ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹12 ಸಾವಿರ ಕೋಟಿಗೇರಿದ ಯೋಜನಾ ವೆಚ್ಚ

13 ಏತ ನೀರಾವರಿ ಯೋಜನೆ: ಮಹಾಲೇಖಪಾಲರ ವರದಿಯಲ್ಲಿ ಆಕ್ಷೇಪ
Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ಕರ್ನಾಟಕ ನೀರಾವರಿ ನಿಗಮವು 13 ಏತ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬ ಮಾಡಿದ್ದರಿಂದ ಯೋಜನಾ ವೆಚ್ಚ ₹3,549 ಕೋಟಿಯಿಂದ ₹12,154 ಕೋಟಿಗೆ ಏರಿಕೆಯಾಗಿದೆ.  
 
ಇದರಿಂದ ಬೊಕ್ಕಸಕ್ಕೆ ಅನಗತ್ಯ ಹೊರೆಯಾಯಿತು ಎಂದು ಭಾರತೀಯ ಮಹಾಲೇಖಪಾಲರ (ಸಿ.ಎ.ಜಿ) ವರದಿ ಆಕ್ಷೇಪಿಸಿದೆ. ಸಾರ್ವಜನಿಕ ವಲಯದ ಉದ್ಯಮಗಳ ಕಾರ್ಯವೈಖರಿ ಕುರಿತು ಸಿ.ಎ.ಜಿ ವರದಿಯನ್ನು ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಯಿತು.
 
ವರದಿ ಹೇಳುವುದೇನು?: ರಾಜ್ಯ ಸರ್ಕಾರ ಮತ್ತು ಕರ್ನಾಟಕ ನೀರಾವರಿ ನಿಗಮವು 13 ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸುದೀರ್ಘ ಸಮಯ ತೆಗೆದುಕೊಂಡಿತು. ನೀರಾವರಿ ಸಾಮರ್ಥ್ಯ, ಏತ ನೀರಾವರಿಗಳ ಸಂಖ್ಯೆ, ನಾಲೆಗಳ ಜೋಡಣೆ, ಪದೆಪದೇ ಯೋಜನೆಗಳಲ್ಲಿ ಬದಲಾವಣೆ ಮಾಡಿದ್ದು ಈ ನಷ್ಟಕ್ಕೆ ಕಾರಣ ಎಂದು ವರದಿ ವಿಶ್ಲೇಷಿಸಿದೆ.
 
ಕೊಪ್ಪಳ, ಗದಗ ಹಾಗೂ ಬಳ್ಳಾರಿ ಜಿಲ್ಲೆಗಳ ಬರಪೀಡಿತ  ಪ್ರದೇಶದ 16,188 ಹೆಕ್ಟೇರ್‌ ಭೂಮಿಗೆ ನೀರಾವರಿ  ಸೌಲಭ್ಯ ಕಲ್ಪಿಸಲು 1986–87ರಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಲು ತೀರ್ಮಾನಿಸಲಾಗಿತ್ತು. 1992ರಲ್ಲಿ ₹63.62 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿತ್ತು.

ಮತ್ತೆ ಮತ್ತೆ ಯೋಜನೆ ಬದಲಾವಣೆ ಮಾಡಿ 2015ರ ಜನವರಿ ಹೊತ್ತಿಗೆ ಒಟ್ಟು 1.07 ಲಕ್ಷ ಹೆಕ್ಟೇರ್‌ಗಳಿಗೆ ನೀರುಣಿಸುವ ಯೋಜನೆಯಾಗಿ ಬದಲಾವಣೆ ಮಾಡಲಾಯಿತು. ಆಗ ಯೋಜನೆಯ ಮೊತ್ತ ₹5,768 ಕೋಟಿಗೆ ಏರಿಕೆಯಾಯಿತು.

ಯೋಜನೆಯ ರೂಪುರೇಷೆ ಆರಂಭವಾಗಿ 30 ವರ್ಷ ಕಳೆದ ಬಳಿಕ ₹1,489 ಕೋಟಿ ವೆಚ್ಚದಲ್ಲಿ ಕೇವಲ 19,588 ಹೆಕ್ಟೇರ್‌ಗಳಿಗೆ ನೀರು ಒದಗಿಸಲಾಗಿದೆ. ಯೋಜನಾ ಮೊತ್ತ ಹೆಚ್ಚಳವಾದರೂ ರೈತರಿಗೆ ಅದರ ಪ್ರಯೋಜನ ಸಿಗಲಿಲ್ಲ ಎಂದು   ಸಿ.ಎ.ಜಿ ಆಕ್ಷೇಪಿಸಿದೆ.
 
1991ರಲ್ಲಿ ₹186 ಕೋಟಿ ವೆಚ್ಚದಲ್ಲಿ 59,692 ಹೆಕ್ಟೇರ್‌ಗಳಿಗೆ ನೀರಾವರಿ ಒದಗಿಸಲು ಹಿಪ್ಪರಗಿ ಯೋಜನೆ ರೂಪಿಸಲಾಯಿತು. 2016ರಲ್ಲಿ ಈ ಯೋಜನೆ ವ್ಯಾಪ್ತಿಯನ್ನು 74,742 ಹೆಕ್ಟೇರ್‌ಗೆ ಹಿಗ್ಗಿಸಿ, ಪರಿಷ್ಕೃತ ಯೋಜನಾ ಮೊತ್ತವನ್ನು ₹3,330 ಕೋಟಿಗೆ ಹೆಚ್ಚಿಸಲಾಯಿತು.

ಹಲ್ಯಾಳ, ಐನಾಪುರ, ಕರಿಮಸೂತಿ, ಸಾವಳಗಿ–ತುಂಗಲ್‌ ಹೀಗೆ 4 ಏತ ನೀರಾವರಿ ಯೋಜನೆಗಳನ್ನು ಒಳಗೊಂಡಿದ್ದ ಈ ಯೋಜನೆಯನ್ನು 20 ವರ್ಷಗಳ ಬಳಿಕ ಪೂರ್ಣಗೊಳಿಸಲಾಯಿತು. ಗುತ್ತಿಗೆ ಅವಧಿ ಮುಕ್ತಾಯಗೊಂಡ 7 ವರ್ಷಗಳ ಬಳಿಕ ಮುಕ್ತಾಯಗೊಳಿಸಿದ್ದರಿಂದಾಗಿ ನೀರಾವರಿ ಯೋಜನೆಯ ಪ್ರಯೋಜನಗಳು ರೈತ ಸಮುದಾಯಕ್ಕೆ ಸಿಗಲಿಲ್ಲ ಎಂದು ವರದಿ ಹೇಳಿದೆ.
 
ಜೆಎಸ್‌ಡಬ್ಲ್ಯೂಗೆ ₹1.29 ಕೋಟಿ ಲಾಭ!: ಅಧಿಕ ದರ ಮತ್ತು ಕಡಿಮೆ ದರದ ವಿದ್ಯುತ್ತನ್ನು ಬೇಡಿಕೆ–ಪೂರೈಕೆ ಪರಿಗಣಿಸಿ ಸಮರ್ಪಕವಾಗಿ ಹಂಚಿಕೆ ಮಾಡುವಲ್ಲಿ ವಿಫಲವಾಗಿದ್ದರಿಂದ ತೋರಣಗಲ್ಲಿನ ಜೆಎಸ್‌ಡಬ್ಲ್ಯೂ ಪವರ್ ಟ್ರೇಡಿಂಗ್‌ ಕಂಪೆನಿ ಲಿಮಿಟೆಡ್‌ಗೆ ₹1.29 ಕೋಟಿ ಲಾಭ ಮಾಡಿಕೊಡಲಾಗಿದೆ ಎಂದು ಸಿ.ಎ.ಜಿ ವರದಿ ಆಕ್ಷೇಪಿಸಿದೆ.
 
ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೇತೃತ್ವದಲ್ಲಿ  ವಿವಿಧ ಎಸ್ಕಾಂಗಳು ಜೆಎಸ್‌ಡಬ್ಲ್ಯೂ ಪವರ್‌ ಕಂಪೆನಿ ಜತೆ ಖರೀದಿ ಒಪ್ಪಂದ ಮಾಡಿಕೊಂಡಿದ್ದವು.  ವಿದ್ಯುತ್‌ ಖರೀದಿಸುವ ಷರತ್ತುಗಳನ್ನು ಸಮರ್ಪಕವಾಗಿ ಪಾಲಿಸದೇ ಇರುವುದರಿಂದ ಸರ್ಕಾರಕ್ಕೆ, ಬಳಕೆದಾರರಿಗೆ ₹1.29 ಕೋಟಿ ಹೆಚ್ಚುವರಿ ಹೊರೆಯಾಯಿತು. ಜೆಎಸ್‌ಡಬ್ಲ್ಯೂಗೆ ಲಾಭವಾಯಿತು ಎಂದು ವರದಿ ಹೇಳಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT