ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ್ಯಾದ್ರಿ ಮತ್ತು ಸಾಮೂಹಿಕ ಭವಿಷ್ಯ

ಸಹ್ಯಾದ್ರಿಯ ಸಂರಕ್ಷಣೆಯೇ ಬೇಕಿಲ್ಲ ಎಂಬಂತೆ ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ. ಅವರ ದುಡುಕಿನ ತೀರ್ಮಾನ ಸಾಮೂಹಿಕ ಭವಿಷ್ಯವನ್ನೇ ಅಪಾಯಕ್ಕೆ ಒಡ್ಡುವುದಿಲ್ಲವೇ?
Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ದಕ್ಷಿಣ ಭಾರತದ ಜೀವಸೆಲೆ ಪಶ್ಚಿಮಘಟ್ಟದಲ್ಲಿನ ಬೆಳವಣಿಗೆಗಳನ್ನೊಮ್ಮೆ ಗಮನಿಸಿ. ರಾಜಕೀಯ ಪರಿಸರಶಾಸ್ತ್ರಕ್ಕೆ ಹೊಸ ಅಧ್ಯಾಯಗಳೇ ಆಗಬಲ್ಲ ವಿದ್ಯಮಾನಗಳು ಇಲ್ಲಿ ಜರುಗುತ್ತಿವೆ!
 
ಪಶ್ಚಿಮಘಟ್ಟದಲ್ಲಿ ಹುಟ್ಟಿಹರಿವ ನದಿತೊರೆಗಳೇ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ, ತಮಿಳುನಾಡು ಹಾಗೂ ಕೇರಳ ಪ್ರದೇಶಗಳ ಜನಜೀವನವನ್ನು ಪೊರೆಯುತ್ತಿರುವುದು ತಾನೆ? ಹೀಗಾಗಿಯೇ, ಈ ಪ್ರದೇಶದ ಸಂರಕ್ಷಣೆಗೆ ಅಷ್ಟೊಂದು ಮಹತ್ವಇರುವುದು. ಈ ಕುರಿತು ಈಗ ಕಾನೂನು- ನಿಯಮಗಳಿಗೇನೂ ಕೊರತೆಯಿಲ್ಲ.

ಆದರೆ, ಅವುಗಳ ಅನುಷ್ಠಾನದ ಹೊಣೆಹೊತ್ತ ಅರಣ್ಯ ಇಲಾಖೆ ಮಾತ್ರ ವಸಾಹತುಶಾಹಿ ಹಿನ್ನೆಲೆಯ ವಿಚಕ್ಷಣಾ ಕಾರ್ಯಶೈಲಿ ತೊರೆದು, ಜನಸಹಭಾಗಿತ್ವದಲ್ಲಿ ಸಂರಕ್ಷಣಾ ಕಾರ್ಯ ರೂಪಿಸಲು ಯಶಸ್ವಿಯೇ ಆಗಿಲ್ಲ. 
 
ಕಠಿಣವಾದ ‘ಅರಣ್ಯ ಸಂರಕ್ಷಣಾ ಕಾನೂನು–  1980’ ನ್ಯಾಯಾಲಯಗಳಲ್ಲಿ ಖಟ್ಲೆಗಳನ್ನು ಹೆಚ್ಚಿಸಿದೆಯೇ ಹೊರತು, ಸ್ಥಳೀಯರ ಸಹಕಾರದಿಂದ ಅರಣ್ಯ ರಕ್ಷಿಸುವ ವಾತಾವರಣವನ್ನು ರೂಪಿಸುತ್ತಲೇ ಇಲ್ಲ.
 
‘ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972’ ಸಹ ಮೇಲಿನಿಂದ ಆದೇಶಿಸಿ ನಿಯಂತ್ರಿಸುವ ಅಧಿಕಾರಶಾಹಿಯಿಂದಾಗಿ, ವನವಾಸಿಗಳ ಸಹಭಾಗಿತ್ವದಲ್ಲಿ ವನ್ಯಮೃಗಗಳು ಹಾಗೂ ಅವುಗಳ ಆವಾಸಸ್ಥಾನಗಳನ್ನು ಕಾಪಾಡುವ ಸಾಧ್ಯತೆಗಳನ್ನೇ ಮೂಡಿಸುತ್ತಿಲ್ಲ. ಬದಲಾಗಿ, ಸಂರಕ್ಷಿತ ದ್ವೀಪಗಳಂತಾಗಿರುವ ಈ ರಕ್ಷಿತಾರಣ್ಯಗಳು ಕೇವಲ ಹಣ ಗಳಿಕೆಯ ಪ್ರವಾಸೋದ್ಯಮವಾಗುತ್ತಿರುವ ಎಲ್ಲ ಲಕ್ಷಣಗಳು ಇಂದು ಕಾಣುತ್ತಿವೆ.
 
ಆನಂತರದಲ್ಲಿ ಜಾರಿಗೆ ಬಂದ ‘ಪರಿಸರ ಸಂರಕ್ಷಣಾ ಕಾಯ್ದೆ– 1986’ ಆಶಯಗಳಂತೂ ಮಾಲಿನ್ಯ ನಿಯಂತ್ರಣ ಮಂಡಳಿಗಳ ನೋಟಿಸ್‌- ಖಟ್ಲೆ, ದಂಡ- ಪರಿಹಾರ, ವರದಿ- ಆದೇಶಗಳಲ್ಲೇ ಮಾಯವಾಗಿ, ನೆಲ-ಜಲ-ವಾತಾವರಣ ಕಲುಷಿತವಾಗುತ್ತಿವೆ.

ವನವಾಸಿಗಳು, ಸ್ಥಳೀಯರು, ಗ್ರಾಮ ಪಂಚಾಯಿತಿಗಳ ಮೂಲಕ ಜೀವಸಂಕುಲಗಳ ಸಂರಕ್ಷಣೆಗಾಗಿ ಉದ್ದೇಶಿಸಿದ್ದ ‘ಜೀವವೈವಿಧ್ಯ ಸಂರಕ್ಷಣಾ ಕಾನೂನು– 2002’ ಆಡಳಿತಯಂತ್ರದ ಬಿಸಿಗೆ ಕರಗಿ, ಜೀವವೈವಿಧ್ಯ ರಕ್ಷಣೆ ನೆಲೆತಪ್ಪಿದೆ. ಸಾಮಾಜಿಕ ಅರಣ್ಯ ಯೋಜನೆ ಹಾಗೂ ‘ಪಾಲಿಸಿದರೆ ಪಾಲು’ ತತ್ವವನ್ನಾಧರಿಸಿರುವ ಜಂಟಿ ಅರಣ್ಯ ಯೋಜನೆಗಳಂತೂ ಪಾರದರ್ಶಕ ನಡವಳಿಕೆಯೇ ಇಲ್ಲದ ಇಲಾಖೆಯ ಸ್ವರೂಪದಿಂದಾಗಿ ಸೋಲುತ್ತಿವೆ.
 
ಹೀಗಾಗಿ, ಪಶ್ಚಿಮಘಟ್ಟಗಳೂ ಒಳಗೊಂಡಂತೆ ದೇಶದ ಪರಿಸರ ಪರಿಸ್ಥಿತಿ ಮಾತ್ರ ಬಿಗಡಾಯಿಸುತ್ತಲೇ ಇದೆ. ಸಹ್ಯಾದ್ರಿ ಮಡಿಲಿನ ಬಹುಪಾಲು ಸಂಪದ್ಭರಿತ ಕಾಡುಗಳು ಹಾಗೂ ನದಿ ಕಣಿವೆಗಳು ಅತಿಕ್ರಮಣ, ಮರಕಡಿತ ಹಾಗೂ ಕ್ವಾರಿಗಳಿಗೆ ಬಲಿಯಾಗುತ್ತಿವೆ.

‘ಅರಣ್ಯ ಹಕ್ಕು ಕಾಯ್ದೆ– 2006’ರ ಅನ್ವಯ ಅರ್ಹ ವನವಾಸಿಗಳಿಗೆ ಹಕ್ಕುಪತ್ರ ದೊರೆಯದಿದ್ದರೂ, ಬಲಾಢ್ಯರ ಅರಣ್ಯ ಅತಿಕ್ರಮಣ ಎಗ್ಗಿಲ್ಲದೆ ಸಾಗಿದೆ. ಜೇನುಕುರುಬರು, ಮಲೆಕುಡಿಯರು, ಕುಣಬಿಗಳು, ಗೌಳಿಗಳಂಥ ಅಪ್ಪಟ ವನವಾಸಿಗಳು, ಸಣ್ಣ ರೈತರು ಬರಿದಾದ ಕಾಡಿನಿಂದ ಗತಿಯಿಲ್ಲದೆ ಪಟ್ಟಣಗಳೆಡೆ ಗುಳೆ ಹೋಗುವ ಪರಿಸರ ನಿರ್ಗತಿಕರಾಗುತ್ತಿದ್ದಾರೆ.
 
ಇದರಿಂದಾಗಿಯೇ ಪಶ್ಚಿಮಘಟ್ಟಗಳ ರಕ್ಷಣೆಗೆ ನಾಗರಿಕರು ಸದಾ ಒತ್ತಾಯಿಸುವುದು. ನ್ಯಾಯಾಲಯಗಳು ಮತ್ತು ವೈಜ್ಞಾನಿಕ ಅಧ್ಯಯನಗಳೂ ಇದನ್ನು ಪುಷ್ಟೀಕರಿಸಿವೆ. ಈ ಒತ್ತಾಸೆಗೆ ಕಿವಿಗೊಟ್ಟ ಕೇಂದ್ರ ಪರಿಸರ ಸಚಿವಾಲಯ, ಸಹ್ಯಾದ್ರಿಯ ಪರಿಸರಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಸಂರಕ್ಷಣಾ ಮಾರ್ಗ ರೂಪಿಸಲು ಪರಿಸರಶಾಸ್ತ್ರಜ್ಞ ಮಾಧವ ಗಾಡ್ಗೀಳರ ನೇತೃತ್ವದಲ್ಲಿ ಸಮಿತಿಯೊಂದನ್ನು ಕಳೆದ ದಶಕದಂಚಿನಲ್ಲಿ ರಚಿಸಿತ್ತು.
 
ತಳಮಟ್ಟದ ಮಾಹಿತಿ, ವೈಜ್ಞಾನಿಕ ಅಧ್ಯಯನಗಳು, ಜನರೊಂದಿಗೆ ಸಮಾಲೋಚನೆ ಇವೆಲ್ಲವನ್ನೂ ಆಧರಿಸಿ, ಗಾಡ್ಗೀಳ್ ಸಮಿತಿ 2011ರಲ್ಲಿ ವರದಿಯನ್ನೂ ನೀಡಿತು. ಪರಿಸರಸೂಕ್ಷ್ಮ ಪ್ರದೇಶದಲ್ಲಿ ಪಂಚಾಯಿತಿಗಳ ಸಹಭಾಗಿತ್ವದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸುವ ಜನಪರ ಸಂರಕ್ಷಣಾ ಸಲಹೆಗಳು ಆ ವರದಿಯಲ್ಲಿದ್ದವು.
 
ಆದರೆ, ಅದರ ಸದಾಶಯವೊಂದನ್ನೂ ಗಮನಿಸದೆ, ವಿವಿಧ ಸ್ವಹಿತಾಸಕ್ತಿಗಳೆಲ್ಲ ಒಂದಾಗಿ ಆ ವರದಿಯನ್ನು ಜನವಿರೋಧಿಯೆಂಬಂತೆ ಬಿಂಬಿಸಿದವು. ಚುನಾವಣಾ ರಾಜಕೀಯದಾಚೆ ಯೋಚಿಸಲಾರದ ರಾಜಕೀಯ ಪಕ್ಷಗಳೂ ಒಕ್ಕೊರಲಿನಲ್ಲಿ ವಿರೋಧಿಸಿದ್ದರಿಂದ, ಸರ್ಕಾರವು ಗಾಡ್ಗೀಳ್ ವರದಿಯನ್ನೇ ಕೈಬಿಟ್ಟಿತು.
 
ಆನಂತರ, ಗಾಡ್ಗೀಳ್ ವರದಿಯನ್ನು ಪರಿಷ್ಕರಿಸಲು ಮುಂದಾದ ಪರಿಸರ ಸಚಿವಾಲಯ, ಬಾಹ್ಯಾಕಾಶ ವಿಜ್ಞಾನಿ ಕೆ.ಕಸ್ತೂರಿರಂಗನ್ ನೇತೃತ್ವದಲ್ಲಿ ಹೊಸ ಸಮಿತಿ ರಚಿಸಿತು. ಸಂರಕ್ಷಣೆ ಜೊತೆಗೆ ಅಭಿವೃದ್ಧಿಗೂ ಆದ್ಯತೆ ನೀಡಬಲ್ಲ ತಂತ್ರಗಳನ್ನು ಸರ್ಕಾರ ಈ ಸಮಿತಿಯಿಂದ ಬಯಸಿತ್ತು.

ಹೀಗಾಗಿ, ಗಾಡ್ಗೀಳ್ ವರದಿ ಗುರುತಿಸಿದ್ದ ಪಶ್ಚಿಮಘಟ್ಟದ ಸುಮಾರು ಶೇ 64ರಷ್ಟು ಭಾಗ ಪರಿಸರ ಸೂಕ್ಷ್ಮ ಪ್ರದೇಶವನ್ನು ಶೇ 37ಕ್ಕೆ (ಸುಮಾರು 59,940 ಚದರ ಕಿ.ಮೀ) ಕಡಿಮೆ ಮಾಡಿ 2013ರಲ್ಲಿ ಅದು ವರದಿ ಸಲ್ಲಿಸಿತು. ಅದನ್ನಾಧರಿಸಿ ಕೇಂದ್ರ ಸರ್ಕಾರ ‘ಪರಿಸರ ಸಂರಕ್ಷಣಾ ಕಾಯ್ದೆ– 1986’ರ 3ನೇ ವಿಧಿಯನ್ವಯ 2014ರ ಮಾರ್ಚ್ 10ರಂದು ಅಧಿಸೂಚನೆಯೊಂದನ್ನು ಹೊರಡಿಸಿತು.

ಆದರೆ, ವಿವಿಧ ಸ್ಥಾಪಿತ ಹಿತಾಸಕ್ತಿಗಳು ಮತ್ತು ರಾಜಕೀಯ ಪಕ್ಷಗಳ ವಿರೋಧದಿಂದಾಗಿ, ಒತ್ತಡಕ್ಕೆ ಮಣಿದ ಸರ್ಕಾರ ಆ ಅಧಿಸೂಚನೆ ಹಿಂಪಡೆಯಿತು. 2015ರ ಸೆ. 4ರಂದು ಪುನಃ ಎರಡನೇ ಬಾರಿ ಹೊರಡಿಸಿದ ಪರಿಷ್ಕೃತ ಅಧಿಸೂಚನೆಯನ್ನೂ ಸ್ವಹಿತಾಸಕ್ತಿ ಗುಂಪುಗಳು ರಾಜಕೀಯ ಒತ್ತಡ ತಂದು ಹಿಂತೆಗೆಸಿದವು. ಇದೀಗ, ಕಳೆದ ಫೆ. 27ರಂದು ಮೂರನೇ ಬಾರಿಗೆ ಸರ್ಕಾರ ಹೊಸ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ!
 
ಈ ಅಧಿಸೂಚನೆ ಗುರುತಿಸಿರುವ ಪರಿಸರಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ, ನಮ್ಮ ನಾಡಿನ ಸಹ್ಯಾದ್ರಿಯ ಸುಮಾರು 20,668 ಚದರ ಕಿ.ಮೀ ಪ್ರದೇಶವೂ ಬರುತ್ತದೆ. ಸಂಪದ್ಭರಿತ ಅರಣ್ಯ, ನದಿಕಣಿವೆಗಳುಳ್ಳ ಮಲೆನಾಡಿನ ಕೆಲವು ಗ್ರಾಮಗಳಷ್ಟು ಪ್ರದೇಶಗಳನ್ನಾದರೂ ಈ ಮೂಲಕ ರಕ್ಷಣೆ ಮಾಡಲು ಸಾಧ್ಯ. ಇಲ್ಲಿ ಬೃಹತ್ ಮತ್ತು ಮಾಲಿನ್ಯಕಾರಕ ಕೈಗಾರಿಕೆಗಳನ್ನು ನಿಯಂತ್ರಿಸಿ, ಅಭಿವೃದ್ಧಿ ಪ್ರಕ್ರಿಯೆಯನ್ನು ಸುಸ್ಥಿರಗೊಳಿಸುವ ಮಾರ್ಗಗಳಿವೆ.

ರೈತರು, ವನವಾಸಿಗಳ ಬದುಕಿಗೆ ತೊಂದರೆ ಕೊಡುವ ಉದ್ದೇಶ ಇದರಲ್ಲಿಲ್ಲ. ಆದರೆ, ಸಾರ್ವಜನಿಕ ಚರ್ಚೆಗೆ ಅವಕಾಶವನ್ನೇ ನೀಡದೆ, ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಒಕ್ಕೊರಲಿನಲ್ಲಿ ಈ ಅಧಿಸೂಚನೆ ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ಪಶ್ಚಿಮಘಟ್ಟದ ಕುರಿತೇ ಸಂಶೋಧನೆ ಮಾಡುತ್ತಿರುವ ವಿಶ್ವವಿದ್ಯಾಲಯಗಳ ತಜ್ಞರು, ಸಂಶೋಧನಾ ಸಂಸ್ಥೆಗಳು, ಸರ್ಕಾರದ ತಜ್ಞ ಸಮಿತಿಗಳೆಲ್ಲ ಮೌನಕ್ಕೆ ಶರಣಾಗಿವೆ.
 
ಈ ಅಧಿಸೂಚನೆಯ ಸಂರಕ್ಷಣಾ ಸೂತ್ರಗಳೇ ಅಂತಿಮವಾಗಬೇಕೆಂದೇನಿಲ್ಲ. ಲೋಪಗಳಿದ್ದರೆ ಸಮಾಲೋಚನೆ ಮೂಲಕ ಸರಿಪಡಿಸಬಹುದು. ಅರಣ್ಯ ಇಲಾಖೆಯ ಕಾರ್ಯವೈಖರಿಯಂತೂ ಆಮೂಲಾಗ್ರವಾಗಿ ಬದಲಾಗಿ, ಜನಪರವಾಗಬೇಕಾದ ಅಗತ್ಯವಂತೂ ಇದ್ದೇಇದೆ.

ಈ ಕುರಿತಂತೆಲ್ಲ ಚಿಂತಿಸದೆ, ಸಹ್ಯಾದ್ರಿಯ ಸಂರಕ್ಷಣೆಯೇ ಬೇಕಿಲ್ಲ ಎಂಬ ಜನಪ್ರತಿನಿಧಿಗಳ ದುಡುಕಿನ ತೀರ್ಮಾನ ಸಾಮೂಹಿಕ ಭವಿಷ್ಯವನ್ನೇ ಅಪಾಯಕ್ಕೆ ಒಡ್ಡುವುದಿಲ್ಲವೇ? ಮಾರುಕಟ್ಟೆ ಆರ್ಥಿಕತೆಯು ಹುಟ್ಟುಹಾಕಿದ ಏಕಮುಖ ಅಭಿವೃದ್ಧಿಯ ಆಸೆಗೆ ಬಲಿಯಾಗಿ, ನೈಸರ್ಗಿಕ ಸಂಪನ್ಮೂಲ ರಕ್ಷಣೆ ಮರೆಯುವುದು ಸರಿಯೇ? ಮಲೆನಾಡಿನ ಅರಣ್ಯಗಳು ನೀಡುತ್ತಿರುವ ಅರಣ್ಯ ಉತ್ಪನ್ನಗಳು ಮತ್ತು ಪಾರಿಸರಿಕ ಸೇವೆಗಳ ಕೊಡುಗೆ ಅಮೂಲ್ಯವಾದದ್ದು.

ಸುಸ್ಥಿರ ಅಭಿವೃದ್ಧಿಯ ನೆಲೆಗಟ್ಟು ಈ ನೈಸರ್ಗಿಕ ಸಂಪನ್ಮೂಲಗಳೇ ಎಂಬ ಸರಳ ಸತ್ಯವನ್ನು, ಬತ್ತಿದ ನದಿ-ತೊರೆಗಳು, ಒಣಗಿದ ಕೆರೆ-ಬಾವಿ- ಕೃಷಿ ಭೂಮಿಗಳು, ಮಲೆನಾಡಿಗೂ ಬಂದಿರುವ ಬರ ಇವುಗಳಿಂದಾದರೂ ಜನಪ್ರತಿನಿಧಿಗಳು ಮನಗಾಣಬಾರದೇ? 
 
ನಾಡಿನ ಭವಿಷ್ಯದ ಸುರಕ್ಷೆಗಾಗಿ, ಸಹ್ಯಾದ್ರಿಯ ಪರಿಸರಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸುವ ಇಂಥ ಕಾನೂನು ಚೌಕಟ್ಟಿನ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಸಮಚಿತ್ತದಲ್ಲಿ ಚಿಂತಿಸಿ, ವಿವೇಕಯುತ ತೀರ್ಮಾನ ಕೈಗೊಳ್ಳುವರೆಂದು ಆಶಿಸೋಣ. 
ಲೇಖಕ: ಸಂರಕ್ಷಣಾ ಜೀವಶಾಸ್ತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT