಮೂವರನ್ನೂ ಲಯವಾದ್ಯದಲ್ಲಿ ಪಳಗಿಸಿದವರು.

ಸಿಕ್ಕಿದ ಅಲ್ಪ ಅವಧಿಯನ್ನು ಅತ್ಯಂತ ಚಾಕಚಕ್ಯತೆಯಿಂದ ಬಳಸಿಕೊಂಡು ಕೇಳುಗರಲ್ಲಿ ಮೋರ್ಚಿಂಗ್‌ ನಾದದ ಮೂಲಕ ವಿಶಿಷ್ಟ ಅನುಭೂತಿ ಮೂಡಿಸುವುದರಲ್ಲಿ ಭೀಮಾಚಾರ್‌ ಸದಾ ಎತ್ತಿದ ಕೈ. 1931ರಲ್ಲಿ ಹುಟ್ಟಿದ ಭೀಮಾಚಾರ್‌ ಚಿನಿವಾರ ಕೆಲಸದಲ್ಲಿ ತೊಡಗಿಕೊಂಡವರು. ತಮ್ಮ ಹದಿನೈದನೇ ವಯಸ್ಸಿಗೆ ಈ ಲಯವಾದ್ಯ ಕಲಿಯಲಾರಂಭಿಸಿದರು. ವಿದ್ವಾನ್‌ ಎಚ್‌. ಪುಟ್ಟಾಚಾರ್‌ ಅವರ ಬಳಿ ಗಾಯನ ಹಾಗೂ ಮೃದಂಗ ಕಲಿತು ಬಳಿಕ ಮೋರ್ಚಿಂಗ್‌ ಅಭ್ಯಾಸ ಮಾಡಿದವರು.

1952ರಿಂದ ಭೀಮಾಚಾರ್‌ ಮೋರ್ಚಿಂಗ್‌ ವಾದ್ಯ ನುಡಿಸಾಣಿಕೆಯಲ್ಲಿ ಗಟ್ಟಿಯಾಗಿ ನೆಲೆ ನಿಂತರು. ಪಿಟೀಲು ಚೌಡಯ್ಯ, ಟಿ.ಆರ್‌. ಮಹಾಲಿಂಗಂ, ಪಿ. ಭುವನೇಶ್ವರಯ್ಯ, ಲಾಲ್ಗುಡಿ ಜಯರಾಮನ್‌, ಆರ್‌.ಕೆ.ಶ್ರೀಕಂಠನ್‌, ಬಾಲಮುರಳಿಕೃಷ್ಣ, ಡಿ.ಕೆ. ಜಯರಾಮನ್‌, ವೀಣೆ ರಾಜಾರಾವ್‌, ಆರ್‌.ಕೆ.ಸೂರ್ಯನಾರಾಯಣ, ವೀಣೆ ದೊರೆಸ್ವಾಮಿ ಅಯ್ಯಂಗಾರ್‌, ಟಿ.ವಿ. ಶಂಕರನಾರಾಯಣ ಮುಂತಾದ ಸಂಗೀತ ದಿಗ್ಗಜರಿಗೆ ಮೋರ್ಚಿಂಗ್‌ ವಾದ್ಯ ಸಹಕಾರ ನೀಡಿದ ಹೆಗ್ಗಳಿಕೆ ಇವರ ಬೆನ್ನಿಗಿದೆ.

‘ಲಯವಾದ್ಯ ಪ್ರವೀಣ’, ಮೋರ್ಚಿಂಗ್‌ ತರಂಗ್‌ಭೂಷಣ, ಮೋರ್ಚಿಂಗ್‌ ಎಂಪರರ್‌, ಲಯವಾದ್ಯ ಕಲಾನಿಧಿ, ಲಯವಾದ್ಯ ಕಲಾರತ್ನ, ಕರ್ನಾಟಕ ಕಲಾಶ್ರೀ, ಪುರಂದರ ವಿಠಲ ಪ್ರಶಸ್ತಿ, ಗಾನಕಲಾಭೂಷಣ ಬಿರುದು, ಲಯವಾದ್ಯ ನಿಪುಣ ಮುಂತಾದ ಪ್ರಶಸ್ತಿ ಪುರಸ್ಕಾರಗಳೂ ಇವರಿಗೆ ಬಂದಿವೆ.

ಡಾ.ಜಿ.ಎ.ಕುಮಾರಸ್ವಾಮಿ: ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅತ್ಯಂತ ಅನುಭವಿ, ಗಾಯನ ಚತುರರಾದ ಜಿ.ಎ. ಕುಮಾರಸ್ವಾಮಿ ಅವರು ಸಂಗೀತವನ್ನು ಚಿಂತಲಪಲ್ಲಿ ಕೃಷ್ಣಮೂರ್ತಿ, ಚಿಂತಲಪಲ್ಲಿ ರಂಗರಾವ್‌ ಹಾಗೂ ಆನೂರ್‌ ಎಸ್‌. ರಾಮಕೃಷ್ಣ ಅವರ ಬಳಿ ಕಲಿತವರು. ಗುಡಿಬಂಡೆ ಸಹೋದರರಲ್ಲಿ ಒಬ್ಬರಾದ ಇವರು, ಕರ್ನಾಟಕ ಕಲಾಶ್ರೀ ಪುರಸ್ಕಾರ ಪಡೆದವರು.

ನ.ರಾಜಾರಾವ್‌: ಹಿರಿಯ ಕಾದಂಬರಿಕಾರ ಮ.ನ. ಮೂರ್ತಿ ಅವರ ಮಗ ರಾಜಾರಾವ್‌. ಪುರಂದರ ಸೇವಾ ಸಮಿತಿಯ ಕಾರ್ಯದರ್ಶಿಗಳಾಗಿ ಸಂಗೀತ ಸೇವೆ ಮಾಡುತ್ತಿದ್ದಾರೆ. ಹಂಪಿ ಮತ್ತು ಮುಳಬಾಗಿಲುಗಳಲ್ಲಿ ಅನೇಕ ಸಂಗೀತ ಕಛೇರಿಗಳನ್ನು ಆಯೋಜಿಸಿದ ಅನುಭವ ಇವರಿಗಿದೆ.

ಪ.ರ.ಶ್ರೀ (ಪಿ.ಆರ್‌. ಶ್ರೀನಿವಾಸ ಮೂರ್ತಿ): ರಂಗಭೂಮಿ, ಸಿನಿಮಾ ಸಾಹಿತ್ಯ, ನಟನೆ ಹಾಗೂ ಸಂಗೀತದಂತಹ ಕ್ಷೇತ್ರಗಳಲ್ಲಿ ಸಮಗ್ರ ಕೃಷಿ ನಡೆಸಿದ ಇವರದು ಬಹುಮುಖ ಪ್ರತಿಭೆ. ಹಲವಾರು ಕಾದಂಬರಿಗಳು, ಸಿನಿಮಾ ಸಂಗೀತ ಹಾಗೂ ಭಕ್ತಿಗೀತೆಗಳನ್ನು ಬರೆದಿದ್ದಾರೆ. ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ಎಸ್‌. ಜಾನಕಿ, ಡಾ.ರಾಜ್‌ಕುಮಾರ್‌ ಮುಂತಾದ ಸಿನಿಮಾ ಸಂಗೀತ ದಿಗ್ಗಜರು ಇವರ ಸಂಗೀತ ನಿರ್ದೇಶನ, ಸಾಹಿತ್ಯ ನಿರ್ಮಾಣದ ಹಾಡುಗಳನ್ನು ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT