ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳಿಗೆ ಲಗಾಮು ಒಳಿತಿಗಿಂತ ಕೆಡುಕೇ ಹೆಚ್ಚು

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ರಾಜ್ಯ ವಿಧಾನಮಂಡಲದಲ್ಲಿ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳ ಬಗ್ಗೆ ಬುಧವಾರ ಬಿಸಿಬಿಸಿ ಚರ್ಚೆ ನಡೆದಿದೆ. ಸದನದಲ್ಲಿ ಬಜೆಟ್ ಕುರಿತ ಚರ್ಚೆ ನಿಗದಿಯಾಗಿತ್ತು. ಹೀಗಿದ್ದೂ ಮಾಧ್ಯಮಗಳನ್ನು ಗುರಿಯಾಗಿಸಿಕೊಂಡು ಉಭಯ ಸದನಗಳಲ್ಲಿ  ಸುದೀರ್ಘ ಚರ್ಚೆ ನಡೆಸಿರುವುದು ವಿಶೇಷ.  

ಸಾರ್ವಜನಿಕ ಜೀವನದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಅವರದೇ ಆದ ಹೊಣೆ, ಕರ್ತವ್ಯಗಳಿವೆ. ಅವರು  ಪ್ರಜೆಗಳ  ಪ್ರತಿನಿಧಿಗಳು.  ಅದೇ ರೀತಿ ತಮ್ಮ ಇತಿಮಿತಿಯೊಳಗೆ ಪ್ರಜೆಗಳ ಹಕ್ಕುಗಳನ್ನು ಸಂರಕ್ಷಿಸುವ, ಅದಕ್ಕೆ ಅಪಾಯ ಎದುರಾದರೆ ಪ್ರತಿಭಟಿಸುವ ಕಾವಲು ನಾಯಿಯ ಕೆಲಸ ಮಾಧ್ಯಮಗಳದು.

ಇವೆರಡೂ ಸಂವಿಧಾನದ ಪ್ರಮುಖ ಅಂಗಗಳು. ಯಾವುದೇ ಒಂದು ಅಂಗಕ್ಕೂ ಪ್ರಶ್ನಾತೀತ ಅಧಿಕಾರ ಇಲ್ಲ. ಹೀಗಾಗಿ ವಿಶ್ಲೇಷಣೆಗೆ, ಆತ್ಮಾವಲೋಕನಕ್ಕೆ ತೆರೆದುಕೊಂಡಿರಬೇಕಾದುದು ಸಹಜ.

ಇಷ್ಟೇ ಆಗಿದ್ದರೆ ಸದನದಲ್ಲಿ ನಡೆದ ಚರ್ಚೆ, ಶಾಸಕರು ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ಆತಂಕಪಡುವ ಅಗತ್ಯ ಇರಲಿಲ್ಲ. ಆದರೆ ಮಾಧ್ಯಮಕ್ಕೆ ಮೂಗುದಾರ ಹಾಕಬೇಕು ಎಂಬ ಏಕೈಕ ಉದ್ದೇಶ ಮತ್ತು ಅದಕ್ಕಾಗಿ ಸದನ ಸಮಿತಿ ರಚಿಸುವ ತೀರ್ಮಾನವನ್ನು  ಅನುಮಾನದಿಂದಲೇ ನೋಡಬೇಕಾಗಿ ಬಂದಿದೆ.
  
‘ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳ ಸ್ವೇಚ್ಛಾಚಾರ ತಡೆದು ಸ್ವಾತಂತ್ರ್ಯ ಎತ್ತಿ ಹಿಡಿಯಲು ಈಗಿರುವ ಕಾನೂನು ಬಿಗಿಗೊಳಿಸಬೇಕಾಗಿದೆ. ಅದಕ್ಕಾಗಿ 15 ದಿನಗಳ ಒಳಗೆ ವರದಿ ಕೊಡುವಂತೆ ಸದನ ಸಮಿತಿಗೆ ಸೂಚಿಸಲಾಗುವುದು’ ಎಂದು ಸಭಾಧ್ಯಕ್ಷರು ಹೇಳಿದ್ದಾರೆ.
 
ಜೊತೆಗೆ,  ‘ಮಾಧ್ಯಮಗಳನ್ನು ನಿಯಂತ್ರಿಸಲು ಏನು ಮಾಡಬೇಕು ಎಂಬುದು ಗೊತ್ತು’ ಎಂಬ ಅವರ ಮಾತಿನಲ್ಲಿ ಬೆದರಿಕೆಯ  ಧ್ವನಿ ಇದೆ. ಅದು ಬೇರೆಬೇರೆ ಅರ್ಥಗಳನ್ನು ಕೊಡುತ್ತದೆ. ಮಾಧ್ಯಮಗಳಿಗೆ ಲಗಾಮು ಹಾಕುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕು ಮಾಡಿದಂತೆ ಎಂದು ಹೇಳಿದ ಮಂತ್ರಿಯೊಬ್ಬರಿಗೆ ಮತ್ತೆ ಮಾತನಾಡಲು ಬಿಡಲೇ ಇಲ್ಲ ಎನ್ನುವುದು ಅನುಮಾನಗಳು ಮತ್ತಷ್ಟು ದಟ್ಟವಾಗಲು ಇಂಬುಕೊಡುತ್ತವೆ.
 
ಅಷ್ಟಕ್ಕೂ, ಮಾಧ್ಯಮಗಳನ್ನು ಮಣಿಸುವ ಪ್ರಯತ್ನವೇನೂ ಹೊಸದಲ್ಲ. ಅದಕ್ಕೆ ಕೈ ಹಾಕಿ ಸುಟ್ಟುಕೊಂಡ ಅಧಿಕಾರಸ್ಥರ ಬಹಳಷ್ಟು ಉದಾಹರಣೆಗಳು ನಮ್ಮ ಮುಂದಿವೆ. 1975–77ರ ಅವಧಿಯ ತುರ್ತು ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳಬಹುದು.

ಇತ್ತೀಚಿನ ವರ್ಷಗಳಲ್ಲಿ  ಛತ್ತೀಸಗಡ, ಕಾಶ್ಮೀರ, ಅಸ್ಸಾಂ ಹಾಗೂ ಕೇರಳಗಳಲ್ಲೂ ಮಾಧ್ಯಮವನ್ನು ನಿಯಂತ್ರಿಸುವ ಯತ್ನಗಳು ನಡೆದಿವೆ. ಆಧಾರ ಇಲ್ಲದೆ ಆರೋಪ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸುವಂತಹ ಕಾನೂನನ್ನು ಇತ್ತೀಚೆಗೆ ತೆಲಂಗಾಣದಲ್ಲಿ ತರಹೊರಟಿರುವುದು ಪ್ರತಿಪಕ್ಷಗಳು ಹಾಗೂ ಮಾಧ್ಯಮಗಳನ್ನು ನಿಯಂತ್ರಿಸುವ ಯತ್ನ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.  ಆದರೆ ತೋಳು ತಿರುಚುವ ಅತ್ಯಂತ ಕಠಿಣ ಕಾಲವನ್ನೂ ಮಾಧ್ಯಮಗಳು ದಾಟಿಕೊಂಡು ಬಂದಿವೆ.
 
ಮಾಧ್ಯಮಗಳು ತಪ್ಪು ಮಾಡುವುದೇ ಇಲ್ಲ ಎಂದು ಹೇಳುವುದು ದಾರ್ಷ್ಟ್ಯದ ಮಾತಾಗುತ್ತದೆ. ಸಮಾಜದಲ್ಲಿ ಎಲ್ಲ ಕಡೆ ಇರುವಂತೆ ಇಲ್ಲೂ ಒಳ್ಳೆಯವರು– ಕೆಟ್ಟವರು ಇದ್ದಾರೆ. ಆದ್ದರಿಂದ ಸಾರಾಸಗಟಾಗಿ ಇಡೀ ಮಾಧ್ಯಮವನ್ನೇ ದೂರುವುದು ಸರಿಯಲ್ಲ. ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳು ಎಡವಿದಾಗ ಎಚ್ಚರಿಸುವ ಕರ್ತವ್ಯವನ್ನು ಅದು ನಿಭಾಯಿಸಿದೆ.

ದುರ್ಬಲರು, ಅಸಹಾಯಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ದನಿಯಾಗಿ ಕೆಲಸ ಮಾಡುತ್ತಿದೆ. ಹೀಗಿರುವಾಗ ಮಾಧ್ಯಮದ ಕತ್ತು ಹಿಸುಕುವುದು ಜನತಂತ್ರಕ್ಕೆ ಅಪಾಯಕಾರಿ. ಅದರ ಅರ್ಥ ಮಾಧ್ಯಮ ತಪ್ಪು ಮಾಡುತ್ತಿದ್ದರೂ ಸುಮ್ಮನಿರಬೇಕು ಎಂದಲ್ಲ.  

ಈಗಿರುವ ಕಾನೂನುಗಳಲ್ಲಿಯೂ ಅದಕ್ಕೆ ಅನೇಕ ಪರಿಹಾರಗಳಿವೆ. ಮಾನನಷ್ಟ  ಮೊಕದ್ದಮೆ, ಪತ್ರಿಕಾ ಮಂಡಳಿಗೆ ದೂರು  ನೀಡಲು ಅವಕಾಶ ಇದೆ. ಆದರೆ ಈ ಮಾರ್ಗಗಳಲ್ಲಿ ನ್ಯಾಯ ಪಡೆಯಲು ಸಾಕಷ್ಟು ಕಾಯಬೇಕು, ಕೋರ್ಟು ಕಚೇರಿ ಎಂದು ಅಲೆದಾಡಬೇಕು. ಸಾಮಾನ್ಯರಿಗೆ ಇದು ಸ್ವಲ್ಪ ಕಷ್ಟ.

ಆದ್ದರಿಂದ ತಾವು ಮುದ್ರಿಸುವ, ಪ್ರಸಾರ ಮಾಡುವ ವಿಷಯಗಳ ಬಗ್ಗೆ ಮಾಧ್ಯಮಗಳೇ ಇನ್ನೂ ಕಟ್ಟುನಿಟ್ಟಿನ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು. ಅವುಗಳ ಮೇಲೆ ಪದೇ ಪದೇ ಆರೋಪ ಬರುತ್ತಿರುವುದನ್ನು ನೋಡಿದರೆ ಈಗಿನ ಸ್ವಯಂ ನಿಯಂತ್ರಣ ಪರಿಣಾಮಕಾರಿಯಾಗಿಲ್ಲ ಎನ್ನುವುದು ದೃಢಪಡುತ್ತದೆ.

ಈ ನೆಲದ ಎಲ್ಲ ಕಾನೂನುಗಳು ತಮಗೂ ಅನ್ವಯಿಸುತ್ತವೆ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ‘ಮಾಧ್ಯಮಗಳು ಲಂಗುಲಗಾಮಿಲ್ಲದೆ ಚಾರಿತ್ರ್ಯಹರಣ ಮಾಡುತ್ತವೆ, ವ್ಯಕ್ತಿಗಳ ಖಾಸಗಿ ಬದುಕಿನಲ್ಲಿ ಕೈ ಹಾಕುತ್ತಿವೆ’ ಎಂಬ ಆರೋಪವಂತೂ ಸಾಮಾನ್ಯ.

ಅದು ಸ್ವಲ್ಪಮಟ್ಟಿಗೆ ನಿಜ ಕೂಡ.  ಹೀಗಾಗಿ ಆತ್ಮಾವಲೋಕನ, ಸ್ವನಿಯಂತ್ರಣದ ಜೊತೆಗೆ ತಪ್ಪುಗಳಾದಾಗ ಸೂಕ್ತ ತಿದ್ದುಪಡಿಗಳನ್ನು ನೀಡುವುದೂ ಸಹ ಒಳ್ಳೆಯ ಪತ್ರಿಕೋದ್ಯಮದ ಲಕ್ಷಣ ಎಂಬುದನ್ನು ಮರೆಯಬಾರದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT