ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾಗದ ಬದನವಾಳು ಘಟನೆ

ನಂಜನಗೂಡು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ
Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಮೈಸೂರು: ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ 1993ರ ಮಾರ್ಚ್ 25ರಂದು ಲಿಂಗಾಯತ ಹಾಗೂ ದಲಿತ ಸಮುದಾಯದ ನಡುವೆ ನಡೆದ ಸಂಘರ್ಷ ಇದೀಗ ನಂಜನಗೂಡು ಉಪಚುನಾವಣೆ ವಿಷಯವಾಗಿ ಬದಲಾಗುತ್ತಿದೆ.
 
ಗ್ರಾಮಮಟ್ಟದಲ್ಲಿ ಸಭೆ ನಡೆಸುತ್ತಿರುವ ಸಚಿವ ಮಹದೇವಪ್ಪ ಹಾಗೂ ಅವರ ಬೆಂಬಲಿಗರು 24 ವರ್ಷದ ಹಿಂದೆ ನಡೆದ ಬದನವಾಳು ಗಲಾಟೆ ಸಮಯದಲ್ಲಿ ಶ್ರೀನಿವಾಸಪ್ರಸಾದ್ ದಲಿತರ ಪರ ಒಲವು ತೋರಿ, ಲಿಂಗಾಯತರಿಗೆ ದ್ರೋಹ ಬಗೆದರು ಎಂದು ಪ್ರಚಾರ ನಡೆಸುತ್ತಿದ್ದಾರೆ.

ಇದಕ್ಕೆ ಪ್ರತಿ ತಂತ್ರ ಹೂಡಿರುವ ಬಿಜೆಪಿ ಮುಖಂಡರು, ಬದನವಾಳು ಗಲಾಟೆ ಮರೆತುಬಿಡೋಣ ಎಂದು ಲಿಂಗಾಯತ ಹಾಗೂ ದಲಿತ ಸಮುದಾಯದವರ ಮನ ಒಲಿಸಲು ಯತ್ನಿಸುತ್ತಿದ್ದಾರೆ.
 
ಕಳೆದ ಚುನಾವಣೆಗಳಲ್ಲಿ ಬದನವಾಳು ಗಲಾಟೆಯಲ್ಲಿ ಶ್ರೀನಿವಾಸಪ್ರಸಾದ್ ಪಾತ್ರವಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದರು. ಬಿಜೆಪಿ ಮುಖಂಡರು ಶ್ರೀನಿವಾಸಪ್ರಸಾದ್ ದಲಿತರ ಪರ ನಿಲುವು ತಳೆದು ಲಿಂಗಾಯತರಿಗೆ ಅನ್ಯಾಯ ಮಾಡಿದರು ಎಂದು ಪ್ರಚಾರ ಮಾಡುತ್ತಿದ್ದರು.

ಆದರೆ, ಈಗ ಬಿಜೆಪಿ ಮುಖಂಡರ ಮಾತುಗಳನ್ನು ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ಮುಖಂಡರ ಮಾತುಗಳನ್ನು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ ಎಂದು ದೇವನೂರಿನ ಶಿವಸ್ವಾಮಿ ಪ್ರತಿಕ್ರಿಯಿಸಿದರು.
 
ಪ್ರಚಾರ ಬಿರುಸು: ಕಾಂಗ್ರೆಸ್ ಮುಖಂಡರು ಗ್ರಾಮಮಟ್ಟದಲ್ಲಿ ಸರಣಿ ಸಭೆಗಳನ್ನು ನಡೆಸಿ, ಶ್ರೀನಿವಾಸಪ್ರಸಾದ್ ವಿರುದ್ಧದ ಪ್ರಚಾರದಲ್ಲಿ ತೊಡಗಿದ್ದಾರೆ. ಗಾಂಧಿ ಗ್ರಾಮ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಸಭೆ ನಡೆಸಿ, ಪ್ರಸಾದ್ ಈ ಭಾಗಕ್ಕೆ ಬಂದು 8 ವರ್ಷಗಳು ಉರುಳಿವೆ. ಅಂತಹವರಿಗೆ ಮತ ಹಾಕಬೇಕೆ ಎಂದು ಪ್ರಶ್ನಿಸುತ್ತಿದ್ದಾರೆ.
 
ಕುಟುಂಬ ರಾಜಕೀಯದ ಚದುರಂಗದಾಟ
ಚಾಮರಾಜನಗರ:
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯೂ ಕುಟುಂಬ ರಾಜಕೀಯಕ್ಕೆ ಸಾಕ್ಷಿಯಾಗಿದೆ.

ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್‌ ಕೆ.ಎಸ್.ನಾಗರತ್ನಮ್ಮ ಅವರಂತಹ ಧೀಮಂತ ರಾಜಕಾರಣಿಯನ್ನು ನಾಡಿಗೆ ನೀಡಿದ ಹಿರಿಮೆ ಈ ಕ್ಷೇತ್ರಕ್ಕಿದೆ. ನಾಗರತ್ನಮ್ಮ ಅವರು 7 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದರು.
 
1993ರಲ್ಲಿ ಅವರು ನಿಧನರಾದರು. ಆ ನಂತರ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ಎಚ್‌.ಎಸ್‌.ಮಹದೇವಪ್ರಸಾದ್‌ ಕ್ಷೇತ್ರದಲ್ಲಿ ಬಿಗಿಹಿಡಿತ ಸಾಧಿಸಿದರು. 1994ರಿಂದ 2013ರ ವರೆಗಿನ ಐದು ಚುನಾವಣೆಯಲ್ಲೂ ಗೆಲುವಿನ ನಗೆ ಬೀರಿದ್ದರು.

ಮಹದೇವಪ್ರಸಾದ್ ನಿಧನರಾದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಮಹದೇವಪ್ರಸಾದ್‌ ಅವರ ಪತ್ನಿ ಎಂ.ಸಿ.ಮೋಹನ್‌ ಕುಮಾರಿ ಕಣಕ್ಕೆ ಇಳಿದಿದ್ದಾರೆ. 2008 ಮತ್ತು 2013ರ ಚುನಾವಣೆಯಲ್ಲಿ ಪ್ರಸಾದ್‌ಗೆ ಪ್ರಬಲ ಪೈಪೋಟಿ ನೀಡಿ ಸೋತಿದ್ದ ಸಿ.ಎಸ್‌.ನಿರಂಜನ್‌ಕುಮಾರ್‌ ಬಿಜೆಪಿಯಿಂದ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಮಹದೇವಪ್ರಸಾದ್‌ಗಿಂತ ಮೊದಲೇ ಅವರ ತಂದೆ ಎಚ್‌.ಎನ್‌.ಶ್ರೀಕಂಠಶೆಟ್ಟಿ ಅವರು ನಾಗರತ್ನಮ್ಮ ವಿರುದ್ಧ ಎರಡು ಬಾರಿ ಸ್ಪರ್ಧಿಸಿ ಸೋತಿದ್ದರು. ಈಗ ಶ್ರೀಕಂಠಶೆಟ್ಟಿ ಅವರ ಸೊಸೆ ಮೋಹನ್‌ಕುಮಾರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ನಿರಂಜನ್‌ಕುಮಾರ್‌ ಅವರ ಕುಟುಂಬ ಕೂಡ ರಾಜಕೀಯ ಹಿನ್ನೆಲೆ ಹೊಂದಿದೆ. ಅವರ ತಂದೆ ಚೌಡಹಳ್ಳಿ ಶಿವಮಲ್ಲಪ್ಪ ಅವರು ಮೊದಲು ಕಾಂಗ್ರೆಸ್‌ನಲ್ಲಿದ್ದರು. 1994 ಮತ್ತು 1999ರ ಚುನಾವಣೆಯಲ್ಲಿ ಮಹದೇವಪ್ರಸಾದ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

2008ರಲ್ಲಿ ಮಹದೇವಪ್ರಸಾದ್‌ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಆಗ ಕೈಪಾಳಯ ತೊರೆದ ಶಿವಮಲ್ಲಪ್ಪ ಅವರು ಬಿಜೆಪಿಗೆ ಸೇರಿದರು. ಈಗ ಅವರ ಪುತ್ರ ನಿರಂಜನ್‌ಕುಮಾರ್‌ ಉಪಚುನಾವಣೆಗೆ ಸ್ಪರ್ಧಿಸಿದ್ದಾರೆ.ಆ ಮೂಲಕ ಕ್ಷೇತ್ರದಲ್ಲಿ ಕುಟುಂಬ ರಾಜಕೀಯ ಮೇಳೈಸಿದೆ.

ಲಿಂಗಾಯತರ ಪ್ರಾಬಲ್ಯ:  ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ. ನಂತರದ ಸ್ಥಾನದಲ್ಲಿ ಪರಿಶಿಷ್ಟ ಜಾತಿ, ಉಪ್ಪಾರ, ನಾಯಕ, ಕುರುಬ ಮತ್ತು ಅಲ್ಪಸಂಖ್ಯಾತ ಸಮುದಾಯದ ಮತದಾರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT