ಅಧಿಕಾರ ಶಿಖರದಾಚೆ ನಂದನ ಇರಬಾರದೇಕೆ?

ಈ ಹಿಂದೆ ‘ಟೈಮ್’ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಾರ್ಕ್ ಅಪ್ಡಗ್ರೋವ್ ತಮ್ಮ ‘Second Acts’ ಕೃತಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರು ಅಧ್ಯಕ್ಷೋತ್ತರ ಬದುಕನ್ನು ಹೇಗೆ ಚೇತೋಹಾರಿಯಾಗಿಸಿಕೊಂಡರು ಎಂಬುದನ್ನು ವಿವರಿಸಿದ್ದಾರೆ.

ಅಧಿಕಾರ ಶಿಖರದಾಚೆ ನಂದನ ಇರಬಾರದೇಕೆ?
ಭಾರತದ ರಾಜಕಾರಣದಲ್ಲಿ ಇಂತಹ ಉದಾಹರಣೆ ಹೆಕ್ಕುವುದು ತ್ರಾಸ. ಒಂದು ಹಂತದ ಬಳಿಕ ಅಧಿಕಾರ ಸಾಕು ಎನ್ನುವ, ಅದರಿಂದ ದೂರ ಉಳಿದು ಬದುಕಿನ ಮತ್ತೊಂದು ಮಗ್ಗುಲನ್ನು ಅನ್ವೇಷಿಸುವ ರಾಜಕಾರಣಿಗಳು ಭಾರತದಲ್ಲಿ ತೀರಾ ವಿರಳ. ಆದರೆ ಅಮೆರಿಕದಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ಅದರಲ್ಲೂ ಅಮೆರಿಕ ಸಂವಿಧಾನದ 22ನೇ ತಿದ್ದುಪಡಿ, ಅಧ್ಯಕ್ಷ ಅವಧಿಗೆ ಮಿತಿ ಹೇರಿರುವುದರಿಂದ ಅಧ್ಯಕ್ಷರಾದವರು ಎರಡು ಅವಧಿಯ ಬಳಿಕ ಅಧಿಕಾರದ ಆಸೆ ಬಿಟ್ಟು, ಬದುಕಿನ ಉತ್ತರಾರ್ಧದತ್ತ ಮುಖ ಮಾಡಬೇಕಾದ ಅನಿವಾರ್ಯ ಇದೆ.

ಸಾಮಾನ್ಯವಾಗಿ ಎರಡು ಅವಧಿಯನ್ನು ಪೂರೈಸಿದವರು, ನಿವೃತ್ತಿ ಬದುಕಿನಲ್ಲಿ ತಮ್ಮ ಆಡಳಿತದ ಅನುಭವವನ್ನು, ಆತ್ಮಕತೆಯನ್ನು ಅಕ್ಷರ ರೂಪಕ್ಕಿಳಿಸುವ ಕೆಲಸ ಮಾಡುತ್ತಾರೆ.
 
ಸಂಪನ್ಮೂಲ ವ್ಯಕ್ತಿಗಳಾಗಿ ಭಾಷಣಗಳನ್ನು ನೀಡುತ್ತಾರೆ. ತಮ್ಮ ಈಡೇರದ ಆಸೆಗಳನ್ನು, ಇಷ್ಟದ ವೃತ್ತಿಯನ್ನು ಬದುಕಿನ ದ್ವಿತೀಯಾರ್ಧದಲ್ಲಿ ಕೈಗೆತ್ತಿಕೊಂಡು ಸಾರ್ಥಕತೆ ಅನುಭವಿಸುತ್ತಾರೆ. ಅಮೆರಿಕದ ಮಾಜಿ ಅಧ್ಯಕ್ಷರ ವಿಷಯದಲ್ಲಿ ಈ ಪ್ರವೃತ್ತಿ ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ. 

ಈ ಹಿಂದೆ ‘ಟೈಮ್’ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಾರ್ಕ್ ಅಪ್ಡಗ್ರೋವ್ ತಮ್ಮ ‘Second Acts’ ಕೃತಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರು ಅಧ್ಯಕ್ಷೋತ್ತರ ಬದುಕನ್ನು ಹೇಗೆ ಚೇತೋಹಾರಿಯಾಗಿಸಿಕೊಂಡರು ಎಂಬುದನ್ನು ವಿವರಿಸಿದ್ದಾರೆ.

ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್, ತಮ್ಮ ಎರಡನೇ ಅವಧಿ ಮುಗಿದ ಬಳಿಕ ಪೊಟೋಮಾಕ್ ನದಿ ತೀರದ ಮೌಂಟ್ ವರ್ಮನ್‌ನಲ್ಲಿ ಗೋಧಿ, ಜೋಳ, ತಂಬಾಕು ಬೆಳೆಯುತ್ತಾ ಮುಂದಿನ ದಿನಗಳನ್ನು ಕಳೆದಿದ್ದರು. ಜೆಫರ್ಸನ್ ಅವರಂತೂ ಅಧ್ಯಕ್ಷ ಸ್ಥಾನದಿಂದ ಇಳಿದು ನೇರ ಹೋಗಿದ್ದು ವರ್ಜೀನಿಯಾ ವಿಶ್ವವಿದ್ಯಾಲಯದ ಕಡೆಗೆ.

ಥಿಯೋಡೋರ್ ರೂಸ್ವೆಲ್ಟ್ ಅಧ್ಯಕ್ಷ ಪದವಿ ತೊರೆದಾಗ ಅವರಿಗೆ ಕೇವಲ 50 ವರ್ಷ. ಮೈಯಲ್ಲಿ ಕಸುವಿತ್ತು. ಶ್ವೇತಭವನ ತೊರೆದ ರೂಸ್ವೆಲ್ಟ್ ತಮ್ಮ ಮಗನೊಂದಿಗೆ ಆಫ್ರಿಕಾ ಕಾಡುಗಳತ್ತ ನಡೆದರು. ಬ್ರೆಜಿಲ್ ಕಾಡುಗಳನ್ನು ಸುತ್ತಿ ಬಂದರು. ಒಂದಿಲ್ಲೊಂದು ಸಾಹಸಗಳಲ್ಲಿ ಹತ್ತು ವರ್ಷ ಕಳೆದು ತಮ್ಮ 60ನೆಯ ವಯಸ್ಸಿನಲ್ಲಿ ತೀರಿಕೊಂಡರು.
 
ಇನ್ನು, ವಿಲಿಯಂ ಟಾಫ್ಟ್ ಅಮೆರಿಕದ ಅಧ್ಯಕ್ಷರಾಗಿದ್ದರು ಎಂದು ನೆನಪಿಸಿಕೊಳ್ಳುವವರು ಕಡಿಮೆ. ಅವರು ಪದವಿ ತೊರೆದ ಬಳಿಕ ಯೇಲ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರಾಧ್ಯಾಪಕರಾಗಿ ಹೆಸರು ಮಾಡಿದರು. ವಾರೆನ್ ಹಾರ್ಡಿಂಗ್ ಅವಧಿಯಲ್ಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
 
ಹಾಗಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂದೇ ಇತಿಹಾಸದ ಪುಟಗಳಲ್ಲಿ ಹೆಚ್ಚು ಉಲ್ಲೇಖಗೊಂಡಿದ್ದಾರೆ. 1929ರಲ್ಲಿ ಆರ್ಥಿಕ ಮಹಾಪತನ ಅಮೆರಿಕವನ್ನು ಅಪ್ಪಳಿಸಿದಾಗ, ಅಮೆರಿಕದ ಚುಕ್ಕಾಣಿ ಹರ್ಬರ್ಟ್ ಹೂವರ್ ಕೈಯಲ್ಲಿತ್ತು. ಅಮೆರಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ಹೂವರ್ ಕುಪ್ರಸಿದ್ಧರಾದರು. ‘ನಾಲಾಯಕ್ ಅಧ್ಯಕ್ಷ’ ಎಂಬ ವಿಶೇಷಣ ಹೂವರ್ ಕೊರಳಿಗೆ ಬಿತ್ತು.
 
ಹಾಗಾಗಿ ನಂತರ 13 ವರ್ಷಗಳ ಕಾಲ ಹೂವರ್ ಅವರನ್ನು ಯಾರೂ ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ರೂಸ್ವೆಲ್ಟ್ ನಿಧನದ ನಂತರ ಅಚಾನಕ್ ಆಗಿ ಅಧ್ಯಕ್ಷರಾದ ಹ್ಯಾರಿ ಟ್ರೂಮನ್, ಆಡಳಿತ ನಿರ್ವಹಣೆಗೆ ಹೂವರ್ ಅನುಭವ ಬಳಸಿಕೊಂಡರು. ಮುಖ್ಯವಾಗಿ ಎರಡನೇ ವಿಶ್ವಯುದ್ಧದ ತರುವಾಯ ಪರಿಹಾರ ಕಾರ್ಯಗಳ ಉಸ್ತುವಾರಿಯನ್ನು ಹೂವರ್ ಹೆಗಲಿಗೆ ಹಾಕಿದರು.

ಯುದ್ಧದಿಂದ ತತ್ತರಿಸಿ ಹೋಗಿದ್ದ ಯುರೋಪ್, ಆಹಾರ ಅಭಾವದಿಂದ ನಿಸ್ತೇಜವಾಗಿತ್ತು. ಪರಿಹಾರ ಕಾರ್ಯಗಳಿಗೆ ಹೂವರ್ ಅನುಭವಧಾರೆ ಎರೆದು ಜನಮನ್ನಣೆ ಗಳಿಸಿದರು. ಹೂವರ್ ನಡೆಯಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಇರಲಿಲ್ಲ, ಅವರಿಗೆ ಮತ್ತೊಮ್ಮೆ ಅಧ್ಯಕ್ಷರಾಗುವುದು ಬೇಕಿರಲಿಲ್ಲ, ಅದಕ್ಕೆ ಅವಕಾಶವೂ ಇರಲಿಲ್ಲವೆನ್ನಿ.
 
ಆದರೆ ದೇಶದ ಸಂಕಷ್ಟದ ಸಮಯದಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂಬ ತಹತಹ ಹೂವರ್ ಅವರಲ್ಲಿತ್ತು. ಅದನ್ನು ಜನ ಮೆಚ್ಚಿದರು, ‘ನಾಲಾಯಕ್’ ಎಂಬ ಕಳಂಕ ಕಳಚಿಬಿತ್ತು. 
 
ಟ್ರೂಮನ್ ಅಧ್ಯಕ್ಷರಾಗಿ ಎರಡು ಅವಧಿ ಮುಗಿಸಿ, ಪತ್ನಿಯೊಂದಿಗೆ ತಮ್ಮ ಊರಾದ ವಿಸ್ಸೋರಿಗೆ ಬಂದಾಗ, ಅಲ್ಲಿನ ಪತ್ರಕರ್ತರು ‘ಮುಂದೇನು ಮಾಡುತ್ತೀರಿ?’ ಎಂಬ ಪ್ರಶ್ನೆ ಒಡ್ಡಿದ್ದರು. ಅಮೆರಿಕ ಅಧ್ಯಕ್ಷ ಎಂಬ ಅಧಿಕಾರ ಶಿಖರದಿಂದ ಇಳಿದ ಬಳಿಕ ಏನು ಮಾಡಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು.

ಟ್ರೂಮನ್ ಕಿಸಕ್ಕನೆ ನಕ್ಕು ತಮ್ಮ ಕೈಲಿದ್ದ ಟ್ರಂಕು ತೋರಿಸಿ, ‘ಇದನ್ನು ಮನೆಯ ಮಾಳಿಗೆಯಲ್ಲಿ ಇಡುತ್ತೇನೆ’ ಎಂದಿದ್ದರು. ಅಧಿಕಾರ ರಾಜಕಾರಣದಿಂದ ದೂರ ಉಳಿದು ಘನವಂತಿಕೆಯಿಂದ ಬದುಕುವ ಪರಿಪಾಠಕ್ಕೆ ಟ್ರೂಮನ್ ಮೇಲ್ಪಂಕ್ತಿ ಹಾಕಿಕೊಟ್ಟರು.
 
ಅಚ್ಚುಕಟ್ಟಾದ ಗ್ರಂಥಾಲಯವನ್ನು ತಾವೇ ಮುಂದೆ ನಿಂತು ನಿರ್ಮಿಸಿದರು. ಶಾಲಾ ಕಾಲೇಜುಗಳಿಗೆ ತೆರಳಿ ಮಕ್ಕಳನ್ನು ಉದ್ದೇಶಿಸಿ ಭಾಷಣ ಮಾಡಿದರು. ‘1945: ಇಯರ್‌ ಆಫ್‌ ಡಿಸೀಷನ್ಸ್‌’ ಕೃತಿ ಬರೆದರು. ಆಗಲೂ ಹೂವರ್ ಸಖ್ಯ ಮುಂದುವರೆದಿತ್ತು.
 
‘ಟ್ರೂಮನ್ ಗ್ರಂಥಾಲಯ’ದ ಲೋಕಾರ್ಪಣೆ ಸಂದರ್ಭದಲ್ಲಿ, ಹೂವರ್ ಮತ್ತು ಟ್ರೂಮನ್ ಎದುರಿಗೆ ಮತ್ತದೇ ಪ್ರಶ್ನೆ ಬಂತು ‘ಮಾಜಿ ಅಧ್ಯಕ್ಷರು ದಿನವನ್ನು ಹೇಗೆ ಕಳೆಯುತ್ತಿದ್ದಾರೆ?’ ‘Madam, we spend our days taking pills and dedicating libraries’ ಎಂದು ಹೂವರ್ ಉತ್ತರಿಸಿದ್ದರು. ಆದರೆ ಅದಕ್ಕೂ ಮಿಗಿಲಾದ ಕೆಲಸಗಳನ್ನು ಆ ಇಬ್ಬರೂ ತಮ್ಮ ನಿವೃತ್ತ ಜೀವನದಲ್ಲಿ ಮಾಡಿದ್ದರು.
 
ಬಿಗಿಮೊಗದ ಅಧ್ಯಕ್ಷ ಐಸೆನ್ ಹೂವರ್, ನಿವೃತ್ತಿಯಾದರೂ ನಿಡುಸುಯ್ದವರಲ್ಲ. ಕ್ಯೂಬಾ ಮೇಲಿನ ‘ಬೇ ಆಫ್ ಪಿಗ್ಸ್’ ದಾಳಿಯ ಸಂದರ್ಭದಲ್ಲಿ, ವಿಯೆಟ್ನಾಂ ಯುದ್ಧ ಸಮಯದಲ್ಲಿ ಕೆನಡಿ ಆಡಳಿತಕ್ಕೆ ಸಲಹೆ ನೀಡುವ ಕೆಲಸವನ್ನು ಐಸೆನ್ ಮುಂದುವರೆಸಿದರು.‘ಆಯಿಲ್ ಪೇಂಟಿಂಗ್’ ಬಗ್ಗೆ ಅವರಿಗೆ ಒಲವಿತ್ತು, ನಿವೃತ್ತಿಯ ಬಳಿಕ ಸಾಕಷ್ಟು ಸಮಯವನ್ನು ಪೇಂಟಿಂಗ್ ಮಾಡುವುದರಲ್ಲಿ ಕಳೆದಿದ್ದರು.

ಇನ್ನು, ತಮ್ಮ ಅಧಿಕಾರದ ಅವಧಿಯಲ್ಲಿ ಕಪ್ಪು ಜನರಿಗೆ ಮತದಾನದ ಹಕ್ಕು, ಕನಿಷ್ಠ ವೇತನ ಹೆಚ್ಚಳದಂತಹ ಮಹತ್ವದ ನಿರ್ಣಯಗಳನ್ನು ಜಾರಿಗೊಳಿಸಿದ್ದ ಲಿಂಡನ್ ಜಾನ್ಸನ್ ಅವರದ್ದು ಭಿನ್ನ ಕತೆ. ಸಾಕಷ್ಟು ಜನಪ್ರಿಯತೆ ಇದ್ದಾಗಿಯೂ ವಿಯೆಟ್ನಾಂ ಯುದ್ಧ ಅವರನ್ನು ಕಂಗೆಡಿಸಿತ್ತು. ‘ಈ ದಿನ ಎಷ್ಟು ಮಕ್ಕಳನ್ನು ಹತ್ಯೆ ಮಾಡಿದಿರಿ’ ಎಂದು ಮಹಿಳೆಯೊಬ್ಬರು ಕೇಳಿದ್ದು, ಕಿವಿಯಲ್ಲಿ ಗುಯ್ಗುಡುತ್ತಾ ಮನೋಖಿನ್ನತೆಗೆ ದೂಡಿತ್ತು.

ಆ ಮನಸ್ಥಿತಿಯಿಂದ ಹೊರಬರಲು ಪಶು ಸಂಗೋಪನೆ ಅವರ ನೆರವಿಗೆ ಬಂತು. ಆಕಳು, ಕುರಿ, ಕುದುರೆಗಳನ್ನು ಸಲಹುತ್ತಾ ಜಾನ್ಸನ್ ದಿನ ಕಳೆಯುತ್ತಿದ್ದರು. ಮಾಜಿ ಅಧ್ಯಕ್ಷ ಎಂಬುದನ್ನೂ ಲೆಕ್ಕಿಸದೆ ತಾವೇ ನೈರ್ಮಲ್ಯ ಕೆಲಸಗಳನ್ನು ಮಾಡುತ್ತಿದ್ದರು. ‘ಲಿಂಡನ್ ಜಾನ್ಸನ್ ಮತ್ತು ಅಮೆರಿಕದ ಕನಸು’ ಎಂಬ ಕೃತಿ ಬರೆದರು.
 
ತಮ್ಮ ಅಧಿಕಾರಾವಧಿಯ ಬಳಿಕವೂ ಅಮೆರಿಕದ ವಿದೇಶಾಂಗ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ರಿಚರ್ಡ್ ನಿಕ್ಸನ್ ಮತ್ತು ಜಿಮ್ಮಿ ಕಾರ್ಟರ್. ‘ವಾಟರ್ ಗೇಟ್’ ಹಗರಣದಿಂದಾಗಿ ಮುಖಕ್ಕೆ ಕಪ್ಪು ಅಂಟಿಸಿಕೊಂಡು ಶ್ವೇತಭವನದಿಂದ ಹೊರಬಿದ್ದಿದ್ದ ನಿಕ್ಸನ್, ಕೆಲ ವರ್ಷಗಳಲ್ಲೇ ಪುಟಿದೆದ್ದು ಬಂದರು. ತಮ್ಮ ಆಸಕ್ತಿಯ ವಿಷಯವಾದ ವಿದೇಶಾಂಗ ನೀತಿ ಕುರಿತು ಉಪನ್ಯಾಸಗಳನ್ನು ಮಾಡಿದರು, ಹಲವು ಪುಸ್ತಕಗಳು ಬಂದವು.

ತಾವು ಅಧಿಕಾರದಲ್ಲಿ ಇರದಿದ್ದರೂ ಜಾಗತಿಕ ರಾಜಕೀಯದಲ್ಲಿ ಅಮೆರಿಕದ ಸ್ಥಾನ ಮತ್ತಷ್ಟು ಭದ್ರವಾಗುವಂತೆ ವಿದೇಶಾಂಗ ವ್ಯವಹಾರಗಳ ಬಗ್ಗೆ ಆಡಳಿತಕ್ಕೆ ಸಲಹೆ ನೀಡುತ್ತಾ, ಜನರಿಂದ ಭೇಷ್ ಎನ್ನಿಸಿಕೊಂಡರು. ಉಳಿದಂತೆ ಕಾರ್ಟರ್ ಅವರದ್ದು ‘ನೊಬೆಲ್’ ಸಾಧನೆ. ಟ್ರೂಮನ್ ಅವರನ್ನು ಕಾರ್ಟರ್ ತಮ್ಮ ಆದರ್ಶವಾಗಿಸಿಕೊಂಡಿದ್ದರು. ನೌಕಾದಳದಲ್ಲಿದ್ದಾಗ ಟ್ರೂಮನ್ ತಂಡದಲ್ಲಿ ಕಾರ್ಟರ್ ಕೆಲಸ ಮಾಡಿದ್ದರು.

ಅಧ್ಯಕ್ಷೋತ್ತರ ಬದುಕಿನಲ್ಲೂ ಟ್ರೂಮನ್ ಅವರನ್ನೇ ಕಾರ್ಟರ್ ಅನುಸರಿಸಿದರು. 1994ರಲ್ಲಿ ಹೈಟಿಯಲ್ಲಿ ಮಿಲಿಟರಿ ಆಡಳಿತ ಮತ್ತು ಸರ್ಕಾರದ ನಡುವೆ ಜಟಾಪಟಿ ನಡೆದು ಅರಾಜಕತೆ ಉಂಟಾದಾಗ, ಕಾರ್ಟರ್ ಬಿಳಿಯ ಪತಾಕೆ ಹಿಡಿದು ಅಲ್ಲಿಗೆ ತೆರಳಿ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಅದೇ ಕಾರಣದಿಂದ ನೊಬೆಲ್ ಶಾಂತಿ ಪುರಸ್ಕಾರ ಮುಡಿಗೇರಿತು. ಕಾರ್ಟರ್ ಅವರನ್ನು ಹಿಂಬಾಲಿಸಿ ನಿವೃತ್ತರಾದ ಜೆರಾಲ್ಡ್ ಫೋರ್ಡ್, ತಮ್ಮ ಬದುಕಿನ ಎರಡನೇ ಆವೃತ್ತಿಯನ್ನು ನೋವು ನಿವಾರಕ ಮಾತ್ರೆ ಮತ್ತು ಮದ್ಯಪಾನ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಒಪ್ಪಿಸಿಕೊಂಡರು.
 
ರೇಗನ್ ಬದುಕಿನ ರಾಜಕೀಯೋತ್ತರ ಪರ್ವ ಚುರುಕಾಗಿರಲಿಲ್ಲ. ವರ್ಷಗಳು ಉರುಳಿದಂತೆ ರೇಗನ್ ಮರೆಗುಳಿಯಾದರು. ಅಲ್ಜೈಮರ್ ಲಕ್ಷಣ ಕಾಣಿಸಿಕೊಂಡಿತು. ಆಗ ಅವರು ಅಮೆರಿಕದ ಜನರಿಗೆ ಬರೆದ ಪತ್ರ ಮಹತ್ವದ್ದು. ಬದುಕಿನ ಕೊನೆಯವರೆಗೂ ರೇಗನ್ ಮತ್ತು ನ್ಯಾನ್ಸಿ ರೇಗನ್, ಅಲ್ಜೈಮರ್ ಬಗ್ಗೆ ಜಾಗೃತಿ ಮೂಡಿಸುವ, ಮಾಹಿತಿ ಹಂಚುವ ಕೆಲಸದಲ್ಲಿ ತೊಡಗಿಕೊಂಡರು.
 
ಅಂತೆಯೇ, ಕೊಂಚ ರೋಚಕ ಎನಿಸುವ ಬದುಕು ಎಂದರೆ ಬುಷ್ ಸೀನಿಯರ್ ಅವರದ್ದು. ಅಮೆರಿಕದಲ್ಲಿ ಕುಟುಂಬಗಳು ಒಡೆದು ಹೋಗುವುದನ್ನು ತಪ್ಪಿಸಬೇಕು ಎಂಬುದೇ ಬುಷ್ ಸೀನಿಯರ್ ನಿಲುವಾಗಿತ್ತು. ಹಾಗಾಗಿ ರಾಜಕೀಯ ಅಧ್ಯಾಯ ಮಡಚಿ ಮೊಮ್ಮಕ್ಕಳೊಂದಿಗೆ ಆಡುತ್ತಾ ಬದುಕು ಕಳೆದರು. ಆದರೆ ಸಾಹಸ ಪ್ರವೃತ್ತಿಯನ್ನು ಬದುಕಿನುದ್ದಕ್ಕೂ ಬಿಟ್ಟುಕೊಡದ ಬುಷ್, ತಮ್ಮ 75 ಮತ್ತು 80ನೇ ಹುಟ್ಟುಹಬ್ಬದಂದು ಪ್ಯಾರಾಚೂಟ್ ಕಟ್ಟಿಕೊಂಡು ಆಗಸದಿಂದ ಜಿಗಿದಿದ್ದರು!
 
ತಮ್ಮ ಅಧಿಕಾರದ ಅವಧಿಯಲ್ಲಿ ವಿವಾದಕ್ಕೀಡಾಗಿದ್ದ ಕ್ಲಿಂಟನ್, ಆಫ್ರಿಕಾದಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದ ಏಡ್ಸ್ ಪ್ರಕರಣಗಳನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ನೆಲ್ಸನ್ ಮಂಡೇಲಾ ಜೊತೆಗೂಡಿ ಪ್ರಯತ್ನ ಮಾಡಿದ್ದು ಸಾಕಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.
 
ಹಾಗೆಯೇ ಚರ್ಚಿಲ್ ಆರಾಧಕರಾದ ಬುಷ್ ಜೂನಿಯರ್, ಬದುಕಿನ ದ್ವಿತೀಯಾರ್ಧವನ್ನು ಅಧ್ಯಯನಕ್ಕೆ ಮೀಸಲಿಟ್ಟು, ಚಿತ್ರಕಲೆಗೆ ಸಮಯ ಕೊಟ್ಟು ಜಗತ್ತಿನ ವಿವಿಧ ನಾಯಕರ ಚಿತ್ರ ರಚಿಸುತ್ತಾ, ಅವನ್ನು ತಮ್ಮ ಗ್ರಂಥಾಲಯದಲ್ಲಿ ಪ್ರದರ್ಶಿಸುತ್ತಾ, ‘ಸರ್ವಿಕಲ್ ಕ್ಯಾನ್ಸರ್’ ಬಗ್ಗೆ ಜಾಗೃತಿ ಮೂಡಿಸುತ್ತಾ ಇಂದಿಗೂ ಚಟುವಟಿಕೆಯಿಂದಿದ್ದಾರೆ.

ಎರಡು ತಿಂಗಳ ಹಿಂದೆ ಶ್ವೇತಭವನ ತೊರೆದ ಒಬಾಮ ಪ್ರೊಫೆಸರ್ ಆಗುತ್ತಾರಾ, ವರ್ಣೀಯರಿಗೆ ಆತ್ಮವಿಶ್ವಾಸ ತುಂಬುತ್ತಾ, ‘ಮೈ ಬ್ರದರ್ ಕೀಪರ್’ ಯೋಜನೆ ಮುಂದುವರೆಸುತ್ತಾರಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. 
 
ಹೀಗೆ ಅಮೆರಿಕದ ಅಧ್ಯಕ್ಷರಾದವರು ಅಧಿಕಾರ ರಾಜಕೀಯ ಎಂಬ ಸೆಳೆತವನ್ನು ದಾಟಿ, ಅಹಂ ಬಿಟ್ಟುಕೊಟ್ಟು ಹಾಲಿ ಅಧ್ಯಕ್ಷರ ಸಹಾಯಕ್ಕೆ ನಿಂತದ್ದು, ಮಾಜಿ ಅಧ್ಯಕ್ಷ ಎಂಬ ಬಿಂಕ ತೊರೆದು ಜಾಗತಿಕ ಸಮಸ್ಯೆಗಳ ನಿವಾರಣೆಗೆ ಸಂಧಾನಕಾರರಾಗಿ, ರಾಯಭಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರವಾಹ, ಚಂಡಮಾರುತಗಳಾದಾಗ ಸೇವಾ ಕಾರ್ಯದಲ್ಲಿ ಸಾಮಾನ್ಯನಂತೆ ಟೊಂಕಕಟ್ಟಿದ ಉದಾಹರಣೆಗಳು ಸಾಕಷ್ಟಿವೆ.

ಈ ಬಗ್ಗೆ ಓದುತ್ತಿದ್ದಾಗ, ಭಾರತದ ಹಲವು ರಾಜಕಾರಣಿಗಳು ಸ್ಮೃತಿಪಟಲದಲ್ಲಿ ಹಾದು ಹೋದರು. ಕೆಲವು ಪ್ರಶ್ನೆಗಳೂ ಪುಟಿದವು. ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಈಗೇನು ಮಾಡುತ್ತಿದ್ದಾರೆ? ಲಾಲ್‌ಕೃಷ್ಣ ಅಡ್ವಾಣಿಯವರು ರಾಷ್ಟ್ರಪತಿ ಹುದ್ದೆಯನ್ನು ಎದುರು ನೋಡುತ್ತಿದ್ದಾರೆಯೇ?

ಟೆನಿಸ್ ಬಗ್ಗೆ ಒಲವಿರುವ ಎಸ್.ಎಂ. ಕೃಷ್ಣ, ಶ್ರೇಷ್ಠ ದರ್ಜೆಯ ಟೆನಿಸ್ ಅಕಾಡೆಮಿ ಸ್ಥಾಪಿಸುವುದನ್ನು, ತಮ್ಮ ಸ್ವಕ್ಷೇತ್ರ ಮದ್ದೂರಿನಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲು ಮುಂದಾಗುವುದನ್ನು (ನನ್ನ ಊರೇ ಆದ್ದರಿಂದ ಇದು ಆಗ್ರಹ ಕೂಡ) ಕಲ್ಪಿಸಿಕೊಳ್ಳಬಹುದೇ?

ಕೃಷಿ ಮತ್ತು ನೀರಾವರಿ ಸಮಸ್ಯೆಗಳ ಬಗ್ಗೆ ಅಪಾರ ತಿಳಿವಿರುವ ದೇವೇಗೌಡರು, ರಾಜಕೀಯವನ್ನು ಪಕ್ಕಕ್ಕಿಟ್ಟು ಈ ಕ್ಷೇತ್ರಗಳಲ್ಲಿ ಮಾರ್ಗದರ್ಶನ ನೀಡಬಲ್ಲ ಮಾದರಿ ಸಂಸ್ಥೆಯೊಂದನ್ನು ಕಟ್ಟಿದರೆ, ಅಭಿಯಾನ ರೂಪಿಸಿದರೆ ಹೇಗಿರುತ್ತದೆ? 
 
ಖರ್ಗೆ, ಮೊಯಿಲಿ, ಜಾಫರ್ ಷರೀಫ್ ಖಾದಿ ತೊರೆದು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಯುವಕರಲ್ಲಿ ಆತ್ಮಬಲ ತುಂಬುತ್ತಾ ಓಡಾಡಿಕೊಂಡಿದ್ದರೆ ಚೆನ್ನಿತ್ತೇ?

ಈಗಾಗಲೇ ಮುಖ್ಯಮಂತ್ರಿ ಪದವಿಯಲ್ಲಿ ಕೂತವರು, ಐದಾರು ಬಾರಿ ಸಂಸದರಾಗಿ, ಶಾಸಕರಾಗಿ ಕೆಲಸ ಮಾಡಿದವರು, ತಮ್ಮ ಕ್ಷೇತ್ರಗಳನ್ನು ತರುಣರಿಗೆ ಬಿಟ್ಟುಕೊಟ್ಟು, ಅಧಿಕಾರ ರಾಜಕಾರಣ ಇನ್ನು ಸಾಕು ಎಂದು ಬದುಕಿನ ಮತ್ತೊಂದು ಮಗ್ಗುಲನ್ನು ಅನ್ವೇಷಿಸುವುದು ಯಾವಾಗ?  
 
ಬಿಡಿ, ಎಲ್ಲ ಪಕ್ಷಗಳಲ್ಲೂ ವಯೋವೃದ್ಧ ರಾಜಕಾರಣಿಗಳು ಇಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು, ಯಾವುದಾದರೂ ಪದವಿಯಲ್ಲಿ ಕೂರಲು ಹಾತೊರೆಯುತ್ತಿರುವುದು ನಡೆದೇ ಇದೆ. ?

ಹಾಗಾದರೆ ಮೂರ್ನಾಲ್ಕು ದಶಕ ಕಳೆದ ಮೇಲೂ ರುಚಿ ಹೆಚ್ಚಿಸುವ ಏಕೈಕ ವೃತ್ತಿ ರಾಜಕಾರಣವೇ ಅಥವಾ ಮಕ್ಕಳು, ಮೊಮ್ಮಕ್ಕಳು, ಹಿಂಬಾಲಕರ ರಾಜಕೀಯ ಭವಿಷ್ಯ ರೂಪಿಸಲು ಸಕ್ರಿಯ ರಾಜಕಾರಣ ಅನಿವಾರ್ಯವೇ?
Comments
ಈ ವಿಭಾಗದಿಂದ ಇನ್ನಷ್ಟು
ಕ್ಸಿ ಜಿನ್ ಪಿಂಗ್ ಮತ್ತೊಬ್ಬ ಮಾವೊ ಆಗುವರೇ?

ಸೀಮೋಲ್ಲಂಘನ
ಕ್ಸಿ ಜಿನ್ ಪಿಂಗ್ ಮತ್ತೊಬ್ಬ ಮಾವೊ ಆಗುವರೇ?

9 Mar, 2018
ಸಮರೋತ್ಸಾಹದ ನಡುವೆ ಸಂಧಾನ ಅರ್ಥಹೀನ

ಸೀಮೋಲ್ಲಂಘನ
ಸಮರೋತ್ಸಾಹದ ನಡುವೆ ಸಂಧಾನ ಅರ್ಥಹೀನ

23 Feb, 2018
ಪೆಡಸು ಮೇಲ್ದುಟಿ ಜನರ ಒಂಟಿತನದ ಸಂಕಟ

ಸೀಮೋಲ್ಲಂಘನ
ಪೆಡಸು ಮೇಲ್ದುಟಿ ಜನರ ಒಂಟಿತನದ ಸಂಕಟ

9 Feb, 2018
ಎಂದೂ ಮುಗಿಯದ ಕದನ, ಏನೀ ಮೂರ್ಖತನ?

ಸೀಮೋಲ್ಲಂಘನ
ಎಂದೂ ಮುಗಿಯದ ಕದನ, ಏನೀ ಮೂರ್ಖತನ?

26 Jan, 2018
ವೇಲ್ಸ್ ರಾಜಕುಮಾರನಿಗೆ ಸಿಕ್ಕಳಲ್ಲ ಸಿಂಡ್ರೆಲಾ!

ಸೀಮೋಲ್ಲಂಘನ
ವೇಲ್ಸ್ ರಾಜಕುಮಾರನಿಗೆ ಸಿಕ್ಕಳಲ್ಲ ಸಿಂಡ್ರೆಲಾ!

29 Dec, 2017