ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಖರೀದಿಗೆ ವೆಬ್‌ಸೈಟ್‌ ಮಂತ್ರ

Last Updated 24 ಮಾರ್ಚ್ 2017, 8:47 IST
ಅಕ್ಷರ ಗಾತ್ರ

ನೋಟು ರದ್ದತಿ ಬಳಿಕ ಮಂಕಾಗಿದ್ದ ರಿಯಾಲ್ಟಿ ಉದ್ಯಮ ಇದೀಗ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ.  ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳು ಸಾಲ ನೀಡುವ ಪ್ರಕ್ರಿಯೆಯಲ್ಲಿ ಸರಳೀಕರಣ ಮತ್ತು ಬಡ್ಡಿದರವನ್ನು ಇಳಿಕೆ ಮಾಡಿರುವುದರಿಂದ ಗ್ರಾಹಕರು  ಫ್ಲ್ಯಾಟ್, ನಿವೇಶನಗಳನ್ನು ಕೊಳ್ಳುವತ್ತ ಮುಖ ಮಾಡುತ್ತಿದ್ದಾರೆ ಎಂದು ರಿಯಾಲ್ಟಿ ವೆಬ್‌ಸೈಟ್‌ಗಳ ಪ್ರವರ್ತಕರು ಹೇಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಆಸ್ತಿ ಖರೀದಿಗೆ ಗ್ರಾಹಕರು ಹೆಚ್ಚಾಗಿ ಆನ್‌ಲೈನ್‌ ಪೋರ್ಟಲ್‌ಗಳ ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ. ಬ್ರೋಕರ್‌ಗಳಿಗೆ ಕಮೀಷನ್‌ ಕೊಡುವುದನ್ನು ತಪ್ಪಿಸಲು ರಿಯಾಲ್ಟಿ ಆನ್‌ಲೈನ್‌ ಪೋರ್ಟಲ್‌ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ರಿಯಾಲ್ಟಿ ಪೋರ್ಟಲ್‌ಗಳು ಕೂಡ ಮಧ್ಯಮ ವರ್ಗದ ಜನರನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿವೆ.

ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿರುವ  ಮ್ಯಾಜಿಕ್‌ ಬ್ರಿಕ್ಸ್‌, ನೋ ಬ್ರೋಕರ್‌, ಎಚ್‌ಡಿಎಫ್‌ಸಿ ರೆಡ್, ಕ್ವಿಕರ್‌ ಹೋಮ್ಸ್ ರಿಯಾಲ್ಟಿ  ಪೋರ್ಟಲ್‌ಗಳು ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಫ್ಲ್ಯಾಟ್‌ಗಳು ಮತ್ತು ನಿವೇಶಗಳ ಮಾಹಿತಿ ನೀಡುತ್ತಿವೆ. ಜತೆಗೆ ಗ್ರಾಹಕರನ್ನು ಉಚಿತವಾಗಿ ಸ್ಥಳಕ್ಕೆ ಕರೆದುಕೊಂಡು ಹೋಗಿ ಬರುವ ವ್ಯವಸ್ಥೆಯನ್ನು ಈ ಪೋರ್ಟಲ್‌ಗಳು ಮಾಡುತ್ತಿವೆ.  ಇದರ ಜತೆಗೆ  ಗ್ರಾಹಕರನ್ನು ಸೆಳೆಯಲು ಹಲವಾರು ವೈಶಿಷ್ಟ್ಯಗಳನ್ನು ಪರಿಚಯಿಸಿವೆ.

ಮ್ಯಾಜಿಕ್‌ ಬ್ರಿಕ್ಸ್‌ ಪೋರ್ಟಲ್‌  ನಿವೇಶನ, ಫ್ಲ್ಯಾಟ್‌ ಕೊಳ್ಳುವ ಗ್ರಾಹಕರಿಗೆ ವಿಶೇಷ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ. ಗ್ರಾಹಕರೊಬ್ಬರು ತಾವು ಕೊಳ್ಳಬಹುದಾದ ನಿವೇಶನ ಅಥವಾ ಫ್ಲ್ಯಾಟ್‌ನ ಚಿತ್ರವನ್ನು 360 ಡಿಗ್ರಿ ಕೋನದಲ್ಲಿ ವೀಕ್ಷಿಸಬಹುದು. ಗ್ರಾಹಕರಿಗೆ ಕುಳಿತಲ್ಲೇ ಸಮಗ್ರ ಮಾಹಿತಿಯನ್ನು ಮ್ಯಾಜಿಕ್‌ ಬ್ರಿಕ್ಸ್‌ ಒದಗಿಸುತ್ತಿದೆ.
ಎಚ್‌ಡಿಎಫ್‌ಸಿ ರೆಡ್‌ ಕೂಡ ಕೊಳ್ಳುವ ಗ್ರಾಹಕರಿಗೆ ಇದೇ ತೆರೆನಾದ ಸೌಕರ್ಯಗಳನ್ನು ನೀಡಿದೆ.  ನಿವೇಶನ ಅಥವಾ ಫ್ಲ್ಯಾಟ್‌ ನೋಡಲು ಬಯಸುವ ಗ್ರಾಹಕರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಲು ಸಾರಿಗೆ ವ್ಯವಸ್ಥೆಯನ್ನು ಎಚ್‌ಡಿಎಫ್‌ಸಿ ರೆಡ್‌ ಕಲ್ಪಿಸಿದೆ. ಕಾಗದ ಪತ್ರಗಳ ವಿಚಾರದಲ್ಲೂ ವಿಶ್ವಾಸ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಂಡು ಬರಲಾಗಿದೆ ಎಂದು ಈ ವೆಬ್‌ ಪೋರ್ಟಲ್‌ಗಳು ಹೇಳುತ್ತವೆ.

ಮೋಸ ಮಾಡುವ ಅಥವಾ  ವಂಚಕ ಡೆವಲಪರ್ಸ್‌ಗಳು, ಕಂಪೆನಿಗಳನ್ನು ದೂರ ಇರಿಸಲಾಗಿದೆ ಎಂದು ರಿಯಾಲ್ಟಿ ಪೋರ್ಟಲ್‌ಗಳ ಪ್ರವರ್ತಕರು ಹೇಳುತ್ತಾರೆ.
ಗ್ರಾಹಕರು ಬುದ್ಧಿವಂತರಿದ್ದಾರೆ!

ನಿವೇಶನ, ಮನೆ ಅಥವಾ ಫ್ಲ್ಯಾಟ್‌ಗಳನ್ನು ಕೊಳ್ಳುವ ಗ್ರಾಹಕರಿಗೆ ರಿಯಾಲ್ಟಿ ವೆಬ್‌ಸೈಟ್‌ಗಳು ಮೊದಲ ಹೆಜ್ಜೆ ಅಷ್ಟೆ!  ಇಲ್ಲಿಂದ ಮಾಹಿತಿಯನ್ನು ಪಡೆದು ಆಸ್ತಿ ಖರೀದಿಸಲು ಬಯಸುವ ಗ್ರಾಹಕರು ಕಾನೂನು ತಜ್ಞರ ಸಲಹೆ ಪಡೆಯುತ್ತಾರೆ. ನಂತರ ಕಾಗದ ಪತ್ರಗಳನ್ನು ಪರಿಶೀಲಿಸಿ, ಸ್ಥಳ ವೀಕ್ಷಣೆ ಮಾಡಿ, ನೆರೆಹೊರೆಯವರನ್ನು ವಿಚಾರಿಸಿದ ಬಳಿಕವೇ ಅವರು ಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸುತ್ತಾರೆ ಎಂದು ‘ಲಿಯಾಸೆಸ್ ಪೋರೆಸ್’ ರಿಯಾಲ್ಟಿ ಕಂಪೆನಿಯ ನಿರ್ದೇಶಕ ಪಂಕಜ್‌ ಕಪೂರ್‌ ಹೇಳುತ್ತಾರೆ.

‘ರಿಯಾಲ್ಟಿ ವೆಬ್‌ಸೈಟ್‌ಗಳು ಗ್ರಾಹಕರಿಗೆ ಪ್ರಾಥಮಿಕ ಮಾಹಿತಿಯನ್ನು ಒದಗಿಸುತ್ತವೆ. ಗ್ರಾಹಕರು ಬ್ರೋಕರ್‌ಗಳು ಅಥವಾ ಏಜೆಂಟ್‌ಗಳ ಮೊರೆ ಹೋಗಿ ಅವರಿಗೆ ಕಮೀಷನ್‌ ನೀಡುವ ಬದಲು ಕುಳಿತಲ್ಲೇ, ಬೆರಳ ತುದಿಯಲ್ಲಿ ಮಾಹಿತಿ ಪಡೆಯುತ್ತಾರೆ. ಒಟ್ಟಾರೆ ಈ ರಿಯಾಲ್ಟಿ ಪೋರ್ಟಲ್‌ಗಳು ಮತ್ತು ಆ್ಯಪ್‌ಗಳಿಂದ  ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಇದೆ’ ಎನ್ನುತ್ತಾರೆ ಪಂಕಜ್ ಕಪೂರ್‌.

ಮ್ಯಾಜಿಕ್‌ ಬ್ರಿಕ್ಸ್‌, ನೋ ಬ್ರೋಕರ್‌, ಎಚ್‌ಡಿಎಫ್‌ಸಿ ರೆಡ್ ಪೋರ್ಟಲ್‌ಗಳು  ಖರೀದಿದಾರರಿಗೆ  ಪ್ರಾಥಮಿಕ ಮಾಹಿತಿ ಕೊಡುವುದರ ಜತೆಗೆ ಗ್ರಾಹಕರಿಗೆ ಆಸ್ತಿ, ನಿವೇಶನ, ಫ್ಲ್ಯಾಟ್‌ಗಳನ್ನು ನೋಂದಣಿ ಮಾಡಿಸಿ ಕೊಡುವ ಕೆಲಸವನ್ನು ಮಾಡುತ್ತಿರುವುದು ವಿಶೇಷ.

ಬ್ರೋಕರ್‌ಗಳ ಹಾವಳಿಯನ್ನು ತಪ್ಪಿಸುವಲ್ಲಿ ರಿಯಾಲ್ಟಿ ವೆಬ್‌ಸೈಟ್‌ಗಳು ಯಶಸ್ವಿಯಾಗಿವೆ. ಇದರಿಂದ ಆಸ್ತಿ ಖರೀದಿಸುವ ಗ್ರಾಹಕರಿಗೆ ಲಾಭವೇ ಹೆಚ್ಚು  ಎಂದು ರಿಯಾಲ್ಟಿ ವಿಶ್ಲೇಷಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT