ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯ್ಕೆಯಾದರೂ ನೇಮಕಾತಿ ‘ಭಾಗ್ಯ’ಕ್ಕೆ ಅಲೆದಾಟ!

ವಾಣಿಜ್ಯ ತೆರಿಗೆ ಇಲಾಖೆ ಆಯ್ಕೆಮಾಡಿಕೊಂಡ ಎಫ್‌ಡಿಎ, ಎಸ್‌ಡಿಎ ಅಭ್ಯರ್ಥಿಗಳ ಅಳಲು
Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ರಾಜೇಶ್‌ ರೈ ಚಟ್ಲ
ಬೆಂಗಳೂರು:
ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾಗಿ ವಾಣಿಜ್ಯ ತೆರಿಗೆ ಇಲಾಖೆ ಆಯ್ಕೆ ಮಾಡಿಕೊಂಡ 388 ಅಭ್ಯರ್ಥಿಗಳು ನೇಮಕಾತಿ ಆದೇಶಕ್ಕಾಗಿ ನಾಲ್ಕು ತಿಂಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ!

ಎಫ್‌ಡಿಎ ಹುದ್ದೆಗೆ 178 ಮತ್ತು ಎಸ್‌ಡಿಎ ಹುದ್ದೆಗೆ 210 ಮಂದಿ ಆಯ್ಕೆಯಾಗಿದ್ದಾರೆ. ಆದರೆ, ಇಲಾಖೆಯ ಹಿರಿಯ ಅಧಿಕಾರಿಗಳು ನೇಮಕಾತಿ ಆದೇಶ ನೀಡದೆ ಸತಾಯಿಸುತ್ತಿದ್ದಾರೆ ಎನ್ನುವುದು ಅಭ್ಯರ್ಥಿಗಳ ಆರೋಪ.

ವಾಣಿಜ್ಯ ತೆರಿಗೆ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧೀನದಲ್ಲಿದೆ. ಕೆಳಹಂತದ ಹುದ್ದೆಗಳು ಖಾಲಿ ಇರುವ ಕಾರಣ ಪ್ರಸಕ್ತ ಆರ್ಥಿಕ ವರ್ಷದ ತೆರಿಗೆ ಸಂಗ್ರಹ ಕುಸಿದಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಆದರೆ, ಆಯ್ಕೆಯಾದವರನ್ನು ಭರ್ತಿ ಮಾಡಿಕೊಳ್ಳಲು ಅಧಿಕಾರಿಗಳು ನಾನಾ ಕಾರಣ ಹೇಳಿ ದಿನದೂಡುತ್ತಿದ್ದಾರೆ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

‘ಇಲಾಖೆಯನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಆಯಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇನ್ನೂ ಎಲ್ಲ ಅಭ್ಯರ್ಥಿಗಳ ಪ್ರಮಾಣ ಪತ್ರ ಬಂದಿಲ್ಲ. ಎಲ್ಲರ ಸಿಂಧುತ್ವ ಪ್ರಮಾಣ ಪತ್ರ ತಲುಪದೆ ನೇಮಕಾತಿ ಪತ್ರ ನೀಡಲು ಸಾಧ್ಯ ಇಲ್ಲ. ಒಂದೊಮ್ಮೆ ನೀಡಿದರೆ ಸೇವಾ ಹಿರಿತನದಲ್ಲಿ ಸಮಸ್ಯೆ ಎದುರಾಗುತ್ತದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ರಿತ್ವಿಕ್‌ ಪಾಂಡೆ ತಿಳಿಸಿದರು.


‘ನಮ್ಮ ಜೊತೆ ಆಯ್ಕೆಯಾಗಿ ಕೆಪಿಎಸ್‌ಸಿ, ಅಲ್ಪಸಂಖ್ಯಾತ ನಿರ್ದೇಶನಾಲಯ, ಪೌರಾಡಳಿತ, ಆಹಾರ, ನ್ಯಾಯಾಂಗ ಇಲಾಖೆ ಆರಿಸಿಕೊಂಡ ಅಭ್ಯರ್ಥಿಗಳಿಗೆ ಆಯಾ ಇಲಾಖೆಗಳು ಷರತ್ತುಗಳನ್ನು ವಿಧಿಸಿ ಈಗಾಗಲೇ ನೇಮಿಸಿಕೊಂಡಿವೆ. ಅವರೆಲ್ಲ ಮೂರು ತಿಂಗಳಿಂದ ವೇತನ ಕೂಡಾ ಪಡೆಯುತ್ತಿದ್ದಾರೆ.

ಸರ್ಕಾರಿ ಹುದ್ದೆಗೆ ಆಯ್ಕೆಯಾದ ಖುಷಿಯಲ್ಲಿ ನಾವು ಇದ್ದ  ಖಾಸಗಿ ಕೆಲಸ ಬಿಟ್ಟು ನೇಮಕಾತಿ ಆದೇಶ ಪತ್ರ ಇಂದು ಬರಬಹುದು, ನಾಳೆ ಬರಬಹುದು ಎಂದು ಕಾಯುತ್ತಿದ್ದೇವೆ’ ಎಂದು ಕೆಲವು ಅಭ್ಯರ್ಥಿಗಳು ಹೇಳಿದರು.

‘ಸಿಂಧುತ್ವ ಪ್ರಮಾಣ ಪತ್ರ ಬಂದ ಅಭ್ಯರ್ಥಿಗಳನ್ನಾದರೂ ನೇಮಕಾತಿ ಮಾಡಿಕೊಳ್ಳಿ ಎಂದು ವಾಣಿಜ್ಯ ಇಲಾಖೆ ಕಚೇರಿಗೆ ಅಲೆದಾಡುತ್ತಿದೇವೆ. ಈ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ವಿಚಾರಿಸಿದರೆ ದರ್ಪದಿಂದ ವರ್ತಿಸುತ್ತಾರೆ. ತುರ್ತು ಇದ್ದರೆ ನಿಮಗೆ ಬೇಕಾದ ಇಲಾಖೆ ಆಯ್ಕೆ ಮಾಡಿಕೊಳ್ಳಿ  ಎಂದು ದಬಾಯಿಸುತ್ತಿದ್ದಾರೆ’ ಎಂದೂ ಅಳಲು ತೋಡಿಕೊಂಡರು.

ಈ ಬಗ್ಗೆ  ಪ್ರತಿಕ್ರಿಯಿಸಿದ ಆಯುಕ್ತ ಪಾಂಡೆ, ‘ಎಲ್ಲರ ಸಿಂಧುತ್ವ ಪ್ರಮಾಣ ಪತ್ರ ಬರದೆ ಏನೂ ಮಾಡಲು ಆಗಲ್ಲ. ಅಭ್ಯರ್ಥಿಗಳು ಹುದ್ದೆಗೆ ಸೇರಿದ ದಿನದಿಂದ ಹಿರಿತನ ಲೆಕ್ಕಕ್ಕೆ ಬರುತ್ತದೆ. ಸಿಂಧುತ್ವ ಪ್ರಮಾಣ ಪತ್ರ ಬಂದಿದೆ ಎಂಬ ಕಾರಣಕ್ಕೆ ಆಯ್ಕೆಯಾದವರ ಪಟ್ಟಿಯಲ್ಲಿ ಕೆಳ ಹಂತದಲ್ಲಿವವರನ್ನು ನೇಮಕ ಮಾಡಿಕೊಂಡರೆ ಸಮಸ್ಯೆಯಾಗುತ್ತದೆ’ ಎಂದು ಸಮರ್ಥಿಸಿಕೊಂಡರು.

‘ಎಫ್‌ಡಿಎ, ಎಸ್‌ಡಿಎ ಹುದ್ದೆ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಡಿ. 28ರಂದು ಅಧಿಕೃತ ಜ್ಞಾಪನ ಪತ್ರ ಕಳುಹಿಸಿ,15 ದಿನಗಳ ಒಳಗೆ ಕರ್ತವ್ಯಕ್ಕೆ ಹಾಜರಾಗಬೇಕು. ನೇಮಕಾತಿ ಆದೇಶ ತಲುಪಿದ 7 ದಿನಗಳ ಒಳಗೆ ಒಪ್ಪಿಕೊಂಡ ಅಥವಾ ತಿರಸ್ಕರಿಸಿದ ಕುರಿತು ಲಿಖಿತವಾಗಿ ತಿಳಿಸಬೇಕು.

ವಿವಿಧ ಮೀಸಲಾತಿಯಡಿ ಆಯ್ಕೆಯಾಗಿರುವವರು ಆಯ್ಕೆ ಮತ್ತು ನೇಮಕಾತಿಯು ಸಕ್ಷಮ ಪ್ರಾಧಿಕಾರ ನೀಡಬೇಕಾಗಿರುವ ಸಿಂಧುತ್ವ ಪ್ರಮಾಣ ಪತ್ರದ ಷರತ್ತಿಗೆ ಒಳಪಟ್ಟಿರುತ್ತದೆ’ ಎಂದು ಷರತ್ತು ವಿಧಿಸಿ ಕೆಪಿಎಸ್‌ಸಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ.

ಅಲ್ಪಸಂಖ್ಯಾತರ ನಿರ್ದೇಶನಾಲಯ ನ. 28ರಂದು. ಪೌರಾಡಳಿತ ನಿರ್ದೇಶನಾಲಯ ಡಿ. 5ರಂದು ಅಭ್ಯರ್ಥಿಗಳಿಗೆ ಅಧಿಕೃತ ಜ್ಞಾಪನ ಪತ್ರ ಕಳುಹಿಸಿದೆ.

ರಾಜ್ಯ ಸಚಿವಾಲಯ ಹಾಗೂ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಫ್‌ಡಿಎ 1,742 ಮತ್ತು ಎಸ್‌ಡಿಎ 2,382  ಖಾಲಿ ಹುದ್ದೆಗಳ ನೇಮಕಾತಿಗೆ 2015ರ ಜೂನ್‌ನಲ್ಲಿ ಅಧಿಸೂಚನೆ ಹೊರಡಿಸಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), 2016ರ ಅ. 18ರಂದು ಪ್ರಕ್ರಿಯೆ ಪೂರ್ಣಗೊಳಿಸಿ ಆಯ್ಕೆ ಪಟ್ಟಿ ಪ್ರಕಟಿಸಿತ್ತು.

****
ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರ ಬರುವವರೆಗೂ ನೇಮಕಾತಿ ಸಾಧ್ಯ ಇಲ್ಲ. ಪಟ್ಟಿಯಲ್ಲಿದ್ದಂತೆ ಕ್ರಮಬದ್ಧ ನೇಮಕಾತಿಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ
ರಿತ್ವಿಕ್‌ ಪಾಂಡೆ, ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT